ಗುಡಿಯಲ್ಲಿದ್ದ ದೇವರನ್ನು ಜನರ ಕೈಗೆ ತಂದ ಶರಣರು

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ವಚನ ಶ್ರಾವಣ, ವಚನ ನಿರ್ವಚನ

ಗದಗ :

೧೨ನೇ ಶತಮಾನದಲ್ಲಿ ಬಸವಾದಿ ಶರಣರು ಧಾರ್ಮಿಕ, ವೈಚಾರಿಕ, ಸಾಂಸ್ಕೃತಿಕ, ಸಾಮಾಜಿಕ ಕ್ರಾಂತಿಯನ್ನು ಮಾಡಿದರು. ಆ ಮೂಲಕ ಜಗದಲ್ಲಿ ಹೊಸಮನ್ವಂತರ ಹುಟ್ಟುಹಾಕಿದರು.

ವಚನ ಚಳುವಳಿ ಅದು ಬರೀ ಧಾರ್ಮಿಕ ಚಳುವಳಿಯಲ್ಲ. ಅಲ್ಲಿ ಸಾಮಾಜಿಕ, ಸಾಹಿತ್ಯಿಕ, ಸಾಂಸ್ಕೃತಿಕ ಪರಿವರ್ತನೆಗಳಿವೆ.

ಅಂದು ಧರ್ಮ, ದೇವರೆಂದರೆ ಕೆಲವೇ ಕೆಲವು ಜನರ ಸ್ವತ್ತಾಗಿತ್ತು. ಜನಸಾಮಾನ್ಯರಿಗೆ ಧರ್ಮ, ದೇವರೆಂದರೆ ಆಕಾಶದೆತ್ತರದಂತೆ ಭಾಸವಾಗುತ್ತಿದ್ದ ಕಾಲದಲ್ಲಿ ಬಸವಣ್ಣ ಇಷ್ಟಲಿಂಗ ನೀಡಿ ದೇವರೇ ನಿಮ್ಮ ಬಳಿ ಬಂದಿದ್ದಾನೆ ನೀವೇ ಪೂಜಿಸಿರೆಂದವರು ಅವರು ಎಂದು ಶರಣತತ್ವ ಚಿಂತಕ ಚನ್ನಬಸಪ್ಪ ಅಂಗಡಿ ಅವರು ಹೇಳಿದರು.

ಬಸವದಳ, ಬಸವಕೇಂದ್ರ, ಲಿಂಗಾಯತ ಪ್ರಗತಿಶೀಲ ಸಂಘಗಳ ಸಂಯುಕ್ತಾಶ್ರಯದಲ್ಲಿ ‘ವಚನ ಶ್ರಾವಣ’ ಕಾರ್ಯಕ್ರಮದ ಅಂಗವಾಗಿ ಬೂದಪ್ಪ ಎನ್. ಅಂಗಡಿ, ಅವರ ಮನೆಯಲ್ಲಿ ನಡೆದ ‘ವಚನ ನಿರ್ವಚನ’ ಕಾರ್ಯಕ್ರಮದಲ್ಲಿ ಧರ್ಮಗುರು ಬಸವಣ್ಣನವರ ವಚನ “ಹೊಲೆಯೊಳಗೆ ಹುಟ್ಟಿ ಕುಲವನರಸುವೆ, ಎಲವೊ, ಮಾತಂಗಿಯ ಮಗ ನೀನು. ಸತ್ತುದನೆಳೆವನೆತ್ತಣ ಹೊಲೆಯ? ಹೊತ್ತು ತಂದು ನೀವು ಕೊಲುವಿರಿ. ಶಾಸ್ತ್ರವೆಂಬುದು ಹೋತಿಂಗೆ ಮಾರಿ, ವೇದವೆಂಬುದು ನಿಮಗೆ ತಿಳಿಯದು, ನಮ್ಮ ಕೂಡಲಸಂಗನ ಶರಣರು ಕರ್ಮವಿರಹಿತರು, ಶರಣಸನ್ನಿಹಿತರು, ಅನುಪಮಚಾರಿತ್ರ್ಯರು. ಅವರಿಗೆ ತೋರಲು ಪ್ರತಿಯಿಲ್ಲವೋ”ಎಂಬ ಈ ವಚನ ನಿರ್ವಚನಗೈಯುತ್ತಾ ಮೇಲಿನಂತೆ ಮಾತನಾಡಿದರು.

ಮುಂದುವರೆದ ಅವರು, ಈ ರೀತಿ ಜನಸಾಮಾನ್ಯರಿಗೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಶರಣರು ಅಂದಿನ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿದ್ದ ಮೇಲು ಕೀಳು, ಜಾತಿ ಭೇದ ವ್ಯವಸ್ಥೆಯನ್ನು ವಿರೋಧಿಸಿದರು. ಆ ಮೂಲಕ ಒಂದು ಹೊಸ ವ್ಯವಸ್ಥೆಗೆ ನಾಂದಿ ಹಾಡಿದರು.

ಎಲ್ಲರ ಹುಟ್ಟು ಸಹಜವಾದುದು. ಆತ ಹುಟ್ಟುವುದು ತಾಯ ಗರ್ಭದಿಂದಲೇ, ಆದರೆ ಹುಟ್ಟಿದ ನಂತರ ಬ್ರಾಹ್ಮಣ, ಕ್ಷತ್ರಿಯ, ದಲಿತ ಎಂದು ಅವರನ್ನು ಜಾತಿಗಳನ್ನಾಗಿ ವಿಂಗಡಿಸುವುದು, ಹಲವರು ಮೇಲು ವರ್ಗದವರು, ಇನ್ನುಳಿದವರು ತಳವರ್ಗದ ಶೂದ್ರರೆಂದು ವಿಭಾಗಿಸುವುದಕ್ಕೆ ಬಸವಾದಿ ಶರಣರ ಬಲವಾದ ವಿರೋಧವಿತ್ತು. ಸಾಮಾಜಿಕವಾಗಿ ಅಂದು ಅಸ್ಪೃಶ್ಯರೆಂದರೆ ಪಶುಗಳ ಜೀವನಕ್ಕಿಂತ ಕಡೆಯಾಗಿತ್ತು. ಇದು ಶರಣರ ತೀವ್ರ ಟೀಕೆಗೆ ಒಳಗಾಗಿತ್ತು.

ಅವರು ಒಂದು ಹೆಜ್ಜೆ ಮುಂದಿಟ್ಟು ಆ ತಳವರ್ಗದವರನ್ನೆಲ್ಲ ಅನುಭವ ಮಂಟಪಕ್ಕೆ ಕರೆತಂದು ಅವರು ದುಡಿಯುತ್ತಿದ್ದ ದುಡಿಮೆಗೆ ಕಾಯಕವೆಂದು ಹೆಸರಿಟ್ಟು ಗೌರವಿಸಿದರು. ಅಲ್ಲದೇ ಅಂದು ದೇವರ ಹೆಸರಿನಲ್ಲಿ, ಆತನ ಕೃಪೆಯ ಪಡೆಯುವ ನೆವದಲ್ಲಿ ಪ್ರಾಣಿಬಲಿ ನೀಡುವ ಪದ್ದತಿ ವ್ಯಾಪಕವಾಗಿತ್ತು. ಇದು ಕೂಡಾ ಶರಣರ ಕೆಂಗಣ್ಣಿಗೆ ಕಾರಣವಾಯಿತು.

ವೇದ, ಆಗಮಗಳು ಅಂದು ಬರೀ ವೈಧಿಕರ ಬಳಿಯಿದ್ದವು. ಅವುಗಳನ್ನು ದಾಳಗಳನ್ನಾಗಿ ಬಳಸಿ ಜನಸಾಮಾನ್ಯರನ್ನು ದೋಚುತ್ತಿದ್ದ ಕಾರಣಕ್ಕೆ ವೇದಾಗಮಗಳನ್ನು ಶರಣರು ತಿರಸ್ಕರಿಸಿದರು. ದೇವರು ಬರೀ ಗುಡಿಯಲ್ಲಿದ್ದವು. ತಳವರ್ಗ, ಜನಸಾಮಾನ್ಯರಿಗೆ ಅವುಗಳ ದರ್ಶನವಿರಲೇ ಇಲ್ಲ ಈ ಕಾರಣಕ್ಕಾಗಿ ಜನರ ಕೈಗೆ ಇಷ್ಟಲಿಂಗ ನೀಡಿ ನೀವು ಗುಡಿಗುಂಡಾರಗಳಿಗೆ ತೆರಳಬೇಡಿರಿ, ನಿಮ್ಮ ದೇವರನ್ನು ನೀವೇ ಪೂಜಿಸಿರೆಂದು ಇಷ್ಟಲಿಂಗ ಕೊಟ್ಟರು.

ಶರಣರು ಸಮಾಜಮುಖಿಯಾಗಿದ್ದವರು. ಈ ಕಾರಣಕ್ಕಾಗಿ ಬಸವಣ್ಣನವರು ಶರಣರನ್ನು ಅನುಪಮ ಚಾರಿತ್ರ್ಯವಂತರು, ಅವರಿಗೆ ಯಾರೇ ಸಮನಾಗಲಾರೆಂದಿದ್ದಾರೆಂದು ಅಂಗಡಿ ನುಡಿದರು.

ವೇದಿಕೆಯ ಮೇಲೆ ಬಸವದಳದ ಗಣ್ಯರು ಉಪಸ್ಥಿತರಿದ್ದರು. ವಚನ ಪ್ರಾರ್ಥನೆ, ಸ್ವಾಗತ, ನಿರೂಪಣೆ, ವಚನ ಮಂಗಲ ಬಸವದಳದ ಶರಣೆಯರಿಂದ ನಡೆಯಿತು. ಕಾರ್ಯಕ್ರಮದಲ್ಲಿ ಶರಣ-ಶರಣೆಯರು ಬಹುಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *