‘ಸಂಸಾರದ ಮಧ್ಯದಲ್ಲಿ ಇದ್ದುಕೊಂಡೇ ಲಿಂಗಸಂಗಿಯಾದ ಶರಣ ಕೇತಯ್ಯ’

ಬಸವ ಮೀಡಿಯಾ
ಬಸವ ಮೀಡಿಯಾ

ಗುಳೇದಗುಡ್ಡ:

ಬಸವ ಕೇಂದ್ರದ ವತಿಯಿಂದ ಈಶ್ವರಪ್ಪ ಮೇದಾರ ಅವರ ಮನೆಯಲ್ಲಿ ಶನಿವಾರ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ ನಡೆಯಿತು.

ಅಂದು ಚಿಂತನೆಗಾಗಿ ಶರಣ ಮೇದಾರ ಕೇತಯ್ಯ ತಂದೆಗಳ ವಚನ ಆಯ್ದುಕೊಳ್ಳಲಾಗಿತ್ತು,

ಇಂದ್ರಿಯಗಳ ಕೊಂದನೆಂದಡೆ
ಅವು ಕಂದರ್ಪನ ಹಂಗು
ಕಂದರ್ಪನ ಕೊಂದಹೆನೆಂದರೆ
ಅವು ಕಂಗಳ ಲಾಭ  
ಕಂಗಳ ಮುಚ್ಚಿಯಲ್ಲದೆ ಲಿಂಗವ ಕಾಣಬಾರದು
ಅದು ನಿರಂಗಂಗಲ್ಲದೆ
ಜಗದ ಹಂಗಿನವರಿಗಿಲ್ಲಾ ಎಂದೆ ಗವರೇಶ್ವರ.

ನಿವೃತ್ತ ಶಿಕ್ಷಕರಾದ ಚೌಹಾಣ ಗುರುಗಳು, ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಉದ್ಧೇಶವನ್ನು ವಿವರಿಸುತ್ತಾ, “12ನೇ ಶತಮಾನದಲ್ಲಿ ಸರ್ವಸಮಾನತೆಯ ತತ್ವವನ್ನು ಬಾಳಿ ಬದುಕಿ, ನಮಗೆಲ್ಲ ಆದರ್ಶವಾಗಿ ಇದ್ದದ್ದು ಕಲ್ಯಾಣದ ಅನುಭವ ಮಂಟಪದಲ್ಲಿ, ಧರ್ಮಗುರು ಬಸವಣ್ಣನವರ ಮುಂದಾಳುತ್ವದಲ್ಲಿ. ಇಂದಿನ ಪ್ರಜಾಪ್ರಭುತ್ವಕ್ಕೆ ಹಾದಿಯನ್ನು ಹಾಕಿಕೊಟ್ಟದ್ದು ಅದೇ ಶರಣರು. ಅವರನ್ನು ಅವರೆಲ್ಲರ ವಚನಗಳಿಂದಲೇ ಕಾಣಬೇಕು. ವಚನಗಳು ಮನುಕುಲದ ದೀಪಗಳನ್ನುತ್ತಾರೆ. ಅಂತಹ ವಚನಗಳನ್ನು ಹಾಗೂ ಅವುಗಳ ಆಶಯವನ್ನು ಮನೆ ಮನೆಗೆ ತಲುಪಿಸುವುದೇ ಬಸವ ಕೇಂದ್ರದ ಉದ್ದೇಶವಾಗಿದೆ ” ಎಂದು ತಿಳಿಹೇಳಿದರು .

ಪ್ರೊ. ಶ್ರೀಕಾಂತ ಗಡೇದವರು  “ಅಂದಿನ ಅನುಭಾವಿ ಶರಣರಲ್ಲಿ ಮೇದಾರ ಕೇತಯ್ಯ ಶರಣರು ಒಬ್ಬರು. ಅವರು ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಕಲ್ಯಾಣಕ್ಕೆ ಬಂದು, ಬಿದಿರಿನ ಪುಟ್ಟಿ, ಮರ ಇತ್ಯಾದಿ ಕಾಯಕವನ್ನು ಕೈಕೊಂಡುˌ ತಪ್ಪದೆ ದಾಸೋಹ ಮಾಡುತ್ತಿದ್ದರು. ಅವರು ರಚಿಸಿದ 18 ವಚನಗಳು ಲಭ್ಯವಿದ್ದು ಗೌರೇಶ್ವರ ಎಂಬ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾರೆ.

ಸಂಸಾರದಲ್ಲಿದ್ದು ಅದರ ವ್ಯಾಮೋಹಕ್ಕೆ ಒಳಗಾಗದೆ ಲಿಂಗವ್ಯಸನಿಯಾಗಿ ಸಮಾಜದಲ್ಲಿ ದಾಸೋಹ ಭಾವದಿಂದ ಬದುಕಿದಲ್ಲಿ  ಗವರೇಶ್ವರಲಿಂಗವನ್ನು ಕಾಣಬಹುದಾಗಿದೆ. ಇಲ್ಲದಿದ್ದರೆ ಜೀವನ ವ್ಯರ್ಥವಾದಂತೆ ” ಎಂದು ಹೇಳಿದರು.

ರಂಗಕರ್ಮಿಗಳಾದ ಶರಣ ಮಹಾಲಿಂಗಪ್ಪ ಕರನಂದಿ ಅವರು ” ಮೇದಾರ ಕೇತಯ್ಯ ಅವರ ಕುರಿತು ಮಾತನಾಡುತ್ತಾ, ಐತಿಹಾಸಿಕ ದಾಖಲೆಗಳಿಗಿಂತ ಪುರಾಣಗಳೆ ಹೆಚ್ಚಾಗಿ ಲಭ್ಯವಿವೆ. ಆ ಎಲ್ಲ ಕಥೆಗಳಲ್ಲಿ ಅವರ ಪತ್ನಿ ಸಾತವ್ವೆಯ ಕಾಯಕನಿಷ್ಠೆ ಎದ್ದು ಕಾಣುತ್ತದೆ. ಹೀಗಾಗಿ ಈ ಮೇದಾರ ದಂಪತಿಗಳು ನಮಗೆ ಎಂದೆಂದೂ ಆದರ್ಶರಾಗಿದ್ದಾರೆ ” ಎಂದರು.

ಬಸವ ಕೇಂದ್ರದ ಹಿರಿಯ ಅನುಭಾವಿಗಳು, ನಿವೃತ್ತ ಪ್ರಾಧ್ಯಾಪಕರಾದ ಮಹದೇವಯ್ಯ ಸ್ವಾಮಿಗಳು ನೀಲಕಂಠಮಠ ಅವರು, ಈ ವಚನವನ್ನು ವಿವರವಾಗಿ ವಿಶ್ಲೇಷಿಸುತ್ತ, ಎಲ್ಲ ಶರಣರಂತೆ ಕೇತಯ್ಯನವರು ಸಂಸಾರದ ಮಧ್ಯದಲ್ಲಿ ಇದ್ದುಕೊಂಡೇ ಲಿಂಗಸಂಗಿಯಾದರು. ಅವರು ತಪಸ್ಸಿಗಾಗಿ ಮುಕ್ತಿಗಾಗಿ ಕಾಡಿಗೆ ಹೋಗಲಿಲ್ಲ. ತಮ್ಮ ಕಾಯಕ ಹಾಗೂ ದಾಸೋಹದ ವೃತವನ್ನು ಕೈಗೊಳ್ಳಲು ಕಾಡಿಗೆ ಹೋದರು. ಮೊರ ಬುಟ್ಟಿಗಳನ್ನು ಮಾಡಲಿಕ್ಕೆ ಬಿದಿರನ್ನು ಉಪಯೋಗಿಸಿದರು. ತನ್ನಷ್ಟಕ್ಕೆ ತಾನೇ ಎತ್ತರಕ್ಕೆ ಬೆಳೆಯುವ ಬಿದಿರನ್ನು ಬಗ್ಗಿಸಿ ಎಳೆಯನ್ನಾಗಿಸಿ ಮೊರ, ಪುಟ್ಟಿ ಇತ್ಯಾದಿಗಳನ್ನು ಮಾಡುವಂತೆ ಅಹಂಕಾರದಿಂದ ಬೀಗುವ ಈ ಶರೀರವನ್ನು ಬಗ್ಗಿಸಿ ಮದ-ಮತ್ಸರಗಳನ್ನ ಕಳೆದು ಆ ಮೂಲಕ ಅಂಗ ಗುಣಗಳನ್ನು ದೂಡಿ ಲಿಂಗ ಗುಣಗಳನ್ನು ಅಳವಡಿಸಿಕೊಂಡು ಲಿಂಗದಲ್ಲಿ ಸಮರಸವಾಗಬೇಕು.

ಇಂದ್ರಿಯಗಳನ್ನೇ ನಾಶ ಮಾಡುತ್ತೇನೆ ಎನ್ನುವುದು ಕಾಮನೆಯ (ಕಂದರ್ಪನ) ಇನ್ನೊಂದು ಮುಖ. ಕಾರಣ ಕೈಯಲ್ಲಿರುವ ಲಿಂಗದಲ್ಲಿ ದೃಷ್ಟಿಯನ್ನಿಟ್ಟು ಲಿಂಗಯ್ಯನನ್ನು ಒಲಿಸಿಕೊಳ್ಳಬೇಕು. ಆಲಿ ನಿಂದೊಡೆ ಸುಳಿದು ಸೂಸುವ ಗಾಳಿ ನಿಲುವುದು ಎನ್ನುವಂತೆ ಮಾನವ, ಲಿಂಗದ ಮೂಲಕವೇ ಐಕ್ಯಸ್ಥಳದ ಕಡೆಗೆ ಸಾಗುತ್ತಾನೆ. ಇಂತಹ ಭಾಗ್ಯ ಜಗದ ಜಂಜಡದಲ್ಲಿ ಸಿಲುಕಿದವರಿಗೆ ಸಿಗುವುದಿಲ್ಲ. ಶರಣ ಬದುಕನ್ನು ಬದುಕಿದವರಿಗೆ ಮಾತ್ರ ಸಮರಸಭಾವ ಉಂಟಾಗುತ್ತದೆ ” ಎಂದು ತಿಳಿಸಿದರು.

ನಿವೃತ್ತ ಪ್ರಾಚಾರ್ಯ ಸಿದ್ದಲಿಂಗಪ್ಪ ಬರಗುಂಡಿ ಅವರು ಈ ವಚನವನ್ನು ಕುರಿತು ಮಾತನಾಡುತ್ತಾ, ಮೇದಾರ ಕಾಯಕದ ಶರಣರ ಮನೆಯಲ್ಲಿಯೇ ಇಂದು ಕೇತಯ್ಯನವರ ವಚನ ಚಿಂತನೆ ನಡೆದಿರುವುದು ಅರ್ಥಪೂರ್ಣವಾಗಿದೆ. ಶರಣ ಕೇತಯ್ಯ ತಂದೆಗಳ ಕಲ್ಪಿತ ಭಾವಚಿತ್ರದ ಪೂಜೆಗಿಂತಲೂ ಕೇತಯ್ಯ ಶರಣರ ವಚನ ಚಿಂತನೆ ಮತ್ತೆ ಮತ್ತೆ ಜರುಗಬೇಕು.

ಈ ವಚನದಲ್ಲಿ ಬಂದಿರುವಂತೆ ಗೌರವೇಶ್ವರ ಲಿಂಗವನ್ನು ಕಾಣಬೇಕಾದರೆ ಕೇವಲ ಜಗದ ಹಂಗಿನಲ್ಲಿರುವ ಅಂಗದಿಂದ ಮಾತ್ರವಲ್ಲˌ, ಅಂಗಗುಣವಳಿದು ನಿರಂಗವಾದಾಗ ಸಾಧ್ಯವಾಗುತ್ತದೆ. ನಿರಂಗವೆಂದರೆ ಶರೀರವಿಲ್ಲದೆ ಇರುವ ಕಾಮನೆಂತಲೂ ಅಂಗ ಗುಣಗಳನ್ನೇ ಅಂದರೆ ಕಾಮನೆಗಳನ್ನೇ ಇಲ್ಲದಂತೆ ಬದುಕಿದ ಲಿಂಗಾಂಗಿಯೆಂತಲೂ ಅರ್ಥವಾಗುತ್ತದೆ. ಈ ಕಾಮನೆಗಳು ಶರೀರ ಮನಸ್ಸು ಮತ್ತು ಭಾವದ ಮೇಲೆ ದಾಳಿ ಮಾಡುತ್ತವೆ. ಇಂಥ ಇಂದ್ರಿಯಗಳ ಮೂಲಕ ಕಾಡುವ ವೈರಿಗಳು ಹೊರಗಿನಿಂದ ಬಂದವುಗಳಲ್ಲˌ ಅವು ನಮ್ಮಲ್ಲೇ ಇರುವಂಥವು.

ಇಂಥ ಇಂದ್ರಿಯಗಳನ್ನು ˌ ಅಶುದ್ಧ ಗುಣಗಳನ್ನು ಶುದ್ಧ ಭಾವದಿಂದ, ಲಿಂಗ ಗುಣದಿಂದ ಸರಿಪಡಿಸಿದರೆ ಆಯಿತು. ಇಂದ್ರಿಯ ಸುಖಗಳು ನಮ್ಮ ನೋಟದ ಮೂಲಕ ಒಳ ಸೇರುತ್ತವೆ. ಅಂತಹ ಬಾಹ್ಯ ಮೋಹಕ್ಕೆ ಒಳಗಾಗದೆ ಅಂತರಂಗಕ್ಕಿಳಿದು ಸ್ವಾನುಭಾವದ ನೆಲೆಯನ್ನು ಮುಟ್ಟುವುದೇ ಲಿಂಗಪೂಜೆ. ಶರೀರ, ಮನಸ್ಸು ಮತ್ತು ಭಾವದ ಮೇಲಾಗುವ ಲೌಕಿಕ ಪರಿಣಾಮವೇ ಜಗದ ಹಂಗೆನಿಸುತ್ತದೆ. ಅಲ್ಲಿ ಶರೀರ ಇಂದ್ರಿಯಾದಿಗಳು ಸತ್ಯವೆಂಬ ಭ್ರಮೆಯಿದೆ. ಈ ಭ್ರಮೆಯಲ್ಲಿ ಮುಳುಗಿರುವವರೆಗೆ ಅಂಗಸಂಗಿಯಾಗಿರುವವರೆಗೆ ಗವರೇಶ್ವರನ ಅನುಭವವಿಲ್ಲ. ಆತ ಇದರಿಂದ ಹೊರಬಂದು ಲಿಂಗಸಂಗಿಯಾಗಿ ನಿರಂಗನಾದಾಗ ಗವರೇಶ್ವರನೆಂಬ ಸಮರಸ ಸ್ಥಿತಿ ತಲುಪುತ್ತಾನೆ. ಒಟ್ಟಿನಲ್ಲಿ ಅಂತರಂಗದ ಒಳಪ್ರಜ್ಞೆಯಲ್ಲಿ ಬದುಕಬೇಕೆಂಬುದು ಕೇತಯ್ಯ ತಂದೆಗಳ ಭಾವವಾಗಿದೆ ” ಎಂದು ಹೇಳಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಶರಣ ಮುರುಗೇಶ ಶೇಖಾ, ಶ್ರೀದೇವಿ ಶೇಖಾ ದಂಪತಿಗಳಿಂದ ವಚನ ಪ್ರಾರ್ಥನೆಯಾಯಿತು. ಈಶ್ವರಪ್ಪ ಮೇದಾರ ಕುಟುಂಬದವರಿಂದ ಕೇತಯ್ಯನವರ ಭಾವಚಿತ್ರಕ್ಕೆ ಪುಷ್ಪದಲಗಳನ್ನು ಅರ್ಪಿಸಲಾಯಿತು.

ಶರಣರಾದ ಬಸಲಿಂಗಯ್ಯ ಕಂಬಾಳಿಮಠ, ದಾನಪ್ಪ ಬಂಡಿ, ಚಂದ್ರಶೇಖರ ತೆಗ್ಗಿ,   ಬಸವರಾಜ ಕಟ್ಟಿ,  ಪಾಂಡಪ್ಪ ಕಳಸ, ಜಿ.ಜಿ. ಹೂಗಾರ, ರಾಚಣ್ಣ ಕೆರೂರ, ಪುತ್ರಪ್ಪ ಬೀಳಗಿ,  ದಿಗಂಬರಪ್ಪ ಮೇದಾರ,  ಮಂಜುನಾಥ ನಾಯನೇಗಲಿ, ಬಸವರಾಜ ಇಲಾಳಶೆಟ್ಟರ, ಕೃಷ್ಣಪ್ಪ ಶಿರೂರ, ಪ್ರೊ. ಚನ್ನಮಲ್ಲಪ್ಪ ಮಂಗಳೂರು, ಕೃಷ್ಣಾಜಿ ಮಹೇಂದ್ರಕರ, ಶರಣೆಯರಾದ ಗಿರಿಜಾ ಪುರಾಣಿಕಮಠ, ದಾಕ್ಷಾಯಿಣಿ ಪವಾಡಶೆಟ್ಟರ,   ಮೊದಲಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *