ಮಾನವೀಯತೆ ಉಪದೇಶದ ಸರಕಲ್ಲ, ಬದುಕಿನ ವಿಧಾನವಾಗಲಿ: ಗುರುಬಸವ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

‘ಶ್ರಾವಣ ಬಂತು ಅನುಭಾವ ತಂತು’ ಕಾರ್ಯಕ್ರಮ

ಚನ್ನಗಿರಿ:

‘ಶ್ರಾವಣ ಬಂತು ಅನುಭಾವ ತಂತು’ ಕಾರ್ಯಕ್ರಮವು ತಾಲೂಕಿನ ಕೊರಟಿಕೆರೆ ಗ್ರಾಮದ ಸಮುದಾಯ ಭವನದಲ್ಲಿ ಈಚೆಗೆ ನಡೆಯಿತು.

ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ನಡೆದ ಕಾರ್ಯಕ್ರಮದ ಸಾನಿಧ್ಯವನ್ನು ಪಾಂಡೋಮಟ್ಟಿಯ ಡಾ. ಗುರುಬಸವ ಸ್ವಾಮೀಜಿ ವಹಿಸಿದ್ದರು.

ಅವರು ಮಾತನಾಡುತ್ತ, ಮಾನವೀಯತೆ ಎಂಬುದು ಒಂದು ಆದರ್ಶ. ಅದು ಉಪದೇಶದ ಸರಕಲ್ಲ. ಬದುಕಿನ ಒಂದು ವಿಧಾನ. ಸನ್ಮಾರ್ಗದಲ್ಲಿ ಸಾಗುವಂತಹದೇ ಆದರ್ಶ.

ಭೌತಿಕ ವಸ್ತುಗಳ ಬೆಲೆಗಿಂತ ಮಿಗಿಲಾದದ್ದು ಮಾನವೀಯತೆ. ದಿನದಿಂದ ದಿನಕ್ಕೆ ಮಾನವೀಯತೆ ಮಾನವರಿಂದಲೇ ಮರೆಯಾಗುತ್ತಿರುವುದು ದುರದೃಷ್ಟಕರ ಸಂಗತಿ. ವೈದ್ಯನಾದವನಿಗೆ ಹಣಕ್ಕಿಂತ ರೋಗಿ ಮುಖ್ಯವಾಗಬೇಕು. ನೊಂದವರು ಬಿದ್ದವರ ಕೈಹಿಡಿದು ಎತ್ತಿ ಸಾಧ್ಯವಾದ ಸಾಕಾರ ನೀಡಿ ಸಾಂತ್ವಾನ ಸೂಚಿಸುವುದೇ ಮಾನವೀಯತೆ. 12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಅದರಂತೆ ಜೀವನ ಸಾಗಿಸಿದರು ಎಂದು ತಿಳಿಸಿದರು.

ಶರಣರ ವಚನಗಳು ಕೇವಲ ರಾಗ ತಾಳದೊಂದಿಗೆ ಹಾಡುವುದಕಲ್ಲ, ಅವುಗಳ ಒಳಮರ್ಮವನ್ನು ಅರಿಯಲು ಕ್ಷಣ ಕ್ಷಣಕ್ಕೂ ಚಂಚಲವಾಗುತ್ತಿರುವ ಮಾನವನ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ತಂದುಕೊಡುವ ಶಕ್ತಿ ವಚನಗಳಿಗೆ ಇದೆ. ಕಾರ್ಯಕ್ರಮಗಳು ಪ್ರದರ್ಶನಕಲ್ಲ ಆತ್ಮದರ್ಶನಕ್ಕೆ ಅಂತರಂಗದಲ್ಲಿ ಬದಲಾಗದೆ ಬಹಿರಂಗದಲ್ಲಿ ಒಳ್ಳೆಯ ಮಾತು ಬಟ್ಟೆಗಳನ್ನು ಹಾಕಿದರೆ ಸಾಲದು. ವ್ಯಕ್ತಿ ತಾನು ಹೊಂದಿದ ಅಧಿಕಾರದಿಂದ ಗೌರವ ಪಡೆಯುವುದಿಲ್ಲ ವ್ಯಕ್ತಿಯ ವ್ಯಕ್ತಿತ್ವದಿಂದ ಬರುವಂತಹದ್ದು.

ಮಾನ, ಪ್ರಾಣ, ಸ್ವಾಭಿಮಾನ ಎಲ್ಲವು ಹೋದರೂ ಅಧಿಕಾರ ಉಳಿಯಲೇ ಬೇಕು ಎಂಬುದು ಇಂದಿನ ಹೀನ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ. ನಾವು ರಾಜ್ಯಕ್ಕೆ ಅರಸನಾಗಬೇಕಿಲ್ಲ, ಸದಾಚಾರಕ್ಕೆ ಅರಸನಾಗಬೇಕು. ಆತ್ಮ ವಂಚನೆ ಮಾಡಿಕೊಂಡ ವ್ಯಕ್ತಿ ಇದ್ದು ಸತ್ತಂತೆ, ಆತ್ಮವಿಶ್ವಾಸ, ಅನ್ಯಾಯ ಪ್ರತಿಭಟಿಸುವ ಆದರ್ಶ ಗುಣಗಳನ್ನು ಹೊಂದಿದವರು ವ್ಯಕ್ತಿ ಉನ್ನತಿಯನ್ನು ಹೊಂದುವವನು.

ಅಂತರಂಗದ ಸಾಕ್ಷಿಯೇ ನಮ್ಮ ಒಡೆಯ. ನಮ್ಮೊಡೆಯ ದೇವರು ಮೆಚ್ಚುವಂತೆ ಬದುಕಬೇಕು. ಶರಣರೆಲ್ಲರೂ ಮನೋವಿಜ್ಞಾನಿಗಳು ಅವರ ವಚನ ರಚನೆಗಳೆಲ್ಲವೂ ಮನಸ್ಸನ್ನೇ ಕೇಂದ್ರೀಕರಿಸಿದಂತಿವೆ.

ದೈಹಿಕ, ಮಾನಸಿಕವಾಗಿ ಆರೋಗ್ಯದಿಂದಿರಲು ಮಿತಹಾರ, ಮಿತನಿದ್ರೆ ಅವಶ್ಯ. ಬದುಕಲು ಊಟ ಮಾಡಬೇಕೆ ಹೊರತು ಊಟ ಮಾಡಲೆಂದೇ ಬದುಕಬಾರದು. ಮನುಷ್ಯ ಬೋಗಿಯಾಗದೆ ಯೋಗಿ ಆಗಬೇಕು. ಊಟವನ್ನು ಪ್ರಸಾದ ಭಾವದಿಂದ ಸ್ವೀಕರಿಸಿದರೆ ಆಹಾರವು ದೇಹಕ್ಕೆ ಒಳ್ಳೆಯ ಕಸುವನ್ನು ತಂದುಕೊಡಬಲ್ಲದು.

ಮಾನವೀಯ ಗುಣಗಳು ಸದಾ ಮಕ್ಕಳಲ್ಲಿ ಅರಳುವ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಮನೆ, ಮಠ, ಸಮಾಜ, ಸರ್ಕಾರಗಳು ಮಾಡಿದಾಗ ಮಾತ್ರ ಮನೆಗಳೆಲ್ಲವೂ ಮಠಗಳಾಗಿರುತ್ತವೆ ಎಂದು ಪೂಜ್ಯರು ನುಡಿದರು.

ವಡ್ನಾಳ ಅಶೋಕ, ಯುವ ಮುಖಂಡರು ಮಾತನಾಡಿ, ಗುರುವಿನ ದರ್ಶನ ಭಾಗ್ಯ ಹಾಗೂ ಅವರ ಆಶೀರ್ವಾದದಿಂದ ನನ್ನ ಬದುಕು ಸಾರ್ಥಕವಾಗಿದೆ. ಅವರು ಕೊಟ್ಟಂತ ಮಾರ್ಗದರ್ಶನದಲ್ಲಿ ನನ್ನ ಆದರ್ಶ ಜೀವನ ಸಾಗುವುದಕ್ಕೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.

12ನೇ ಶತಮಾನದ ವಚನಕಾರರು ನನಗೆ ನಾನೇ ಶಿಲ್ಪಿ ಎಂಬಂತೆ, ನನ್ನ ಬದುಕಿಗೆ ಹೊಸ ರೂಪ ಕೊಟ್ಟವರು ಪೂಜ್ಯ ಗುರುಬಸವ ಮಹಾಸ್ವಾಮಿಜಿ ಎಂದು ನುಡಿದರು.

ನಮ್ಮ ಮನೆಯಂಗಳದಲ್ಲೂ ಕೂಡ ಇಂಥ ಕಾರ್ಯಕ್ರಮವನ್ನು ಮಾಡಿ ಜ್ಞಾನ, ಅನ್ನ ದಾಸೋಹ ಮಾಡಲು ಉತ್ತಮ ಮಾರ್ಗದರ್ಶನ ಕೊಟ್ಟಂತ ಪೂಜ್ಯರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸಿದರು.

ವಚನ ಸಂಸ್ಕೃತಿ ಸಂಸ್ಕಾರ ಮಾನವೀಯ ಮೌಲ್ಯಗಳನ್ನ ಅರಿತುಕೊಳ್ಳುವುದಕ್ಕೆ ಶ್ರಾವಣ ಬಂತು ಅನುಭವ ತಂತು ಕಾರ್ಯಕ್ರಮ ಅತ್ಯಂತ ಪ್ರೇರಣದಾಯಕವಾಗಿದೆ. ಎಲ್ಲಾ ಹಳ್ಳಿಗಳಲ್ಲಿ ಯುವಕರು, ವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ನುಡಿಮುತ್ತುಗಳ ಕೇಳಿ ತಮ್ಮ ಜೀವನಕ್ಕೆ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಉಪನ್ಯಾಸಕರಾದ ಲಾವಣ್ಯ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಂ. ಯು. ಚನ್ನಬಸಪ್ಪ, ಚಂದಪ್ಪ, ಪರಮೇಶ್ವರಪ್ಪ, ಉಮೇಶ, ರವಿಕುಮಾರ, ಜಾಗತಿಕ ಲಿಂಗಾಯತ ಮಹಾಸಭಾದ ಟಿ.ವಿ. ಚಂದ್ರಪ್ಪ, ಕೆ.ಜಿ. ಶಿವಮೂರ್ತಿ ಹಾಗೂ ಕೊರಟಿಕೆರೆ ಗ್ರಾಮಸ್ಥರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *