ರೈತ ಸಂಘದಿಂದ ನಿಡಸೋಸಿ ಶಿವಯೋಗಿಗಳ ಬಗ್ಗೆ ಚಿಂತನಗೋಷ್ಠಿ

ಬಸವ ಮೀಡಿಯಾ
ಬಸವ ಮೀಡಿಯಾ

ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನ ವಿಳಂಬ; ರಾಜಕೀಯ ವೈಫಲ್ಯ ಕಾರಣ

ಚಿತ್ರದುರ್ಗ:

ಶ್ರಾವಣಮಾಸ ಒಟ್ಟಾರೆ ಎಲ್ಲರಿಗೂ ಶ್ರವಣ ಮತ್ತು ಮನನ ಮಾಡಿಕೊಳ್ಳಲು ಉತ್ತಮ ಕಾಲವೆಂದು ಪ್ರಕೃತಿಯೊಂದಿಗಿನ ಒಡನಾಟದಲ್ಲಿ ನಮ್ಮ ಪೂರ್ವಿಕರು ವೈಜ್ಞಾನಿಕವಾಗಿ ನಿರೂಪಿಸಿದ್ದಾರೆ. ಇದರಿಂದ ರೈತಲೂ ಹೊರತಾಗಿಲ್ಲ.

ಈ ಮಾಸ ತಮ್ಮ ಬಿಡುವಿಲ್ಲದ ಕೆಲಸಕ್ಕೆ ಕೊಂಚ ವಿರಾಮ ಪಡೆದು ಗ್ರಾಮಗಳಲ್ಲಿ ಪುರಾಣ, ಕಥೆ, ಭಜನೆ, ಕೀರ್ತನೆ ಸೇರಿದಂತೆ ಪುಣ್ಯಪುರುಷರ ಜೀವನಗಾಥೆಯನ್ನು ಹೇಳಿಸುವ ಕೇಳಿಸುವ ಸತ್ಸಂಪ್ರದಾಯ ಇರುತ್ತಿತ್ತು.

ಅದರಂತೆ ಈಗ ನಮ್ಮ ರೈತ ಮುಖಂಡರೂ ಸಹ ಒಂದುದಿನದ ಕಾರ್ಯಕ್ರಮ ಆಯೋಜಿಸಿರುವುದು ಸಂತಸದ ಸಂಗತಿ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ನುಡಿದರು.

ಅವರು ಇಲ್ಲಿನ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಆಯೋಜಿಸಿರುವ ಶ್ರಾವಣ ಮಾಸದ ಪ್ರಯುಕ್ತ ಅನುಭಾವ ಶ್ರಾವಣ; ಶರಣ ಚಿಂತನ ಮಾಲಿಕೆಯ ೧೮ನೇ ದಿನದ ಕಾರ್ಯಕ್ರಮದಲ್ಲಿ ನಗರದ ಕೃಷಿ ಇಲಾಖೆ ರೈತನಾಯಕ ದಿವಂಗತ ಪುಟ್ಟಯ್ಯ ಸಭಾ ಭವನದಲ್ಲಿ ರೈತ ಸಂಘದವರು ಏರ್ಪಡಿಸಿದ್ದ ನಿಡಸೋಸಿಯ ಶಿವಯೋಗಿಗಳವರ ವ್ಯಕ್ತಿತ್ವ ಕುರಿತಾದ ಚಿಂತನಗೋಷ್ಠಿಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.

ನಿಡಸೋಸಿಯ ನಿಜಲಿಂಗೇಶ್ವರರು ೧೭-೧೮ನೇ ಶತಮಾನದಲ್ಲಿ ಬಾಳಿ ಹೋದ ಮಹಾತಪಸ್ವಿಗಳು.

ಬಸವತತ್ವದ ಪರಮ ಅನುಯಾಯಿಗಳಾಗಿ ನಡೆದವರು. ಅಲ್ಲಿ ದಾಸೋಹ ವ್ಯವಸ್ಥೆ ಮಾದರಿಯಾಗಿ ಈಗಲೂ ನಡೆದಿದೆ. ಇದರೊಂದಿಗೆ ಈಗ ಶಿಕ್ಷಣ ಕ್ಷೇತ್ರಕ್ಕೆ ಒತ್ತುಕೊಟ್ಟು ಬಡವರ ಪಾಲಿಗೆ ಸೇವೆ ಸಲ್ಲಿಸುತ್ತಿದೆ ಎಂದರಲ್ಲದೆ, ರೈತರು ಶ್ರೀಮಠದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರಬೇಕೆಂದು ಸಲಹೆ ನೀಡಿದರು.

ಸಮ್ಮುಖ ವಹಿಸಿದ್ದ ಬಸವಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಅಂದು ಬಯಲುಸೀಮೆಯ ನಾಡಿಗೆ ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳು ಕೇವಲ ಜನರಿಂದಲೇ ೭ ಕೆರೆಗಳನ್ನು ಕಟ್ಟಿಸುತ್ತಾರೆ. ಯಾವ ತಂತ್ರಜ್ಞಾನ ಸೌಲಭ್ಯಗಳಿರದ ಕಾಲದಲ್ಲಿ ಸಾಧ್ಯವಾಗಿರೋದು ಈಗ ಯಾಕೆ ಆಗುತ್ತಿಲ್ಲ. ಜನರ ಇಚ್ಛಾಶಕ್ತಿ ಕೊರತೆ ಇದೆ. ಭಕ್ತಿ, ನಿಷ್ಠೆ ಇರದ ಕಾರಣ ಹಾಗೆ ಪರಿಸರ ಮೇಲಿನ ನಿರಂತರ ದಬ್ಬಾಳಿಕೆಯಿಂದ ಸಕಾಲಕ್ಕೆ ಮಳೆ ಬರುತ್ತಿಲ್ಲ ಎಂದು ವಿಷಾದಿಸಿದರು.

ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿದ್ದ ಕೃಷಿ ಇಲಾಖೆ ಜಂಟಿನಿರ್ದೇಶಕ ಮಂಜುನಾಥ್ ಮಾತನಾಡಿ, ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂದು ಬಸವಣ್ಣನವರು ಹೇಳಿದ್ದಾರೆ. ಇಂತಹ ಅನುಭಾವ ಚಿಂತನ ಮಾಲಿಕೆಗಳಿಂದ ಜನತೆ ಅನುಭವವನ್ನು ಪಡೆದುಕೊಳ್ಳಬೇಕಿದೆ. ಅದಕ್ಕಾಗಿ ಒಂದು ತಿಂಗಳಕಾಲ ಶ್ರೀ ಬೃಹನ್ಮಠವು ನಗರದಲ್ಲಿ ಏರ್ಪಡಿಸಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದರು.

ಮುಖ್ಯಅತಿಥಿ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯ ಪೂರ್ಣ ಪ್ರಮಾಣದ ಅನುಷ್ಠಾನ ವಿಳಂಬಕ್ಕೆ ಚಿತ್ರದುರ್ಗ ನೆಲದ ರಾಜಕೀಯ ವೈಫಲ್ಯ ಕಾರಣ. ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಗತದ ಹಿಂದೆ ಜಿಲ್ಲೆಯ ಜನಸಮುದಾಯದ ಯಶಸ್ವಿ ಹೋರಾಟವಿದೆ. ರಾಜ್ಯ ಸರ್ಕಾರಕ್ಕೆ ನೀರು ತೋರಿಸಿ, ಯೋಜನೆ ಮಂಜೂರು ಮಾಡಿಸಿ ಕಾಮಗಾರಿ ಆರಂಭವಾಗಿಸುವುದರ ತನಕ ಸಮುದಾಯ ಹೋರಾಟ ತನ್ನ ಅಸ್ತಿತ್ವ ಕಾಯ್ದುಕೊಂಡಿದೆ. ಕಾಮಗಾರಿ ನಿಧಾನವಾಗದಂತೆ ನೋಡಿಕೊಳ್ಲುವ ಜವಾಬ್ದಾರಿ ಜನಪ್ರತಿನಿಧಿಗಳದ್ದಾಗಿದೆ. ಪ್ರತಿ ಹಂತಕ್ಕೂ ಜನರೇ ಹೋರಾಟ ಮಾಡಿ ರಾಜ್ಯ ಸರ್ಕಾರವನ್ನು ಎಚ್ಚರಿಸುವ ಇರಾದೆ ಇಲ್ಲವೆಂದರು.

ಆರಂಭದಲ್ಲಿ ಆರು ಸಾವಿರ ಕೋಟಿ ರೂಪಾಯಿ ಇದ್ದ ಯೋಜನಾ ವೆಚ್ಚ ಇದೀಗ ೨೨ ಸಾವಿರ ಕೋಟಿ ರುಪಾಯಿಗೆ ಹೆಚ್ಚಳವಾಗಿದೆ. ರಾಜ್ಯಸರ್ಕಾರ ಅನುದಾನ ಹೊಂದಿಸಿ ಕಾಮಗಾರಿ ಪೂರ್ಣಗೊಳಿಸುವ ಹಂತದಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಯೋಜನೆ ಹೆಸರಲ್ಲಿ ೫೩೦೦ ಕೋಟಿ ರೂಪಾಯಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಸ್ವತಃ ಚಿತ್ರದುರ್ಗದಲ್ಲಿ ಘೋಷಣೆ ಮಾಡಿದ ನಂತರ ಕಾಮಗಾರಿ ನೆನೆಗುದಿಗೆ ಬಿದ್ದಿತು. ಕೇಂದ್ರದ ಕಡೆ ರಾಜ್ಯ ಸರ್ಕಾರ ಬೆಟ್ಟು ಮಾಡಿ ತೋರಿಸುತ್ತಾ ತನ್ನ ಜವಾಬ್ದಾರಿ ಮರೆಯಿತು.

ಕಾವೇರಿ ಸಮಸ್ಯೆ ಎದುರಾದಾಗ ರಾಜ್ಯ ಸರ್ಕಾರ ತಮ್ಮ ಪ್ರಮಾದವೆನ್ನುವಂತೆ ನಿರ್ವಹಣೆಗೆ ಮುಂದಾಗುತ್ತದೆ. ಆದರೆ ಕೃಷ್ಣೆ ವಿಚಾರ ಬಂದಾಗ ನಿರ್ಲಕ್ಷ್ಯ ತೋರುತ್ತದೆ. ಭದ್ರಾ ಮೇಲ್ದಂಡೆ ಯೋಜನೆ ಕೃಷ್ಣಕಣಿವೆ ವ್ಯಾಪ್ತಿಗೆ ಬರುತ್ತದೆ. ಜಿಲ್ಲೆಯ ಮಠಾಧೀಶರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕಿವಿ ಹಿಂಡಿ ಅನುದಾನ ಬಿಡುಗಡೆ ಮಾಡಿಸುವುದರ ಕಡೆ ತಮ್ಮ ಪ್ರಯತ್ನ ಮುಂದುವರಿಸಬೇಕೆಂದು ಚಿಕ್ಕಪ್ಪನಹಳ್ಳಿ ಷಣ್ಮುಖ ಮನವಿ ಮಾಡಿದರು.

ನಿಡಸೋಸಿಯ ಶಿವಯೋಗಿಗಳವರ ಬಗ್ಗೆ ವಿಷಯಾವಲೋಕನ ಮಾಡಿದ ಉಪನ್ಯಾಸಕ ವಿಶ್ವನಾಥ್ ಅವರು, ಗುರುಭಕ್ತಿ, ಕಾಯಕ, ದಾಸೋಹದ ಜೀವಂತ ಪರಂಪರೆ ಶ್ರೀ ಆದ್ಯ ನಿಜಲಿಂಗೇಶ್ವರರು. ನಿಡಸೋಸಿಯ ಶ್ರೀ ದುರದುಂಡೇಶ್ವರರು ಹಾಗೂ ಶ್ರೀ ಆದ್ಯ ನಿಜಲಿಂಗೇಶ್ವರರ ಗುರುಪರಂಪರೆ ಗುರುಭಕ್ತಿ, ಕಾಯಕ, ದಾಸೋಹ, ವೈರಾಗ್ಯ ಮತ್ತು ಮಾನವೀಯತೆಯ ಆದರ್ಶಗಳನ್ನು ಸಮಾಜಕ್ಕೆ ನೀಡಿದೆ ಎಂದು ಉಪನ್ಯಾಸದಲ್ಲಿ ಪ್ರತಿಪಾದಿಸಲಾಯಿತು.

ಶ್ರೀ ದುರದುಂಡೇಶ್ವರರ ತಪಸ್ಸು ಹಾಗೂ ಅನುಗ್ರಹದಿಂದ ಶ್ರೀ ಆದ್ಯ ನಿಜಲಿಂಗೇಶ್ವರರ ಆಧ್ಯಾತ್ಮಿಕ ಪಯಣ ಆರಂಭಗೊಂಡು, ನಿಡಸೋಸಿ ಕ್ಷೇತ್ರವು ಭಕ್ತಿ, ಜ್ಞಾನ ಮತ್ತು ದಾಸೋಹದ ಕೇಂದ್ರವಾಗಿ ಬೆಳೆದಿದೆ. ಮಠವು ಕೇವಲ ಧಾರ್ಮಿಕ ಕೇಂದ್ರವಲ್ಲದೆ, ಜ್ಞಾನ, ಚಿಂತನೆ ಮತ್ತು ಸಮಾಜಸೇವೆಯ ಕೇಂದ್ರವಾಗಬೇಕು ಎಂಬ ಸಂದೇಶವನ್ನು ಈ ಪರಂಪರೆ ಸಾರುತ್ತದೆ ಎಂದು ತಿಳಿಸಿದರು.

ಇಂದಿನ ಸಮಾಜದಲ್ಲಿ ದಾಸೋಹದ ಮಹತ್ವವನ್ನು ಒತ್ತಿ ಹೇಳುತ್ತಾ, ಕಾಯಕದಲ್ಲಿ ಕೈಲಾಸ ಕಾಣೋಣ, ದಾಸೋಹದಲ್ಲಿ ದೇವರನ್ನು ಕಾಣೋಣ, ಮಾನವೀಯತೆಯಲ್ಲಿ ಶಿವನನ್ನು ಕಾಣೋಣ ಎಂಬ ಸಂದೇಶವನ್ನು ನೀಡಿದರು.

ಶ್ರೀ ದುರದುಂಡೇಶ್ವರರು, ಶ್ರೀ ಆದ್ಯ ನಿಜಲಿಂಗೇಶ್ವರರು ಹಾಗೂ ಅವರ ಗುರುಪರಂಪರೆಯ ಶಿವಯೋಗಿಗಳ ಸೇವೆಯನ್ನು ಸ್ಮರಿಸಿ, ಅವರ ಆದರ್ಶಗಳನ್ನು ಇಂದಿನ ಸಮಾಜದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.

ವೇದಿಕೆಯಲ್ಲಿದ್ದ ರೈತಮುಖಂಡ ಕೆ.ಪಿ. ಭೂತಯ್ಯ, ಬಾಪೂಜಿ ವಿದ್ಯಾಸಂಸ್ಥೆ ಸ್ಥಾಪಕರಾದ ಕೆ.ಎಂ. ವೀರೇಶ ಮಾತನಾಡಿದರು.

ರೈತಮುಖಂಡರಾದ ಧನಂಜಯ, ಸುಧಾ, ತಿಪ್ಪೇಸ್ವಾಮಿ, ಸುರೇಶಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಪಿ. ವೀರೇಂದ್ರಕುಮಾರ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ಚಂದ್ರವಳ್ಳಿಯ ಎಸ್.ಜೆ.ಎಂ. ಪದವಿ ಕಾಲೇಜಿನ ನಿರ್ವಹಣೆಯಲ್ಲಿ ನಡೆದ ಸಮಾರಂಭಕ್ಕೆ ಉಮೇಶ ಪತ್ತಾರ ಪ್ರಾರ್ಥನೆ ಹಾಡಿದರೆ, ರುದ್ರಸ್ವಾಮಿ ಸ್ವಾಗತಿಸಿದರು. ಉಪನ್ಯಾಸಕಿ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು. ಮತ್ತೋರ್ವ ಉಪನ್ಯಾಸಕಿ ಡಾ. ಪುಷ್ಪಾ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *