ಹುಲಸೂರ
ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ಅವರ 75ನೇ ವರ್ಷದ ಜನ್ಮದಿನ ಮಹೋತ್ಸವವನ್ನು ಡಿ. 1 ಮತ್ತು 2ರಂದು ಆಯೋಜಿಸಲು ನಿರ್ಧರಿಸಲಾಗಿದೆ.
ಬುಧವಾರ ಅಲ್ಲಮಪ್ರಭು ಶೂನ್ಯಪೀಠದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಿವಾನಂದ ಸ್ವಾಮೀಜಿ ಮಾತನಾಡಿ, ನವೆಂಬರ್ 2ರಿಂದ 26ರವರೆಗೆ ಬಸವ ಪುರಾಣ, ನವೆಂಬರ್ 28ರಿಂದ 30ರವರೆಗೆ ವಿಶೇಷ ಚಿಂತನಗೋಷ್ಠಿಗಳು ನಡೆಯಲಿವೆ.
ಅಲ್ಲಮಪ್ರಭು ಶೂನ್ಯಪೀಠದ ಪಕ್ಕದ ನಾಲ್ಕು ಎಕರೆ ಜಾಗದಲ್ಲಿ ಬೃಹತ್ ವೇದಿಕೆ ನಿರ್ಮಿಸಲು ಉದ್ದೇಶಿಸಲಾಗಿದೆ. ಮಹಿಳೆಯರು ವಚನ ಗ್ರಂಥಗಳನ್ನು ಹೊತ್ತು ರಥ ಎಳೆಯುವ ಪರಂಪರೆಯೂ ಇರಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಹಾಗೂ ಶಾಸಕ ಶರಣು ಸಲಗರ ಅವರನ್ನು ಕಾರ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಮಾತನಾಡಿ,ಶಿವಾನಂದ ಸ್ವಾಮೀಜಿ ಅವರು ಸುಮಾರು 23 ಸಾವಿರ ಕಿ.ಮೀ. ಪಾದಯಾತ್ರೆ ಮೂಲಕ ಭಾರತ ದಿಂದ ನೇಪಾಳದವರೆಗೆ ಬಸವತತ್ವದ ಪ್ರಚಾರ ಮಾಡಿದ್ದಾರೆ. ಯುವಜನರಲ್ಲಿ ವಿಚಾರ, ಸಂಸ್ಕಾರ, ತಂದೆ–ತಾಯಿಯರ ಬಗ್ಗೆ ಗೌರವ ಬೆಳೆಸುವ ಕಾರ್ಯವನ್ನು ಪ್ರವಚನಗಳ ಮೂಲಕ ಮಾಡುತ್ತಿದ್ದಾರೆ. ಅವರ ಸೇವೆ ಒಂದು ಸಮುದಾಯಕ್ಕೆ ಸೀಮಿತವಾಗದೆ ಸಕಲ ಜನರ ಶ್ರೇಯಸ್ಸನ್ನು ಬಯಸುತ್ತದೆ ಎಂದರು.
ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ ಅವರು, ಅಮೃತ ಮಹೋತ್ಸವಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೇಂದ್ರ ಸಚಿವರು, ಸಾಹಿತಿಗಳು ಹಾಗೂ ಗಣ್ಯರನ್ನು ಆಹ್ವಾನಿಸಲಾಗುವುದು ಎಂದರು. ರೈತರು, ಮಹಿಳೆಯರು, ಯುವಕರು, ನಿರುದ್ಯೋಗಿಗಳು ಮತ್ತು ಪರಿಸರಕ್ಕೆ ಸಂಬಂಧಿಸಿದ ಚಿಂತನಗೋಷ್ಠಿಗಳನ್ನು ಆಯೋಜಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಸಮಿತಿಗಳನ್ನು ರಚಿಸುವಂತೆ ಸಲಹೆ ನೀಡಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧನ್ನೂರ್ ಮಾತನಾಡಿದರು.
ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಷ್ಟ್ರಪತಿ ಹಾಗೂ ಕೇಂದ್ರ ಸಚಿವರನ್ನು ಆಹ್ವಾನಿಸುವಂತೆ ಬಾಬು ವಾಲಿ, ಮಲ್ಲಪ್ಪ ಧಬಾಲೆ, ನಾಗೇಶ ಮೇತ್ರೆ ಮತ್ತು ಆಕಾಶ ಖಂಡಾಳೆ ಸಲಹೆ ನೀಡಿದರು.
ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಹುಲಸೂರ ಪಟ್ಟಣದ ಭಾಲ್ಕಿ–ಬಸವಕಲ್ಯಾಣ ಮುಖ್ಯ ರಸ್ತೆಯಲ್ಲಿ ನಿರ್ಮಿಸಿರುವ ಎರಡು ಕಮಾನುಗಳನ್ನು ಉದ್ಘಾಟಿಸಿದರು. ಈ ವೇಳೆ ರೈತರು ವಿವಿಧ ವಿಷಯಗಳಿಗೆ ಸಂಬಂಧಪಟ್ಟಂತೆ ಮನವಿ ಸಲ್ಲಿಸಿದರು.
ಸಭೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ದೇವಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೀಪಾರಾಣಿ ಬೋಸ್ಲೆ, ಪ್ರವೀಣ್ ಹನುಮಶೆಟ್ಟಿ, ವಿವೇಕ್ ಚಳಕಾಪುರ, ಸುಧೀರ ಕಾಡಾದಿ, ಲತಾ ಹಾರಕೂಡೆ, ರೂಪವತಿ ಜಾಧವ, ರಾಮಶೆಟ್ಟಿ ಪನ್ನಾಳೆ, ನೀಲಕಂಠ ರಾಠೋಡ್, ರಾಜೇಂದ್ರ ಗಂದಗೆ, ಸೋಮನಾಥಪ್ಪ ಅಷ್ಟುರೆ, ಸಿದ್ರಾಮ ಕಾಮಣ್ಣಾ, ನಾಗರಾಜ ಹಾವಣ್ಣ, ಜ್ಞಾನೇಶ್ವರ ಮುಳೆ, ಶಿವರಾಜ ಪಾಟೀಲ, ಅರವಿಂದ ಹರಪಲ್ಲೆ, ಶಿವಶರಣಪ್ಪ ಮಿಠಾರೆ ನಿರೂಪಿಸಿ , ಸುರೇಶ ಚನಶೆಟ್ಟಿ ಸ್ವಾಗತಿಸಿದರು ಈ ವೇಳೆ ವಿವಿಧ ಕ್ಷೇತ್ರಗಳ ಪ್ರಮುಖರು, ಜನಪ್ರತಿನಿಧಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.
