ಲಿಂಗೈಕ್ಯ ಶರಣರ ಪ್ರಥಮ ಪುಣ್ಯ ಸ್ಮರಣೋತ್ಸವ
ಕಲಬುರಗಿ:
ಶರಣಬಸವೇಶ್ವರ ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪ ಅವರ ಪ್ರಥಮ ಪುಣ್ಯಸ್ಮರಣೋತ್ಸವದ ಅಂಗವಾಗಿ ಬುಧವಾರ ಕಲಬುರಗಿಯಲ್ಲಿ ಭಾವಪೂರ್ಣ ನುಡಿನಮನ ಸಲ್ಲಿಸಲಾಯಿತು.
ನಗರದ ಶರಣಬಸವೇಶ್ವರ ದೇವಸ್ಥಾನ ಸಂಕೀರ್ಣದಲ್ಲಿರುವ ಡಾ. ಶರಣಬಸವಪ್ಪ ಅಪ್ಪ ಅನುಭವ ಮಂಟಪವನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗಿತ್ತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಶಿಕ್ಷಣ, ಸಾಮಾಜಿಕ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನರು ಸಮಾರಂಭದಲ್ಲಿ ಪಾಲ್ಗೊಂಡು ಅಪ್ಪಾಜಿ ಅವರಿಗೆ ಗೌರವ ನಮನ ಸಲ್ಲಿಸಿ, ಶಿಕ್ಷಣ ಕ್ಷೇತ್ರ ಹಾಗೂ ಸಾಮಾಜಿಕ ಬದುಕಿಗೆ ಅವರು ನೀಡಿದ ಅಪೂರ್ವ ಕೊಡುಗೆಯನ್ನು ಸ್ಮರಿಸಿದರು.
ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ ಶಾಮನೂರು ಅವರು, ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ರಚಿಸಿರುವ ‘ಮಹಾಮಾನವ’ ಭಾಗ-೧ ಕೃತಿ, ಡಾ. ಎನ್.ಎಸ್. ಪಾಟೀಲ ಅವರು ರಚಿಸಿರುವ ಡಾ. ಅಪ್ಪಾಜಿಯವರ ಜೀವನ ಚರಿತ್ರೆ ‘ದಾಸೋಹಮೂರ್ತಿ ವಿದ್ಯಾಭಂಡಾರಿ’ಕೃತಿ ಹಾಗೂ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಕಾಶ ನೆಲ್ಲಗಿ ಅವರು ಸಿದ್ಧಪಡಿಸಿರುವ ಡಾ. ಅಪ್ಪಾಜಿಯವರು ಪ್ರತಿಪಾದಿಸಿದ ೧೬ ದಾಸೋಹ ಸೂತ್ರಗಳನ್ನು ವಿವರಿಸುವ ವಿಡಿಯೋ ಕ್ಯಾಸೆಟ್‌ಗಳ ಸಮೂಹವನ್ನು ಬಿಡುಗಡೆ ಮಾಡಿ ಮಾತನಾಡಿದರು.

ಡಾ. ಶರಣಬಸವಪ್ಪ ಅಪ್ಪಾಜಿಯವರು ಶಿಕ್ಷಣ ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಐತಿಹಾಸಿಕ ಮತ್ತು ಅಪೂರ್ವವಾದದ್ದು, ಹಿಂದುಳಿದ ಪ್ರದೇಶದ ಶೈಕ್ಷಣಿಕ ಸಬಲೀಕರಣಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದ ಅಪ್ಪಾಜಿಯವರು, ಈ ಭಾಗವನ್ನು ಪ್ರಮುಖ ಶೈಕ್ಷಣಿಕ ಕೇಂದ್ರವನ್ನಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ವಿಶೇಷವಾಗಿ ಗುಣಮಟ್ಟದ ಶಿಕ್ಷಣವನ್ನು ವಿಸ್ತರಿಸುವುದು ಹಾಗೂ ಮಹಿಳೆಯರಿಗೆ ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸುವಲ್ಲಿ ಅವರ ಕೊಡುಗೆಗೆ ಸರಿಸಾಟಿಯಿಲ್ಲ. ಉತ್ತರ ಕರ್ನಾಟಕದ ಪ್ರಥಮ ಖಾಸಗಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಅಪ್ಪಾಜಿಯವರು, ಸಂಘದ ವತಿಯಿಂದ ನಡೆಸಲಾಗುತ್ತಿರುವ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಿದರು.
ಅಲ್ಲದೆ ಕೃತಕ ಬುದ್ಧಿಮತ್ತೆ ಡ್ರೋನ್ ತಂತ್ರಜ್ಞಾನ ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು ಎಂದು ಡಾ. ಪ್ರಭಾ ಮಲ್ಲಿಕಾರ್ಜುನ ಶಾಮನೂರು ಹೇಳಿದರು.
೮೫ ಶಿಕ್ಷಣ ಸಂಸ್ಥೆಗಳ ಸರಣಿಯನ್ನು ಹಾಗೂ ಒಂದು ಖಾಸಗಿ ವಿಶ್ವವಿದ್ಯಾಲಯವನ್ನು ಮುನ್ನಡೆಸುತ್ತಾ, ವಿವಿಧ ಕೋರ್ಸ್ಗಳಲ್ಲಿ ಸುಮಾರು ೪೦,೦೦೦ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದು ಮತ್ತು ಸಂಘ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಶಿಕ್ಷಣ ಸಂಸ್ಥೆಗಳಲ್ಲಿ ೫,೦೦೦ಕ್ಕೂ ಅಧಿಕ ಶಿಕ್ಷಕರು ಹಾಗೂ ಸಿಬ್ಬಂದಿಗೆ ಜೀವನೋಪಾಯ ಕಲ್ಪಿಸಿರುವುದು ಸಾಮಾನ್ಯ ಸಾಧನೆಯಲ್ಲ ಎಂದು ಡಾ. ಪ್ರಭಾ ಬಣ್ಣಿಸಿದರು.

ಡಾ. ಅಪ್ಪಾಜಿಯವರ ಅಂತಿಮ ದಿನಗಳ ವಿಡಿಯೋ ದೃಶ್ಯಗಳನ್ನು ವೀಕ್ಷಿಸುವ ಅವಕಾಶ ತಮಗೆ ದೊರೆತಿದ್ದು, ತಮ್ಮ ಪ್ರೀತಿಯ ಪುತ್ರ ಹಾಗೂ ೯ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರೊಂದಿಗೆ ಅವರು ಕಳೆದ ಸಮಯದಲ್ಲಿ ವ್ಯಕ್ತವಾದ ಪ್ರೀತಿ, ವಾತ್ಸಲ್ಯ ಮತ್ತು ಮಮತೆಯ ಮತ್ತೊಂದು ಮೃದು ಮುಖವನ್ನು ಕಾಣಲು ಸಾಧ್ಯವಾಯಿತು ಎಂದು ಅವರು ಸ್ಮರಿಸಿದರು.
ಮಹಾತ್ಮ ಬಸವೇಶ್ವರರ ತತ್ವಾದರ್ಶಗಳನ್ನು ರಾಷ್ಟ್ರ ರಾಜಧಾನಿ ನವದೆಹಲಿಗೆ ಕೊಂಡೊಯ್ದಿರುವುದು ಡಾ. ಅಪ್ಪಾಜಿಯವರ ಮತ್ತೊಂದು ಮಹತ್ವದ ಕೊಡುಗೆಯಾಗಿದೆ. ಸಂಸತ್ ಭವನದ ಆವರಣದಲ್ಲಿ ಮಹಾತ್ಮ ಬಸವೇಶ್ವರರ ಅಶ್ವಾರೂಢ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಬಸವಣ್ಣನವರು ಪ್ರತಿಪಾದಿಸಿದ ಸಾಮಾಜಿಕ ನ್ಯಾಯ ಹಾಗೂ ಜಾತಿರಹಿತ ಸಮಾಜದ ಸಂದೇಶವನ್ನು ಉತ್ತರ ಭಾರತದ ಜನತೆಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಡಾ. ಪ್ರಭಾ ಹೇಳಿದರು.
ಅನುಭವ ಮಂಟಪದಲ್ಲಿ ಸೇರಿದ್ದ ಅಪಾರ ಸಂಖ್ಯೆಯ ಮಹಿಳಾ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ ಅವರು, ಶಿಕ್ಷಕರು ತಮ್ಮ ಆರೋಗ್ಯ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಅತ್ಯಂತ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು. ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಎಚ್‌ಪಿವಿ ಲಸಿಕೆ ನೀಡಿಸುವ ಕುರಿತು ಜಾಗೃತಿ ಮೂಡಿಸಬೇಕು. ಕ್ಯಾನ್ಸರ್ ಹಾಗೂ ಜೀವನಶೈಲಿ ಸಂಬಂಧಿತ ಕಾಯಿಲೆಗಳ ಪ್ರಮಾಣ ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳಲ್ಲಿ ಈ ಕಾಯಿಲೆಗಳ ಅಪಾಯ ಹಾಗೂ ಅವುಗಳನ್ನು ತಡೆಗಟ್ಟುವ ವಿಧಾನಗಳ ಕುರಿತು ಶಿಕ್ಷಕರು ಅರಿವು ಮೂಡಿಸಬೇಕು ಎಂದು ಹೇಳಿದರು.
ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಮಾತನಾಡಿ, ತಮ್ಮ ತಂದೆ ಡಾ. ಅಪ್ಪಾಜಿಯವರೊಂದಿಗೆ ಹೊಂದಿದ್ದ ಆತ್ಮೀಯ ಬಾಂಧವ್ಯ ಹಾಗೂ ಪ್ರತಿದಿನ ಹಂಚಿಕೊಂಡ ಪ್ರೀತಿ ಮತ್ತು ಸಂತೋಷದ ಕ್ಷಣಗಳನ್ನು ಸ್ಮರಿಸಿದರು. “ನನ್ನ ತಂದೆಯ ಸೇವೆ ಮಾಡುವುದನ್ನು ನಾನು ಬಹಳ ಪ್ರೀತಿಸುತ್ತಿದ್ದೆ. ಪ್ರತಿದಿನವೂ ಅವರ ಪಾದಗಳನ್ನು ಒತ್ತುತ್ತಿದ್ದೆ ಹಾಗೂ ಅವರೊಂದಿಗೆ ಸಮಯ ಕಳೆಯುತ್ತಾ ಆಟವಾಡುತ್ತಿದ್ದೆ”ಎಂದು ಅವರು ಭಾವುಕರಾಗಿ ಹೇಳಿದರು.
ಮನೆಯಲ್ಲಿ ಹಾಗೂ ದೇವಸ್ಥಾನದಲ್ಲಿ ಪ್ರತಿನಿತ್ಯ ನಡೆಯುವ ತ್ರಿಕಾಲ ಪೂಜೆಗಳನ್ನು ಹೇಗೆ ನೆರವೇರಿಸಬೇಕು ಎಂಬುದನ್ನು ತಮ್ಮ ತಂದೆ ಡಾ. ಅಪ್ಪಾಜಿಯವರು ಕಲಿಸಿದ್ದರು. ಇಷ್ಟಲಿಂಗ ಪೂಜೆ, ಪಾದಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳ ಬಗ್ಗೆಯೂ ಮಾರ್ಗದರ್ಶನ ನೀಡಿದ್ದರು. ತಮ್ಮ ತಂದೆ ಡಾ. ಅಪ್ಪಾಜಿಯವರ ಹೆಜ್ಜೆಗಳನ್ನು ಅನುಸರಿಸುವುದರೊಂದಿಗೆ ಸಂಸ್ಥಾನದ ಎಲ್ಲ ಪರಂಪರೆ ಹಾಗೂ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗುವುದಾಗಿ ಪೂಜ್ಯ ದೊಡ್ಡಪ್ಪ ಅಪ್ಪ ಹೇಳಿದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಮಾತನಾಡಿ, ಡಾ. ಅಪ್ಪಾಜಿಯವರ ಪ್ರಥಮ ಪುಣ್ಯಸ್ಮರಣೋತ್ಸವದಲ್ಲಿ ಸಮಾಜದ ಎಲ್ಲ ವರ್ಗಗಳ ಜನರು ಪಾಲ್ಗೊಂಡಿರುವುದು ಅವರ ಮೇಲಿನ ಜನರ ಅಪಾರ ಪ್ರೀತಿ ಮತ್ತು ಅಭಿಮಾನಕ್ಕೆ ಸಾಕ್ಷಿಯಾಗಿದೆ.
ಸಾಮಾನ್ಯ ಜನರು, ಅದರಲ್ಲೂ ವಿಶೇಷವಾಗಿ ಮಹಿಳೆಯರ ಶೈಕ್ಷಣಿಕ ಸಬಲೀಕರಣಕ್ಕಾಗಿ ಡಾ. ಅಪ್ಪಾಜಿಯವರು ಸಲ್ಲಿಸಿರುವ ಅಮರ ಕೊಡುಗೆಯನ್ನು ಜನತೆ ಸದಾ ಸ್ಮರಿಸುತ್ತಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಅವರು, ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಸ್ಮರಣಾರ್ಥ ವಚನ ಟಿವಿ ವತಿಯಿಂದ ನೀಡಲಾಗುವ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಈ ವರ್ಷ ಡಾ. ಪ್ರಭಾ ಮಲ್ಲಿಕಾರ್ಜುನ ಶಾಮನೂರು ಅವರಿಗೆ ನೀಡಲಾಗುವುದು ಎಂದು ಘೋಷಿಸಿದರು.
ಹಾರಕೂಡ ಸಂಸ್ಥಾನ ಮಠದ ಪೂಜ್ಯ ಡಾ. ಚೆನ್ನವೀರ ಶಿವಾಚಾರ್ಯರು ಮಾತನಾಡಿ, ತಮ್ಮ ಜೀವನದುದ್ದಕ್ಕೂ ಶರಣಬಸವೇಶ್ವರ ಸಂಸ್ಥಾನ ಹಾಗೂ ಪೂಜ್ಯ ಡಾ. ಅಪ್ಪಾಜಿಯವರೊಂದಿಗೆ ಹೊಂದಿದ್ದ ಆತ್ಮೀಯ ಒಡನಾಟವನ್ನು ಸ್ಮರಿಸಿದರು.
ಡಾ. ಅಪ್ಪಾಜಿಯವರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಮಹತ್ವದ ಕಾರ್ಯಗಳು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲಿವೆ. ಸಂಘದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಅಪಾರ ಸಂಖ್ಯೆಯ ಹಳೆಯ ವಿದ್ಯಾರ್ಥಿಗಳು ಡಾ. ಅಪ್ಪಾಜಿಯವರ ಹೆಸರು ಹಾಗೂ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲಿದ್ದಾರೆ ಎಂದು ಹೇಳಿದರು.
೯ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪ ಅವರು ಕೇವಲ ೬ನೇ ವಯಸ್ಸಿನಲ್ಲಿಯೇ ಸಂಸ್ಥಾನದ ಪೀಠಾಧಿಪತಿಗಳಾಗಿ ಪಟ್ಟಾಭಿಷಿಕ್ತರಾಗಿದ್ದರು ಎಂದು ಅವರು ಸ್ಮರಿಸಿದರು. ತಾವು ಕೂಡ ೬ನೇ ವಯಸ್ಸಿನಲ್ಲಿಯೇ ಹಾರಕೂಡ ಸಂಸ್ಥಾನ ಮಠದ ಪೀಠಾಧಿಪತಿಗಳಾಗಿ ಪಟ್ಟಾಭಿಷಿಕ್ತರಾಗಿದ್ದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಶ್ರೀಶೈಲದಲ್ಲಿರುವ ಸಾರಂಗ ಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ಸಹ ಮಾತನಾಡಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಕಲಬುರಗಿ ಲೋಕಸಭಾ ಸದಸ್ಯ ಡಾ. ರಾಧಾಕೃಷ್ಣ ದೊಡ್ಡಮನಿ, ಮುತ್ತ್ಯಾನ ಬಬಲಾದ ಮಠದ ಪೀಠಾಧಿಪತಿ ಡಾ. ಗುರುಪಾದಲಿಂಗ ಮಹಾಶಿವಯೋಗಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಡಾ. ಅಪ್ಪಾಜಿಯವರ ಪುತ್ರಿಯರಾದ ಭವಾನಿ, ಶಿವಾನಿ, ಮಹೇಶ್ವರಿ, ಡಾ. ಗಂಗಾಂಬಿಕಾ ನಿಷ್ಠಿ, ಉಮಾ ಕಾಡಾದಿ, ಡಾ. ಶಾಂತಲಾ ನಿಷ್ಠಿ, ಗೋದಾವರಿ ಭೀಮಳ್ಳಿ, ಮತ್ತು ಡಾ. ವೀರನಾಥ ಮಹಾರಾಜ, ಔಸಾ, ಶ್ರೀ ಆದಿನಾಥ ಮಹಾರಾಜ, ಡಾ. ಅಲ್ಲಮಪ್ರಭು ದೇಶಮುಖ, ವಿಜಯಲಕ್ಷ್ಮೀ ಮುದಗಲ್, ಚಂದ್ರಶೇಖರ ನರಕೆ ಸೇರಿದಂತೆ ಡಾ. ಅಪ್ಪಾಜಿಯವರ ಕುಟುಂಬದ ನಿಕಟ ಸದಸ್ಯರನ್ನು ಸಹ ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು.
ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ. ಪಾಟೀಲ, ಬಿ.ಆರ್. ಪಾಟೀಲ, ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಬಿ.ಜಿ. ಪಾಟೀಲ, ಶಶೀಲ ನಮೋಶಿ, ಜಗದೇವ ಗುತ್ತೇದಾರ ಹಾಗೂ ಮಾಜಿ ಶಾಸಕರಾದ ಮಾಲಿಕಯ್ಯ ಗುತ್ತೇದಾರ, ದತ್ತಾತ್ರೇಯ ಪಾಟೀಲ ರೇವೂರ, ದೊಡ್ಡಪ್ಪಗೌಡ ನರಿಬೋಳ, ಮಾಜಿ ಸಂಸದ ಉಮೇಶ ಜಾಧವ ಸೇರಿದಂತೆ ಹಲವು ಚುನಾಯಿತ ಪ್ರತಿನಿಧಿಗಳನ್ನು ಸಹ ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಪೂಜ್ಯ ದೊಡ್ಡಪ್ಪ ಅಪ್ಪಾಜಿ ಹಾಗೂ ಕುಟುಂಬದ ಇತರ ಸದಸ್ಯರು ಲಿಂಗೈಕ್ಯ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿಯವರ ಗದ್ದುಗೆಗೆ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಎರಡು ಗಂಟೆಗಳಿಗೂ ಹೆಚ್ಚು ಕಾಲ ವಿಶೇಷ ಪೂಜೆ ಸಲ್ಲಿಸಿದರು.
