ವಚನಗಳ ಮೌಲ್ಯ ವ್ಯಕ್ತಿತ್ವ ವಿಕಸನದ ತಳಹದಿ : ಹೆಚ್.ಕೆ. ಲಿಂಗರಾಜು

ಬಸವ ಮೀಡಿಯಾ
ಬಸವ ಮೀಡಿಯಾ

ದಾವಣಗೆರೆ:

12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ತಮ್ಮ ಅನುಭಾವದಿಂದ ರೂಪಿಸಿರುವ ವಚನಗಳ ಸಾರವು ವ್ಯಕ್ತಿತ್ವ ವಿಕಸನದ ತಳಹದಿಗಳಾಗಿವೆ ಎಂದು ದಾವಣಗೆರೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹೆಚ್‌.ಕೆ. ಲಿಂಗರಾಜು ನುಡಿದರು.

ಅವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಇದರ ಸಂಸ್ಥಾಪಕರಾದ ಸುತ್ತೂರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 111ನೇ ಜಯಂತ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ “ಸಂಸ್ಥಾಪನಾ ದಿನಾಚರಣೆ ಮತ್ತು ದತ್ತಿ ಕಾರ್ಯಕ್ರಮ’ದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ದಾವಣಗೆರೆ ಹಾಗೂ ಸರ್ಕಾರಿ ಪ್ರೌಢಶಾಲೆ, ಶಾಮನೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ದತ್ತಿ ಕಾರ್ಯಕ್ರಮ ಮತ್ತು ಸಂಸ್ಥಾಪನಾ ದಿನಾಚರಣೆಯಲ್ಲಿ ಮೇಲಿನಂತೆ ತಿಳಿಸಿದರು.

ಪೂಜ್ಯ ಡಾ. ರಾಜೇಂದ್ರ ಮಹಾಸ್ವಾಮಿಗಳು ಶರಣ ಸಾಹಿತ್ಯವನ್ನು ನಾಡಿನಾದ್ಯಂತ ಪಸರಿಸುವ ಹಿನ್ನೆಲೆಯಲ್ಲಿ ಅಖಿಲ ಭಾರತ ಮಟ್ಟದ ಶರಣ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿರುತ್ತಾರೆ. ಅದರ ಧೈಯೋದ್ಧೇಶಗಳನ್ನು ಈಡೇರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.

ಶಾಮನೂರು ಲಿಂಗೈಕ್ಯ ಗೌಡಪ್ಪ ಗಂಗಮ್ಮ ಮತ್ತು ಲಿಂಗೈಕ್ಯ ಗೌಡಪ್ಪ ಹನುಮಪ್ಪ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಸವರಾಜಪ್ಪ ವಿ.ಎನ್. ಅವರು, ಮಕ್ಕಳು ವಚನ ಸಾಹಿತ್ಯದಲ್ಲಿರುವ ಅಣ್ಣನವರ ಹಾಗೂ ಅಕ್ಕನವರ ನುಡಿಮುತ್ತುಗಳನ್ನು ಕಲಿತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ನಿವೃತ್ತ ಆರೋಗ್ಯಾಧಿಕಾರಿ ಹಾಗೂ ಹಿರಿಯ ಸಾಹಿತಿ ಜಿ.ಕೆ. ಕುಲಕರ್ಣಿ ಅವರು ಬಸವಣ್ಣನವರ ಮತ್ತು ಅಕ್ಕಮಹಾದೇವಿಯವರ ವಚನಗಳನ್ನು ನಿರ್ವಚನ ಮಾಡಿ ಸರಳವಾಗಿ ಅರ್ಥಗಳನ್ನು ವಿವರಿಸಿದರು. ಆರೋಗ್ಯಕ್ಕೆ ಪೂರಕವಾದ ಅಂಶಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಿದರು.

ದತ್ತಿ ದಾಸೋಹಿಗಳಾದ ಶಾಮನೂರು ಗೌಡಪ್ಪ ಬಸವರಾಜಪ್ಪನವರು ವಿವಿಧ ವಚನಗಳ ಮೂಲಕ ಸಭೆಯ ಗಮನವನ್ನು ಸೆಳೆದರು. ನಿಕಟಪೂರ್ವ ಅಧ್ಯಕ್ಷರಾದ ಕೆ.ಬಿ. ಪರಮೇಶ್ವರಪ್ಪನವರು ಮಕ್ಕಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ಬಹುಮಾನ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಪರಿಷತ್ತಿನ ಆಶಯಗಳನ್ನು ವಿವರಿಸಿದರು.

ಕಾರ್ಯಕ್ರಮ ಸಂಯೋಜಕರು ಹಾಗೂ ಪ್ರೌಢಶಾಲಾ ಮಕ್ಕಳಿಗೆ ಪ್ರಬಂಧ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ಏರ್ಪಡಿಸಿ, ಸ್ಪರ್ಧೆಯ ವಿವರಗಳನ್ನು ಹಾಗೂ ವಿಜೇತರನ್ನು ಕನ್ನಡ ಶಿಕ್ಷಕರಾದ ಶಿವಯ್ಯನವರು ಸಭೆಗೆ ಪರಿಚಯಿಸಿದರು.

ಆಂಗ್ಲ ಶಿಕ್ಷಕಿ ಆಶಾ ಬಿ. ಪಾಟೀಲ ಸ್ವಾಗತಿಸಿದರು. ಬಿ.ಟಿ. ಪ್ರಕಾಶ ಪ್ರಾರ್ಥನೆ ನೆರವೇರಿಸಿ, ಜಿ.ಎಂ. ಕುಮಾರಪ್ಪ ಸರ್ವರನ್ನೂ ವಂದಿಸಿದರು. ಆರ್. ಸಿದ್ಧೇಶಪ್ಪ ಕಾರ್ಯಕ್ರಮ ನಿರೂಪಿಸಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *