ವಚನ ಸಾಹಿತ್ಯ ತಿರುಚುತ್ತಿರುವ ಹಿಂದುತ್ವ ಸಮಾವೇಶದ ವಿರುದ್ಧ ಪ್ರತಿಭಟನಾ ರ್ಯಾಲಿ
ಕಲಬುರಗಿ
ಸೆಪ್ಟೆಂಬರ್ 27ರಂದು ಕಲಬುರಗಿಯಲ್ಲಿ ಆಯೋಜಿಸಿರುವ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ವಿರೋಧಿಸಿ ಸೆಪ್ಟಂಬರ್ 25ರಂದು ನಗರದಲ್ಲಿ ಪ್ರತಿಭಟನಾ ರ್ಯಾಲಿ ಹಾಗೂ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಬಸವತತ್ವ ಹಾಗೂ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಮುಖಂಡರು ತಿಳಿಸಿದರು.
“ಅಂದು ಬೆಳಗ್ಗೆ 11 ಗಂಟೆಗೆ ಕನ್ನಡ ಭವನದಿಂದ ಜಗತ್ ವೃತ್ತದವರೆಗೆ ಬೃಹತ್ ರ್ಯಾಲಿ ನಡೆಸಿ, ಜಗತ್‌ನಲ್ಲಿ ವಿಚಾರ ಸಂಕಿರಣ ನಡೆಸಲಾಗುವುದು ಎಂದು ಸಮಿತಿ ಪ್ರಮುಖರಾದ ಆರ್.ಜಿ. ಶೆಟಗಾರ ಮತ್ತು ಮೀನಾಕ್ಷಿ ಬಾಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವೈದಿಕರ ತತ್ವ, ವರ್ಣಾಶ್ರಮವನ್ನು ವಿರೋಧ ಮಾಡಿದ 12ನೇ ಶತಮಾನದ ಬಸವಣ್ಣನವರ ವಚನಗಳನ್ನು ತಿರುಚುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಬಹುತ್ವ ಭಾರತಕ್ಕೆ ಅಂಟಿದ ಕ್ಯಾನ್ಸರ್ ನಂತಿರುವ ಅರ್‌ಎಸ್‌ಎಸ್, ಲಿಂಗಾಯತ ಮಠಾಧೀಶ ಕನ್ನೇರಿ ಸ್ವಾಮಿಯನ್ನು ಮುಂದೆ ಮಾಡಿಕೊಂಡು ಕಲಬುರಗಿಗೆ ಕಾಲಿಡುತ್ತಿದೆ. ಈ ಸ್ವಾಮೀಜಿಯ ಅಸಂವಿಧಾನಿಕ ಪದ ಬಳಕೆಗೆ ಕೋರ್ಟ್ ಛೀಮಾರಿ ಹಾಕಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಕಾಲಿಡದಂತೆ ಆದೇಶಿಸಿತ್ತು. ಬಸವ ಕಲ್ಯಾಣದಲ್ಲಿ ಬಾಯಿ ತೆರೆಯದಂತೆ ನಿರ್ಬಂಧ ವಿಧಿಸಿತ್ತು. ಇದೀಗ ಕಲಬುರಗಿ ನೆಲದಲ್ಲೂ ಕೋಮುವಾದ ಬಿತ್ತುವ
ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು.
ಬಸವಾದಿ ಶರಣರ ಹಿಂದೂ ಸಮಾವೇಶದ ಹೆಸರಿನಲ್ಲಿ ಕೆಲವರು ಬಿಜೆಪಿ ಚುನಾವಣಾ ಕುತಂತ್ರದ ತಯಾರಿ ಮಾಡಿಕೊಳ್ಳುತ್ತಿದ್ದಾರೆ. 12ನೇ ಶತಮಾನದ ಮಾನವತಾವಾದಿ ಬಸವಣ್ಣ ಜಗತ್ತಿನ ಮೊದಲ ಸಮಾಜವಾದಿಯಾಗಿದ್ದಾರೆ. ಅಂತಹ ಶರಣರನ್ನು ಇಟ್ಟುಕೊಂಡು ಸಮಾನತೆ ಇಲ್ಲದ ಹಿಂದೂ ಧರ್ಮದ ಜೊತೆ ತಳಕು ಹಾಕುವುದು ಖಂಡನೀಯ ಎಂದರು.
ಶರಣರನ್ನು ಕೇಂದ್ರವಾಗಿಟ್ಟುಕೊಂಡು ಯಾರಾದರೂ ಚಿಂತನ ಮಂಥನ ಮಾಡಬಹುದು. ವೈದಿಕರು ಕೂಡ ಕೋಮುವಾದವನ್ನು ಬದಿಗಿಟ್ಟು ಹಿಂದೂ ಸಮಾವೇಶ ಮಾಡಿಕೊಳ್ಳಬಹುದು. ಆದರೆ, ಬಸವಾದಿ ಶರಣರನ್ನು ಹಿಂದೂ ಧರ್ಮದೊಂದಿಗೆ ಜೋಡಿಸುವುದು ನೀಚ ಕೆಲಸವಾಗಿದೆ ಎಂದು ಡಾ. ಮೀನಾಕ್ಷಿ ಬಾಳಿ ಟೀಕಿಸಿದರು.
ಸಮಿತಿ ಗೌರವಾಧ್ಯಕ್ಷ ಪ್ರೊ. ಆರ್.ಕೆ. ಹುಡಗಿ ಮಾತನಾಡಿ, ಎಂಎಲ್ಸಿ ಬಿ.ಜಿ. ಪಾಟೀಲ ನೇತೃತ್ವದಲ್ಲಿ ಈ ವರ್ಷದ ಬಸವ ಜಯಂತಿ ಮಾಡಲಾಗಿದೆ. ಇದೀಗ ಅವರ ಮಗ ಚಂದು ಪಾಟೀಲ ಅವರು ಆರ್‌ಎಸ್‌ಎಸ್ ಬೆಂಬಲದಿಂದ ಬಸವಾದಿ ಶರಣರ ಹಿಂದೂ ಸಮಾವೇಶದ ನೇತೃತ್ವ ವಹಿಸುತ್ತಿದ್ದಾರೆ. ಅವರಿಗೆ ನಮ್ಮ ಧಿಕ್ಕಾರ ಇದೆ ಎಂದು ಹೇಳಿದರು.
ಸಮಿತಿ ಅಧ್ಯಕ್ಷ ಅರ್ಜುನ, ಭದ್ರೆ, ಪಿಡ್ಡಪ್ಪ ಜಾಲಗಾರ, ರವೀಂದ್ರ ಶಾಬಾದಿ, ಅಶೋಕ ಘೂಳಿ, ರವಿ ಸಜ್ಜನ, ಶಾಮ ನಾಟೀಕಾರ ಹಾಗೂ ಸುಧಾಮ ಧನ್ನಿ ಮತ್ತಿತರರಿದ್ದರು.



ಜೈ ಲಿಂಗಾಯತ 👏🏻ಶರಣು 👏🏻👏🏻