ಕಲಬುರಗಿ
ಶ್ರೀಶೈಲ ಸಾರಂಗಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಅವರ 12ನೇ ವರ್ಷದ ಪೀಠಾರೋಹಣ ವಾರ್ಷಿಕೋತ್ಸವ ಹಾಗೂ 60ನೇ ವರ್ಧಂತಿ ಮಹೋತ್ಸವದ ಅಂಗವಾಗಿ ನಗರದ ಶಹಾಬಜಾರದಲ್ಲಿರುವ ಸುಲಫಲಮಠದಲ್ಲಿ ಸೆ.21ರಿಂದ 29ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸೊನ್ನದ ಶಿವಾನಂದ ಸ್ವಾಮೀಜಿ ಅವರು, ‘ಸೆ.21ರಿಂದ 28ರವರೆಗೆ ಪ್ರತಿದಿನ ಸಂಜೆ 7ರಿಂದ ರಾತ್ರಿ 9 ಗಂಟೆಯವರೆಗೆ ‘ವಚನ ದರ್ಶನ ಪ್ರವಚನ’ ಇರಲಿದೆ. ಬೈಲೂರು ನಿಜಗುಣಾನಂದ ಸ್ವಾಮೀಜಿ ಪ್ರವಚನ ನೀಡುವರು. ಸಾರಂಗಧರ ದೇಶಿಕೇಂದ್ರ ಸ್ವಾಮೀಜಿಗೆ ಗೌರವಾರ್ಪಣೆ ಸಮಾರಂಭವನ್ನು ಸೆ.29ರಂದು ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ’ ಎಂದು ತಿಳಿಸಿದರು.
‘ಸೆ.21ರಂದು ಸಂಜೆ 7 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ವಹಿಸುವರು. ನಿರಗುಡಿಯ ಹವಾಮಲ್ಲಿನಾಥ ಮಹಾರಾಜರು ನೇತೃತ್ವ ವಹಿಸುವರು. ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಉದ್ಘಾಟಿಸುವರು. ಪ್ರತಿದಿನ ನಾಡಿನ ಸ್ವಾಮೀಜಿಗಳು, ರಾಜಕೀಯ ಧುರೀಣರು, ಮುಖಂಡರು ಪಾಲ್ಗೊಳ್ಳುವರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೂಡ ಭಾಗವಹಿಸುವುದಾಗಿ ತಿಳಿಸಿದ್ದಾರೆ’ ಎಂದರು.
‘ಕಾರ್ಯಕ್ರಮದ ಯಶಸ್ಸಿಗೆ ಸ್ವಾಗತ ಸಮಿತಿ ರಚಿಸಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಗೌರವಾಧ್ಯಕ್ಷರಾಗಿದ್ದಾರೆ. ಬಿ.ಜಿ.ಪಾಟೀಲ ಕಾರ್ಯಾಧ್ಯಕ್ಷರಾಗಿದ್ದಾರೆ’ ಎಂದು ಹೇಳಿದರು.
ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ ಮಾತನಾಡಿ, ‘ಸುಲಫಲ ಮಠ ಬಸವತತ್ವ ಕಾಪಾಡಿಕೊಂಡು ಎಲ್ಲಾ ಸಮುದಾಯದವರನ್ನು ಜೊತೆಗೆ ಕರೆದುಕೊಂಡು ಸಾಗುವ ಮಠವಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು. ಸುಲಫಲ ಮಠದ ಉತ್ತರಾಧಿಕಾರಿ ಶರಣಬಸವ ದೇವರು, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ, ಅರುಣಕುಮಾರ ಪಾಟೀಲ ಕೊಡಲಹಂಗರಗಾ, ಶಿವಕಾಂತ ಮಹಾಜನ್, ರಾಜು ಲೇಂಗಟಿ ಇದ್ದರು.
