ಶರಣ ಸಂಗಮ, ವಚನ ಶ್ರಾವಣ ಮಂಗಲೋತ್ಸವ
ಗದಗ:
ವಚನ ಧರ್ಮ, ಶರಣ ಧರ್ಮ, ಶೋಷಿತರ ಧರ್ಮ, ತುಳಿತಕ್ಕೊಳಗಾದವರ ಧರ್ಮ, ಹಿರಿಯರ ಧರ್ಮ, ಮಕ್ಕಳ ಧರ್ಮ, ಸ್ತ್ರೀಯರ ಧರ್ಮ, ದೀನ-ದಲಿತರ ಧರ್ಮ, ಅಂಧ-ಅನಾಥರ ಧರ್ಮ, ಜನರ ಧರ್ಮ, ಶ್ರೀಸಾಮಾನ್ಯರ ಧರ್ಮ ಬಸವಧರ್ಮ.
ಒಟ್ಟಿನಲ್ಲಿ ಸಮಾಜದಲ್ಲಿ ಯಾರನ್ನು ಕಡೆಗಣಿಸಲಾಗಿತ್ತೋ ಅವರನ್ನು ಉದ್ಧಾರ ಮಾಡಿದ ಧರ್ಮವೇ ಬಸವಧರ್ಮ. ಅದು ಎಲ್ಲರನ್ನು ಕಾಪಾಡಿದ ಧರ್ಮವೆಂದು ಶರಣ ಸಾಹಿತಿ, ವಿದ್ವಾಂಸರಾದ ಪ್ರೊ. ಚಂದ್ರಶೇಖರ ವಸ್ತ್ರದ ಅವರು ನುಡಿದರು.

ಬಸವದಳ, ಬಸವಕೇಂದ್ರ, ಜಾಗತಿಕ ಲಿಂಗಾಯತ ಮಹಾಸಭಾ, ಲಿಂಗಾಯತ ಪ್ರಗತಿಶೀಲ ಸಂಘ, ಗದಗ-ಬೆಟಗೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ತಿಂಗಳ ಪರ್ಯಂತರ ನಡೆದು ಬಂದ ವಚನ ಶ್ರಾವಣ ಮಂಗಲೋತ್ಸವದಲ್ಲಿ ಶರಣ ಅಮುಗಿ ದೇವಯ್ಯನವರ ವಚನ ಚಿಂತನೆ ಕುರಿತು ಬಸವದಳದ ೧೭೧೫ ನೇ ಶರಣ ಸಂಗಮದಲ್ಲಿ ವಚನ ನಿರ್ವಚನ ಮಾಡುತ್ತಾ ಮೇಲಿನಂತೆ ನುಡಿದರು.
“ಶಿವನ ನೆನೆದಡೆ ಭವ ಹಿಂಗದೆಂಬ ……….. ನೆನಯಬಾರದು” ಎಂಬ ವಚನವನ್ನು ವಸ್ತ್ರದ ನಿರ್ವಚನ ಮಾಡಿದರು.
ಅತಿಥಿಗಳಾಗಿ ಭಾಗವಹಿಸಿದ್ದ ನಗರಸಭಾ ಸದಸ್ಯರಾದ ವಿದ್ಯಾವತಿ ಗಡಗಿ ಅವರು, ಬಸವಾದಿ ಶರಣರ ತತ್ವಗಳಲ್ಲಿ ಮಹಿಳೆಯರಿಗೆ ಸಮಾನತೆ, ಸ್ವಾತಂತ್ರ‍್ಯ ತಂದುಕೊಟ್ಟ ಜಗತ್ತಿನ ಮೊಟ್ಟ ಮೊದಲ ಮಹಾತ್ಮ ಬಸವೇಶ್ವರರು. ಅವರು ಮಹಿಳೆಯರಿಗೆ ಉನ್ನತ ಸ್ಥಾನ ನೀಡದೇ ಇದ್ದಿದ್ದರೆ ಇಂದು ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗಬೇಕಾಗಿತ್ತು ಎಂದು ಅವರು ತಿಳಿಸಿದರು.
ಇನ್ನೋರ್ವ ಅತಿಥಿಗಳಾದ ಗೋಜನೂರಿನ ನ್ಯಾಯವಾದಿ ಬಸವರಾಜ ಸಂಶಿ ಅವರು, ಬಸವದಳ – ಬಸವಪರ ಸಂಘಟನೆಗಳ ಶರಣತತ್ವ ಪ್ರಸಾರ ಕಾರ್ಯವನ್ನು ಮುಕ್ತವಾಗಿ ಪ್ರಶಂಸಿಸಿದರು.

ಮುಂದಿನ ಭವಿಷ್ಯ ಚೆನ್ನಾಗಿರಬೇಕಾದರೆ, ಬಸವಾದಿ ಪ್ರಮಥರ ತತ್ವಗಳನ್ನು ಯುವಕರಲ್ಲಿ ಹಾಗೂ ಹಳ್ಳಿ-ಹಳ್ಳಿಗಳಲ್ಲಿ ಪ್ರಚಾರ-ಪ್ರಸಾರ ಮಾಡಬೇಕು. ಯುವಶಕ್ತಿ ದೊಡ್ಡ ಶಕ್ತಿ. ಇಂದಿನ ಯುವಕರು ದಿಕ್ಕು-ದಿಶೆಯಿಲ್ಲದೇ ರಂಜನೀಯ ಚುಟವಟಿಕೆಗಳಲ್ಲಿ, ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ.
ಸುಂದರವಾದ ಆದರ್ಶ ಸಮಾಜ ನಿರ್ಮಾಣವಾಗಬೇಕಾದರೆ ಯುವಕರಿಗೆ ಬಸವತತ್ವದ ಅರಿವು ಮೂಡಿಸಬೇಕು. ಈ ಹಿನ್ನೆಲೆಯಲ್ಲಿ ನಮ್ಮೂರು ಗೋಜನೂರಿನಲ್ಲಿ ಮೇಲಿಂದ ಮೇಲೆ ವಚನ ಚಿಂತನ, ವಚನ ಶ್ರಾವಣದಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಒತ್ತಾಯಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಅವರು ಮಾತನಾಡುತ್ತಾ, ನಮ್ಮದು ಶರಣ ಪರಂಪರೆಯ ಮನೆತನ. ನಮ್ಮ ತಂದೆ ತಾಯಿಗಳಂತೆ ನಾವೂ ಇನ್ನಷ್ಟು ಗಟ್ಟಿಯಾಗಿ ಶರಣತತ್ವ ಪಾಲನೆ-ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಾಗಿ ಭರವಸೆ ಇತ್ತರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವ್ಹಿ. ಕೆ. ಕರೇಗೌಡ್ರ ತಮ್ಮ ನುಡಿಯಲ್ಲಿ, ಒಂದು ತಿಂಗಳ ನಿರಂತರ ಮನೆ-ಮನೆಗಳಲ್ಲಿ ವಚನ ಚಿಂತನೆ ನೆರವೇರಿಸಲು ಕಾರಣೀಕರ್ತರಾದ, ಮನೆಯಲ್ಲಿ ಎಲ್ಲ ವ್ಯವಸ್ಥೆ ಮಾಡಿಕೊಟ್ಟ ಎಲ್ಲ ಶರಣ ದಂಪತಿಗಳಿಗೆ, ವಚನ ಚಿಂತನೆ ಗೈದ ಎಲ್ಲ ಚಿಂತಕರಿಗೆ, ಕಣವಿ, ಗೊಜನೂರ, ಕಣಗಿನಹಾಳ, ಯಳವತ್ತಿ ನಾಲ್ಕು ಗ್ರಾಮಗಳಲ್ಲಿ ಚಿಂತನ ವ್ಯವಸ್ಥೆ ಮಾಡಿದ ಗ್ರಾಮಗಳ ಹಿರಿಯರಿಗೆ, ಕಾರ್ಯಕ್ರಮವನ್ನು ಸಂಘಟಿಸಿ, ಸುವ್ಯವಸ್ಥಿತವಾಗಿ ನೆರವೇರುವಂತೆ ಸೇವಾಕಾರ್ಯಗೈದ ಬಸವದಳದ ಸರ್ವ ಸದಸ್ಯರಿಗೆ, ವಾಹನ ವ್ಯವಸ್ಥೆ ಮಾಡಿದ ಸೇವಾಕರ್ತರಿಗೆ ಹೃದಯತುಂಬಿ ಸ್ಮರಿಸಿದರು.

ಪ್ರಾರಂಭದಲ್ಲಿ ಧರ್ಮಗುರು ಬಸವೇಶ್ವರರಿಗೆ ವೇದಿಕೆಯ ಮೇಲಿದ್ದ ಗಣ್ಯರು ಪುಷ್ಪಾರ್ಪಣೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರೇಣುಕಾ ಕರೇಗೌಡ್ರ, ಗಂಗಮ್ಮ ಹೂಗಾರ ಮತ್ತು ಸಂಗಡಿಗರಿಂದ ವಚನ ಪ್ರಾರ್ಥನೆ, ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನು ಬಸವದಳ ಕಾರ್ಯದರ್ಶಿ ಎಸ್. ಎ. ಮುಗದ ನೆರವೇರಿಸಿದರು. ವಚನ ಶ್ರಾವಣ ಕೃತಿಗಳನ್ನು ದಾಸೋಹಗೈದ ಜಯಶ್ರೀ ಹಳ್ಳಿಕೇರಿ ಜೊತೆಗೆ ಪ್ರಸಾದ ವ್ಯವಸ್ಥೆ ಮಾಡಿದ ಮಂಗಳಕ್ಕ ಕಾಮಣ್ಣವರ ತಾಯಂದಿರನ್ನು ಜೊತೆಗೆ ವಚನ ಶ್ರಾವಣ-೨೦೨೬ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಎಲ್ಲ ಮಹನೀಯರನ್ನು ಅಧ್ಯಕ್ಷರು ಗೌರವಿಸಿದರು.

ಮಕ್ಕಳಾದ ಸಂಜನಾ ಗಾಜಿ ಕಣವಿ, ಪ್ರಥಮ ಹೂಗಾರ, ಕುಮಾರ ಕೆಂಭಾವಿ ಅವರಿಂದ ಸೊಗಸಾದ ವಚನ ವಾಚನ ನೆರವೇರಿತು. ನಿರೂಪಣೆಯನ್ನು ಪ್ರಕಾಶ ಅಸುಂಡಿ ನೆರವೇರಿಸಿದರೆ, ಶರಣು ಸಮರ್ಪಣೆಯನ್ನು ಗೌರಕ್ಕ ಬಡಿಗಣ್ಣವರ ಗೈದರು. ಮಂಜುಳಾ ಹಾಸಿಲಕರ ಮತ್ತು ಸಂಗಡಿಗರಿಂದ ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಒಳ್ಳೆಯ ಕಾರ್ಯಕ್ರಮವಾಗಿದೆ. ಜೈ ಬಸವ