ಗುರು-ಶಿಷ್ಯ ಸಂಬಂಧ ಕುರಿತು ಉಪನ್ಯಾಸ.
ಬೀದರ :
ಗುರು-ಶಿಷ್ಯ ಸಂಬಂಧ ಪರಮಾತ್ಮನೊಂದಿಗೆ ಬೆರೆಯುವ ಪರಮ ಪವಿತ್ರ ಸಂಬಂಧ ಎಂದು ಜಿಲ್ಲಾ ಆಯುಷ್ಯ ಆಸ್ಪತ್ರೆಯ ತಜ್ಞವೈದ್ಯೆ ಡಾ. ವಚನಶ್ರೀ ಪುರಾಣಿಕ ಮಠ ಹೇಳಿದರು.
ಮರಣವೇ ಮಹಾನವಮಿ ಮಹೋತ್ಸವದ ಮೂರನೇ ದಿನವಾದ ಮಂಗಳವಾರ ಇಲ್ಲಿಯ ಬಸವಗಿರಿಯಲ್ಲಿ ನಡೆದ ಗುರು-ಶಿಷ್ಯ ಸಂಬಂಧ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುರು-ಶಿಷ್ಯ ಸಂಬಂಧವು ಭೌತಿಕ ಲಾಭ-ಹಾನಿ, ಲೌಕಿಕ ಸುಖ-ದುಃಖಗಳನ್ನು ಮೀರಿದ ಸಂಬಂಧ. ಬಂಧನಕಾರಿಯಾಗದೆ, ಮುಕ್ತಿ ಪಥಕ್ಕೆ ಹೆದ್ದಾರಿಯಾಗಿದೆ ಎಂದು ತಿಳಿಸಿದರು.

ಭೌತಿಕ ಸಂಬಂಧ ಹಾಗೂ ಲೌಕಿಕ ಸಂಬಂಧಗಳು ಶಾಶ್ವತವಲ್ಲ. ಅವು ಸಂತಸಕ್ಕಿಂತ ಹೆಚ್ಚು ನೋವು ನೀಡುವ ಸಂಬಂಧಗಳಾಗಿವೆ ಎಂದು ಹೇಳಿದರು.
ಸದ್ಗುರುವಿಗೆ ಶರಣವಾಗಿ ತನು-ಮನ-ಧನಗಳನ್ನು ಸಮರ್ಪಿಸಿ, ಶ್ರದ್ಧೆಯಿಂದ ಸೇವಿಸಿದರೆ ಗುರು ಮುಟ್ಟಿ ಗುರುವಾಗುವ ಅವಕಾಶ ಬಸವ ತತ್ವದಲ್ಲಿದೆ ಎಂದು ತಿಳಿಸಿದರು.

12ನೇ ಶತಮಾನದಲ್ಲಿ ಗುರು- ಶಿಷ್ಯ ಸಂಬಂಧಕ್ಕೆ ಹೊಸ ಭಾಷ್ಯೆ ಬರೆದವರು ಬಸವಣ್ಣ. ಅಂಥ ಸಾವಿರಾರು ರೂಪಕಗಳನ್ನು ನಿರ್ಮಿಸಿದರು. ಅಂದಿನ ಗುರು-ಶಿಷ್ಯ ಪರಂಪರೆಗೆ ಇಂದಿನ ಸೆರ್ಪಡೆ ಅಥವಾ ಉದಾಹರಣೆ ಅಕ್ಕ ಅನ್ನಪೂರ್ಣತಾಯಿ ಹಾಗೂ ಪ್ರಭುದೇವ ಸ್ವಾಮೀಜಿ ಎಂದು ಬಣ್ಣಿಸಿದರು.
ಸಾನಿಧ್ಯ ವಹಿಸಿದ್ದ ಪ್ರಭುದೇವ ಸ್ವಾಮೀಜಿ ಮಾತನಾಡಿ, ಗುರು-ಶಿಷ್ಯ ಸಂಬಂಧ ಜೀವ-ವೃಕ್ಷದಂತೆ. ಶಿಷ್ಯನಿಗೆ ಗುರುವಿನಲ್ಲಿ ಅನುಮಾನ ಇರಬಾರದು. ಗುರುವಿಗೆ ಸಮರ್ಪಿತನಾಗಿರಬೇಕು ಎಂದು ತಿಳಿಸಿದರು.

ತೆಲುಗುನಾಡಿನಿಂದ ಕಲ್ಯಾಣಕ್ಕೆ ಬಂಧ ತಂಗಟೂರು ಮಾರಯ್ಯ 12 ವರ್ಷ ಗರು ಬಸವಣ್ಣನವರ ಸೇವೆಯಿಂದಲೇ ಶಿವಯೋಗದ ಉತ್ತುಂಗಕ್ಕೇರಿದ್ದರು. ಒಂದು ಹೆಚ್ಚಿನ ಶರಣಾರ್ಥಿಯ ಭಾರ ಇಳಿಸಲು ತೊಡೆಯ ಚರ್ಮದಿಂದ ಗುರುವಿಗೆ ಪಾದರಕ್ಷೆ ಅರ್ಪಿಸಿದ ಹರಳಯ್ಯ,ವಚನಗಳನ್ನು ಉಳಿಸಲು ಪ್ರಾಣಾರ್ಪಣೆಗೆ ಸಿದ್ಧರಾಗಿದ್ದ ಸಾವಿರ-ಸಾವಿರ ಶಿಷ್ಯ ಬಳಗ, ಜಂಗಮರನ್ನು ರೂಪಿಸಿದ ಶ್ರೇಯ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಸ್ತ್ರೀ ರೋಗ ತಜ್ಞೆ ಡಾ. ಭುವನೇಶ್ವರಿ ಪ್ರಶಾಂತ ಮಾತನಾಡಿ,
ಭಾರತೀಯ ಸಂಸ್ಕೃತಿಯಲ್ಲಿ ಗುರು-ಶಿಷ್ಯ ಪರಂಪರೆ ಪುರಾತನವಾದದ್ದು. ದ್ರೋಣಾಚಾರ್ಯ-ಏಕಲವ್ಯ, ಪರಶುರರಾಮ-ಕರ್ಣರಿಂದ ಹಿಡಿದು ಪರಮಹಂಸ-ವಿವೇಕಾಂದರವರೆಗೆ ಅನೇಕ ಉದಾಹರಣೆಗಳು ಇವೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾವತಿ ಗೋರನಾಳೆ ಅವರು ವಚನ ಓದಿ, ವಿಶ್ಲೇಷಿಸಿದರು.
ನೀಲಮ್ಮನ ಬಳಗದ ರೂಪಾ ಹಂಡೆ ಸಾಮೂಹಿಕ ವಚನ ಪಠಣ ಮಾಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಸವ ದೀಪ್ತಿ ಗೋರನಾಳೆ ವಚನ ಗಾಯನ ಮಾಡಿದರು. ನಿತ್ಯಾ ಸಂಗಮೇಶ ವಚನ ನೃತ್ಯ ಪ್ರದರ್ಶಿಸಿದರು. ಶಿವನಗರ ದಕ್ಷಿಣದ ನೀಲಮ್ಮನ ಬಳಗದಿಂದ ನಡೆದ ಪಾಹಿಮಾಂ ಶರಣು ಬಸವ ಭಕ್ತಿಗೀತೆಯ ಮೇಲೆ ಸಾಮೂಹಿಕ ವಚನ ನೃತ್ಯ ಆಕರ್ಷಕವಾಗಿತ್ತು.

ಸಂಧ್ಯಾರಾಣಿ ಮುತ್ತಂಗೆ ನಿರೂಪಿಸಿದರು. ಬಸವ ಜ್ಯೋತಿ ಎಂ.ಜಿ. ಸ್ವಾಗತಿಸಿದರು.
ನೀಲಮ್ಮನ ಬಳಗದ ಜಯಶ್ರೀ ಮಠಪತಿ, ಶ್ರೀದೇವಿ ಗಾದಗೆ, ನಿವೃತ್ತ ಶಿಕ್ಷಕಿ ಸಂಗಮ್ಮ ಪಾರಾ, ಪ್ರಭಾವತಿ ಖಂಡಾಳೆ, ಶೋಭಾ ಬಿರಾದಾರ ಮತ್ತಿತರರು ಇದ್ದರು. ಅನಿತಾ ರಾಜಕುಮಾರ ಪಾಟೀಲ ಭಕ್ತಿ ದಾಸೋಹಗೈದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
