ಸವದತ್ತಿ:
ಶ್ರಾವಣ ಮಾಸದ ಅಂಗವಾಗಿ ಪ್ರತಿದಿನ ಪಟ್ಟಣದ ಮನೆಗಳಲ್ಲಿ ಶರಣ ಸಂಗಮ ನಡೆಯುತ್ತಿದೆ. ರಾಷ್ಟ್ರೀಯ ಬಸವದಳದ ಶರಣರಿಂದ ಗುರುಬಸವ ಜ್ಯೋತಿ ಕಾರ್ಯಕ್ರಮ, ಶರಣರ ವಚನಗಳ ಚಿಂತನೆಗಳು ನಡೆಯುತ್ತಿವೆ.
“ಪೂಜ್ಯ ಲಿಂಗಾನಂದ ಸ್ವಾಮೀಜಿ, ಡಾ. ಮಾತೆ ಮಹಾದೇವಿ ಅವರ ಪ್ರೇರಣೆಯಿಂದ ಹಲವಾರು ಶರಣರು ಬಸವ ಜ್ಯೋತಿಯನ್ನು, ಬಸವತತ್ವದ ಸಂದೇಶಗಳನ್ನು ಮನೆ-ಮನಗಳಿಗೆ ತಲುಪಿಸುತ್ತಿದ್ದೇವೆ,” ಎಂದು ಬಸವರಾಜ ಕಪ್ಪಣ್ಣವರ ಹಾಗೂ ನಾಗಪ್ಪ ಬೆಂಡಿಗೇರಿ ಹೇಳಿದರು.

ಮಕ್ಕಳು ಗುರುಬಸವ ಜ್ಯೋತಿ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಮಕ್ಕಳಿಗೆ ವಚನ ಪಠಣ, ವಚನ ಗಾಯನ, ವಚನ ಕಂಠಪಾಠ ಮುಂತಾದ ಸ್ಪರ್ಧೆಗಳನ್ನು ನಡೆಸಿ ವಚನ ಸಾಹಿತ್ಯದ ಪುಸ್ತಕಗಳನ್ನು ಬಹುಮಾನವಾಗಿ ಕೊಟ್ಟು ಪ್ರೋತ್ಸಾಹ ನೀಡಲಾಗುತ್ತಿದೆ.
ಇಷ್ಟಲಿಂಗ ಮಹತ್ವ ತಿಳಿದು ದೀಕ್ಷೆ ತೆಗೆದುಕೊಳ್ಳಲು ಮಕ್ಕಳು, ಹಿರಿಯರು ಉತ್ಸುಕರಾಗಿದ್ದಾರೆ. ಮನೆಗೊಂದು ವಚನ ಗ್ರಂಥಗಳನ್ನು ಕೊಟ್ಟು ಬಸವತತ್ವ ತಿಳಿಯಲು, ತತ್ವ ಅನುಸರಿಸಲು ಅನುಕೂಲವಾಗುವಂತೆ ಪುಸ್ತಕ ದಾಸೋಹ ನಡೆಯುತ್ತಿದೆ.
“ನಮ್ಮ ಧರ್ಮ ವೈದೀಕರಣಗೊಳ್ಳದಂತೆ ಈ ಸಮಯದಲ್ಲಿ ಬಸವ ಪ್ರಜ್ಞೆ ಜನರಲ್ಲಿ ಮೂಡುವುದು ಬಹಳ ಅವಶ್ಯಕವಾಗಿದೆ.
ಜಗತ್ತಿನಲ್ಲಿ ಸರ್ವಶ್ರೇಷ್ಠವಾದ ತತ್ವ ಬಸವತತ್ವ. ಇದನ್ನು ಕಟ್ಟಿ ಬೆಳೆಸಬೇಕಾಗಿರುವುದು ಅನಿವಾರ್ಯವಾಗಿದೆ.
ಯುವಕರು ಮುಖ್ಯವಾಗಿ ಈ ಧರ್ಮವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅವರಿಗೆ ತಿಳಿಸುವವರಿಲ್ಲದೆ ಅನ್ಯ ದೈವಗಳ ಮೊರೆ ಹೋಗುತ್ತಿದ್ದಾರೆ. ಯುವಶಕ್ತಿ ಜಾಗೃತರಾದರೆ ಬಸವ ತತ್ವಕ್ಕೆ ಹಿನ್ನೆಡೆಯಾಗುವುದಿಲ್ಲ.

ಅರಿವು, ಆಚಾರ, ಅನುಭಾವಗಳನ್ನು ಹೊಂದಿರುವ ಈ ಧರ್ಮ ಪಂಚಾಚಾರ, ಷಟಸ್ಥಲದ ಆಗರವಾಗಿದೆ. ಇಲ್ಲಿ ತಿಳಿಯಬೇಕಾಗಿರುವುದು, ಅನುಸರಿಸಬೇಕಾಗಿರುವುದು ಬಹಳ ಇದೆ,” ಎಂದು ಲಕ್ಷ್ಮಿ ಅರಿಬೆಂಚಿ ತಿಳಿಸಿದರು.
ಸಂಘಟನೆ ಮುಖಂಡರಾದ ವೀರಣ್ಣ ಕೊರಲಳ್ಳಿ ಪ್ರತಿದಿನ ನಡೆಸುತ್ತಿರುವ ಬಸವ ಚಿಂತನಪ್ರಭೆ ಆನ್ಲೈನ್ ಕಾರ್ಯಕ್ರಮ ಬಸವ ಜ್ಯೋತಿ ಅಭಿಯಾನಕ್ಕೆ ಪ್ರೇರಣೆಯಾಗಿದೆ.
ಬಸವರಾಜ ಕಪ್ಪನ್ನವರ, ಲಕ್ಷ್ಮಿ ಮಹಾದೇವ ಅರಿಬೆಂಚಿ, ರತ್ನಕ್ಕ ಕಾದ್ರೊಳ್ಳಿ, ಕಸ್ತೂರವ್ವ ಹೂಲಿ, ಬಸವರಾಜ ಪುಟ್ಟಿ ಮುಂತಾದ ಶರಣರು ಕಾರ್ಯಕ್ರಮಕ್ಕೆ ದುಡಿಯುತ್ತಿದ್ದಾರೆ.

ಇದುವರೆಗೂ ಮಾರುತಿ ಮೇಟಿ, ಹನುಮಂತ ಮೇಟಿ, ಚಂದ್ರಪ್ಪ ಉಳ್ಳಿಗೇರಿ, ಲಲಿತಾ ತುರುಮರಿ, ಕಸ್ತೂರವ ಹೂಲಿ, ಸುಧಾ ಶೆಟ್ಟರ, ರಮೇಶ ಮುನವಳ್ಳಿ, ರಾಜು ಹೆಬ್ಬಳ್ಳಿ, ನಿರ್ಮಲ ಗಡೇಕಾರ, ಚಂದ್ರಗೌಡ ಹುಡೇದ, ಶಿವು ಜಕಾತಿ, ಬಸವರಾಜ ಪುಟ್ಟಿ, ಲಕ್ಷ್ಮೀ ಮಹಾದೇವ ಅರಿಬೆಂಚಿ ಮುಂತಾದವರ ಮನೆಯಲ್ಲಿ ಬಸವ ಜ್ಯೋತಿ ಕಾರ್ಯಕ್ರಮಗಳು ನಡೆದಿವೆ.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH
