ಮೈಸೂರು ದಸರಾಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿ ಚಾಲನೆ

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು

ಕೊಪ್ಪಳದ ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಚಾಮುಂಡಿ ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಿಗೆ ದೀಪ ಬೆಳಗಿಸಿ ಮೈಸೂರು ದಸರಾಕ್ಕೆ ಚಾಲನೆ ನೀಡಿದರು.

ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಧರ್ಮವೆಂದರೆ ಮನುಷ್ಯನನ್ನು ಸ್ವರ್ಗಕ್ಕೆ ಕರೆದೊಯ್ಯುವುದಲ್ಲ; ನಾವು ಬದುಕುತ್ತಿರುವ ಭೂಮಿಯನ್ನೇ ಸ್ವರ್ಗವನ್ನಾಗಿ ಮಾಡುವುದು. ತುಳಿದು ಬದುಕುವುದಲ್ಲ, ತಿಳಿದು ಬದುಕುವುದು ನಿಜವಾದ ಧರ್ಮ” ಎಂದು ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಪ್ರತಿಪಾದಿಸಿದರು.

“ಇಂದು ಕಾಣುತ್ತಿರುವ ವೈಭವದ ಹಿಂದೆ ಕಾಣದ ಕೈಗಳಿವೆ. ಆ ಎಲ್ಲ ಶ್ರಮಜೀವಿಗಳಿಗೆ ನನ್ನ ಶರಣು, ಶರಣಾರ್ಥಿ” ಎಂದು ಹೇಳಿದ ಅವರು, ದಸರಾ ಕೇವಲ ಉತ್ಸವವಾಗಿರದೆ ಜನರ ಪರಿಶ್ರಮ, ಸಂಸ್ಕೃತಿ ಮತ್ತು ಸಾಮೂಹಿಕ ಬದುಕಿನ ಪ್ರತೀಕವಾಗಬೇಕು ಎಂಬ ಸಂದೇಶ ನೀಡಿದರು.

ದಸರಾ ಉದ್ಘಾಟನೆಗೆ ಬಂದಿರುವುದು ಕೇವಲ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಲ್ಲ; ನಾಡಿಗೆ ಪ್ರಾರ್ಥನೆ ಸಲ್ಲಿಸಲು ಎಂದು ತಿಳಿಸಿದ ಶ್ರೀಗಳು, “ಕನ್ನಡದ ದೀಪ ಹಚ್ಚಿದ್ದಾರೆ. ಆ ಆಶಯದ ದೀಪ ಎಂದಿಗೂ ಆರದಿರಲಿ ಎಂಬ ಪ್ರಾರ್ಥನೆಯೊಂದಿಗೆ ಬಂದಿದ್ದೇನೆ” ಎಂದರು.

ಆದಿಕವಿ ಪಂಪನಿಂದ ರಾಷ್ಟ್ರಕವಿ ಕುವೆಂಪುವರೆಗಿನ ಕನ್ನಡ ಸಾಹಿತ್ಯ ಪರಂಪರೆ ಸಾಮರಸ್ಯದ ಸಂದೇಶ ಸಾರುತ್ತದೆ. ನೀತಿ ಮತ್ತು ಪ್ರೀತಿಯ ನೆಲೆಯಲ್ಲಿ ನಾಡು ಕಟ್ಟಬೇಕು. ಗ್ರಂಥಗಳು ಬೇರೆ ಇರಬಹುದು, ಪಂಥಗಳು ಬೇರೆ ಇರಬಹುದು; ಆದರೆ ಮಾನವೀಯತೆ ಮತ್ತು ಸತ್ಯದ ಹಾದಿ ಒಂದೇ ಆಗಿರಬೇಕು ಎಂದು ಪ್ರತಿಪಾದಿಸಿದರು.

ದುಡಿಮೆಯನ್ನು ಪ್ರೀತಿಸಬೇಕೇ ಹೊರತು ಹಣವನ್ನಷ್ಟೇ ಆರಾಧಿಸಬಾರದು. ಶ್ರಮದ ಗೌರವ ಅರಿಯಬೇಕು. ದುಡಿದು ಬದುಕುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

ದಸರಾ ಉತ್ಸವಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿಯವರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಸ್ಥಿತರಿದ್ದರು.

ಮೊದಲ ಬಾರಿಗೆ ವಿವಿಧ ಮಠಗಳ 200ಕ್ಕೂ ಹೆಚ್ಚು ಮಠಾಧೀಶರು ಹಾಗೂ ಸಿಖ್ ಮತ್ತು ಟಿಬೆಟಿಯನ್ ಧಾರ್ಮಿಕ ಮುಖಂಡರು ಸೇರಿದಂತೆ ವಿವಿಧ ಧರ್ಮಗಳ ಮುಖ್ಯಸ್ಥರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇವರಿಗಾಗಿ ವಿಶೇಷ ಎತ್ತರದ ವೇದಿಕೆಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಿ ಗೌರವ ಸಲ್ಲಿಸಲಾಯಿತು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ, ಅರಣ್ಯ ಸಚಿವ ರಾಮಲಿಂಗಾರೆಡ್ಡಿ, ಸಚಿವ ರಿಜ್ವಾನ್ ಅರ್ಷದ್, ಮಾಜಿ ಸಚಿವರಾದ ಎಚ್.ಸಿ. ಮಹದೇವಪ್ಪ ಮತ್ತು ಕೆ. ವೆಂಕಟೇಶ್, ಶಾಸಕರಾದ ಜಿ.ಟಿ. ದೇವೇಗೌಡ, ಟಿ.ಎಸ್. ಶ್ರೀವತ್ಸ, ತನ್ವೀರ್ ಸೇಠ್, ರವಿಶಂಕರ್, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವನಾರಾಯಣ, ಕೆ. ಹರೀಶ್ ಗೌಡ, ಸಂಸದ ಸುನಿಲ್ ಬೋಸ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಿವಕುಮಾರ್ ಮತ್ತು ಸಿ.ಎನ್. ಮಂಜೇಗೌಡ ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *