ಸಾಣೇಹಳ್ಳಿಯಲ್ಲಿ ಗುರುಗಳ 76ನೇ ಹುಟ್ಟುಹಬ್ಬದ ಸಂಭ್ರಮ

 

ಸಾಣೇಹಳ್ಳಿ:

” ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು 2026 ಸೆಪ್ಟಂಬರ್ 4 ಕ್ಕೆ 76 ನೆಯ ವಯಸ್ಸಿಗೆ ಪಾದಾರ್ಪಣೆ ಮಾಡಲಿದ್ದಾರೆ ಅದರ ನೆನಪಿಗಾಗಿ ಬೆಳಿಗ್ಗೆ ಶಿವಧ್ವಜಾರೋಹಣ, ಶಿವಮಂತ್ರ ಲೇಖನ, ಚಿಂತನ ಹಾಗೂ ಸಸಿನೆಡುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು; ಹುಟ್ಟು ಮತ್ತು ಸಾವುಗಳಿಗಿಂತ ಅವುಗಳ ನಡುವಿನ ಬದುಕು ಹಾಗೂ ಸಾಧನೆ ಅತ್ಯಂತ ಶ್ರೇಷ್ಠವಾದದ್ದು.

ತಮ್ಮ ಪೂರ್ವಾಶ್ರಮ ಹಾಗೂ ಜೀವನದ ಹಾದಿಯನ್ನು ನೆನಪಿಸಿಕೊಂಡ ಶ್ರೀಗಳು, “ತಾವು ಅತ್ಯಂತ ಬಡ ಕುಟುಂಬದಲ್ಲಿ ಜನಿಸಿ, ಶಿಕ್ಷಣದ ಆರಂಭದಲ್ಲಿ ಹಿನ್ನಡೆ ಅನುಭವಿಸಿದರೂ ಹಿರಿಯ ಗುರುಗಳ ಪ್ರೋತ್ಸಾಹದಿಂದ ಮುನ್ನಡೆದುಕೊಂಡು ಬಂದಿದ್ದೇವೆ. ತರಳಬಾಳು‌ ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ತೋರಿದ ಮಾತೃಹೃದಯ, ಶಿಸ್ತು ಹಾಗೂ ಪ್ರೇರಣೆಯೇ ತಮ್ಮ ಜೀವನದ ದಾರಿದೀಪವಾಯಿತು.

ನಮಗೆ ಕೇಕ್ ಕತ್ತರಿಸುವುದು ಅಥವಾ ದೀಪ ನಂದಿಸುವ ಹುಟ್ಟುಹಬ್ಬದ ಸಂಸ್ಕೃತಿ ಇಷ್ಟವಿಲ್ಲ. ದೀಪ ಬೆಳಗಿಸುವ ಹಾಗೂ ಪ್ರಕೃತಿಯನ್ನು ಪ್ರೀತಿಸುವ ಸಂಸ್ಕೃತಿ ನಮ್ಮದಾಗಬೇಕು. ವಿದ್ಯಾರ್ಥಿಗಳು ಹಾಗೂ ಭಕ್ತರು ತಮ್ಮ ಹುಟ್ಟುಹಬ್ಬದ ಸವಿನೆನಪಿಗೆ ಗಿಡಗಳನ್ನು ನೆಟ್ಟು ಬೆಳೆಸುವ ಸತ್ಪರಂಪರೆಯನ್ನು ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಶಿವಧ್ವಜಾರೋಹಣ ನೆರವೇರಿಸಿ ಮಾತನಾಡಿದ ಹಿರಿಯ ಸಾಹಿತಿ ಬಸವರಾಜ ಸಾದರ, “ಶ್ರೀಗಳು ಕಳೆದ ನಾಲ್ಕು ದಶಕಗಳಲ್ಲಿ ಸಾಣೇಹಳ್ಳಿಯನ್ನು ವಿಶ್ವಮಟ್ಟದ ಸಾಂಸ್ಕೃತಿಕ ಹಾಗೂ ವೈಚಾರಿಕ ಕೇಂದ್ರವನ್ನಾಗಿ ಬೆಳೆಸಿದ್ದಾರೆ. ಶರಣರ ತತ್ವಗಳಿಗೆ ಅನುಗುಣವಾಗಿ ನಡೆಯುತ್ತಿರುವ ಈ ಸಂಸ್ಥಾನವು ಕರ್ನಾಟಕದ ಸಾಕ್ಷಿ ಪ್ರಜ್ಞೆಯಾಗಿದೆ” ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಜಯಪುರದ ಶರಣ ಚಿಂತಕ ಅಶೋಕ ಮಳಗಲಿ ಅವರು ಮಾತನಾಡಿ, “ಶ್ರೀಗಳು ಬಸವತತ್ವವನ್ನು ಕೇವಲ ನಾಡಿನಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಪಸರಿಸುವ ಮೂಲಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳು ಶರಣರ ವಿಚಾರಗಳ ಬೆಳಕಿನಲ್ಲಿ ಬೆಳೆಯುತ್ತಿರುವುದು ಸೌಭಾಗ್ಯ ಎಂದರು.

ಕಾರ್ಯಕ್ರಮದಲ್ಲಿ ಮಠದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಹೊಸದಾಗಿ ನಿರ್ಮಾಣವಾಗುತ್ತಿರುವ ಗುರುಭವನದ ಹಿಂಭಾಗದಲ್ಲಿ ಬೇರೆ ಬೇರೆ ತಳಿಯ ಹಣ್ಣಿನ 200 ಗಿಡಗಳನ್ನು ಹಾಕಲಾಯಿತು.

ಬಂದ ಭಕ್ತರಿಗೆ ಒಂದೊಂದು ಗಿಡವನ್ನು ಪೂಜ್ಯರು ವಿತರಿಸಿದರು. ನಾಗರಾಜ ವಚನಗೀತೆಯನ್ನು ಹಾಡಿದರು. ದೈಹಿಕ ಶಿಕ್ಷಕಿ ಶೋಭ ಶಿವಧ್ವಜಾರೋಹಣ ನಡೆಸಿಕೊಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *