ಜಮಖಂಡಿ
ವೀರಶೈವ ಮತ್ತು ಲಿಂಗಾಯತ ಸಮುದಾಯಗಳನ್ನು ವಿಭಜಿಸುವ ಪ್ರಯತ್ನ ರಾಜಕೀಯ ಲಾಭಕ್ಕಾಗಿ ನಡೆದ ಷಡ್ಯಂತ್ರವಾಗಿತ್ತು. ಇಂತಹ ಪ್ರಯತ್ನಗಳಿಗೆ ಸಮಾಜ ಅವಕಾಶ ನೀಡದೆ ಒಗ್ಗಟ್ಟು ಪ್ರದರ್ಶಿಸಿದೆ,
ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.
ನಗರದ ಕಡಪಟ್ಟಿ ದೇವಸ್ಥಾನ ಆವರಣದಲ್ಲಿ ಬುಧವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 4ನೇ ದಿನದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜ ವಿಭಜಿಸುವ ಪ್ರಯತ್ನಗಳಿಗೆ ಅವಕಾಶ ನೀಡದೆ, ಎಲ್ಲರೂ ಒಂದಾಗಿ ನಮ್ಮ ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರೀಯ ಏಕತೆ ಉಳಿಸಿಕೊಳ್ಳಬೇಕು ಎಂದರು.
ಸಮಾಜದ ಏಕತೆಗೆ ಭಾರತೀಯ ಆಧ್ಯಾತ್ಮಿಕ ಪರಂಪರೆ ಹಾಗೂ ಬಸವಣ್ಣನವರ ಸಂದೇಶ ಅಗತ್ಯವಾಗಿದೆ.
ಸನಾತನ ಧರ್ಮ ಮನುಷ್ಯರಷ್ಟೇ ಅಲ್ಲದೆ ಸಕಲ ಜೀವಿಗಳ ಒಳಿತು ಬಯಸುತ್ತದೆ. ಮಾನವ ಧರ್ಮ ಯಾವುದೇ ಮತಕ್ಕೆ, ಪ್ರದೇಶ ಅಥವಾ ಸಂಪ್ರದಾಯಕ್ಕೆ ಸೀಮಿತವಾಗಿಲ್ಲ. ಇಡೀ ಮನುಕುಲದ ಒಳಿತನ್ನು ಬಯಸುವುದೇ ಮೂಲ ಆಶಯವಾಗಿದೆ.
ಭಾರತದ ಆತ್ಮ ಆಧ್ಯಾತ್ಮದಲ್ಲಿದೆ. ಭೂಮಿ ತಾಯಿಯಾಗಿ, ನೀರು ಗಂಗಾಮಾತೆಯಾಗಿ, ಗಾಳಿ ವಾಯುದೇವನಾಗಿ ಮತ್ತು ಅಗ್ನಿ ದೈವಸ್ವರೂಪವಾಗಿ ಕಾಣುವ ಪರಂಪರೆ ನಮ್ಮಲ್ಲಿದೆ, ಎಂದರು.
ಇದೇ ಸಂಧರ್ಭದಲ್ಲಿ ಅವರು ಮುಕ್ತಿಮಂದಿರದಲ್ಲಿ ಅ.28ರಂದು ಜರುಗಲಿರುವ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ 44ನೇ ಪುಣ್ಯಸ್ಮರಣೋತ್ಸವ ಸಮಾರಂಭದ ಭಿತ್ತಿಪತ್ರ ಬಿಡುಗಡೆಗೊಳಿಸಿದರು.
