ನಮ್ಮಿಂದ ಆರಂಭವಾದ ಆಚರಣೆ, ನಮ್ಮ ಮಕ್ಕಳಿಂದ ಮುಂದುವರಿಯಲಿ

ಪ್ರಕಾಶ್ ಜೀರಿಗೆ
ಪ್ರಕಾಶ್ ಜೀರಿಗೆ

ಪ್ರಕಾಶ ಜೀರ್ಗೆ

 ಬೆಂಗಳೂರು:

ಭಾರತ ಭೂಮಿ ಎಂದರೆ ಕೇವಲ ಒಂದು ನೆಲವಲ್ಲ ಸಾವಿರಾರು ವರ್ಷಗಳ ಪರಂಪರೆ, ತತ್ವ, ಸಿದ್ಧಾಂತ ಮತ್ತು ಅನೇಕ ದಾರ್ಶನಿಕರು ಜೀವನದ ಬೆಳಕನ್ನು ಹೊತ್ತು ನಿಂತಿರುವ ಪುಣ್ಯಭೂಮಿ. ಈ ನೆಲದಲ್ಲಿ ಅನೇಕ ಸಂತರು, ಶರಣರು, ದಾರ್ಶನಿಕರು ಮತ್ತು ಯೋಗಿಗಳು ತಮ್ಮ ಬದುಕಿನ ಮೂಲಕ ನಮಗೆ ದಾರಿ ತೋರಿಸಿ ಹೋಗಿದ್ದಾರೆ.

ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು, ಅವರು ತಿಳಿಸಿಕೊಟ್ಟ ತತ್ವ–ಆಚರಣೆಗಳನ್ನು ನಮ್ಮ ಬದುಕಿನಲ್ಲಿ ಉಳಿಸಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವುದೇ ನಿಜವಾದ ಪರಂಪರೆ.

ಆಚರಣೆಗಳು ಕೇವಲ ಒಂದು ದಿನದ ಸಂಭ್ರಮವಲ್ಲ, ಅವು ನಮ್ಮ ಬೇರುಗಳನ್ನು ನೆನಪಿಸುವ ಕೊಂಡಿಗಳು. ಅವು ನಮ್ಮ ಮಕ್ಕಳಿಗೆ ನಾವು ಯಾರು, ನಮ್ಮ ಪರಂಪರೆ ಏನು ಎಂಬುದನ್ನು ಪರಿಚಯಿಸುವ ಸೇತುವೆಗಳು.

ಹಾಗಾಗಿ, ನಮಗೆ ಲಿಂಗಾಯತರಿಗೆ ಪ್ರತಿದಿನವೂ ಒಂದು ಹಬ್ಬವೇ ಸರಿ. ನಮ್ಮ ಧರ್ಮದ ಇತಿಹಾಸದಲ್ಲಿ ಒಂದೇ ಕಾಲದಲ್ಲಿ 770 ಅಮರಗಣಂಗಳು ಆಗಿಹೋಗಿದ್ದು, ಅವರ ತತ್ವ–ಆದರ್ಶಗಳನ್ನು ಸ್ಮರಿಸುತ್ತಾ, ಅವರು ತೋರಿದ ದಾರಿಯಲ್ಲಿ ನಡೆಯುವುದು ನಮ್ಮ ಬದುಕಿನ ಭಾಗವಾಗಬೇಕು.

ನಮ್ಮ ಮಕ್ಕಳಿಗೆ ಬಸವತತ್ವವನ್ನು ಕೇವಲ ಪುಸ್ತಕದಲ್ಲಿ ಕಲಿಸುವುದಕ್ಕಿಂತ, ನಮ್ಮ ಮನೆಯ ಆಚರಣೆಗಳ ಮೂಲಕ ಪರಿಚಯಿಸುವುದು ಇನ್ನಷ್ಟು ಅರ್ಥಪೂರ್ಣ. ಹಬ್ಬ–ಹರಿದಿನಗಳನ್ನು ವಿಶೇಷವಾಗಿ ಆಚರಿಸಿ, ಶರಣರ ಬದುಕು, ವಿಚಾರಧಾರೆ ಮತ್ತು ಆದರ್ಶಗಳನ್ನು ಮಕ್ಕಳಿಗೆ ತಿಳಿಸಿ, ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಸಂಸ್ಕಾರವನ್ನು ಬೆಳೆಸಬೇಕು.

ಲಿಂಗಾಯತ ಧರ್ಮದ ಪರಂಪರೆ ಮತ್ತು ಇತಿಹಾಸವನ್ನು ನೆನಪಿಸಿಕೊಂಡಾಗ, ಗುರು ಬಸವಣ್ಣನವರು ನಮಗೆ ತೋರಿಸಿಕೊಟ್ಟ ದಾರಿ ಮತ್ತು ಅವರ ವಿಚಾರಧಾರೆ ನಮ್ಮ ಬದುಕಿಗೆ ದೀಪದಂತಿವೆ. ಹಾಗಾಗಿ, ನಮ್ಮ ಪಾಲಿಗೆ ಗುರು ಬಸವಣ್ಣನವರೇ ಗಣಾಧಿಪತಿ.

ಪೂಜ್ಯ ಮಾತೆ ಮಹಾದೇವಿ ತಾಯಿಯವರು ತಿಳಿಸಿಕೊಟ್ಟ ಮಾರ್ಗದಂತೆ, ನಮ್ಮ ಮನೆಯಲ್ಲಿ ಲಿಂಗಾಯತ ಧರ್ಮದ ಗಣಾಧಿಪತಿ ಗುರು ಬಸವಣ್ಣನವರ ಪೂಜೆಯನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ನೆರವೇರಿಸಲಾಯಿತು.

ಇದು ಕೇವಲ ಒಂದು ಪೂಜೆಯಲ್ಲ, ನಮ್ಮ ಮನೆಯ ಸಂಸ್ಕಾರವನ್ನು ನಮ್ಮ ಮಗಳ ಕೈಗೆ ಒಪ್ಪಿಸುವ ಒಂದು ಕ್ಷಣ.

ಗುರು ಬಸವಣ್ಣನವರ ಆಶಯದಂತೆ, ಬಸವಾದಿ ಶರಣರ ವಿಚಾರಧಾರೆಯನ್ನು ಅಳವಡಿಸಿಕೊಂಡು, ಅವರ ಆದರ್ಶಗಳ ಬೆಳಕಿನಲ್ಲಿ ಮಗಳು ಅಗಮ್ಯಳ ಬದುಕು ಸಾಗಲಿ ಎಂದು ಪ್ರಾರ್ಥಿಸಿ ಹರಸಿದೆವು.

ನಾವು ನಮ್ಮ ಮಕ್ಕಳಿಗೆ ಕೊಡುವ ಅತ್ಯಮೂಲ್ಯ ಆಸ್ತಿ ಎಂದರೆ ಕೇವಲ ಸಂಪತ್ತು ಅಲ್ಲ. ನಮ್ಮ ಸಂಸ್ಕಾರ, ನಮ್ಮ ತತ್ವ, ನಮ್ಮ ಶರಣ ಪರಂಪರೆ.

ನಾವು ಆಚರಿಸುವ ಪ್ರತಿಯೊಂದು ಹಬ್ಬವೂ, ನಾವು ಹೇಳುವ ಪ್ರತಿಯೊಂದು ಶರಣರ ಕಥೆಯೂ, ನಮ್ಮ ಮುಂದಿನ ಪೀಳಿಗೆಯ ಹೃದಯದಲ್ಲಿ ಉಳಿಯುವ ಒಂದು ಪುಟ್ಟ ಬೀಜ.

ಆ ಬೀಜವೇ ನಾಳೆಯ ಪರಂಪರೆ. ಆ ಪರಂಪರೆಯೇ ನಮ್ಮ ಅಸ್ತಿತ್ವ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KwtAu0MkQzPIzsDZf3EOP6

Share This Article
1 Comment
  • ಒಳ್ಳೆಯ ವಿಚಾರ. ಜೈ ಬಸವ ಪ್ರಕಾಶ ಜೀರ್ಗೇಯವರಿಗೆ. ಧನ್ಯವಾದಗಳು

Leave a Reply

Your email address will not be published. Required fields are marked *