‘ಅನುಭಾವ ಶ್ರಾವಣ ಶರಣ ಚಿಂತನ’
ಚಿತ್ರದುರ್ಗ:
ಜಗದ್ಗುರು ಮುರುಘರಾಜೇಂದ್ರಮಠ ಹಾಗೂ ಶ್ರೀ ಜಗದ್ಗುರು ಮರುಘರಾಜೇಂದ್ರ ವಿಶ್ವವಿದ್ಯಾಲಯ ಸಹಯೋಗದಲ್ಲಿ ಅನುಭಾವ ಶ್ರಾವಣದ ಶರಣ ಚಿಂತನ ಮಾಲಿಕೆ ಕಾರ್ಯಕ್ರಮದಲ್ಲಿ ತಾಲೂಕಿನ ಜಂಪಣ್ಣನಾಯಕನಕೋಟೆಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಇಷ್ಟಲಿಂಗ ದೀಕ್ಷೆ ಕಾರ್ಯಕ್ರಮ ನಡೆಯಿತು.
ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಅವರು ಶಿವಯೋಗವನ್ನು ನೆರವೇರಿಸಿ ಮಾತನಾಡುತ್ತ, ಬಸವಣ್ಣನವರು ಮನುಷ್ಯ ಮನುಷ್ಯರ ನಡುವೆ ಇರುವ ಅಸಮಾನತೆಯನ್ನು ಹೋಗಲಾಡಿಸಲು, ಧರ್ಮದ ಹೆಸರಿನಲ್ಲಿ ಆಚರಿಸುವ ಮೌಲ್ಯವನ್ನು ತೊರೆಯಲು ಇಷ್ಟಲಿಂಗ ಎನ್ನುವ ತತ್ವವೊಂದನ್ನು ಕಂಡುಹಿಡಿದರು.

ಇಂದು ನಾವು ಬಳಸುವ ಮೊಬೈಲ್, ಸೈಕಲ್, ಬೈಕ್, ಟಿವಿ ಇನ್ಯಾವುದೇ ವಸ್ತುಗಳ ಹಿಂದೆ ಅವುಗಳನ್ನು ಸಂಶೋಧನೆ ಮಾಡಿದ ವಿಜ್ಞಾನಿ ತಂತಜ್ಞರು ಇದ್ದಾರೆ. ಅದರಂತೆ ಬಸವಣ್ಣನವರು ಅಖಂಡ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ ಪರಮಾತ್ಮನನ್ನು ಕಂಡುಕೊಳ್ಳುವ ಸಲುವಾಗಿ ಇಷ್ಟಲಿಂಗವನ್ನು ಕಂಡುಹಿಡಿದರು. ಈ ಇಷ್ಟ ಲಿಂಗವನ್ನು ಗುರುವಿನ ಅನುಗ್ರಹ ಪಡೆದುಕೊಂಡು ಯಾರು ಬೇಕಾದರೂ ಧರಿಸಬಹುದು.
ಮಹಿಳೆಯರೇ ಇರಲಿ ಪುರುಷರೇ ಇರಲಿ ಇಲ್ಲಿ ಎಲ್ಲರೂ ಸಮಾನರು ಎಂದು ನುಡಿದರು.
ನಾವುಗಳು ನೂರು ದೇವರುಗಳನ್ನು ಪೂಜಿಸುವುದಕ್ಕಿಂತ ಇಷ್ಟಲಿಂಗ ನೋಡುವುದರಿಂದ ಅಷ್ಟು ಫಲವನ್ನ ಇಲ್ಲಿ ನಿರೀಕ್ಷಿಸಬಹುದು. ನಾವು ದೇವರನ್ನು ಹುಡುಕಿಕೊಂಡು ಎಲ್ಲಿಗೂ ಹೋಗಬೇಕಾಗಿಲ್ಲ. ದೇವರು ನಮ್ಮೊಳಗೆ ಇದ್ದಾನೆ. ಅವನನ್ನು ಕಾಣಲು ಇಷ್ಟಲಿಂಗ ವಾಹಕ ಇದ್ದಂತೆ.
ಇಷ್ಟಲಿಂಗ ದೀಕ್ಷೆ ಸ್ವೀಕರಿಸಿ ನಿತ್ಯವೂ ಲಿಂಗಾಂಗ ಯೋಗ ಸಾಧನೆ ಮಾಡುವುದರಿಂದ ನಮ್ಮೊಳಗೆ ಇರುವ ದೇವರನ್ನು ಕಾಣಲಿಕ್ಕೆ ಸಾಧ್ಯ.
ಇತ್ತೀಚಿನ ದಿನಗಳಲ್ಲಿ ಲಿಂಗಾಯತರಾದವರಲ್ಲಿಯೇ ಇಷ್ಟಲಿಂಗಗಳು ಎದೆಯ ಮೇಲೆ ಆರಾಧಿಸದೆ ಜಗಲಿ ಸೇರಿಕೊಂಡಿವೆ. ಇನ್ನಾದರೂ ಜಗಲಿಯಲ್ಲಿ ನೇತಾಕುವುದನ್ನು ಬಿಟ್ಟು ಎದೆಯ ಮೇಲೆ ಇಷ್ಟ ಲಿಂಗವನ್ನು ಧರಿಸಿ ನಿಜವಾದ ಲಿಂಗಾಯತರೆನಿಸಿಕೊಳ್ಳಿ ಎಂದು ಹೇಳುತ್ತಾ ನೂರಾರು ಜನರಿಗೆ ಇಷ್ಟಲಿಂಗ ಪೂಜೆಯ ಪ್ರಾತ್ಯಕ್ಷಿಕೆಯನ್ನು ಹೇಳಿಕೊಟ್ಟರು.
ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಟಿ. ನಂದೀಶ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ೧೨ನೇ ಶತಮಾನದಲ್ಲಿ ಬಸವಣ್ಣನವರು ಕೊಟ್ಟಿರುವ ಈ ದಿವ್ಯ ಮತ್ತು ಭವ್ಯವಾದ ಪರಂಪರೆಯನ್ನು ಉಳಿಸಿಕೊಂಡು ಹೋಗೋಣ. ಇದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಇಂದಿನ ದಿನಮಾನಗಳಲ್ಲಿ ನಮ್ಮ ಸಮಾಜದ ಯುವಕರು ಲಿಂಗಾಯತ ಧರ್ಮಾಚರಣೆಗಳಿಂದ ದೂರ ಸರಿದಿದ್ದಾರೆ. ಯುವಕರಿಗೆ ನಮ್ಮ ಧರ್ಮ ಸಂಸ್ಕೃತಿ ಪರಂಪರೆಗಳನ್ನು ತಿಳಿಸಿಕೊಡುವ ಮೂಲಕ ಆಕರ್ಷಿಸಬೇಕು. ಅಲ್ಲಮಪ್ರಭುಗಳು ಹೇಳುವಂತೆ ಹಸಿವಾದವರು ಊಟ ಮಾಡಬೇಕು, ಆದರೆ ಹಸಿವೆಂದು ಹೊಟ್ಟೆಯ ಮೇಲೆ ಮೃಷ್ಟಾನ್ನದ ಮೂಟೆಯನ್ನು ಕಟ್ಟಿಕೊಂಡರೆ ಹಸಿವು ಹೇಗೆ ನಿಗುವುದಿಲ್ಲವೋ ಅದೇ ರೀತಿ ಇಷ್ಟಲಿಂಗ ಧರಿಸಿದ ಮಾತ್ರಕ್ಕೆ ಭಕ್ತನಾಗುವುದಿಲ್ಲ. ಸದ್ಗುರುಗಳ ಮೂಲಕ ಇಷ್ಟಲಿಂಗ ದೀಕ್ಷೆ ಪಡೆದು ನಿತ್ಯವೂ ಇಷ್ಟಲಿಂಗವನ್ನು ನಿರೀಕ್ಷಿಸುವ ಮೂಲಕ ಅನುಸಂಧಾನ ಮಾಡಿದರೆ ಮಾತ್ರ ಪ್ರಯೋಜನವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಬಸವರಾಜ ಕಟ್ಟಿ ಅವರು ಜೆ.ಎನ್. ಕೋಟೆಯ ಲಿಂಗಾಯತ ಸಮಾಜ ಬಾಂಧವರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅನೇಕರು ಲಿಂಗದೀಕ್ಷೆಯನ್ನು ಸ್ವೀಕರಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
