ವಚನ ಸಾಹಿತ್ಯಕ್ಕೆ ಕಲಬುರ್ಗಿ ಸೇವೆ ಅಪಾರ: ಡಾ. ಸಿದ್ಧರಾಮ ಸ್ವಾಮೀಜಿ

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ:

ಕನ್ನಡ ಸಾಹಿತ್ಯ, ವಚನ ಸಾಹಿತ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಡಾ. ಎಂ. ಎಂ. ಕಲಬುರ್ಗಿ ಅವರು ಮಾಡಿದ ಸೇವೆ ಅಪಾರವಾದದ್ದು. ಅನೇಕ ಶರಣರ ವಚನಗಳ ಸಂಶೋಧನೆ, ಸಂಪಾದನೆ, ಪ್ರಕಟಣೆಯಲ್ಲಿ ಮಾಡಿದ ಸೇವೆ ಅನುಪಮವಾದದ್ದು.

ಶ್ರೀ ತೋಂಟದಾರ್ಯ ಮಠದ ಪುಸ್ತಕ ಪ್ರಕಟಣೆ ಕೆಲಸದ ಹಿಂದಿನ ಶಕ್ತಿಯಾಗಿದ್ದ ಡಾ. ಎಂ.ಎಂ.ಕಲಬುರ್ಗಿಯವರು ಸದಾಕಾಲ ಸ್ಮರಣೀಯರು ಎಂದು ಡಾ. ತೋಂಟದ ಸಿದ್ದರಾಮ ಸ್ವಾಮಿಗಳು ನುಡಿದರು.

ಶ್ರೀಮಠದ ಲಿಂಗಾಯತ ಪ್ರಗತಿಶೀಲ ಸಂಘದ ೨೮೧೩ನೇ ಶಿವಾನುಭವದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಶ್ರೇಷ್ಠ ಶಿಕ್ಷಕ, ಸಂಶೋಧಕ, ಆಡಳಿತ ಅಧಿಕಾರಿಯಾಗಿದ್ದರು. ಅವರು ವೈಚಾರಿಕ ಹಿನ್ನೆಲೆಯ ಪ್ರತಿಪಾದಕರಾಗಿದ್ದರು.

ಶ್ರಾವಣ ಮಾಸ ಲಿಂಗಾಯತ ಧರ್ಮದಲ್ಲಿ ಶ್ರೇಷ್ಠ ಮಾಸವಾಗಿದೆ. ಬಸವಾದಿ ಶರಣರ ಆದರ್ಶಗಳನ್ನು ಕೇಳಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.  ಅಷ್ಠಮದ ಆರು ವೈರಿಗಳು, ಸಪ್ತ ವ್ಯಸನಗಳನ್ನು ತೊರೆಯಲು ಮಹಾತ್ಮರ, ಶರಣರ ಆದರ್ಶ ಮತ್ತು ಸಂದೇಶಗಳನ್ನು ಕೇಳಿ ಅವುಗಳನ್ನು ಅಳವಡಿಸಿಕೊಂಡಾಗ ಜೀವನ ಪಾವನವಾಗುತ್ತದೆ ಎಂದರು.

ಉಪನ್ಯಾಸಕರಾಗಿದ್ದ ಡಾ. ಶರಣಬಸವ ವೆಂಕಟಾಪೂರ ಅವರು ಡಾ. ಎಂ.ಎಂ. ಕಲಬುರ್ಗಿ ಅವರ ಕುರಿತು ಮಾತನಾಡುತ್ತಾ, ಆಳವಾದ ಅಧ್ಯಯನ ಮಾಡುವುದು, ಹುಡುಕುವುದು, ಸಂಶೋಧನೆ ಮಾಡುವುದೇ ಅವರ ಧ್ಯೇಯವಾಗಿತ್ತು.

ವಚನಶಾಸ್ತ್ರ ಸಂಶೋಧನೆ, ಸಂಪಾದನೆಯಲ್ಲಿ ಮಾಡಿದ ಕಾರ್ಯ ಅಪಾರವಾದದ್ದು. ಕನ್ನಡ ಸಾಹಿತ್ಯ ವಚನ ಸಾಹಿತ್ಯವು ಬೆಳೆಯಬೇಕೆಂಬ ಅಪಾರ ಹಂಬಲ ಹೊಂದಿದ್ದರು.

ಕರ್ನಾಟಕದಲ್ಲಿ ಹುಟ್ಟಿದ ಮೊಟ್ಟಮೊದಲ ಧರ್ಮ ಲಿಂಗಾಯತ ಧರ್ಮ. ಅದು ಸ್ವತಂತ್ರವಾಗಿ ಬೆಳೆಯಬೇಕೆಂಬ ಗುರಿ ಅವರದಾಗಿತ್ತು ಎಂದರು.

ನಾರಿ ಸಮ್ಮಾನ ಪುರಸ್ಕೃತ ಗದುಗಿನ ಸುವರ್ಣ ಸದಾಶಿವಯ್ಯ ಮದರಿಮಠ ಅವರಿಗೆ ಸನ್ಮಾನ ಜರುಗಿತು.

ಗಿರಿಜಕ್ಕ ಧರ್ಮರಡ್ಡಿ ಅವರು ಶರಣರು ಕಂಡ ಅನಾದಿ ಬಸವಣ್ಣ ಎನ್ನುವ ವಿಷಯ ಕುರಿತು ಪ್ರವಚನ ಮಾಡಿದರು.

ದಾಸೋಹ ಸೇವೆಯನ್ನು ರೇವಣಸಿದ್ದಯ್ಯ ಮರಿದೇವರಮಠ ಮತ್ತು ಬಸವರಾಜ ಗಣಪ್ಪನವರ ವಹಿಸಿದ್ದರು. ಸೂರಜ ಮರಿಗೌಡರ ಧರ್ಮ ಗ್ರಂಥಪಠಣ ಮತ್ತು ಕೃತಿಕಾ ಮರಿಗೌಡ ವಚನಚಿಂತನ ಮಾಡಿದರು.

ವಿಜಯ ಕಿರೇಸೂರ ನಿರ್ದೇಶನದ ಸ್ವಾತಂತ್ರ‍್ಯ ಸಂಗ್ರಾಮ ಕುರಿತಾದ ಕೈಗೊಂಬೆ ಆಟವನ್ನು ಕದಾಂಪೂರ ಸರಕಾರಿ ಹೈಸ್ಕೂಲಿನ ಮಕ್ಕಳು ಪ್ರದರ್ಶನ ಮಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ವಿದ್ಯಾ ಗಂಜಿಹಾಳ ಮಾಡಿದರು. ಡಾ. ಉಮೇಶ ಪುರದ ಸ್ವಾಗತ ಕೋರಿದರು.

ಶಿವಾನುಭವದಲ್ಲಿ ಉಪಾಧ್ಯಕ್ಷ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಕಾರ್ಯದರ್ಶಿ ಸಿದ್ಧರಾಮ ಪಟ್ಟೇದ, ಸಹಕಾರ್ಯದರ್ಶಿ ಪ್ರತಿಭಾ ಬಡ್ನಿ, ಕೋಶಾಧ್ಯಕ್ಷ ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಕ, ಆದೇಶ ಅಂಗಡಿ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
Leave a comment

Leave a Reply

Your email address will not be published. Required fields are marked *