ಹೆಸರು ನೋಂದಾಯಿಸಿ ನೀವೂ ಭಾಗವಹಿಸಬಹುದು
ದಾವಣಗೆರೆ:
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 30ರಂದು ‘ವಚನ ನಾದ ಲೋಕ’ ಶೀರ್ಷಿಕೆಯಡಿ ಸಾವಿರಾರು ಜನರಿಂದ ಸಾಮೂಹಿಕ ವಚನ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಈಚೆಗೆ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
15ರಿಂದ 20 ಸಾವಿರ ವಿದ್ಯಾರ್ಥಿಗಳೂ ಭಾಗವಹಿಸುವ, ಶರಣರ ವಚನಗಳನ್ನು ಏಕಕಾಲದಲ್ಲಿ ಕೇಳುವ ಸಂತೋಷದ ಕಾರ್ಯಕ್ರಮ ಮತ್ತು ಅನೇಕ ಪೂರ್ವಸಿದ್ಧತೆಯಿಂದ ಅದ್ಬುತವಾಗಿ ಮೂಡಿಬರಲಿದೆ ಎಂದರು.
ಕಾರ್ಯಕ್ರಮ ಸಾಧ್ಯವಾದಷ್ಟು ಕಡಿಮೆ ಖರ್ಚಿನಲ್ಲಿ ನಡೆಸುವ ಉದ್ದೇಶ ಹೊಂದಲಾಗಿದೆ. ಈ ಹಿಂದೆ ಶಿವಮೊಗ್ಗದಲ್ಲಿ ನಡೆದ ಸಾಮೂಹಿಕ ವಚನ ಗಾಯನ ಕಾರ್ಯಕ್ರಮಕ್ಕೆ ₹ 30 ಲಕ್ಷ ಖರ್ಚಾಗಿದೆ. ಆದ್ದರಿಂದ ಎಲ್ಲರೂ ತನು– ಮನ– ಧನದ ಸಹಕಾರ ನೀಡಬೇಕು’ ಎಂದು ಕೋರಿದರು.
ರಚನೆಯಾಗಿರುವ ಸಂಬಂಧಪಟ್ಟ ಸಮಿತಿ ಸದಸ್ಯರು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ಏಕೆಂದರೆ ‘ಸೆಪ್ಟೆಂಬರ್ 20ರಿಂದ 28ರ ವರೆಗೆ ವಚನ ಗಾಯನ ತರಬೇತಿ ನಡೆಯಲಿದೆ. 29ರಂದು ರಿಹರ್ಸಲ್ ನಡೆಯುವುದು. 30ರಂದು ಸಂಜೆ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಸಿ. ಅಶ್ವತ್ಥ್ ಅವರು ಸಂಯೋಜಿಸಿರುವ ವಚನಗಳು ಅಥವಾ ‘ಜಂಗಮದೆಡೆಗೆ& ರೂಪಕದಲ್ಲಿ ಸಂಯೋಜಿಸಿದ ವಚನಗಳು, ಈ ಎರಡರ ಪೈಕಿ ಯಾವುದಾದರು ವಚನಗಳನ್ನು ಸಾಮೂಹಿಕವಾಗಿ ಹಾಡಬಹುದು’ ಎಂದು ಹೇಳಿದರು.
ವಚನ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವವರು ಆ್ಯಪ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ವಚನಗಳ ಮೌಲ್ಯವನ್ನು ಅನುಸರಿಸುವ ಕೆಲಸವೂ ಆಗಬೇಕು’. ವಚನಗಳ ಬಗ್ಗೆ ಹಲವರು ಪೂರ್ವಾಗ್ರಹ ಪೀಡಿತರಾಗಿದ್ದಾರೆ. ಈ ಕಾರ್ಯಕ್ರಮದ ಮೂಲಕ ಮಿಥ್ಯಗಳನ್ನು ತೊಡೆದು ಹಾಕಬೇಕಿದೆ ಎಂದು ಚಿಕ್ಕಮಗಳೂರಿನ ಬಸವತತ್ವ ಪೀಠದ ಬಸವ ಮರುಳಸಿದ್ಧ ಸ್ವಾಮೀಜಿ ತಿಳಿಸಿದರು.
‘ಶರಣರ ವಚನಗಳನ್ನು ಏಕಕಾಲದಲ್ಲಿ ಕೇಳುವುದು ಸಂತೋಷದ ವಿಚಾರ. ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪುರಸ್ಕೃತೆ, ರಂಗಭೂಮಿ ಕಲಾವಿದೆ ಬಿ. ಸಾವಿತ್ರಮ್ಮ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪ್ರಮುಖರಾದ ಯಶಾ ದಿನೇಶ, ಸುಮತಿ ಜಯಪ್ಪ, ಲಿಂಗರಾಜ, ಶಿವರಾಜ ಕಬ್ಬೂರು, ಶಶಿಧರ ಬಸಾಪುರ, ಎನ್.ಎಸ್. ರಾಜು, ಮರಳುಸಿದ್ದಯ್ಯ ಬಸನಾಳು, ರೂಪಾ ಗಣೇಶ, ನಿರ್ಮಲಾ ನಾಗರಾಜ, ರಾಜಶೇಖರ, ಆವರಗೆರೆ ರುದ್ರಮುನಿ ಸೇರಿದಂತೆ ವಿವಿಧ ಸಂಘ– ಸಮಿತಿಗಳ ಮುಖಂಡರು, ಬಸವತತ್ವ ಅಭಿಮಾನಿಗಳು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು.
