ಅನುಭಾವ ಶ್ರಾವಣ : ಶರಣರ ಚಿಂತನ ಮಾಲಿಕೆ
ಚಿತ್ರದುರ್ಗ:
ಮಾನವತಾವಾದಿ, ಆಧ್ಯಾತ್ಮಿಕ ಗುರು, ಶಿಕ್ಷಣತಜ್ಞರು ಮತ್ತು ಶತಾಯುಷಿಗಳು ಆಗಿದ್ದ ಕರ್ನಾಟಕ ರತ್ನ, ಪದ್ಮಭೂಷಣ ಸಿದ್ಧಗಂಗಾ ಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ನಾಡು ಕಂಡ ತ್ರಿವಿಧ ದಾಸೋಹಿಗಳು. ಅವರು ಚಿತ್ರದುರ್ಗ ಬೃಹನ್ಮಠವನ್ನು ಲಿಂಗಾಯತ ಸಮುದಾಯದ ಹೆಡ್ ಆಫೀಸ್ ಎಂದೇ ಪರಿಭಾವಿಸಿದ್ದರು. ಶ್ರೀ ಜಯದೇವ ಜಗದ್ಗುರುಗಳ ಆಶೀರ್ವಾದ ಪಡೆದ ಅವರು ಶ್ರೀಬೃಹನ್ಮಠದ ದಾಸೋಹ ಪರಂಪರೆಯನ್ನು ತಮ್ಮ ಮಠದಲ್ಲಿ ಅಳವಡಿಸಿಕೊಂಡು ತ್ರಿವಿಧ ದಾಸೋಹಿ, ನಡೆದಾಡುವ ದೇವರೆಂದೇ ಪೂಜಿಸಲ್ಪಟ್ಟವರು ಎಂದು ಡಾ. ಬಸವಪ್ರಭು ಸ್ವಾಮಿಗಳು ಸ್ಮರಿಸಿದರು.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಗುರುವಾರ ಸಂಜೆ ಶ್ರೀಮಠದ ಬಸವೇಶ್ವರ ಸಭಾಂಗಣದಲ್ಲಿ ನಡೆದ ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯಲ್ಲಿ ಸಿದ್ಧಗಂಗಾ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಜೀವನ ಸಾಧನೆ ಹಾಗೂ ವ್ಯಕ್ತಿತ್ವ ಕುರಿತ ಚಿಂತನೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಒಮ್ಮೆ ಸಿದ್ಧಗಂಗಾ ಮಠದ ಹಿರಿಯ ಶ್ರೀಗಳು ಸಿಟ್ಟಾದಾಗ ಮುನಿಸಿಕೊಂಡು ಶಿವಕುಮಾರ ಶ್ರೀಗಳು ಕ್ಯಾತ್ಸಂದ್ರ ಕ್ರಾಸ್ನಲ್ಲಿ ನಿಂತಿರುವುದನ್ನು ಗಮನಿಸುವ ಜಯದೇವ ಜಗದ್ಗುರುಗಳು, ನೀವು ಮುಂದೆ ದೊಡ್ಡ ದೇವರಾಗುತ್ತೀರಿ ಎಂದು ಸಂತೈಸಿ ಆಶೀರ್ವದಿಸಿ ವಾಪಾಸು ಕಳುಹಿಸುತ್ತಾರೆ. ಅದರಂತೆ ಅವರು ಮುಂದೆ ನಾಡಿನ ನಡೆದಾಡುವ ದೇವರಾಗಿ ಹೆಸರಾದರು.
ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದನ್ನು ಗಮನಿಸಬಹುದು. ಅವರು ಜೋಳಿಗೆ ಹಿಡಿದು ಕಾಯಕ ಮತ್ತು ದಾಸೋಹವನ್ನು ಮಾಡಿದವರು. ಅವರು ಸ್ವತಃ ಇಂಗ್ಲಿಷ್ ಬೋಧನೆಯನ್ನು ಮಕ್ಕಳಿಗೆ ಮಾಡುತ್ತಿದ್ದರು. ಅವರಿಂದ ನಾವು ಪರರನ್ನು ಪ್ರೀತಿಸುವ ದಾಸೋಹ ಮಾಡುವ ಆದರ್ಶದ ಗುಣಗಳನ್ನು ಅಳವಡಿಸಿಕೊಳ್ಳಬೇಕು.

ಶ್ರಾವಣಮಾಸ ಎಂದರೆ ಶ್ರವಣ, ಒಳ್ಳೆಯ ವಿಚಾರಗಳನ್ನು ಕೇಳಿಸಿಕೊಳ್ಳುವುದು. ಶ್ರೀಮಠದಲ್ಲಿ ಶರಣ ಪರಂಪರೆಯ ಮಹಾತ್ಮರ ಜೀವನಾದರ್ಶಗಳನ್ನು ಭಕ್ತರಿಗೆ ತಿಳಿಸುವ ಕಾರ್ಯ ನಡೆಯುತ್ತಿದೆ ಎಂದರು.
ಎಸ್.ಜೆ.ಎಂ.ಐ.ಟಿ. ಪ್ರಾಚಾರ್ಯರಾದ ಡಾ. ಪಿ.ಬಿ. ಭರತ್ ವಿಷಯಾವಲೋಕನ ಮಾಡುತ್ತ, ಮಾನವನ ಸದೃಢತೆಗೆ ಚಿಂತನೆ ಅವಶ್ಯಕತೆಯಿದೆ.
ಭಕ್ತನಾಗುವುದು ಸುಲಭ ಆದರೆ ಭಕ್ತಿಯನ್ನು ಅಳವಡಿಸಿಕೊಳ್ಳುವುದು ಕಷ್ಟ. ಅಂತಹ ಭಕ್ತಿಯನ್ನು ಅಳವಡಿಸಿಕೊಳ್ಳುವವರೇ ಶರಣರೆನಿಸಿಕೊಳ್ಳುತ್ತಾರೆ.
ಶಿವಕುಮಾರ ಶ್ರೀಗಳು ೧ ಏಪ್ರಿಲ್ ೧೯೦೭ ರಂದು ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ವೀರಾಪುರದ ಗಂಗಮ್ಮ ಮತ್ತು ಪಟೇಲ್ ಹೊನ್ನಪ್ಪ ದಂಪತಿಗಳ ಪುತ್ರರಾಗಿ ಜನಿಸಿದರು. ಇವರ ಪೂರ್ವಾಶ್ರಮದ ಹೆಸರು ಶಿವಣ್ಣ. ಗಂಗಾಧರೇಶ್ವರ ಮತ್ತು ಹೊನ್ನಾದೇವಿ ದೇವತೆಗಳ ಪರಮ ಭಕ್ತರಾಗಿದ್ದ ಇವರ ಪೋಷಕರು ಅವರನ್ನು ಶಿವಗಂಗೆಯ ದೇವಾಲಯಗಳಿಗೆ ಮತ್ತು ವೀರಾಪುರದ ಸುತ್ತಮುತ್ತಲಿನ ಇತರ ಧಾರ್ಮಿಕ ಕೇಂದ್ರಗಳಿಗೆ ಕರೆದೊಯ್ಯುತ್ತಿದ್ದರು.
ಅವರು ಬಾಲ್ಯದಲ್ಲಿ ತುಂಟರು, ನಾಯಕತ್ವ ಗುಣವುಳ್ಳವರಾಗಿದ್ದರು. ಮರುಳಾರಾಧ್ಯರ ಒಡನಾಟದಿಂದ ಉದ್ಧಾನ ಶಿವಯೋಗಿಗಳ ಹತ್ತಿರ ಹೋಗಿ ಉನ್ನತ ವಿದ್ಯಾಭ್ಯಾಸವನ್ನು ಪೂರೈಸುತ್ತಾರೆ. ಮುಂದೆ ಸಿದ್ಧಗಂಗಾ ಮಠದ ಮುಖ್ಯಸ್ಥರಾಗಿ ಉದ್ದಾನ ಶಿವಯೋಗಿ ಸ್ವಾಮಿಗಳ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದರಿಂದ ಅವರು ಪದವಿ ಪಡೆಯುವ ಮೊದಲೇ ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದರು.
ಅವರ ಸ್ನೇಹಿತ ಮತ್ತು ಮಠದ ಮುಖ್ಯಸ್ಥರ ಉತ್ತರಾಧಿಕಾರಿಯಾಗಿದ್ದ ಶ್ರೀ ಮರುಳಾರಾಧ್ಯರು ನಿಧನರಾದಾಗ ಅವರ ಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಆಯ್ಕೆಯಾಗಿ ಔಪಚಾರಿಕ ದೀಕ್ಷೆಯ ನಂತರ, ಶಿವಕುಮಾರ ಎಂದು ಮರುನಾಮಕರಣಗೊಳ್ಳುತ್ತಾರೆ. ೧೧ ಜನವರಿ ೧೯೪೧ ರಂದು ಶಿವಯೋಗಿ ಸ್ವಾಮಿಗಳು ಲಿಂಗೈಕ್ಯರಾದ ನಂತರ, ಶಿವಕುಮಾರ ಶ್ರೀಗಳು ಸಿದ್ಧಗಂಗಾ ಮಠದ ಜವಾಬ್ದಾರಿಯನ್ನು ವಹಿಸಿಕೊಂಡರು ಎಂದು ತಿಳಿಸಿದರು.
ಸ್ವಾಮೀಜಿ ಅವರು ಸಾಂಪ್ರದಾಯಿಕ ಸಂಸ್ಕೃತದ ಜೊತೆಗೆ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಕಲಿಸುವ ನರ್ಸರಿ ಶಾಲೆಯಿಂದ ಹಿಡಿದು ಎಂಜಿನಿಯರಿಂಗ್, ವಿಜ್ಞಾನ, ಕಲೆ ಮತ್ತು ನಿರ್ವಹಣೆ ಕಾಲೇಜುಗಳ ಜೊತೆಗೆ ವೃತ್ತಿಪರ ತರಬೇತಿ ಸಂಸ್ಥೆಗಳವರೆಗೆ ೧೩೨ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ.
ಶ್ರೀಮಠದಲ್ಲಿ ಎಲ್ಲ ಧರ್ಮ, ಜಾತಿ ಮತ್ತು ಪಂಥಗಳ ಮಕ್ಕಳಿಗೆ ಮುಕ್ತವಾಗಿದ್ದು, ಅವರಿಗೆ ಉಚಿತ ಪ್ರಸಾದ, ಶಿಕ್ಷಣ ಮತ್ತು ಆಶ್ರಯವನ್ನು (ತ್ರಿವಿಧ ದಾಸೋಹ) ಒದಗಿಸಲಾಗುತ್ತಿದೆ. ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಸ್ಥಳೀಯ ಜನರ ಅನುಕೂಲಕ್ಕಾಗಿ ವಾರ್ಷಿಕ ಕೃಷಿ ಮೇಳವನ್ನು ನಡೆಸಲಾಗುತ್ತಿತ್ತು.

ಸಿದ್ಧಗಂಗಾ ಪ್ರಕಾಶನ, ಸಿದ್ಧಗಂಗಾ ನಾಟಕವಾಳಿ, ವಸ್ತುಪ್ರದರ್ಶನ, ಕೈಗಾರಿಕಾ ಪ್ರದರ್ಶನಗಳನ್ನು ಮಾಡುತ್ತ ಬಂದರು. ಸ್ವಾಮೀಜಿ ಅವರು ತಮ್ಮ ಲೋಕೋಪಕಾರಿ ಕಾರ್ಯಗಳಿಗಾಗಿ ಕರ್ನಾಟಕ ಸರ್ಕಾರವು ೨೦೦೭ರಲ್ಲಿ ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ ಶಿವಕುಮಾರ ಸ್ವಾಮೀಜಿ ಪ್ರಶಸ್ತಿಯನ್ನು ಸ್ಥಾಪಿಸುವುದಾಗಿ ಘೋಷಿಸಿತು. ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಶ್ರೀಮಠಕ್ಕೆ ಭೇಟಿ ಮಾಡಿ ಸ್ವಾಮೀಜಿಯವರ ಮಾನವೀಯ ಕಾರ್ಯ ಮತ್ತು ಶಿಕ್ಷಣದಲ್ಲಿನ ಉಪಕ್ರಮಗಳನ್ನು ಶ್ಲಾಘಿಸಿರುವುದನ್ನು ಸ್ಮರಿಸಿದರು.
ಶ್ರೀಗಳವರ ಸಾಧನೆ ಅಪರಿಮಿತವಾದದ್ದು. ನಾವು ಎಷ್ಟು ವರ್ಷ ಬದುಕಿದೆವು ಎಂಬುದು ಅಮುಖ್ಯ ಏನು ಸಾಧನೆ ಮಾಡಿದ್ದೇವೆಂಬುದು ಮುಖ್ಯ. ಮಣ್ಣು ಬಿಟ್ಟು ಮಡಿಕೆ ಇಲ್ಲ ಮಡಿಕೆ ಬಿಟ್ಟು ದೇವರಿಲ್ಲ ಎಂದು ಮಣ್ಣಿನಲ್ಲಿ ದೇವರನ್ನು ಕಂಡವರು ಶ್ರೀ ಶಿವಕುಮಾರ ಮಹಾಸ್ವಾಮಿಗಳು ಎಂದರು.
ಶ್ರೀ ಬಸವ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಶಿವಯೋಗದ ಪಾವನ ಸ್ಪರ್ಶದಿಂದ ಹಾಗೂ ಯಡಿಯೂರು ಸಿದ್ಧಲಿಂಗೇಶ್ವರರ ಪಾದಸ್ಪರ್ಶದಿಂದ ಸಿದ್ಧಗಂಗಾ ಕ್ಷೇತ್ರ ಸುಕ್ಷೇತ್ರವಾಗಿದೆ. ಇದಕ್ಕೆ ಪೂರಕವಾಗಿ ಶಿವಕುಮಾರ ಸ್ವಾಮಿಗಳವರು ಕೈಗೊಂಡ ತ್ರಿವಿಧ ದಾಸೋಹದಿಂದ ಪುಣ್ಯಕ್ಷೇತ್ರವೆನಿಸಿಕೊಂಡಿದೆ. ಶ್ರೀಗಳು ಮುಂಜಾನೆ ೩ ಗಂಟೆಯಿಂದ ೫.೩೦ರವರೆಗೆ ತ್ರಿಕಾಲ ಪೂಜೆ ಮಾಡುತ್ತಿದ್ದರು. ಶ್ರೀಗಳಿಗೆ ಭಾರತರತ್ನ ನೀಡಬೇಕೆಂಬ ಒತ್ತಾಯವಿದೆ. ಆದರೆ ಅವರಿಗೆ ವಿಶ್ವರತ್ನ ಪ್ರಶಸ್ತಿಯನ್ನು ತಮ್ಮ ಭಕ್ತರೇ ತಮ್ಮ ಮನೆ- ಮನಗಳಲ್ಲಿ ನೀಡಿ ಗೌರವಿಸುತ್ತಿದ್ದಾರೆಂದರು.
ಸಮಾರಂಭದಲ್ಲಿ ನಾಗರಾಜ ಸಂಗಂ, ಗಾಯತ್ರಿ ಶಿವರಾಂ ಸೇರಿದಂತೆ ವಿವಿಧ ಸಮಾಜ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಎಸ್.ಜೆ.ಎಂ. ಶಾಲಾ ಕಾಲೇಜುಗಳ ಕೆಲ ಸಿಬ್ಬಂದಿ ಭಾಗವಹಿಸಿದ್ದರು.
ಚಂದ್ರಪ್ಪ ಜನಪದ ಗೀತೆ ಹಾಡಿದರು. ಶಿಕ್ಷಕಿ ಶ್ರೀಮತಿ ಶಿಲ್ಪ ವಚನ ಪ್ರಾರ್ಥನೆ ಮಾಡಿದರು. ಎಸ್.ಜೆ.ಎಂ.ಐ.ಟಿ. ಸಹಪ್ರಾಧ್ಯಾಪಕ ಡಾ. ಚೇತನ್ ಸ್ವಾಗತಿಸಿದರು. ಪ್ರಾಧ್ಯಾಪಕ ಜಯದೇವ್ ನಿರೂಪಿಸಿದರು.
