ಒಟ್ಟು ೭೦ ಕಾರ್ಯಕ್ರಮಗಳು, ಬಸವಶಕ್ತಿ ಶಿಬಿರ, ಲಿಂಗಾಯತ ಇತಿಹಾಸ ವಿಚಾರ ಸಂಕಿರಣ
ಚಿತ್ರದುರ್ಗ
ಇಂದಿನಿಂದ ೨೨ರವರೆಗೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಶರಣ ಸಂಸ್ಕೃತಿ ಉತ್ಸವ ನಡೆಯಲಿದೆ.
ಉತ್ಸವದ ಅಂಗವಾಗಿ ಧಾರ್ಮಿಕ, ವೈಚಾರಿಕ, ಸಾಮಾಜಿಕ, ಸಾಂಸ್ಕೃತಿಕ, ಶಿವಯೋಗ, ಯೋಗಾಸನ, ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಈ ಬಾರಿಯ ಉತ್ಸವದಲ್ಲಿ ಆಯೋಜಿಸಲಾಗಿದೆ ಎಂದು ಬೃಹನ್ಮಠದ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ತಿಳಿಸಿದರು.

ಪ್ರತಿದಿನದ ಕಾರ್ಯಕ್ರಮಗಳು
ಪ್ರತಿದಿನ ಬೆಳಗ್ಗೆ ೫-೧೫ರಿಂದ ಯೋಗಗುರು ವೈದ್ಯಶ್ರೀ ಚೆನ್ನಬಸವಣ್ಣನವರಿಂದ ಯೋಗ – ಆರೋಗ್ಯ ಆಧ್ಯಾತ್ಮ ಶಿಬಿರ, ೧೪ರಿಂದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಅವರಿಂದ ಸಹಜ ಶಿವಯೋಗ, ಜಮುರಾ ಕ್ರೀಡಾಕೂಟ, ಉಚಿತ ಆರೋಗ್ಯ ತಪಾಸಣೆ, ವಚನ ಕಂಠಪಾಠ, ಬಸವಾದಿ ಶಿವಶರಣರ ವೇಷಭೂಷಣ ಸ್ಪರ್ಧೆ, ಬಸವಧರ್ಮ ಧ್ವಜಾರೋಹಣ, ರಂಗೋಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಮಹಿಳಾ ಕ್ರೀಡಾಕೂಟ, ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆ ಸ್ಪರ್ಧೆ, ವಚನ ಕಮ್ಮಟ ಪರೀಕ್ಷೆಯ ರ‍್ಯಾಂಕ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ.
ಅಕ್ಟೋಬರ್ ೧೬
೧೬ರಂದು ಬೆಳಗ್ಗೆ ಕೃಷಿ ಮೇಳ, ಸಂಜೆ ೬ ಗಂಟೆಗೆ ಮುರಿಗಾ ಶಾಂತವೀರ ಶ್ರೀಗಳ ಸಮಗ್ರ ಕೃತಿ ಲೋಕಾರ್ಪಣೆ, ಅಥಣಿ ಮುರುಘೇಂದ್ರ ಶಿವಯೋಗಿಗಳ ಕುರಿತ ಸಮಗ್ರ ಬರಹಗಳು, ಲೋಕಜಂಗಮ, ಜಯವಿಭವ ಮುರುಘರಾಜೇಂದ್ರ ಶ್ರೀಗಳ ಕುರಿತ ಚಿನ್ಮೂಲಾದ್ರಿಯ ಚಿನ್ಮಯ ಕೃತಿಗಳ ಲೋಕಾರ್ಪಣೆ ನಡೆಯಲಿದೆ.
ಅಕ್ಟೋಬರ್ ೧೭
೧೭ರ ಬೆಳಗ್ಗೆ ೧೦ ಸಾವಿರ ಜನರಿಂದ ಏಕಕಾಲದಲ್ಲಿ ಬಸವಣ್ಣನವರ ೩೨ ವಚನಗಳನ್ನು ಸಾಮೂಹಿಕವಾಗಿ ಹಾಡುವ ವಚನ ಝೇಂಕಾರ ನಡೆಯಲಿದೆ. ಆಡಳಿತ ಮಂಡಳಿ ಸದಸ್ಯರಾದ ನಾಡೋಜ ಡಾ. ಪಿ.ಎಸ್. ಶಂಕರ ಅವರ ಕೃತಿ ‘ಕತ್ತಲನ್ನು ಕಳೆಯುವ ಬೆಳಕು’ಬಿಡುಗಡೆಗೊಳ್ಳಲಿದೆ.
ಸಂಜೆ ೬ ಗಂಟೆಗೆ ಫ.ಗು. ಹಳಕಟ್ಟಿ, ಎಸ್. ನಿಜಲಿಂಗಪ್ಪ, ಜಿ.ಎಸ್. ಶಿವರುದ್ರಪ್ಪ ಮತ್ತು ವೈ.ಎನ್. ಕೃಷ್ಣಮೂರ್ತಿ ಅವರುಗಳ ಜನ್ಮಶತಮಾನೋತ್ಸವ ಹಾಗೂ ಸತ್ಯಶುದ್ಧ ಕಾಯಕ, ವಚನ ಗುಮ್ಮಟ ಕೃತಿಗಳ ಲೋಕಾರ್ಪಣೆಗೊಳ್ಳಲಿವೆ.
ಅಕ್ಟೋಬರ್ ೧೮
೧೮ರ ಬೆಳಗ್ಗೆ ೧೦ ಗಂಟೆಗೆ ಸರ್ವೋದಯಕ್ಕಾಗಿ ಮದ್ಯಪಾನ ನಿಯಂತ್ರಣ ಸಮಾಲೋಚನೆ ದುಂಡು ಮೇಜಿನ ಪರಿಷತ್ ಸಭೆ ನಡೆಯಲಿದೆ. ಅದೇ ದಿನ ನಾಲ್ಕು ವಿಚಾರ ಸಂಕಿರಣಗಳು ನಡೆಯಲಿವೆ.
ಎಂ.ಎಂ. ಕಲಬುರ್ಗಿ ನಂತರದ ಲಿಂಗಾಯತ ಧರ್ಮ – ಸಾಧ್ಯತೆ, ಸವಾಲುಗಳು, ಲಿಂಗಾಯತ ಸಂಶೋಧನೆಗೆ ಉಪೇಕ್ಷಿತ, ಬಹುಶಿಸ್ತೀಯ ವಿಧಾನಗಳ ಬಳಕೆ, ಲಿಂಗಾಯತ ಧರ್ಮ ಇತಿಹಾಸದ ಸಂಶೋಧನೆ, ಮುಂದಿನ ಆದ್ಯತೆಗಳು ವಿಷಯ ಕುರಿತ ಗೋಷ್ಠಿಗಳು ನಡೆಯಲಿವೆ.
ಸಂಜೆ ೬ ಗಂಟೆಗೆ ಮಹಿಳಾ ಸಮಾವೇಶ ಏರ್ಪಡಿಸಲಾಗಿದೆ.
ಅಕ್ಟೋಬರ್ ೧೯
೧೯ರ ಬೆಳಗ್ಗೆ ೧೦.೩೦ಕ್ಕೆ ರಾಜ್ಯಮಟ್ಟದ ವಿಕಲಚೇತನರ ಸಮಾವೇಶ ಮತ್ತು ೧ ಲಕ್ಷ ಸಹಿ ಸಂಗ್ರಹ ಅಭಿಯಾನ ಹಾಗೂ ‘ವಿಕಲಚೇತನರ ವಿಶೇಷ ಕೂಗು’ಕವನ ಸಂಕಲನ ಬಿಡುಗಡೆ ನಡೆಯಲಿದೆ.
ಅದೇ ದಿನ ಬೆಳಗ್ಗೆಯಿಂದ ನಾಲ್ಕು ವಿಚಾರ ಸಂಕಿರಣ ನಡೆಯಲಿದ್ದು, ಶಿಕ್ಷಣ ಕ್ಷೇತ್ರದ ಸುಧಾರಣೆಯಲ್ಲಿ ಬಸವ ಸಂಘಟನೆಗಳ ಪಾತ್ರ, ಕನ್ನಡ ಹೋರಾಟವನ್ನು ಬಲಪಡಿಸುವಲ್ಲಿ ಬಸವ ಸಂಘಟನೆಗಳ ಪಾತ್ರ, ಬಸವ ಸಂಘಟನೆಗಳ ಮುಖಾಮುಖಿ ೧: ನಡೆದು ಬಂದ ದಾರಿ, ಬಸವ ಸಂಘಟನೆಗಳ ಮುಖಾಮುಖಿ. ೨ : ಮುಂದಿನ ಹೆಜ್ಜೆಗಳು ವಿಷಯ ಕುರಿತು ಸಂವಾದ ಗೋಷ್ಠಿಗಳು ನಡೆಯಲಿವೆ.
ಸಂಜೆ ೬ ಗಂಟೆಗೆ ಸಾಹಿತ್ಯ ಸಮಾವೇಶ ನಡೆಯಲಿದ್ದು, ಬಸವಣ್ಣನವರ ಶರಣ ಸಮುದಾಯದ ಮೇಲಿನ ಅಪರಿಮಿತ ವಿಶ್ವಾಸದ ಸ್ವರೂಪ ವಿಷಯ ಕುರಿತು ಚಿಂತನ ನಡೆಯಲಿದೆ.

ಅಕ್ಟೋಬರ್ ೨೦
೨೦ರ ಬೆಳಗ್ಗೆ ೧೦ ಗಂಟೆಯಿಂದ ಪಾರಂಪರಿಕ ವೈದ್ಯ ಪರಿಷತ್ ಇವರ ಸಹಯೋಗದಲ್ಲಿ ಪಾರಂಪರಿಕ ವೈದ್ಯ ಸಮ್ಮೇಳನ ಹಾಗೂ ವೈದ್ಯ ಸಂಗಣ್ಣ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜನೆಗೊಂಡಿದೆ.
ಸಂಜೆ ೬ ಗಂಟೆಗೆ ಜಾನಪದ ಸಮಾವೇಶ ಏರ್ಪಡಿಸಲಾಗಿದ್ದು, ಜಾನಪದ ಕಲಾ ಪ್ರದರ್ಶನ ನಡೆಯಲಿದೆ.
ಅಕ್ಟೋಬರ್ ೨೧
೨೧ರ ಮಧ್ಯಾಹ್ನ ೨.೩೦ ಗಂಟೆಗೆ ಅಲಂಕೃತ ಸಾರೋಟಿನಲ್ಲಿ ಶ್ರೀ ಮುರಿಗಾ ಶಾಂತವೀರ ಮಹಾಸ್ವಾಮಿಗಳವರ ಭಾವಚಿತ್ರದ ಮೆರವಣಿಗೆ ಶ್ರೀಮಠದಿಂದ ಹೊರಟು ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಕೋಟೆ ಮಹಾದ್ವಾರ ತಲುಪಲಿದೆ. ಚಿತ್ರದುರ್ಗದ ಐತಿಹಾಸಿಕ ಕೋಟೆಯ ಮೇಲಿನ ಮುರುಘಾಮಠದ ಆವರಣದಲ್ಲಿ ಚಿತ್ರದುರ್ಗ ರಾಜವಂಶಸ್ಥರಿಂದ ಭಕ್ತಿಸಮರ್ಪಣೆ ನಡೆಯಲಿದೆ.
ಅದೇ ದಿನ ಸಂಜೆ ೬ ಗಂಟೆಗೆ ನಾಡಿನ ಬಾಲಪ್ರತಿಭೆಗಳಿಂದ ಅಮೋಘ ಪ್ರತಿಭಾ ಪ್ರದರ್ಶನ ಅನಾವರಣಗೊಳ್ಳಲಿದೆ.
ಅಕ್ಟೋಬರ್ ೨೨
೨೨ರಂದು ಬೆಳಗ್ಗೆ ೯.೩೦ ರಿಂದ ಶ್ರೀ ಮುರಿಗಾ ಶಾಂತವೀರ ಸ್ವಾಮಿಗಳವರ ಭಾವಚಿತ್ರ ಶೂನ್ಯಪೀಠಾರೋಹಣ ನಡೆಯಲಿದೆ. ನಂತರದಲ್ಲಿ ಬೆಳಗ್ಗೆ ೧೧ ಗಂಟೆಯಿಂದ ಧರ್ಮಗುರು ಬಸವಣ್ಣನವರ ಮತ್ತು ಶೂನ್ಯಪೀಠದ ಪ್ರಥಮಾಧ್ಯಕ್ಷರಾದ ಅಲ್ಲಮಪ್ರಭುದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ ಜಾನಪದ ಕಲಾಪ್ರಕಾರಗಳೊಂದಿಗೆ ನಡೆಯಲಿದೆ.
ನಂತರ ೧೧.೩೦ಕ್ಕೆ ಶ್ರೀಮಠದ ಆವರಣದಲ್ಲಿ ಜಯದೇವ ಜಂಗೀಕುಸ್ತಿ ಆಯೋಜಿಸಲಾಗಿದೆ. ೧೨ರಿಂದ ಮಹಾದಾಸೋಹ ಏರ್ಪಡಿಸಿದೆ. ಅದೇದಿನ ಸಂಜೆ ಶರಣ ಸಂಸ್ಕೃತಿ ಉತ್ಸವ ಸಮಾರೋಪವು ಸಂಗೀತ ಕಾರ್ಯಕ್ರಮದ ಮೂಲಕ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.
ಕಳೆದ ಶುಕ್ರವಾರ ಶಿರಸಂಗಿ ಲಿಂಗರಾಜರ ಸಭಾಮಂಟಪದಲ್ಲಿ ಶರಣ ಸಂಸ್ಕೃತಿ ಉತ್ಸವದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
೧೦ ದಿನಗಳ ಕಾಲ ಪ್ರತಿನಿತ್ಯ ೫-೬ ಕಾರ್ಯಕ್ರಮಗಳಂತೆ ಸುಮಾರು ೬೫ ರಿಂದ ೭೦ ಕಾರ್ಯಕ್ರಮಗಳು ಜರುಗಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೆಸರಾಂತ ಕಲಾವಿದರಿಂದ ಏರ್ಪಡಿಸಲಾಗಿದೆ ಎಂದರು.

ಬಸವ ಮೀಡಿಯಾ ಕಾರ್ಯಕ್ರಮಗಳು
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶ್ರೀಮಠದ ಆಶ್ರಯದಲ್ಲಿ ಬಸವ ಮೀಡಿಯಾ ಎರಡು ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಅಕ್ಟೋಬರ್ 18 ಎಂ ಎಂ ಕಲಬುರ್ಗಿ ನಂತರದ ಲಿಂಗಾಯತ ಧರ್ಮ, ಇತಿಹಾಸದ ಮೇಲೆ ವಿಚಾರ ಸಂಕಿರಣ ನಡೆಯಲಿದೆ.
ಅಕ್ಟೋಬರ್ 19 ‘ನಾಡು ನುಡಿಗೆ ಬಸವ ಸಂಘಟನೆಗಳು ಸ್ಪಂದಿಸಲಿ’ ವಿಷಯದ ಮೇಲೆ ಒಂದು ದಿನದ ಪ್ರಾಂತೀಯ ಬಸವಶಕ್ತಿ ಶಿಬಿರ ನಡೆಯಲಿದೆ.

ಒಳ್ಳೆಯ ಕಾರ್ಯಕ್ರಮವಾಗಿದೆ ಜೈ ಬಸವ ಶರಣು ಶರಣಾರ್ಥಿ