ಬೀದರಿನಲ್ಲಿ ಹಿರಿಯ ನಾಗರಿಕರಿಂದ ವಚನ ವಿಶ್ಲೇಷಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಬೀದರ:

ಹಿರಿಯರ ಅನುಭವ, ಮಾರ್ಗದರ್ಶನ ಸಮಾಜಕ್ಕೆ ಅನಿವಾರ್ಯ, ಇಂದು ಅವರ ಸೇವೆ ಬಳಸುವ ಯೋಜನೆ ರೂಪಿಸುವುದು ತುಂಬಾ ಅವಶ್ಯಕತೆಯಾಗಿದೆ ಎಂದು ಬದಾಮಿ-ಬೇಲೂರು ಗುರುಬಸವೇಶ್ವರ ಸಂಸ್ಥಾನಮಠದ ಪೀಠಾಧಿಪತಿಗಳಾದ ಡಾ. ಪ್ರಭುಮಹಾಂತ ಸ್ವಾಮೀಜಿ ನುಡಿದರು.

ವಚನ ಚಾರಿಟೇಬಲ್ ಸೊಸೈಟಿ ಆರನೇ ವಾರ್ಷಿಕೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾದ ಹಿರಿಯರ ವಚನ ಚಿಂತನ ಸ್ಪರ್ಧೆಯನ್ನು ಬಸವ ಪೂಜೆ ನೆರವೇರಿಸಿ ಮಾತನಾಡಿದರು.

ಹಿರಿಯರ ಆದರ್ಶ, ಅವರ ಬದುಕಿನ ಸಂಕಷ್ಟ, ಚಿಂತನೆ ಮಾಡಲು ಇದೊಂದು ಸುವರ್ಣ ಅವಕಾಶ. ಸ್ಪರ್ಧೆ ನೆಪ ಮಾತ್ರ. ಇಡೀ ಜಿಲ್ಲೆಯ ಹಿರಿಯರನ್ನು ಒಂದೆಡೆ ಸೇರಿಸಿರುವುದೇ ಮುಖ್ಯ ಉದ್ದೇಶ ಎಂದು ಪೂಜ್ಯರು ತಮ್ಮ ವಿಚಾರ ಪ್ರಸ್ತುತ ಪಡಿಸಿದರು.

ಸಾನಿಧ್ಯ ವಹಿಸಿದ ಗುಣತೀರ್ಥವಾಡಿಯ ಪೂಜ್ಯ ಬಸವಪ್ರಭು ಮಹಾಸ್ವಾಮಿಗಳು, ಇಂದು ವಚನಗಳಿಗೆ ಹೊಸ ಅರ್ಥ ಬಂದಿದೆ. ಹಿರಿಯರ ವಿಚಾರ ಅರಿಯಲು ನಮಗಿಂದು ಸಮಯ ಕೂಡಿ ಬಂದಿದೆ. ಅರಳು ಮರಳು ಎಂಬ ಕಾಲಘಟ್ಟದಲ್ಲಿ ಅವರನ್ನು ಗೌರವ ನೀಡಿ ಇಂಥ ಸ್ಪರ್ಧೆ ಏರ್ಪಡಿಸುವುದು ಸಾಹಸದ ಕಾರ್ಯ.

ಹಿರಿಯರ ಜೀವಾನಾನುಭವ ನಮಗೆಲ್ಲ ಪ್ರೇರಣಾದಾಯಕ. ಎಡರು ತೊಡರು ಬಂದಾಗ ಯಾವ ಮಾರ್ಗ ಅನುಸರಿಸ ಬೇಕೆಂಬುದು ಇಲ್ಲಿ ಅರ್ಥೈಸಿಕೊಳ್ಳಬಹುದಾಗಿದೆ. ಶರಣರ ವಚನಗಳು ಅನುಭವಿಗಳಾದ ಹಿರಿಯರು ಹೇಳುವ ಪರಿ ವಿಶಿಷ್ಟ ರೀತಿಯಿಂದ ಕೂಡಿರುತ್ತದೆಂದು ಮಾತನಾಡಿದರು.

ವಚನ ಚಾರಿಟೇಬಲ್ ಅವರು ನಮ್ಮೀರ್ವ ಸ್ವಾಮಿಗಳನ್ನು ತೀರ್ಪುಗಾರರನ್ನಾಗಿಸಿ, ಹಿರಿಯರ ವಚನಗಳು ಆಲಿಸಿ ಫಲಿತಾಂಶ ನೀಡುವ ಜವಾಬ್ದಾರಿ ಅತ್ಯಂತ ಕಷ್ಟ, ಆದರೂ ೨೪ ಹಿರಿಯರ ಅನುಭವ ಕೇಳುವ ಅವಕಾಶ ನಮಗೊಲಿದಿದೆ ಎಂದರು.

ಇಲ್ಲಿ ಪ್ರತಿಯೊಬ್ಬರು ತನ್ನದೇ ಆದ ಶೈಲಿಯ, ವಿವೇಚನೆಯಲ್ಲಿ ವಚನಗಳು ವಿಶ್ಲೇಷಣೆ ಮಾಡಿರುವುದು ಒಂದು ಅಪರೂಪ. ಇಂತಹ ಸ್ಪರ್ಧೆಗಳಿಂದ ಹಿರಿಯರಲ್ಲಿ ಸಹ ಸ್ಪರ್ಧಾತ್ಮಕ ಮನೋಭಾವ ಬೇರೂರಲು ಅವಕಾಶ ಕಲ್ಪಿಸಿದಂತಾಗುತ್ತದೆಂದರು.

ಮುಖ್ಯ ಅತಿಥಿಗಳಾದ ಕ.ರಾ.ಸ.ನೌ. ಸಂಘದ ನಿಕಟಪೂರ್ವ ಅಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆ ಮುಖ್ಯ ಅತಿಥಿಗಳಾಗಿ ವಯೋನಿವೃತ್ತಿ ಆದ ನಂತರ ಹಲವಾರು ಜನ ಮಾನಸಿಕವಾಗಿ ಕುಗ್ಗುವುದು ಸಹಜ. ಆದರೆ ಅವರ ದಿನನಿತ್ಯ ಕ್ರಿಯಾಶೀಲವಾಗಿರಲು ಶರಣರ ವಚನ ಚಿಂತನೆ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಸಮಯ ಕಳೆಯಲು ಒಂದು ಅವಕಾಶ. ವಚನ ಚಾರಿಟೇಬಲ್ ಅವರ ಹೊಸತನದ ಕಾರ್ಯ ಮೆಚ್ಚುವಂಥದ್ದಾಗಿದೆ ಎಂದರು.

ಅಧ್ಯಕ್ಷತೆಯನ್ನು ಚಾರಿಟೇಬಲ್ ಅಧ್ಯಕ್ಷರಾದ ಡಾ. ಶಿವಶಂಕರ ಟೋಕರೆ ವಹಿಸಿ ಇದೊಂದು ಪ್ರಥಮ ಪ್ರಯೋಗ, ಅನೇಕ ಹಿರಿಯರನ್ನು ಫೋನಾಯಿಸಿದಾಗ ಆಶ್ಚರ್ಯ ವ್ಯಕ್ತಪಡಿಸಿ ಸುಮಾರು ಇಪ್ಪತ್ನಾಲ್ಕು ಜನ ಬಸವಕಲ್ಯಾಣ, ಭಾಲ್ಕಿ, ಬೀದರ, ಔರಾದ ನಿಂದ ಆಗಮಿಸಿ ಮೂರುವರೆ ಗಂಟೆಗಳ ಕಾಲ ನಮ್ಮೊಂದಿಗಿದ್ದು ಅನುಭವ ಹಂಚಿಕೊಂಡಿದ್ದಾರೆ. ಇಲ್ಲಿ ೬೦ ವರ್ಷದಿಂದ ೮೮ ವರ್ಷ ವಯಸ್ಸಿನ ಹಿರಿಯರು ಆಗಮಿಸಿರುವುದು ಸಂತಸ ತಂದಿದೆ ಎಂದರು.

ಶ್ರೀ ಬಸವೇಶ್ವರ ಸಿರಿಧಾನ್ಯ ವಿತರಕರು, ಬಸವಾಭಿಮಾನಿಗಳಾದ ಸಂಗಪ್ಪ ನಾವದಗೇರೆ ಸ್ವಾಗತಿಸಿದರು. ಅನುಭವ ಎಜ್ಯುಕೇಶನ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಲಿಂಗಾರತಿ ನಾವದಗೇರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರೇವಣಪ್ಪ ಮೂಲಗೆ ವಚನ ಪ್ರಾರ್ಥನೆ ಮಾಡಿದರೆ, ನಿರ್ದೇಶಕರಾದ ಶಿವಕುಮಾರ ಸಾಲಿ ನಿರೂಪಿಸಿದರು. ಆಡಳಿತ ಅಧಿಕಾರಿ ವೀರಪ್ಪ ಜೀರಗೆ ವಂದಿಸಿದರು.

ವಚನ ಚಿಂತನ ಸ್ಪರ್ಧೆಯಲ್ಲಿ ಮಹಾದೇವಪ್ಪ ಗಾಜರೆ, ಜೈಪ್ರಕಾಶ ಸದಾನಂದ, ಚಂದ್ರಪ್ಪ ಗುಂಗೆ, ಶಿವಕುಮಾರ ಬಿರಾದಾರ, ಬಸವರಾಜ ಹೊನ್ನಾ, ನೀಲಕಂಠಯ್ಯ ಸ್ವಾಮಿ, ಜಗನ್ನಾಥ ವಿಠಲರಾವ, ಶಂಕರ ಗುರುಪಾದಪ್ಪ, ಗಣಪತಿ ಭೀಮಣ್ಣಾ, ಬಸವಣಪ್ಪ ತಿಬಶೆಟ್ಟಿ, ಶಂಕ್ರೆಪ್ಪ ಸಜ್ಜನಶೆಟ್ಟಿ, ವಿಶ್ವನಾಥ ಗಂದಿಗುಡಿ, ಸಿದ್ರಾಮಪ್ಪ ಘಾಳೆ, ರೇವಣಪ್ಪ ಮುಲಗೆ, ಶೋಭಾದೇವಿ ಔರಾದೆ, ವೀರುಪಾಕ್ಷ ಟಂಕಸಾಲಿಮಠ, ಕರುಣಾ ಶೆಟಕಾರ, ರಾಚಪ್ಪ ಮಾಶೆಟ್ಟಿ, ಶಿವಪುತ್ರಪ್ಪ ಪಾಟೀಲ, ಕಸ್ತೂರಬಾಯಿ ಸಿರ್ಸೆ, ಕಸ್ತೂರಬಾಯಿ ಮಾಲಿಪಾಟೀಲ, ಕಲ್ಲಪ್ಪ ಡಿಗ್ಗೆ ಜೋಜನಾ, ಸುಶಿಲಮ್ಮ ಸಂಗಪ್ಪ ಮರಿಯಂಪುರ, ಅನ್ನಪೂರ್ಣ ಬಿರಾದಾರ ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಕ್ಕೆ ಆಯ್ಕೆಯಾದವರಿಗೆ ಸೆಪ್ಟಂಬರ್ ೬ ರಂದು ನಡೆಯುವ ಕಾರ್ಯಕ್ರಮದಲ್ಲಿ ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ನೀಡಿ ಗೌರವಿಸಲಾಗುವುದು ಎಂದು ಡಾ. ಶಿವಶಂಕರ ಟೋಕರೆ ಅವರು ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
1 Comment

Leave a Reply

Your email address will not be published. Required fields are marked *