ಅನುಭವ ಮಂಟಪದ ೩ನೇ ಪೀಠಾಧಿಪತಿ ಶಿವಯೋಗಿ ಸಿದ್ಧರಾಮ ನಾಟಕ ಪ್ರದರ್ಶನ.
ಬಸವಕಲ್ಯಾಣ :
ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ವಚನಗಳು ದಿವ್ಯೌಷಧಿಗಳಾಗಿವೆ. ಸಮಸಮಾಜ ನಿರ್ಮಾಣಕ್ಕಾಗಿ ಶರಣರು ಜಾತ್ಯಾತೀತ ತತ್ವ ನೀಡಿದ್ದಾರೆ. ಮಹಿಳೆಯರಿಗೆ ಮೊಟ್ಟ ಮೊದಲು ಸ್ವಾತಂತ್ರ್ಯ ನೀಡಿದವರು ವಿಶ್ವಗುರುಬಸವಣ್ಣನವರು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಹೇಳಿದರು.

ಅವರು ಅಂತರ್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ನಾಲ್ಕನೇ ದಿನದ ಕಾರ್ಯಕ್ರಮದ ಶಿವಯೋಗಿ ಸಿದ್ಧರಾಮ ನಾಟಕ ಉದ್ಘಾಟಿಸಿ ಮಾತನಾಡಿದರು.
ಶರಣರು ಸಮಾನತೆ, ಸೌಹಾರ್ದತೆಯ ಸಮಾಜ ನಿರ್ಮಾಣ ಮಾಡಲು ಅಂಧಕಾರ, ಮೌಢ್ಯಗಳ ವಿರುದ್ಧ ಹೋರಾಟ ಮಾಡಿದ್ದಾರೆ. ವಿಶ್ವದ ಪ್ರಥಮ ಸಂಸತ್ತಾದ ಅನುಭವ ಮಂಟಪದಲ್ಲಿ ಎಲ್ಲಾ ಸಮುದಾಯದ ೭೭೦ ಅಮರಗಣಂಗಳಿಗೆ ಅವಶಕಾಶ ನೀಡಿ ಇಡೀ ಸಮುದಾಯವನ್ನು ಒಂದೇ ವೇದಿಕೆಗೆ ತಂದಿರುತ್ತಾರೆ.
ಶರಣರು ಎಳೆಹೂಟೆ ಶಿಕ್ಷೆಗೆ ಗುರಿಯಾದರು ತಾವು ನಂಬಿದ ತತ್ವಗಳನ್ನು ಬಿಟ್ಟುಕೊಡದೇ ಮರಣದಲ್ಲಿ ಮಹಾನವಮಿ ಕಂಡರು. ಹುತಾತ್ಮ ಶರಣರ ಸ್ಮರಣೆಗಾಗಿ ಹುತಾತ್ಮ ಸ್ಮಾರಕ ನಿರ್ಮಾಣ ಮಾಡಲು ಕ್ರಮ ವಹಿಸುತ್ತೇನೆ ಎಂದರು.
ಮನುಕುಲದ ಒಳಿತಿಗಾಗಿ ನಾವೆಲ್ಲ ಚಿಂತನೆ ಮಾಡುವ ತತ್ವಗಳು ಬಸವತತ್ವದಲ್ಲಿವೆ. ಅಸತ್ಯದಿಂದ ಸತ್ಯದ ಕಡೆಗೆ, ದುಷ್ಠರ ಸಂಹಾರ ಶಿಷ್ಠರ ರಕ್ಷಣೆ, ಅಧರ್ಮದಿಂದ ಧರ್ಮದ ಕೆಡಕಿನ ಮೇಲೆ ಒಳಿತಿನ ವಿಜಯವಾಗಬೇಕು. ವರ್ಗ ವರ್ಣ ಲಿಂಗ ಭೇದರಹಿತ ಸಮಾಜ ನಿರ್ಮಾಣವಾಗಬೇಕು. ಮುಂಬರುವ ಬಸವ ಜಯಂತಿಯೊಳಗಾಗಿ ನೂತನ ಅನುಭವ ಮಂಟಪ ಲೋಕಾರ್ಪಣೆ ಮಾಡಲಾಗುವುದು. ಬಸವತತ್ವ ಪ್ರಸಾರ-ಪ್ರಚಾರಕ್ಕಾಗಿ ಪೂಜ್ಯ ಅಕ್ಕನವರು ನಿರಂತರವಾಗಿ ಮಾಡುತ್ತಿರುವ ಕಾರ್ಯಗಳು ಶ್ಲಾಘನೀಯ ಎಂದರು.
ಸಾನಿಧ್ಯವನ್ನು ವಹಿಸಿಕೊಂಡ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಆಶಿರ್ವಚನ ನೀಡಿ, ಶರಣರ ಸಿದ್ಧಿಯ ನಾಡು ಬಸವಕಲ್ಯಾಣ. ಹಂಪಿ, ಮೈಸೂರು ಉತ್ಸವಗಳಂತೆ ಪ್ರತಿವರ್ಷ ನಡೆಯಬೇಕು. ಸಮಸಮಾಜ ನಿರ್ಮಾಣಕ್ಕಾಗಿ ಪ್ರಾಣಬಲಿದಾನಗೈದ ಶರಣರ ಸ್ಮರಣಾರ್ಥವಾಗಿ ಹುತಾತ್ಮ ಶರಣರ ಸ್ಮಾರಕ ನಿರ್ಮಾಣವಾಗಲಿ ಎಂದು ನುಡಿದರು.

ಹಿರೇಮಠ ಸಂಸ್ಥಾನದ ಪೂಜ್ಯ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಿಕೊಂಡಿದ್ದರು. ಪೂಜ್ಯ ಸತ್ಯಕ್ಕತಾಯಿ ಅನುಭಾವ ನೀಡಿದರು.
ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬೀದರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಆನಂದ ದೇವಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಬಿಡಿಪಿಸಿ ಕೋಶ್ಯಾಧ್ಯಕ್ಷ ಜಗನ್ನಾಥ ಖೂಬಾ ಅಧ್ಯಕ್ಷತೆ ವಹಿಸಿಕೊಂಡಿದ್ದರು.
ಕಾರ್ಯದರ್ಶಿ ಅಶೋಕ ನಾಗರಾಳೆ, ನಿರ್ದೇಶಕ ಮಲ್ಲಿಕಾರ್ಜುನ ಚಿರಡೆ, ಬಿಡಿವಿಸಿ ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಜಿಲ್ಲಾ ಹೂಗಾರ ಸಮಾಜ ಅಧ್ಯಕ್ಷ ರಾಜಕುಮಾರ ಹೂಗಾರ, ಜೇಡರ ದಾಸಿಮಯ್ಯ ಸಮಾಜದ ಅಧ್ಯಕ್ಷ ಶಿವಕುಮಾರ ಸಿದ್ಧವೀರೆ, ಮಡಿವಾಳ ಸಮಾಜದ ಅಧ್ಯಕ್ಷ ಗಣಪತಿ ಮಡಿವಾಳ, ಹುಲಸೂರ ಬಸವ ಕೇಂದ್ರದ ಉಪಾಧ್ಯಕ್ಷ ಮಲ್ಲಿಕಾರ್ಜುನ ದೇವಪ್ಪ, ಶಿವಕುಮಾರ ಪಾಟೀಲ, ಚಂಪಾವತಿ ಮಹಾಜನ, ಹೇಮಾ ನೆಹರು, ವಿದ್ಯಾವತಿ ಶೇರಿಕಾರ, ಬಸವರಾಜೇಶ್ವರಿ ನಾಗರಾಳೆ ಉಪಸ್ಥಿತರಿದ್ದರು.
ಅರಿವಿನ ಮನೆ ಅಕ್ಕನ ಬಳಗದವರು ಗುರುಪೂಜೆಗೈದರೆ, ಪ್ರತಾಪೂರದ ನೀಲಾಂಬಿಕಾ ಅಕ್ಕನ ಬಳಗದವರು ವಚನ ಸಂಗೀತ ನಡೆಸಿಕೊಟ್ಟರು. ಶಿವಕುಮಾರ ಬಿರಾದಾರ ಸ್ವಾಗತಿಸಿದರೆ, ಕವಿತಾ ರಾಜೋಳೆ ನಿರೂಪಿಸಿದರು.

ಶಿವಯೋಗಿ ಸಿದ್ಧರಾಮ ನಾಟಕ:
ಲಕ್ಷ್ಮಣ ಮೇತ್ರೆ ನಿರ್ದೇಶನದಲ್ಲಿ ಬೀದರ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳಿಂದ ಶಿವಯೋಗಿ ಸಿದ್ಧರಾಮ ನಾಟಕ ಅದ್ಭುತವಾಗಿ ಮೂಡಿ ಬಂತು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
