ಪ್ರಭುಲಿಂಗಲೀಲೆ : ಒಂದು ಸಮಗ್ರ ಚಿಂತನೆ 20
ಮರಾಠಿ ಭಾಷೆಯಲ್ಲಿ ಬ್ರಹ್ಮದಾಸನೆಂಬ ಕವಿಯು ಪ್ರಭುಲಿಂಗ ಲೀಲೆಯನ್ನು ‘ಲೀಲಾವಿಶ್ವಂಭರ’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾನೆ. ಈತನ ಕಾಲ ಕ್ರಿ.ಶ. ೧೭೨೨. ತಮಿಳು ಮತ್ತು ಮರಾಠಿ ಪ್ರಭುಲಿಂಗಲೀಲೆಗಳು ಒಂದೇ ಬಗೆಯಾಗಿ ರೂಪಗೊಂಡಿವೆ. ಹಾಗೇ ನೋಡಿದರೆ ಬ್ರಹ್ಮದಾಸ ಕವಿಯು ತಮಿಳು ಕೃತಿಯನ್ನು ಗಮನಿಸಿಯೇ ಅನುವಾದಿಸಿರುವನೋ ಎಂಬ ಭಾವ ಮೂಡುತ್ತದೆ. ಈ ಉಭಯ ಕವಿಗಳು ಚಮಾರಸನನ್ನು ಅಕ್ಷರಶಃ ಅನುಸರಿಸುತ್ತ ಸಾಗಿದ್ದಾರೆ. ಇಬ್ಬರೂ ಬಳಸುವ ವರ್ಣನೆಗಳು ಹೃದಯಂಗಮವಾಗಿವೆ. ಈ ವರ್ಣನೆಗಳ ಉಪಮೆ ಮತ್ತು ಸಾದೃಶ ಗಮನಿಸಿದರೆ, ಇವು ಮೂಲ ಕೃತಿಗಳೋ ಎನ್ನುವಷ್ಟು ಕಾವ್ಯಾತ್ಮಕವಾಗಿವೆ. ಬ್ರಹ್ಮದಾಸನ ‘ಲೀಲಾವಿಶ್ವಂಭರ’ಕಾವ್ಯದ ಐದನೆಯ ಅಧ್ಯಾಯದಲ್ಲಿ ಬರುವ ಸೂರ್ಯೋದಯ ವರ್ಣನೆ ಮತ್ತು ಹನ್ನೆರಡನೆಯ ಅಧ್ಯಾಯದಲ್ಲಿ ಬರುವ ಸತ್ಸಂಗದ ಮಹಾತ್ಮೆಯ ವರ್ಣನೆ ಅತ್ಯಂತ ಚಿತ್ತಾಕರ್ಷಕವಾಗಿವೆ. ಮೂಲ ಪ್ರಭುಲಿಂಗಲೀಲೆಯಲ್ಲಿ ಬಸವೇಶ್ವರನ ಶೂನ್ಯಸಿಂಹಾಸನ ರಚನೆ, ಪ್ರಭುದೇವರ ಶೂನ್ಯಸಿಂಹಾಸನಾರೋಹಣ ಮತ್ತು ಆರೋಗಣೆ ಈ ಮೂರು ಸನ್ನಿವೇಶಗಳು ಅತ್ಯಂತ ಸೂಕ್ಷ್ಮವಾದ ಅನುವಾದ ಪೂರ್ಣವಾದ ಮಹತ್ವಪೂರ್ಣ ಪ್ರಸಂಗಗಳಾಗಿ, ಜಗದ ತಂತ್ರದ ಸೂತ್ರಧಾರನಾದ ಅಲ್ಲಮಪ್ರಭುವಿನ ಘನವ್ಯಕ್ತಿತ್ವವನ್ನು ಮಹೋಜ್ವಲವಾಗಿ ಬೆಳಗುತ್ತವೆ. ತೆಲುಗು ಮತ್ತು ಸಂಸ್ಕೃತ ಅನುವಾದಗಳಿಗಿಂತ ತಮಿಳು ಮತ್ತು ಮರಾಠಿ ಅನುವಾದಗಳು ಜನರಿಗೆ ತುಂಬ ಹತ್ತಿರವಾಗಿವೆ. ಭಾಷಾಶೈಲಿ, ಸಾಲಂಕೃತ ಉಪಮೆಗಳ ಬಳಕೆಯಿಂದ ಓದುಗರಲ್ಲಿ ರಸಾಸ್ವಾದವನ್ನುಂಟು ಮಾಡುತ್ತವೆ. ಮೂಲದ ಸತ್ವವನ್ನು ತಮಿಳು ಮತ್ತು ಮರಾಠಿ ಕವಿಗಳು ಉಳಿಸಿಕೊಂಡು ಕಾವ್ಯಕ್ಕೊಂದು ಮೂರ್ತಸ್ವರೂಪವನ್ನು ತಂದುಕೊಟ್ಟಿದ್ದಾರೆ.
ಚಾಮರಸನು ತನ್ನ ಕಾವ್ಯದುದ್ದಕ್ಕೂ ಬಳಸುವ ಅನೇಕ ಅರ್ಥಪೂರ್ಣವಾದ ಉಪಮಾನ ರೂಪಕಗಳನ್ನು ತಮಿಳು ಮತ್ತು ಮರಾಠಿಯಲ್ಲಿ ಯಥಾವತ್ತಾಗಿ ನೋಡಬಹುದು. ‘ಉದಕದಲಿ ಮುಳುಗಿದ ಸುಣ್ಣಕಲ್ಲಂತಾಗಿ ಕುದಿವುತ’, ‘ಮನದ ಗಂದೆಯ ತುರಿಸಿದಂತಿರ್ ಮನಕೆಸಂತಸವಾದುದು’, ‘ಕಬ್ಬನೆಜ್ಜೆಗೆ ಬಿದಿರಮೆಲುವಂತಪ್ಪುದೈ’, ‘ಬಿರುಗಾಳಿ ಸೋಂಕಿನಲುಳಿದಮರ ಪರಿಮಳಸುವಂತೆ’, ‘ಹಾವಿನಡಿಯನು ಹಾವುಗಳು ನೆರೆಬಲ್ಲವಲ್ಲದೆ ನಮಗೆ ಗೋಚರವು’, ‘ನೂಲಸಂಕಲಿಗಡಿದು ಕನಕದ ಕೋಳವನು ಕಾಲಂಗೆ ಕೀಲಿಪ ಕಾಳು ಮತಿಯವನಂತೆ’, ‘ಬಡವನ ಕೋಪ ದವಡೆಗೆ ಕೇಡು’, ‘ಹುತ್ತಿನೊಳಗಣ ಹೊಳ್ಳ ಹಾವಿಂಗೆತ್ತ ಹೋದಡೆ ಸುಸರ’, ‘ಸಿದ್ಧರಾಮ ಶಶಾಂಕನೆಂಬ ಮಹಾಮನೋಹರನು ಉದ್ದಿರಿಸ ಹುಟ್ಟಿದನು ಯೋಗಸಮುದ್ರವನು’ಇಂತಹ ಮೌಲಿಕ ಉಪಮಾನಗಳು ಈ ಎರಡೂ ಕೃತಿಗಳಲ್ಲಿ ರಸವತ್ತಾಗಿ ಚಿತ್ರಿತವಾಗಿವೆ.
ಬ್ರಹ್ಮದಾಸನು ತನ್ನ ಲೀಲಾವಿಶ್ವಂಭರದಲ್ಲಿ ಮಹಾದೇವಿಯಕ್ಕ ಕೌಶಿಕನನ್ನು ನಿರಾಕರಿಸಿ ವಿವಸ್ತ್ರಳಾಗಿ ಹೋಗುವ ಘಟನೆಯನ್ನು ಅತೀ ಸರಳವಾಗಿ ಸಹಜವಾಗಿ ಪರಿಣಾಮಕಾರಿಯಾಗುವಂತೆ ನಿರೂಪಿಸಿದ್ದಾನೆ.
‘ತುಮಿಹೀ ಲಿಂಗಾಚರ್ಯ ಕರೂನ ಶಿವಭಕ್ತಿ ಕರಾವಿ |
ತರಚ ಮೀ ತುಮಚೀ ಸತೀ |
ನಾಹೀತರ ಮಲಾ ಮಾತಾ ಸಮಜಾವೆ’
ಎಂದು ಮಹಾದೇವಿ ಹೇಳುತ್ತಾಳೆ, ಆಗ ಕೌಶಿಕ-
‘ವಿಷಯಾಂಧಾ ಈಶ್ವರಭಕ್ತಿ | ಕೆವೀ ಅವಡೆ ಅವಿವೇಕಾಪ್ರತೀ
ನ ಫಡೇ ಅಮ್ಮಾ ಕೈಲಾಸಪತಿ; ಪೂಜಾಪದ್ಧತಿ ಲಾವಿಲ್ಯಾ’
ಎನ್ನುತ್ತಾನೆ. ಆಗ ಮಹಾದೇವಿಯಕ್ಕ-
‘ತುಮ್ಹರಾಸ ನ ಫಡೇ ಈಶ್ವರ ಭಕ್ತಿ |
ಮಜಲಾ ನ ಫಡೇ ತವ ಸಂಗತಿ’
ಎಂದು ಅವನನ್ನು ತಿರಸ್ಕರಿಸಿ ಹೋಗುತ್ತಾಳೆ.
ಒಂದು ಸಾವಿರದೊಂದು ಶತಹ
ನ್ನೊಂದು ಪದವೆಂದೆಂಬ ಪರುಷದ
ಸಂದ ಶಿಲೆಯನು ಬಳಸಿದಿಪ್ಪತ್ತೈದು ಗತಿಯೆಂಬ
ಹೊಂದಿಗೆಯ ಸೋಪಾನಗಳ ಬರಿ
ದಂದವಿಸಿಯಲ್ಲಮನ ಪರಮಾ
ನಂದ ಲೀಲಾಮೃತ ಸರೋವರವಾಯ್ತು ಜಗದೊಳಗೆ
ಏಕಾದಶ ಶತೇ ಯೇಕಾದಶ | ಪದೇ ವದಲಾ ಮುನಿ ಚಾಮರಸ
ಪಂಪಾಪತಿ ವಿರೂಪಾಕ್ಷ ಈಶ | ವರ ವಿಶೇಷ ಲಾಹುನ||
ಲೀಲಾ ವಿಶ್ವಂಭರಾಜೆ ಚರಿತ್ರ | ಸರೋವರ ರಚಿಲೆ ಪವಿತ್ರ
ಮೋಕ್ಷಲಾಭೇ ಸ್ನಾನಮಾತ್ರೆ | ಜೀವಸ್ವತಂತ್ರ ಪರಬ್ರಹ್ಮ ||
ಕವಿ ಬ್ರಹ್ಮದಾಸನು ಮೂಲ ಪ್ರಭುಲಿಂಗಲೀಲೆಯ ಒಂದು ಪದ್ಯವನ್ನು ಓವಿಯಲ್ಲಿ ಹೀಗೆ ಹಿಡಿದಿಟ್ಟಿದ್ದಾನೆ. ಮೂಲ ಕವಿ ಆರು ಸಾಲಿನಲ್ಲಿ ಹೇಳಿರುವುದನ್ನು, ಬ್ರಹ್ಮದಾಸ ನಾಲ್ಕು ಸಾಲಿನಲ್ಲಿ ಹೇಳಿ ಮುಗಿಸಿದ್ದು ಆತನ ಕಾವ್ಯಶಕ್ತಿಗೆ ಹಿಡಿದ ಕನ್ನಡಿಯಾಗಿದೆ.

ಲೀಲಾ ವಿಶ್ವಾಂಭರ ಕೃತಿಯಲ್ಲದೆ, ಪ್ರಭುಲಿಂಗಲೀಲೆಯನ್ನು ವಾರದ ಮಲ್ಲಪ್ಪನವರು ತಮ್ಮ ಲಿಂಗೀಬ್ರಾಹ್ಮಣ ಗ್ರಂಥಮಾಲೆಯಿಂದ ಮರಾಠಿ ಭಾಷೆಗೆ ಮಣ್ಣೂರು ಮಲ್ಲಿಕಾರ್ಜುನ ಶಾಸ್ತಿçಗಳಿಂದ ಅನುವಾದಿಸಿ ಪ್ರಕಟಿಸುವ ಕಾರ್ಯವನ್ನು ಮಾಡಿದ್ದರು. ಈ ಕೃತಿಯನ್ನು ಬಿಳಿಅಂಗಡಿ ವೀರಪ್ಪ ಬಸವಪ್ಪ ಅವರು ಮತ್ತೆ ಕನ್ನಡಕ್ಕೆ ಅನುವಾದಿಸಿದ್ದು ವಿಶೇಷ ಸಂಗತಿಯಾಗಿದೆ. ಆರ್. ಶ್ರೀನಿವಾಸಾಚಾರ್ಯ ಎಂಬುವರು ಧಾರವಾಡದಿಂದ ಪ್ರಕಟವಾಗುತ್ತಿದ್ದ ಶುಭೋದಯ ಎಂಬ ಪತ್ರಿಕೆಯ ೧೮-೪-೧೯೧೯ರ ಸಂಚಿಕೆಯಲ್ಲಿ “ಅಲ್ಲಮನು ಮತ್ತು ಬಸವನ ವೃತ್ತಾಂತವೇನು?” ಎಂಬ ಲೇಖನ ಬರೆದು, ಉಭಯ ಶರಣರ ವ್ಯಕ್ತಿತ್ವಕ್ಕೆ ಕಳಂಕ ತರುವ ವಿಚಾರಗಳನ್ನು ಪ್ರಸ್ತಾಪಿಸಿದ್ದರು. ಅದರಲ್ಲೂ ‘ಅಲ್ಲಮ’ ಎಂಬ ಹೆಸರು ಇಸ್ಲಾಂ ಮೂಲದೆಂದು, ‘ಅಲ್’ ಎಂಬ ಧಾತುವಿನಿಂದ ಬಂದಿರಬಹುದೆಂದು ವಿಚಿತ್ರವಾದ ವಾದ ಮಂಡಿಸಿದ್ದರು. ‘ಅಲ್ಲಮ’ ಎಂಬ ಅಸಹ್ಯಕರವಾದುದರಿಂದ ಬಸವನು ಅವನನ್ನು ‘ಪ್ರಭು’ ಎಂದು ಕರೆದನೆಂದು ವಿಚಿತ್ರವಾಗಿ ಪ್ರಲಾಪಿಸಿ ಈ ಲೇಖನ ಬರೆದಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಸಿದ್ಧರಾಮಪ್ಪ ಪಾವಟೆ ಅವರು ‘ವಿಚಿತ್ರ ವಿಪರ್ಯಾಸ’ ಎಂಬ ಲೇಖನದ ಮೂಲಕ ಉಗ್ರವಾದ ಪ್ರತಿಕ್ರಿಯೆಯನ್ನು ನೀಡಿ ‘ಅಲ್ಲಮ’ ಶಬ್ದದ ನಿಜವಾದ ಶಬ್ದ ನಿಷ್ಪತ್ತಿಯನ್ನು ತೋರಿಸಿಕೊಟ್ಟಿದ್ದರು. ಈ ಆರ್. ಶ್ರೀನಿವಾಸಚಾರ್ಯರಿಗೆ ಲಿಂಗಾಯತರಲ್ಲಿಯೇ ಹುಟ್ಟಿದ ಕುಮತಿ ಕುಬುದ್ಧಿಯ ಕಾಶಿನಾಥ ಶಾಸ್ತ್ರಿ ಮತ್ತು ಹಮ್ಮಿಗೆ ಶಾಂತಪ್ಪ ಕುಬಸದ ಇವರೂ ಶರಣರ ಚಾರಿತ್ರ್ಯ ಹನನದಲ್ಲಿ ಮುಂದಾಗಿದ್ದರು. ಆಗ ಬಿಳಿಅಂಗಡಿ ಅವರು ಮರಾಠಿ ಭಾಷೆಯ ಈ ಪ್ರಭುಲಿಂಗಲೀಲೆಯನ್ನು ಕನ್ನಡಕ್ಕೆ ಅನುವಾದಿಸಿ, ಅಲ್ಲಮರ ಘನ ವ್ಯಕ್ತಿತ್ವವನ್ನು ಮತ್ತೊಮ್ಮೆ ಲೋಕಕ್ಕೆ ಪರಿಚಯಿಸುವ ಕಾರ್ಯವನ್ನು ಮಾಡಿದ್ದರು. ೧೯೨೦ರಲ್ಲಿ ಮೊದಲ ಮುದ್ರಣ ಕಂಡಿದ್ದ ಈ ಕೃತಿ ೧೯೨೨ರಲ್ಲಿ ಮರುಮುದ್ರಣವಾಗಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಈ ಕೃತಿಯಲ್ಲಿ ಮೂಲ ಪ್ರಭುಲಿಂಗಲೀಲೆಗಿಂತ ಹೆಚ್ಚಿನ ಕೆಲವು ವಿಷಯಗಳನ್ನು ಸೇರಿಸಿರುವುದು ಕಂಡು ಬರುತ್ತದೆ. ಲಿಂಗಾಯತರಲ್ಲಿ ಜಾತಿಭೇದಗಳಿಲ್ಲ, ವಿಷ್ಣು ಬ್ರಹ್ಮಾದಿಗಳಿಗೆ ಮೋಕ್ಷವನ್ನು ಕೊಡುವ ಸಾಮಥ್ಯವಿಲ್ಲ, ಲಿಂಗಾಯತರಲ್ಲಿ ವರ್ಣಾಶ್ರಮ ಧರ್ಮಗಳಿಲ್ಲ ಮೊದಲಾದ ಕೆಲವು ವಿಚಾರಗಳು ಹೊಸದಾಗಿ ಸೇರಿಕೊಂಡಿವೆ. ಚಾಮರಸನು ಮೂಲತಃ ಬ್ರಾಹ್ಮಣ. ಆತ ಪ್ರಭುವಿನ ಮೇಲಿನ ಭಕ್ತಿಯಿಂದ ಈ ಮಹಾಕಾವ್ಯವನ್ನು ರಚಿಸಿದ. ಆದರೆ ಆಧುನಿಕ ಕಾಲದ ಆರ್. ಶ್ರೀನಿವಾಸಾಚಾರ್ಯ ಎಂಬುವರು ಅದನ್ನು ಟೀಕಿಸಿ ಬರೆದರು. ಇದು ಕಾಲದ ವೈಚಿತ್ರ್ಯವೆನಿಸುತ್ತದೆ.

ಆಂಗ್ಲ ಭಾಷೆಯಲ್ಲಿ ಎಚ್. ಎಚ್. ವಿಲ್ಲಸನ್ ಎನ್ನುವ ಪಂಡಿತರು ಪ್ರಭುಲಿಂಗ ಲೀಲೆ ಕುರಿತು ಹೇಳುವ ಮಾತುಗಳನ್ನು ಬಿಳಿಅಂಗಡಿ ಅವರು ದಾಖಲಿಸಿದ್ದಾರೆ-
“On the mountain of Kailas, when giva was sitting in his court with Parvati by his side Chandesh was saluting them with but a single hand, where upon Parvati decame enraged and asked Siva “what does he mean by it” Chandesh reqlied “Siva alone is omnipotent Sachidananda Parabrahma and Parvati is only material aspect the source of all confusion.” Parvati said “Chandesh, if I am the material mask of the spirit, how do you refuse to acknowledge me who have conferred half of her body to Parabrahman and under whom were concentrated Brahma, Vishnu and other Deities so long as you are immured with a body. Chandesh then quitted his matter when Siva supported him with a third leg to stand on. To consider who is greater, Siva asked them both to assume human forms and he or she who conquers is truely greater. Chandesh who is now called Bringeesh was born as Allam Prabhu to Nirahankar and Sugnani Devi at Kerur, and a spark of Parvatir’s essence was born as Maya to Mamakar and Mohini Devis the king and queen of Banavasi. Allam Prabhu after expounding the method of obtaing liberation, subdued Maya, got the title of Niranjana, wandered throughcut the land and wronught many miracles.” H.H.Wilson.
“ಕೈಲಾಸ ಪರ್ವತದ ದಿವ್ಯ ಶಿಖರದಲ್ಲಿ ಪರಮಶಿವನು ತನ್ನ ದಿವ್ಯಸಭೆಯಲ್ಲಿ ಪಾರ್ವತೀದೇವಿಯ ಸಮೇತನಾಗಿ ಆಸೀನನಾಗಿದ್ದನು. ಸುತ್ತಲೂ ದೇವಗಣಗಳು, ಗಣಪರಿವಾರ ಮತ್ತು ಶಿವಭಕ್ತರು ಭಕ್ತಿಭಾವದಿಂದ ನಿಂತಿದ್ದರು. ಆ ಸಂದರ್ಭದಲ್ಲಿ ಚಂಡೇಶನು ಶಿವದರ್ಶನಕ್ಕಾಗಿ ಅಲ್ಲಿಗೆ ಬಂದು, ಶಿವನಿಗೆ ಒಂದೇ ಕೈಯಿಂದ ನಮಸ್ಕರಿಸಿದನು. ಅವನ ಈ ರೀತಿಯ ವಂದನೆಯನ್ನು ಕಂಡ ಪಾರ್ವತೀದೇವಿಗೆ ಆಶ್ಚರ್ಯವೂ, ಅಸಮಾಧಾನವೂ ಉಂಟಾಯಿತು. “ಇವನು ಹೀಗೆ ಒಂದೇ ಕೈಯಿಂದ ನಮಸ್ಕರಿಸುವುದರ ಅರ್ಥವೇನು?” ಎಂದು ಆಕೆ ಶಿವನನ್ನು ಪ್ರಶ್ನಿಸಿದಳು.
ಚಂಡೇಶನು ತನ್ನ ಮಾತಿಗೆ ಯಾವುದೇ ಹಿಂಜರಿಕೆಯಿಲ್ಲದೆ ಉತ್ತರಿಸಿದನು. “ಪರಮಶಿವನೇ ಸರ್ವಶಕ್ತನು; ಅವನೇ ಸಚ್ಚಿದಾನಂದ ಪರಬ್ರಹ್ಮ. ಅವನ ಹೊರತು ಉಳಿದುದೆಲ್ಲವೂ ಪ್ರಕೃತಿಯ ಸ್ವರೂಪ. ಪಾರ್ವತಿಯು ಆ ಪರಬ್ರಹ್ಮನ ಭೌತಿಕ ಶಕ್ತಿ; ಜೀವಿಯನ್ನು ಮೋಹಗೊಳಿಸಿ ಭ್ರಮೆಯ ಲೋಕದಲ್ಲಿ ಬಂಧಿಸುವ ಪ್ರಕೃತಿಯ ರೂಪ” ಎಂದು ಅವನು ನುಡಿದನು.
ಚಂಡೇಶನ ಈ ಮಾತುಗಳನ್ನು ಕೇಳಿ ಪಾರ್ವತಿಯ ಕೋಪ ಉಕ್ಕಿತು. ಆಕೆ, “ನಾನು ಕೇವಲ ಭೌತಿಕ ಆವರಣವೆಂದು ನೀನು ಭಾವಿಸುವೆಯಾ? ಪರಬ್ರಹ್ಮನ ಅರ್ಧಾಂಗವಾಗಿ ನನ್ನನ್ನೇ ತನ್ನ ದೇಹದ ಅರ್ಧಭಾಗವನ್ನಾಗಿ ಧರಿಸಿರುವ ಶಿವನ ಶಕ್ತಿಯನ್ನು ನೀನು ಹೇಗೆ ನಿರಾಕರಿಸುತ್ತೀಯೆ? ಬ್ರಹ್ಮ, ವಿಷ್ಣು ಮೊದಲಾದ ದೇವತೆಗಳ ಶಕ್ತಿಯೂ ನನ್ನಲ್ಲಿಯೇ ಏಕೀಭವಿಸಿದೆ. ದೇಹದ ಬಂಧನದಲ್ಲಿರುವವರೆಗೂ ಜೀವಿಗೆ ಪ್ರಕೃತಿಯನ್ನೂ, ಅದರ ಮಹಾಶಕ್ತಿಯನ್ನೂ ಮೀರಿ ನಿಲ್ಲುವುದು ಸಾಧ್ಯವೇ?” ಎಂದು ಪ್ರಶ್ನಿಸಿದಳು.
ಆದರೆ ಚಂಡೇಶನು ತನ್ನ ತತ್ತ್ವನಿಷ್ಠೆಯಲ್ಲಿ ಅಚಲನಾಗಿದ್ದನು. ದೇಹವೆಂಬ ಬಂಧನವೇ ಆತ್ಮಸಾಕ್ಷಾತ್ಕಾರಕ್ಕೆ ಅಡ್ಡಿಯೆಂದು ಭಾವಿಸಿದ ಅವನು, ತನ್ನ ಭೌತಿಕ ದೇಹವನ್ನೇ ತ್ಯಜಿಸಿದನು. ಆಗ ಶಿವನು ತನ್ನ ಅಪಾರ ಕರುಣೆಯಿಂದ ಅವನಿಗೆ ಆಧಾರವಾದನು. ಚಂಡೇಶನು ನಿಲ್ಲಲು ಶಿವನು ಅವನಿಗೆ ಮೂರನೆಯ ಕಾಲನ್ನು ಅನುಗ್ರಹಿಸಿದನು. ಈ ಅಪೂರ್ವ ಘಟನೆ ಅವನ ತಪಸ್ಸಿನ ತೀವ್ರತೆಯನ್ನೂ, ಶಿವನಲ್ಲಿ ಅವನಿಗಿದ್ದ ಅಚಲವಾದ ನಿಷ್ಠೆಯನ್ನೂ ಸಾರುವಂತಾಯಿತು.
ಆದರೂ ಶಿವನ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು—ಶಿವಶಕ್ತಿಗಳಲ್ಲಿ ಶ್ರೇಷ್ಠರು ಯಾರು? ಪರಮಶಿವನೇ ಮಹತ್ತರವೋ, ಅಥವಾ ತನ್ನ ಶಕ್ತಿಸ್ವರೂಪಿಣಿಯಾದ ಪಾರ್ವತಿಯೇ ಮಹತ್ತರವೋ? ಈ ತತ್ತ್ವದ ಸೂಕ್ಷ್ಮತೆಯನ್ನು ಲೋಕಕ್ಕೆ ತಿಳಿಸುವ ಸಲುವಾಗಿ ಶಿವನು ಇಬ್ಬರಿಗೂ ಮಾನವಜನ್ಮವನ್ನು ಸ್ವೀಕರಿಸುವಂತೆ ಮಾಡಿದನು. “ಮಾನವ ಲೋಕದಲ್ಲಿ ಯಾರು ಮತ್ತೊಬ್ಬರನ್ನು ಜಯಿಸುತ್ತಾರೋ, ಅವರೇ ನಿಜವಾಗಿ ಶ್ರೇಷ್ಠರು” ಎಂಬಂತೆ ಈ ದಿವ್ಯಲೀಲೆಯು ರೂಪುಗೊಂಡಿತು.
ಅದರ ಫಲವಾಗಿ ಚಂಡೇಶನು ಭೃಂಗೀಶ ಎಂಬ ಹೆಸರಿನಿಂದ ಮಾನವಲೋಕದಲ್ಲಿ ಅವತರಿಸಿ, ಮುಂದೆ ಅಲ್ಲಮಪ್ರಭು ಎಂಬ ಮಹಾಪ್ರಭಾವಶಾಲಿ ಯೋಗಿಯಾಗಿ ಪ್ರಸಿದ್ಧನಾದನು. ಕೇರೂರಿನಲ್ಲಿ ನಿರಹಂಕಾರ ಮತ್ತು ಸುಜ್ಞಾನಿ ದೇವಿಯ ದಂಪತಿಗಳಿಗೆ ಅವನು ಜನಿಸಿದನೆಂದು ಪರಂಪರೆ ಹೇಳುತ್ತದೆ. ಮತ್ತೊಂದೆಡೆ, ಪಾರ್ವತಿಯ ಅಂಶದಿಂದ ಮಾಯೆ ಎಂಬ ದಿವ್ಯಶಕ್ತಿಯು ಬಾಣವಾಸಿಯ ರಾಜ-ರಾಣಿ ಮಮಕಾರ ಮತ್ತು ಮೋಹಿನಿದೇವಿಯರ ಪುತ್ರಿಯಾಗಿ ಜನ್ಮ ತಾಳಿದಳು.
ಮಾನವಜನ್ಮದಲ್ಲಿಯೂ ಅಲ್ಲಮಪ್ರಭುವಿನ ಆತ್ಮತೇಜಸ್ಸು ಕ್ಷೀಣಿಸಲಿಲ್ಲ. ಆತನು ಲೋಕಬಂಧನದ ಮೂಲವನ್ನು ಅರಿತು, ಜೀವಿಯು ಮುಕ್ತಿಯನ್ನು ಪಡೆಯುವ ಮಾರ್ಗವನ್ನು ಬೋಧಿಸಿದನು. ಆತ್ಮಜ್ಞಾನ, ವೈರಾಗ್ಯ ಮತ್ತು ಶಿವಾನುಭವದ ಮಹತ್ವವನ್ನು ಸಾರುತ್ತಾ, ಮಾಯೆಯನ್ನೂ ತನ್ನ ಜ್ಞಾನತೇಜಸ್ಸಿನಿಂದ ಅಧೀನಪಡಿಸಿಕೊಂಡನು. ಈ ಮಹೋನ್ನತ ಸಾಧನೆಯ ಫಲವಾಗಿ ಅವನು “ನಿರಂಜನ” ಎಂಬ ಗೌರವಪೂರ್ಣ ಬಿರುದನ್ನು ಪಡೆದನು.”
ನಂತರ ಅಲ್ಲಮಪ್ರಭು ಒಬ್ಬ ಸ್ಥಳಕ್ಕೆ ಸೀಮಿತನಾಗಿ ಉಳಿಯಲಿಲ್ಲ. ದೇಶದಿಂದ ದೇಶಕ್ಕೆ ಸಂಚರಿಸುತ್ತಾ, ಜನರಿಗೆ ಆತ್ಮಜ್ಞಾನದ ಮಾರ್ಗವನ್ನು ಬೋಧಿಸುತ್ತಾ, ತನ್ನ ಅಪಾರ ಯೋಗಶಕ್ತಿ ಮತ್ತು ಆಧ್ಯಾತ್ಮಿಕ ಸಾಮರ್ಥ್ಯದಿಂದ ಅನೇಕ ಅದ್ಭುತಗಳನ್ನು ನೆರವೇರಿಸಿದನು. ಅವನ ಜೀವನವು ಕೇವಲ ಪವಾಡಗಳ ಕಥೆಯಾಗಿರದೆ, ದೇಹ–ಮಾಯೆಗಳನ್ನು ಮೀರಿ ಪರಮಸತ್ಯವನ್ನು ಅರಸಿದ ಒಬ್ಬ ಮಹಾಯೋಗಿಯ ಆತ್ಮಯಾತ್ರೆಯಾಯಿತು. ಶಿವ ಮತ್ತು ಶಕ್ತಿಯ ತತ್ತ್ವ, ಜ್ಞಾನ ಮತ್ತು ಮಾಯೆಯ ಸಂಘರ್ಷ, ದೇಹ ಮತ್ತು ಆತ್ಮದ ನಡುವಿನ ಸಂಬಂಧ—ಇವೆಲ್ಲವನ್ನೂ ತನ್ನ ಜೀವನಾನುಭವದ ಮೂಲಕ ಲೋಕಕ್ಕೆ ಸಾರಿದ ಅಲ್ಲಮಪ್ರಭು, ಅಂತಿಮವಾಗಿ ಶಿವಾನುಭವದ ಅಖಂಡ ಬೆಳಕಿನಲ್ಲಿ ಲೀನನಾದ ಮಹಾನ್ ಅನುಭಾವಿಯಾಗಿ ಕನ್ನಡದ ಆಧ್ಯಾತ್ಮಿಕ ಪರಂಪರೆಯಲ್ಲಿ ಅಮರನಾದನು.
ಮೇಲಿನ ಭಾಷಾಂತರಗಳನ್ನು ಗಮನಿಸಿದಾಗ ತೆಲುಗು ಮತ್ತು ಸಂಸ್ಕೃತ ಪ್ರಭುಲಿಂಗಲೀಲೆಗಳು ಒಂದು ಗುಂಪಿಗೆ ಸೇರಿದರೆ, ತಮಿಳು ಮತ್ತು ಮರಾಠಿ ಭಾಷಾಂತರಗಳು ಮತ್ತೊಂದು ಗುಂಪಿಗೆ ಸೇರುತ್ತವೆ. ಅಲ್ಲಮಪ್ರಭುದೇವನ ವ್ಯೋಮಾತೀತ ಬದುಕನ್ನು ಉಚಿತವಾದ ‘ಪಾರ್ವತಿ ಪರಮೇಶ್ವರ ಸಂವಾದದ ಗತಿ’ಯ ತಾತ್ವಿಕ ಹಿನ್ನೆಲೆಯ ಪೂರ್ವಪೀಠಿಕೆಯನ್ನು ಕವಿ ಚಾಮರಸ ಬಹು ಜಾಣ್ಮೆಯಿಂದ ಕಲ್ಪಿಸಿಕೊಂಡಿದ್ದಾನೆ. ಅದನ್ನು ತಮಿಳು ಮತ್ತು ಮರಾಠಿ ಭಾಷಾಂತರಕಾರರು ಬಹುಮಟ್ಟಿಗೆ ಅನುಸರಿಸಿದ್ದಾರೆ. ಆದರೆ ತೆಲುಗು ಮತ್ತು ಸಂಸ್ಕೃತ ಅನುವಾದಕರು ಆ ಸನ್ನಿವೇಶವನ್ನು ಸ್ವಲ್ಪ ವ್ಯತ್ಯಾಸ ಮಾಡಿಕೊಂಡು ಚಿತ್ರಿಸಿದ್ದಾರೆ.
ಮೂಲ ಕಾವ್ಯದಲ್ಲಿ ಬರುವಂತೆ ಶಿವನ ಒಡ್ಡೋಲಗ-ಅಲ್ಲಿ ಶಿವನೊಂದಿಗೆ ಸರಸ ಸಂಭಾಷಣೆಯಲ್ಲಿ ತೊಡಗಿದ ಗಿರಿಜೆಯ ಸಹಜ ಪ್ರಶ್ನೆಗೆ ಪರಮೇಶ್ವರ ಅಷ್ಟೇ ಸಮಪರ್ಕವಾಗಿ ಉತ್ತರ ನೀಡುತ್ತಾನೆ.
‘…ಆಗ ಗೌರಿ, ‘ಹರನ ಅರ್ಧಾಂಗವನ್ನಾಕ್ರಮಿಸಿದ ನನಗೆ ಯಾರೂ ಸರಿಯಿಲ್ಲ. ಈ ರೂಪಧಾರಿಗಳೆಲ್ಲ ನನ್ನ ಮಾಯೆಗೆ ಸಿಕ್ಕು ಸ್ತ್ರೀ ವ್ಯಾಮೋಹಕ್ಕೆ ಒಳಗಾದವರೆ’ ಎಂದು ತನ್ನಲ್ಲಿ ತಾನೇ ಯೋಚಿಸುತ್ತಾಳೆ. ಗಿರಿಜೆಯ ಅಹಂಕಾರವನ್ನು ಅರಿತ ಶಂಕರ ಅಲ್ಲಮಪ್ರಭುವನ್ನು ಸ್ಮರಿಸುತ್ತಾನೆ. ಕೂಡಲೆ ಸಿದ್ಧಿಗಳು ಸೇವಿಸುತ್ತ ಹಿಂದೆ ಬರುತ್ತಿರಲು, ಹಣೆಯಲ್ಲಿ ಅಂದವಾಗಿ ತ್ರಿಪುಂಡ್ರ ಭಸ್ಮ ಶೋಭಿಸುತ್ತಿರಲು ಅಜಾನುಬಾಹುವೂ, ಅಂತರಂಗವನ್ನು ಪ್ರಕಟಿಸುವ ದಿವ್ಯದೇಹದಿಂದ ಕೂಡಿದ ಅಲ್ಲಮಪ್ರಭು, ಎಲ್ಲ ಮುನಿಗಳು ಕೈ ಎತ್ತಿ ನಮಿಸುತ್ತಿರಲು, ಅಂಬರ ಪಥದಲ್ಲಿ ಪಲ್ಲಕ್ಕಿಯನ್ನೇರಿ ಹರನ ಸಭೆಗೆ ಆಗಮಿಸುತ್ತಾನೆ. ಶಿವನು ಪ್ರೀತಿಯಿಮದ ಎದ್ದು ಅಲ್ಲಮನನ್ನು ಆಸನ ಆಸೀನನ್ನಾಗಿಸಿ ಅವನೊಂದಿಗೆ ಇಷ್ಟಾಗೋಷ್ಠಿಯನ್ನು ನಡೆಸುತ್ತಾನೆ. ಅಲ್ಲಮ ಒಂದು ಕ್ಷಣ ಅಲ್ಲಿದ್ದು ಹೊರಟು ಹೋಗಲು ಗಿರಿಜೆಯು ಹರನನ್ನು ‘ಆತನಾರು?’ ಆತನು ಬರಲು ನೀನೇಕೆ ಎದ್ದು ಆತನನ್ನು ಗೌರವಿಸಿದೆ?’ ಎಂದು ಕೇಳುತ್ತಾಳೆ. ಶಿವನು ‘ಅಜ್ಞಾನ ಅಹಂಕಾರ ದೂರಳಾದ ಸುಜ್ಞಾನಿಯೆಂಬ ಸುದತಿಯು ಪೂರ್ವಕಾಲದಲ್ಲಿ ಅದ್ಭುತವಾದ ತಪವೆಸಗಲು, ನನ್ನ ನಿಜರೂಪವೇ ಮಗನಾಯಿತು. ಆ ಅಲ್ಲಮನೆ ನಾಗಸುತನು. ಅವನ ಮಹಿಮೆಯನ್ನು ನಾನೇ ಅರಿಯೆನು’ ಎಂದು ಹೇಳುತ್ತಾನೆ.
ಆಗ ಪಾರ್ವತಿ ‘ನಾನು ಬಲ್ಲೆ; ನೀನು ಹೊಗಳಿದ ಮಾತ್ರಕ್ಕೆ ಎಲ್ಲರೂ ಬ್ರಹ್ಮಜ್ಞಾನಿಗಳಾಗಬಲ್ಲರೇ’? ಎಂದು ಅಲ್ಲಮನ ಬಗೆಗೆ ಅಪಹಾಸ್ಯ ಮಾಡಲು, ಹರನು ‘ಎಲ್ಲರಂತಲ್ಲ ಅಲ್ಲಮ. ಅವರವರ ಕೋರಿಕೆಯಂತೆ ಭುವಿಯಲ್ಲಿ ಜ£ಸಿದರೂ, ಮಾಯೆಗೆ ಸಿಕ್ಕುವನಲ್ಲ. ನೀರಿನಲ್ಲಿದ್ದರೂ ನೀರಂಟದಂತಿರುವ ಕಮಲಪತ್ರದಂತೆ’ ಎನ್ನುತ್ತಾನೆ. ‘ನಾನು ಪರೀಕ್ಷಿಸಿ ನಿಜವೆಂದು ಕಂಡಾಗಲೇ ಒಪ್ಪುವೆ’ ಎಂದು ಗೌರಿಯು ತನ್ನ ತಾಮಸ ಗುಣದ ಮಾಯೆಯನ್ನು ಕರೆದು ‘ಶಂಭುವಿನೊಂದಿಗೆ ನಾನು ಪಂತವಾಡಿದುದನ್ನು ಕೇಳಿದೆಯಲ್ಲ; ಇನ್ನು ನೀನು ಭೂಲೋಕಕ್ಕೆ ಹೋಗಿ, ನನ್ನ ಮಾತನ್ನು ಗೆಲಿಸು’ ಎನ್ನುತ್ತಾಳೆ. ಮಾಯೆ ‘ಅಲ್ಲಮನೆಷ್ಟರವನು’ ಅವನನ್ನು ಸೋಲಿಸಿ ಕಟ್ಟಿತಂದು ನಿನ್ನುಡಿಯಲ್ಲಿ ಕೆಡಹುವೆನು ಎಂದು ಪ್ರತಿಜ್ಞೆಗೈದು ಹೋಗುತ್ತಾಳೆ.
ಸಂಸ್ಕೃತ ಪ್ರಭುಲಿಂಗಲೀಲೆಯಲ್ಲಿ- ಮಂಗಲಾಚರಣ, ನೈಮಿಷಾರಣ್ಯ ವರ್ಣನೆ ಆದನಂತರ ಶೌನಕಾದಿ ಋಷಿಗಳಿರುವ ನೈಮಿಷಾರಾಣ್ಯಕ್ಕೆ ಬಂದ ಸೂತಮುನಿಯನ್ನು ಅವರು ಭಕ್ತಿಯಿಂದ ಸತ್ಕರಿಸಿ ಪ್ರಭುಲಿಂಗಲೀಲೆಯನ್ನು ಹೇಳಲು ಪ್ರಾರ್ಥಿಸುತ್ತಾನೆ. ಸೂತಮುನಿ ಇಷ್ಟಲಿಂಗದಲ್ಲಿ ದೃಷ್ಟಿಯಿಟ್ಟು ಕೂಡಲೆ ಪ್ರಭುಲಿಂಗಲೀಲೆಯನ್ನು ಹೇಳಲು ಪ್ರಾರಂಭಿಸುತ್ತಾನೆ. ಮೊದಲು ಪ್ರಭು ಮತ್ತು ಪ್ರಮಥರ ಅವತಾರದ ಉದ್ದೇಶವನ್ನು ಹೇಳಿ ಸಿದ್ಧವೀರ ಗುರುವಿನ ಸ್ವರೂಪವನ್ನು ವರ್ಣಿಸಿ ಈಶ್ವರನ ವರ್ಣನೆಗೆ ತೊಡಗುತ್ತಾನೆ.
‘ಶಿವನ ಸಭೆಯಲ್ಲಿ ಪಾರ್ವತಿ ಪರಮೇಶ್ವರರಿಗೆ ಸರಸ ಸಂಭಾಷಣೆ ನಡೆಯುತ್ತದೆ. ಈಶ್ವರನು ಪಾರ್ವತಿಗೆ ಸಕಾಮ ಮತ್ತು ನಿಷ್ಕಾಮ ಭಕ್ತಿಯ ಸ್ವರೂಪವನ್ನು ಹೇಳಿ, ನಾಮರೂಪ ಕ್ರಿಯೆಗಳನ್ನು ಗೆದ್ದು ಕಾಮ ವರ್ಜಿತರಾದರೆ ಮುಕ್ತಿಯನ್ನು ಪಡೆಯಬಹುದೆನ್ನುತ್ತಾನೆ. ಆಗ ಪಾರ್ವತಿ ‘ಈ ಜಗತ್ತನ್ನೆಲ್ಲ ನಾನೇ ಆವರಿಸಿರುವೆನು; ನನ್ನ ಮಗನಾದ ಕಾಮನು ಅಜೇಯನು. ಇನ್ನು ನಮ್ಮ ಆಜ್ಞೆಯನ್ನು ಉಲ್ಲಂಘನೆ ಮಾಡಿ ನಿಷ್ಕಾಮ ಭಕ್ತಿಯನ್ನು ಆಚರಿಸುವವರು ಯಾರು?’ ಎಂದು ಆಲೋಚಿಸುತ್ತಿರಲು ಈಶ್ವರನು ಅದನ್ನು ತಿಳಿದು ಅಲ್ಲಮನನ್ನು ಸ್ಮರಿಸಿದ ಕೂಡಲೆ ಅವನು ಹರನ ಸಭೆಗೆ ಆಗಮಿಸುತ್ತಾನೆ. ಮುಂದಿನ ಕಥೆ ಮೇಲೆ ಹೇಳಿದ ತೆಲುಗು ಪ್ರಭುಲಿಂಗಲೀಲೆಯ ಕಥೆಯನ್ನೇ ಅನುಸರಿಸುತ್ತದೆ.
ಹೀಗೆ ತೆಲುಗು ಮತ್ತು ಸಂಸ್ಕೃತ ಭಾಷಾಂತರಕಾರರು ಮೇಲಿನ ಸನ್ನಿವೇಶ ನಿರೂಪಣೆಯಲ್ಲಿ ಸ್ವಲ್ಪ ವ್ಯತ್ಯಾಸ ಮಾಡಿಕೊಂಡಿದುದರ ಫಲವಾಗಿ ಈ ಸನ್ನಿವೇಶದ ಮೂಲ ಉದ್ದೇಶದ ಒಟ್ಟು ಪರಿಣಾಮಕ್ಕೂ ಮತ್ತು ಅಲ್ಲಿ ಬರುವ ಪಾತ್ರಗಳ ಘನತೆ ಗೌರವಗಳಿಗೂ ಕುಂದು ಬಂದಂತಾಗಿದೆ. ಈ ಇಬ್ಬರೂ ಕವಿಗಳು ಚಾಮರಸನ ಸೂಕ್ಷö್ಮ ತಾತ್ವಿಕ ದೃಷ್ಟಿಯನ್ನೂ ಕಲಾ ನೈಪುಣ್ಯತೆಯನ್ನೂ ಗುರುತಿಸಿ ಅವುಗಳನ್ನು ತಮ್ಮ ಕಾವ್ಯಗಳಲ್ಲಿ ಅಭಿವ್ಯಕ್ತಿಸಲು ಅಸಮರ್ಥರಾಗಿದ್ದಾರೆ.
ತಮಿಳು ಮತ್ತು ಮರಾಠಿ ಭಾಷಾಂತರಕಾರರು ಈ ಸನ್ನಿವೇಶಗಳ ನಿರೂಪಣೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಮಾಡಿಕೊಂಡಿದ್ದರೂ ಮೂಲಕಾವ್ಯದಲ್ಲಿಯ ಭಾವಕ್ಕೆ ಯಾವ ಭಂಗವೂ ಬಾರದಂತೆ ಎಚ್ಚರವಹಿಸಿದ್ದಾರೆ. ‘ತೆಲುಗು ಮತ್ತು ಸಂಸ್ಕೃತ ಪ್ರಭುಲಿಂಗಲೀಲೆಗಳಲ್ಲಿ ಅಲ್ಲಮಪ್ರಭುವಿನ ಮೂರ್ತಿಮಹತ್ವವು ಚೆನ್ನಾಗಿ ವ್ಯಕ್ತವಾಗಿಲ್ಲ. ಆ ಅನುವಾದಕರಿಗೆ ಪ್ರಭುವಿನ ಮೂರ್ತಿಸ್ವರೂಪವೇ ಪೂರ್ತಿ ಗ್ರಹಿಕೆಯಾಗಿಲ್ಲ. ಮಾಯೆ ತನ್ನ ಪ್ರತಾಪವನ್ನು ಆಡಿದ ಸನ್ನಿವೇಶದಲ್ಲಿ ‘ಯನವಿನಿಯಲ್ಲಮಯಾಗ್ರಹಂ ಬೆಂತ’ ‘ಅನಿಯಲ್ಲಮ ಪ್ರಭುಂಡಾಗ್ರ ಹಂಬುವ ನಿಟ್ಲನೆಯೆ’ ‘ಪ್ರಭುಃ ಸಾಗ್ರಹ ಏವಮೂಚೇ’ ಎಂದು ತೆಲುಗು ಮತ್ತು ಸಂಸ್ಕೃತ ಕೃತಿಗಳಲ್ಲಿ ಬರೆದಿದ್ದಾರೆ. ಶಾಂತಚಿತ್ತನೂ ಹಸನ್ಮುಖಿಯೂ ಆದ ಅಲ್ಲಮನನ್ನು ಚಾಮರಸನು ಸೊಗಸಾಗಿ ಚಿತ್ರಿಸಿದ್ದಾನೆ. ‘ಆಗ್ರಹ’ ಎಂಬ ಪದವನ್ನು ಪ್ರಭುವಿಗೆ ಆರೋಪಿಸಿ ಅವನು ಬರೆದಿಲ್ಲ. ಇಲ್ಲಿ ಅಲ್ಲಮನ ಘನವ್ಯಕ್ತಿತ್ವವನ್ನು ತೆಲುಗು ಮತ್ತು ಸಂಸ್ಕೃತ ಗ್ರಂಥಕಾರರು ಆ ಮಾತುಗಳನ್ನೇ ಬಿಟ್ಟಿದ್ದಾರೆ.’
ಒಟ್ಟಾರೆ ಚಾಮರಸನ ಪ್ರಭುಲಿಂಗಲೀಲೆಯನ್ನು ತೆಲುಗು, ಸಂಸ್ಕೃತ, ತಮಿಳು ಮತ್ತು ಮರಾಠಿ ಭಾಷಾಂತರ ಕಾವ್ಯಗಳೊಂದಿಗೆ ಹೋಲಿಸಿ ನೋಡಿದರೆ ಕನ್ನಡ ಕಾವ್ಯದ ಹಿರಿಮೆ ಗರಿಮೆಗಳು ಉಳಿದ ಭಾಷೆಯ ಕಾವ್ಯಗಳಿಗಿಂತ ಹೆಚ್ಚಾಗಿರುವುದನ್ನು ಕಾಣುತ್ತೇವೆ. ತೆಲುಗು ಮತ್ತು ಸಂಸ್ಕೃತ ಕವಿಗಳು ಮೂಲ ಕನ್ನಡ ಕಾವ್ಯದ ಸತ್ವವನ್ನು ಕಾಣಲು, ಕಂಡರೂ ಅದನ್ನು ತಮ್ಮ ಕಾವ್ಯಗಳಲ್ಲಿ ಸಮರ್ಪಕವಾಗಿ ಅಳವಡಿಸಿಕೊಳ್ಳಲು ಅಸಮರ್ಥರಾಗಿದ್ದಾರೆಂದು ಕಾಣುತ್ತದೆ. ಆದರೆ ತಮಿಳು ಮತ್ತು ಮರಾಠಿ ಕಾವ್ಯಗಳು ಮೂಲಕಾವ್ಯವನ್ನು ಬಹುಮಟ್ಟಿಗೆ ಅನುಸರಿಸಿ, ಅಲ್ಲಲ್ಲಿ ಸಂದರ್ಭೋಚಿತವಾದ ವರ್ಣನೆಗಳಿಂದಲೂ ಉಚಿತವಾದ ಉಪಮೆ ರೂಪಕಗಳಿಂದಲೂ ಕಾವ್ಯಗುಣವನ್ನು ಹೆಚ್ಚಿಸಿಕೊಂಡಿರುವಂತೆ ಕಂಡು ಬಂದರೂ, ಕಥಾಸರಣಿಯಲ್ಲಿ ಚಾಮರಸ ತೋರಿದ ಸಾತತ್ಯ, ಸನ್ನಿವೇಶ ನಿರ್ಮಾಣದಲ್ಲಿಯ ಸಹಜತೆ, ಪಾತ್ರ ನಿರೂಪಣೆಯಲ್ಲಿಯ ಸೊಬಗು ಆ ಗ್ರಂಥಗಳಲ್ಲಿಲ್ಲ. ಈ ದೃಷ್ಟಿಯಿಂದ ಚಾಮರಸನ ಕೃತಿ ಶ್ರೇಷ್ಠ ಕಾವ್ಯವಾಗಿ ನಿಲ್ಲುತ್ತದೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
