ಅಕ್ಟೋಬರ್ 22 ಸಿದ್ಧಲಿಂಗ ಸ್ವಾಮೀಜಿ ಪುಣ್ಯಸ್ಮರಣೆ, ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಬಸವ ಮೀಡಿಯಾ
ಬಸವ ಮೀಡಿಯಾ

ಐದು ಸಾಧಕರಿಗೆ ತಲಾ ಒಂದು ಲಕ್ಷ ರೂ. ಗೌರವಧನ; ತೋಂಟದಾರ್ಯ ವಿದ್ಯಾಪೀಠದ ಸುವರ್ಣಸೌಧ ಲೋಕಾರ್ಪಣೆ, ಪುಸ್ತಕಗಳ ಬಿಡುಗಡೆ ಸಮಾರಂಭ.

ಗದಗ :

ಕನ್ನಡದ ಕುಲಗುರುಗಳು ಹಾಗೂ ಭಾವೈಕ್ಯತೆಯ ಪ್ರತಿಪಾದಕರಾಗಿದ್ದ ಪೂಜ್ಯ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಎಂಟನೇ ಪುಣ್ಯಸ್ಮರಣೆ ಹಾಗೂ ‘ಮರಣವೇ ಮಹಾನವಮಿ’ ಆಚರಣೆ ಅಂಗವಾಗಿ ಅಕ್ಟೋಬರ್ ೨೨ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿಗಳಾದ ಪ್ರೊ. ಎಸ್.ಎಸ್ ಪಟ್ಟಣಶೆಟ್ಟರ ಅವರು ನುಡಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಜರುಗಿದ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ರಾಷ್ಟ್ರಮಟ್ಟದ ಸಂತರಾಗಿದ್ದ ಲಿಂಗೈಕ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ತಾವು ಶ್ರೀಮಠದ ಪೀಠಕ್ಕೆ ಆಗಮಿಸಿದ ದಿನದಿಂದ ೪೪ ವರ್ಷಗಳವರೆಗೆ ಸಮಾಜೋಧಾರ್ಮಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆ ಚರಿತ್ರೆಯ ಸುವರ್ಣ ಪುಟಗಳಲ್ಲಿ ದಾಖಲಾಗಿದೆ.

ಕನ್ನಡ ನಾಡು-ನುಡಿ ಸೇವೆ, ಪುಸ್ತಕ ಪ್ರಕಟಣೆ, ಭಾವೈಕ್ಯತೆಯ ಪ್ರತಿಪಾದನೆ, ಬಸವತತ್ವಗಳ ಪ್ರಸಾರ, ಪರಿಸರ ಸಂರಕ್ಷಣೆ, ವೈಚಾರಿಕತೆ ನಿಲುವು ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಮಹೋನ್ನತ ಸಾಧನೆ ಮಾಡಿದ ಲಿಂಗೈಕ್ಯ ಗುರುಗಳು ದಕ್ಷಿಣ ಭಾರತದಲ್ಲೇ ಕೇಂದ್ರ ಸರ್ಕಾರದಿಂದ ಕೋಮುಸೌಹಾರ್ದತೆ ಹಾಗೂ ಏಕತೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಮೊದಲಿಗರಾಗಿದ್ದಾರೆ.

ತಾವು ನಿರ್ಮಿಸಿದ ಶೈಕ್ಷಣಿಕ ಹಾಗೂ ಸೇವಾ ಸಂಸ್ಥೆಗಳಿಗೆ ಹರ್ಡೇಕರ ಮಂಜಪ್ಪನವರು, ಡಿ.ಸಿ ಪಾವಟೆ,  ಬಸವೇಶ್ವರರು, ಚನ್ನಬಸವೇಶ್ವರರು, ಶಿವಶರಣ ಹರಳಯ್ಯ, ಸರ್ ಸಿದ್ದಪ್ಪ ಕಂಬಳಿ, ಮಾದಾರ ಚನ್ನಯ್ಯ, ಹಿರೇಮಲ್ಲೂರು ಈಶ್ವರನ್ ಹೀಗೆ ಸಮಾಜದ ಏಳಿಗೆಗೆ ಶ್ರಮಿಸಿದ ನಿಸ್ವಾರ್ಥ ಸಾಧಕರ ಹೆಸರುಗಳನ್ನು ನಾಮಕರಣ ಮಾಡಿದರು. ಜೊತೆಗೆ ಅವರ ಜೀವನ-ಸಾಧನೆಗಳು ಶಾಶ್ವತವಾಗಿ ಸಮಾಜದಲ್ಲಿ ಉಳಿಯುವಂತೆ ಅವರ ಚರಿತ್ರೆಗಳನ್ನು ಬರೆಸಿದರು.

ವೈಯಕ್ತಿಕ ಪ್ರಚಾರ-ಪ್ರಶಂಸೆಗಳಿಗೆ ಎಂದೂ ಮಾರುಹೋಗದ ಪೂಜ್ಯರು ಒಂದು ದಿನವೂ ಜನ್ಮದಿನ ಆಚರಿಸಿಕೊಂಡವರಲ್ಲ, ಜೊತೆಗೆ ತಮ್ಮ ಬಗೆಗೆ ಪುಸ್ತಕಗಳನ್ನಾಗಲಿ ಅಥವಾ ತಮ್ಮ ಪುತ್ಥಳಿಯನ್ನಾಗಲಿ ಎಂದಿಗೂ ಬಯಸಿದವರಲ್ಲ. ಆದರೆ ಅವರು ಲಿಂಗೈಕ್ಯರಾದ ದಿನದಿಂದ ನೂರಾರು ಸಂಖ್ಯೆಯಲ್ಲಿ ಅವರ ಕುರಿತು ಪುಸ್ತಕಗಳು ರಚನೆಯಾಗಿದ್ದು, ರಾಜ್ಯದ ಅನೇಕ ಊರುಗಳಲ್ಲಿ ಅವರ ಪುತ್ಥಳಿಗಳು ಸ್ಥಾಪನೆಯಾಗುತ್ತಿವೆ.

ಶ್ರೀಗಳವರ ಹೆಸರನ್ನು ಚಿರಸ್ಥಾಯಿಯಾಗಿಸುವ ಉದ್ದೇಶದಿಂದ ಅವರೇ ಸ್ಥಾಪಿಸಿದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ನೌಕರರು ಅವರ ಹೆಸರಿನಲ್ಲಿ ೫ ಲಕ್ಷ ರೂಪಾಯಿ ಮೊತ್ತದ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿಯನ್ನು ಸಾಧಕರಿಗೆ ಪ್ರತಿವರ್ಷ ನೀಡುವ ಪದ್ಧತಿ ಆರಂಭಿಸಿದ್ದು ಈಗಾಗಲೇ ಬಸವ ವಾಹಿನಿ, ಡಾ. ಎಸ್.ಎಂ. ಜಾಮದಾರ, ಭಾಲ್ಕಿ ಪಟ್ಟದ್ದೇವರು, ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್, ಗೊ.ರು ಚನ್ನಬಸಪ್ಪ, ಡಾ.ಎಂ.ಎಂ. ಕಲಬುರ್ಗಿ [ಮರಣೋತ್ತರ] ಅವರಿಗೆ ಪ್ರಶಸ್ತಿ ನೀಡಲಾಗಿದೆ.

೨೦೨೬ನೇ ಸಾಲಿನಲ್ಲಿ ಈ ಪ್ರಶಸ್ತಿಯನ್ನು ವಿವಿಧ ಕ್ಷೇತ್ರದಲ್ಲಿ ಸಾಧನೆ ತೋರಿದ ೫ ಜನ ಸಾಧಕರಿಗೆ ತಲಾ ಒಂದು ಲಕ್ಷ ರೂಪಾಯಿಯಂತೆ ನೀಡಲು ಸಮಿತಿ ತೀರ್ಮಾನಿಸಿದ್ದು, ಕಲಬುರಗಿಯ ಮಾಜಿ ಕಾರ್ಮಿಕ ಸಚಿವ ಡಾ. ಎಸ್.ಕೆ. ಕಾಂತಾ, ಧಾರವಾಡದ ಖ್ಯಾತ ಮನೋವೈದ್ಯರಾಗಿದ್ದ ದಿವಂಗತ ಡಾ. ಆನಂದ ಪಾಂಡುರಂಗಿ [ಮರಣೋತ್ತರ], ಬೆಳಗಾವಿ ಜಿಲ್ಲೆಯ ಹಾರೂಗೇರಿಯ ಶರಣ ವಿಚಾರವಾಹಿನಿಯ ಅಧ್ಯಕ್ಷ ಐ.ಆರ್. ಮಠಪತಿ, ಬಸವ ಮೀಡಿಯಾ, ಬೆಂಗಳೂರು, ಬೀದರನ ಕಲಾವಿದ ಚಂದ್ರಶೇಖರ ಸೋಮಶೆಟ್ಟಿ ಈ ಐದು ಜನ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಿದ್ದೇವೆ.

ಬಡ ಹಾಗೂ ಮಧ್ಯಮ ವರ್ಗದ ಮಕ್ಕಳ ಶೈಕ್ಷಣಿಕ ಕಲ್ಯಾಣಕ್ಕಾಗಿ ಲಿಂಗೈಕ್ಯ ಗುರುಗಳು ಸ್ಥಾಪಿಸಿದ ತೋಂಟದಾರ್ಯ ವಿದ್ಯಾಪೀಠಕ್ಕೆ ೫೦ ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಅದರ ಸುವರ್ಣ ಮಹೋತ್ಸವದ ಅಂಗವಾಗಿ ಪಾಲಾ-ಬದಾಮಿ ರಸ್ತೆಯಲ್ಲಿರುವ ಶ್ರೀಮಠದ ಜಾಗೆಯಲ್ಲಿ ನಿರ್ಮಾಣಗೊಂಡಿರುವ ‘ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸುವರ್ಣ ಸೌಧ’ ಲೋಕಾರ್ಪಣೆಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಪೂಜ್ಯರು ಸ್ಥಾಪಿಸಿದ ಜಗದ್ಗುರು ತೋಂಟದಾರ್ಯ ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಾಕಾರಿ ಸಂಘದ ಮೂಲಕ ನಗರದ ಮಧ್ಯವರ್ತಿ ಜಾಗೆಯಲ್ಲಿರುವ ಇಂಜೀನಿಯರಿಂಗ್ ಕಾಲೇಜು ಆವರಣದಲ್ಲಿ ಹಾಗೂ ಗದಗ ನಗರದ ಮಧ್ಯದಲ್ಲಿ ಶ್ರೀಮಠದ ಜಾಗೆಯಲ್ಲಿ ಅವರ ಕಂಚಿನ ಪುತ್ಥಳಿ ನಿರ್ಮಿಸಬೇಕೆಂಬ ಇಚ್ಛೆ ಇದ್ದು, ಸೂಕ್ತ ಜಾಗೆಯನ್ನು ಗುರುತಿಸಿ ಶ್ರೀಗಳ ೧೦ ಅಡಿ ಎತ್ತರದ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದರು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಡಾ. ಉಮೇಶ ಪುರದ ಮಾತನಾಡಿ, ೨೨ ರಂದು ಶ್ರೀಮಠದಲ್ಲಿ ಜರುಗುವ ಕಾರ್ಯಕ್ರಮದ ಸಾನಿಧ್ಯವನ್ನು ಎಡೆಯೂರು ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಿತ್ತರಗಿಯ ಇಳಕಲ್ ವಿಜಯಮಹಾಂತೇಶ್ವರ ಮಠದ ಪೂಜ್ಯ ಗುರುಮಹಾಂತಪ್ಪ ಸ್ವಾಮಿಗಳು ಹಾಗೂ ನಾಡಿನ ವಿವಿಧ ಮಠಾಧೀಶರು ಸೇರಿದಂತೆ ಅನೇಕ ಮಠಗಳ ಪೂಜ್ಯರು ಭಾಗವಹಿಸಲಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ್ ಅವರು ಪ್ರಶಸ್ತಿ ಪ್ರದಾನ ಹಾಗೂ ಕಟ್ಟಡ ಉದ್ಘಾಟನೆ ನೆರವೇರಿಸಲಿದ್ದಾರೆ.

ಗ್ರಂಥಗಳ ಬಿಡುಗಡೆ :

ಸಮಾರಂಭದಲ್ಲಿ ಶರಣ ಸಾಹಿತ್ಯ ಮತ್ತು ಬಸವತತ್ವಕ್ಕೆ ಸಂಬಂಧಿಸಿದ ನಾಲ್ಕು ಗ್ರಂಥಗಳನ್ನು ಬಿಡುಗಡೆ ಮಾಡಲಾಗುತ್ತದೆ. ಡಾ. ಎನ್.ಜಿ. ಮಹಾದೇವಪ್ಪ ಅವರ ‘ವಚನಗಳಲ್ಲಿ ಅನುಭಾವ’, ಡಾ. ಪ್ರದೀಪಕುಮಾರ ಹೆಬ್ರಿ ಅವರ ‘ಬೆಳಗ ಮಹಾಬೆಳಗು’, ‘ಶೇಕ್ಸ್ಪಿಯರ್ ಮತ್ತು ಕಂದಗಲ್ಲ ಹನುಮಂತರಾಯ ತುಲನಾತ್ಮಕ ಅಧ್ಯಯನ’ ಹಾಗೂ ಪ್ರೊ. ಆರ್.ಎಸ್. ಲೆಕ್ಕದ ಅವರ ‘ಶಾಂತಗಿರಿ ಅಯ್ಯಪ್ಪಯ್ಯ’ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ.

ಈ ಕಾರ್ಯಕ್ರಮಕ್ಕೆ ಲಿಂಗೈಕ್ಯ ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸದ್ಭಕ್ತರು, ಸಾಹಿತ್ಯಾಸಕ್ತರು, ಶರಣತತ್ವದ ಅನುಯಾಯಿಗಳು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ತೋಂಟದಾರ್ಯ ಜಾತ್ರಾ ಸಮಿತಿ ಅಧ್ಯಕ್ಷ ವಿನಾಯಕ ಮಾನ್ವಿ, ಕೆ.ಎಸ್. ಚಟ್ಟಿ, ಶೇಖಣ್ಣ ಕವಳಿಕಾಯಿ, ಕೊಟ್ರೇಶ ಮೆಣಸಿನಕಾಯಿ, ದಾನಯ್ಯ ಗಣಾಚಾರಿ, ಅಮರೇಶ ಅಂಗಡಿ,  ಶೇಖಣ್ಣ ಅರಳಿ ಮತ್ತಿತರರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *