ಯಲಬುರ್ಗಾ:
ಪಟ್ಟಣದ ಎನ್.ಜಿ.ಒ. ಬಡಾವಣೆಯಲ್ಲಿ ಗಿರಿಜಮ್ಮ ಗಾಂಜಿ ಮತ್ತು ಅಮರೇಶಪ್ಪ ಗಾಂಜಿ ಶರಣ ದಂಪತಿ ನಿರ್ಮಿಸಿದ “ಅಮರೇಶ್ವರ ನಿಲಯ” ನೂತನ ಮನೆಯ ಗುರುಪ್ರವೇಶ ಕಾರ್ಯಕ್ರಮ ಬಸವತತ್ವ ಸಂಸ್ಕಾರಗಳೊಂದಿಗೆ ಈಚೆಗೆ ನಡೆಯಿತು.
ಮೊದಲಿಗೆ ಮನೆಯ ಮುಂಭಾಗದಲ್ಲಿ ಗಂಗಮ್ಮ ಬಸಪ್ಪ ಹಟ್ಟಿ ಅವರು ಷಟ್ಟಸ್ಥಲ ಧ್ವಜಾರೋಹಣ ನೆರೆವೇರಿಸಿದರು. ಧ್ವಜಗೀತೆ ಹಾಡಲಾಯಿತು.


ಮನೆಯ ಆವರಣದಲ್ಲಿ ವಿಶ್ವಗುರು ಬಸವಣ್ಣನರ ಭಾವಚಿತ್ರ, ವಚನ ಸಾಹಿತ್ಯ ಗ್ರಂಥಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಕುಟುಂಬಸ್ಥರು ಮತ್ತು ಬಂಧುಗಳು ಬಸವಣ್ಣನವರ ಭಾವಚಿತ್ರ ಹಿಡಿದುಕೊಂಡು ಹಾಗೂ ವಚನ ಸಾಹಿತ್ಯ ಗ್ರಂಥಗಳನ್ನು ತಲೆಯ ಮೇಲೆ ಹೊತ್ತುಕೊಂಡು ವಚನ ಘೋಷಣೆ, ಶರಣರಿಗೆ ಜಯಘೋಷಗಳನ್ನು ಹಾಕುತ್ತ, ಹೊಸ ಮನೆಯ ತುಂಬೆಲ್ಲ ಸಂಚರಿಸಲಾಯಿತು.
ನಂತರ ಗುರು ಬಸವಣ್ಣನವರ ಭಾವಚಿತ್ರ ಮತ್ತು ವಚನ ಸಾಹಿತ್ಯ ಗ್ರಂಥಗಳನ್ನು ಮನೆಯ ಹಾಲ್ ನಲ್ಲಿ ಸ್ಥಾಪಿಸಲಾಯಿತು.

ಕುಟುಂಬಸ್ಥರು ಮತ್ತು ಬಂಧುಗಳು ಅಲ್ಲಿಯೇ ಕುಳಿತು ವಚನ ಪ್ರಾರ್ಥನೆ ನಡೆಸಿದರು. ಮನೆಯ ಸದಸ್ಯರು ಮತ್ತು ಬಂಧುಗಳು ಇಷ್ಟಲಿಂಗ ಪೂಜೆ ಮಾಡಿಕೊಂಡರು.
ಕೊಪ್ಪಳ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರಾದ ಗವಿಸಿದ್ದಪ್ಪ ಬಸಪ್ಪ ಪಲ್ಲೇದ ಮತ್ತು ಶರಣಮ್ಮ ಹನಮೇಶ ಕಲ್ಮಂಗಿ ಅವರು ವಚನ ಕ್ರಿಯಾಮೂರ್ತಿಗಳಾಗಿ ಧಾರ್ಮಿಕ ಕ್ರಿಯೆಗಳನ್ನೆಲ್ಲ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರಾಜಶೇಖರ ಬಸಪ್ಪ ಗಾಂಜಿ, ಶಿಕ್ಷಕರಾದ ಮಲ್ಲಪ್ಪ ಬಸಪ್ಪ ಹಟ್ಟಿ, ಗಾಂಜಿ ಬಂಧುಗಳು ಭಾಗವಹಿಸಿದ್ದರು. ಎಲ್ಲರ ಪ್ರಸಾದ ದಾಸೋಹದೊಂದಿಗೆ ಕಾರ್ಯಕ್ರಮ ಮಂಗಲಗೊಂಡಿತು.
