ಸಾಣೇಹಳ್ಳಿಯಲ್ಲಿ ‘ಶ್ರಾವಣ ಸಂಜೆ ಶರಣರ ಸಂದೇಶ’ ಕಾರ್ಯಕ್ರಮ

ಸಾಣೇಹಳ್ಳಿ:

ಮನುಷ್ಯ ಜನ್ಮತಾಳಿದ ಮೇಲೆ ಸಾತ್ವಿಕ ಜೀವನ ನಡೆಸಿ, ಸತ್ಕಾರ್ಯಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ಜೀವನ ಸಾರ್ಥಕತೆ ಪಡೆಯುತ್ತದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ಸಮೀಪದ ಸಂಕಲಾಪುರದ ಕಾಂತರಾಜು ಅವರ ಮನೆಯ ಅಂಗಳದಲ್ಲಿ ಆಯೋಜಿಸಲಾಗಿದ್ದ ‘ಅನುಭಾವದೆಡೆಗೆ’ ಹಾಗೂ ‘ಶ್ರಾವಣ ಸಂಜೆ ಶರಣರ ಸಂದೇಶ’ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಬಸವಣ್ಣನವರ “ಶಿವಚಿಂತೆಯಿಲ್ಲದ ಮನುಜರು ಸಗಣಿಗೆ ಸಾಸಿರದ ಹುಳು ಹುಟ್ಟದಂತೆ”ಎಂಬ ವಚನದಂತೆ, ಮನುಷ್ಯ ಕೇವಲ ಸ್ವಾರ್ಥಕ್ಕಾಗಿ ಬದುಕದೆ ಸದಾಚಾರ, ಸಂಸ್ಕೃತಿ ಹಾಗೂ ಶಿವಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು.

ಹಣ-ಅಧಿಕಾರಕ್ಕಿಂತ ಸದ್ಗುಣ ಹಾಗೂ ನಾಲ್ಕು ಜನರಿಗೆ ಉಪಕಾರ ಮಾಡುವ ಮನೋಭಾವವೇ ಮನುಷ್ಯನಿಗೆ ನಿಜವಾದ ಗೌರವ ತಂದುಕೊಡುತ್ತದೆ. ವಯಸ್ಸಿಗಿಂತ ಅರಿವು ಮತ್ತು ಆಚಾರವೇ ಮನುಷ್ಯನ ಹಿರಿಮೆಯನ್ನು ನಿರ್ಧರಿಸುತ್ತದೆ.

“ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ” ಎಂಬ ಗಾದೆಯಂತೆ ಬಾಲ್ಯದಲ್ಲೇ ಮಕ್ಕಳಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಸ್ಕಾರ ನೀಡಬೇಕು. ಇಂತಹ ಸಮಾರಂಭಗಳಿಗೆ ಮಕ್ಕಳನ್ನು ಕರೆತಂದು ಶರಣರ ವಿಚಾರಗಳನ್ನು ತಿಳಿಸಿಕೊಡುವುದು ಪೋಷಕರ ಕರ್ತವ್ಯ.

ಆತ್ಮಾವಲೋಕನ ಹಾಗೂ ಸದಾಚಾರ: ಅಜ್ಞಾನ ಮತ್ತು ಅಂಧಶ್ರದ್ಧೆಯನ್ನು ತೊರೆದು ಜ್ಞಾನಿಗಳಾಗಬೇಕು. ಶರಣರು ಮೆಟ್ಟಿದ ಧರೆಯೇ ಪಾವನ ಕ್ಷೇತ್ರವಾಗಿದ್ದು, ನಾವು ಇರುವ ತಾಣವನ್ನೇ ಕಲ್ಯಾಣವನ್ನಾಗಿ ಮಾಡಿಕೊಳ್ಳಬೇಕು ಎಂದರು.

ಸಾನಿಧ್ಯ ವಹಿಸಿ ಯಳನಾಡು ಮಠದ ಜ್ಞಾನಪ್ರಭು ಸ್ವಾಮೀಜಿ ಮಾತನಾಡಿ; ಬಸವಾದಿ ಶರಣರ ಆಶಯದಂತೆ ಪ್ರತಿಯೊಬ್ಬರೂ ತಮ್ಮ ಕಾಯಕದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ಕಂಡುಕೊಳ್ಳಬೇಕು. ಕಾಯಕವೇ ಮೂಲ ಪೂಜೆ ಎಂಬುದನ್ನು ಶರಣರು ಜಗತ್ತಿಗೆ ಸಾರಿದ್ದಾರೆ.

ಜಾತಿ, ಜನಾಂಗ ಹಾಗೂ ಲಿಂಗ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ ಶರಣರ ಅನುಭವ ಮಂಟಪದ ಮಾದರಿಯೇ ಇಂದಿನ ಸಮಾಜಕ್ಕೆ ದಾರಿದೀಪ.

ಕೆಲಸದಲ್ಲಿ ನಿರತರಾದಾಗ ಬೇರೆ ಯಾವುದಕ್ಕೂ ಮನಸ್ಸು ನೀಡದೆ ಕಾಯಕಕ್ಕೆ ಮೊದಲ ಆದ್ಯತೆ ನೀಡಬೇಕು ಎಂಬುದು ಶರಣರ ಸಿದ್ಧಾಂತ. ಕೃಷಿ ಕಾಯಕ ನಡೆಸಿ, ಶ್ರಮವಹಿಸಿ ಬದುಕು ಕಟ್ಟಿಕೊಂಡ ರೈತ ಕಾಂತರಾಜ ಅವರ ಸಾಧನೆ ಹಾಗೂ ಅವರ ಸಮಾಧಾನದ ಬದುಕು ಎಲ್ಲರಿಗೂ ಮಾದರಿಯಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಅನುಭವ ಮಂಟಪದ ಬಗ್ಗೆ ನಿವೃತ್ತ ಮುಖ್ಯಶಿಕ್ಷಕ ಆದ್ರಿಕಟ್ಟೆ ಬಸವರಾಜಪ್ಪ ಮಾತನಾಡಿ; ಬಸವತತ್ವ ಮತ್ತು ಸಿದ್ಧಾಂತಗಳು ಕೇವಲ ವೇದಿಕೆಯ ನುಡಿಗೆ ಸೀಮಿತವಾಗದೆ, ಜೀವನದ ನಡೆಯಲ್ಲಿಯೂ ಅನುಷ್ಠಾನಕ್ಕೆ ಬಂದಾಗ ಮಾತ್ರ ಪೂರ್ಣಗೊಳ್ಳುತ್ತವೆ. ನುಡಿ ಮತ್ತು ನಡೆಯ ನಡುವೆ ಸಾಮರಸ್ಯ ಸಾಧಿಸುವುದೇ ಬಸವತತ್ವದ ಮೂಲ ಉದ್ದೇಶ.

12ನೇ ಶತಮಾನದಲ್ಲಿ ಬಸವಣ್ಣನವರಿಂದ ಸ್ಥಾಪನೆಗೊಂಡ ಅನುಭವ ಮಂಟಪವು ಕೇವಲ ಒಂದು ಕಟ್ಟಡವಾಗಿರದೆ, ವಿಚಾರ ವಿನಿಮಯದ ವೇದಿಕೆಯಾಗಿತ್ತು. ಕಾಯಕ, ದಾಸೋಹ, ಲಿಂಗ ಸಮಾನತೆ, ಏಕದೇವೋಪಾಸನೆ ಹಾಗೂ ಲಿಂಗಾಂಗ ಸಾಮರಸ್ಯಗಳು ಅನುಭವ ಮಂಟಪದ ಮೂಲ ತತ್ವಗಳಾಗಿದ್ದವು.

ಅಕ್ಷರ ಜ್ಞಾನವಿಲ್ಲದ ಕಾಲದಲ್ಲಿಯೂ ಅನುಭವ ಮಂಟಪವು ಶೂದ್ರರಿಗೆ, ಶ್ರಮಿಕರಿಗೆ ಹಾಗೂ ಮಹಿಳೆಯರಿಗೆ ಸಮಾನ ಅವಕಾಶ ನೀಡಿತು. ಅಕ್ಕಮಹಾದೇವಿ, ಸತ್ಯಕ್ಕ, ಮುಕ್ತಾಯಕ್ಕ, ಆಯ್ದಕ್ಕಿ ಲಕ್ಕಮ್ಮ ಅವರಂತಹ ಅನೇಕ ಶರಣೆಯರು ಅನುಭವ ಮಂಟಪದಲ್ಲಿ ಪುರುಷರೊಂದಿಗೆ ಸಮಾನವಾಗಿ ವಿಚಾರ ಮಂಡಿಸುತ್ತಿದ್ದರು ಎಂದರು.

ಊರಿನ ಹಿರಿಯ ಮುಖಂಡ ಮರುಳಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಕಾಂತರಾಜ ಅಧ್ಯಕ್ಷತೆ ವಹಿಸಿದ್ದರು. ವೈ.ಎಸ್. ರವಿಪ್ರಕಾಶ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಅಣ್ಣಿಗೆರೆ ವಿರೂಪಾಕ್ಷಪ್ಪ ಅಭಿನಂದನಾ‌ ನುಡಿಯನ್ನಾಡಿದರು. ಶಿಕ್ಷಕ ಮಲ್ಲಿಕಾರ್ಜುನ್ ಎಸ್. ನಿರೂಪಿಸಿದರು. ನಾಗರಾಜ ಹಾಗೂ ಲತಾ ವಚನಗೀತೆಗಳನ್ನು ಹಾಡಿದರು. ಸಂಕಲಾಪುರದ ಶತಾಯುಷಿ ಗಂಗಮ್ಮ ಇವರನ್ನು ಸನ್ಮಾನಿಸಲಾಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *