ನಿಜಾಚರಣೆ: ಇಂಗ್ಲೆಂಡ್ ನಗರದಲ್ಲಿ ಅಪ್ಪಟ ಬಸವತತ್ವದ ಗುರುಪ್ರವೇಶ

ಬಸವ ಮೀಡಿಯಾ
ಬಸವ ಮೀಡಿಯಾ

ನಾಟಿಂಗ್ಹ್ಯಾಮ್ ನಗರದಲ್ಲಿ ‘ಶ್ರೀ ಗುರುಮಲ್ಲೇಶ್ವರ ಸದನ’

ನಾಟಿಂಗ್ಹ್ಯಾಮ್:

ಇಂದು ಅನೇಕ ಪ್ರಗತಿಪರ ಕುಟುಂಬಗಳು ಸಾಂಪ್ರದಾಯಿಕ ‘ಗೃಹಪ್ರವೇಶ’ದ ಬದಲಾಗಿ ತಮ್ಮ ಹೊಸ ಮನೆಗೆ ಬಸವತತ್ವ, ಶರಣಸಂಸ್ಕೃತಿ ಅನುಸಾರವಾಗಿ ‘ಗುರುಪ್ರವೇಶ’ ನಡೆಸುತ್ತಿದ್ದಾರೆ.

ದೇವನೂರು ವಿಷಕಂಠಮೂರ್ತಿ, ಮಾನಸ ಮತ್ತು ಮಾನ್ವಿ ಅವರ ಇಂಗ್ಲೆಂಡಿನ ಮನೆಯಲ್ಲಿ ಇಂತಹ ನಿಜಾಚರಣೆಯ ಗುರುಪ್ರವೇಶ ನಡೆದಿರುವುದು ಹೆಮ್ಮೆಯ ವಿಷಯ.

ಇವರು ನಂಜನಗೂಡು ತಾಲೂಕಿನ ದೇವನೂರು ಗುರುಬಸಪ್ಪ, ಗುರುಮಲ್ಲಮ್ಮ ಹಾಗೂ ಮಲ್ಲಿಕಾರ್ಜುನ, ಇಂದಿರಾ ಅವರ ಕುಟುಂಬದವರು.

ವಿಷಕಂಠಮೂರ್ತಿ ಪ್ರಸ್ತುತ ಇಂಗ್ಲೆಂಡಿನ ಇಂಗ್ಲಿಂಡಿನ ನಾಟಿಂಗ್ಹ್ಯಾಮ್ ನಗರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನೆಲೆಸಿದ್ದಾರೆ.

ಬಸವಣ್ಣ, ಗುರುಮಲ್ಲೇಶ್ವರರ, ಮಹಾಂತ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ ‘ಶ್ರೀ ಗುರುಮಲ್ಲೇಶ್ವರ ಸದನ’ದ ಪ್ರವೇಶವನ್ನು ಜೂನ್ 28 ನಡೆಸಲಾಯಿತು.

ಕುಟುಂಬ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ಇಷ್ಟಲಿಂಗ ಪೂಜೆ ನೆರೆವೇರಿಸಿ, ವಚನಗಳನ್ನು ಪಠಿಸಿ, ಸಾಮೂಹಿಕವಾಗಿ ಹೊಸ ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿ ನೆಲಸಲಿ ಎಂದು ಪ್ರಾರ್ಥಿಸಿದರು.

ಆಹ್ವಾನಿತ ಅತಿಥಿಗಳಿಗೆ ದಾಸೋಹ ವ್ಯವಸ್ಥೆಯೊಂದಿಗೆ ದುಬಾರಿ ವಸ್ತುಗಳನ್ನು ನೆನಪಿನ ಕಾಣಿಕೆಯಾಗಿ ನೀಡುವ ಬದಲು ಗಿಡದ ಸಸಿಗಳನ್ನು ನೀಡಲಾಯಿತು.

ಬಸವತತ್ವದ ಅನುಗುಣವಾಗಿ ಯಾವುದೇ ಗಳಿಗೆ, ಕಾಲ, ಸಮಯ ನೋಡದೆ, ಹೋಮ, ಹವನ ಮಾಡದೆ, ಆಡಂಭರ ಆಚರೆಣೆಗಳ ಮೊರೆಹೋಗದೆ ಕಾರ್ಯಕ್ರಮ ನಡೆಯಿತು.

“ನಮ್ಮ ತಂದೆಯವರ ಪ್ರಭಾವದಿಂದ ಶರಣತತ್ವವನ್ನು ಬಾಲ್ಯದಿಂದ ಪಾಲಿಸುತ್ತ ಬಂದಿದ್ದೇನೆ. ಇಂಗ್ಲೆಂಡಿನಲ್ಲೂ ನಮ್ಮ ಕುಟುಂಬ ಪ್ರತಿಯೊಂದು ಹೆಜ್ಜೆಯಲ್ಲೂ ಶರಣತತ್ವ ಅಳವಡಿಸಿಗೊಂಡು ಸಾಮರಸ್ಯದ ಜೀವನ ನಡೆಸುತ್ತಿದ್ದೇವೆ.

ವಿದೇಶದಲ್ಲಿ ಸ್ವಂತ ಸೂರೆನ್ನುವುದು ಪ್ರತಿಯೊಬ್ಬರ ಕನಸು, ಈ ಕನಸು ನನಸಾದಾಗ, ಬಸವತತ್ವ ಹಾಗೂ ಶರಣ ಸಂಸ್ಕೃತಿ ಅಡಿಯಲ್ಲಿ ಗುರುಪ್ರವೇಶ ಆಚರಿಸಲು ನಿರ್ಧರಿಸಿದೆವು.

ಈ ಗುರುಪ್ರವೇಶ ಮೂಢನಂಭಿಕೆಗಳನ್ನು ಮೆಟ್ಟಿ ನಿಲ್ಲುವ ಒಂದು ಸತ್ಪ್ರಯತ್ನವಾಗಿದೆ. ಇಟ್ಟಿಗೆ ಸಿಮೆಂಟುಗಳಿಂದ ಕಟ್ಟಿದ ಕಟ್ಟಡವನ್ನು ಶರಣರ ವಿಚಾರೆಧಾರೆಗಳು ಸ್ಪರ್ಶಿಸಿದಾಗ ಅದು ನಿಜವಾದ ಅರ್ಥದಲ್ಲಿ ಪ್ರೀತಿ, ಕರುಣೆ ಮತ್ತು ಸಮಾನತೆಯ ‘ಮನೆ’ಯಾಗಿ ಬದಲಾಗುತ್ತದೆ.

ಇಂದಿನ ಆಧುನಿಕ ಯುಗದಲ್ಲಿ ಯುವಪೀಳಿಗೆಗೆ ಈ ಬಸವತತ್ವದ ಗೃಹಪ್ರವೇಶವು ಪ್ರೇರಣೆಯಾಗಲಿ ಎಂಬುದು ನಮ್ಮ ಆಶಯ,” ಎಂದು ವಿಷಕಂಠಮೂರ್ತಿ ಹೇಳಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JtGWW38lyFrDf4kKL0aXGH

Share This Article
1 Comment
  • ಬಸವಣ್ಣ ತತ್ವ ಜಗದೆಲ್ಲೆಡೆ ಹರಡಲಿ ಎಂದು ಹಾರೈಸುತ್ತ, ವಿದೇಶದಲ್ಲಿ ಬಸವ ತತ್ವ ಆಚರಿಸಿದ ಈ ಕುಟುಂಬಕ್ಕೆ ಶರಣು ಶರಣಾರ್ಥಿಗಳು

Leave a Reply

Your email address will not be published. Required fields are marked *