ಲಿಂಗಸುಗೂರು :
ಸ್ಥಳೀಯ ವಿಜಯಮಹಾಂತೇಶ್ವರ ಶಾಖಾ ಅನುಭವ ಮಂಟಪದಲ್ಲಿ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಬುಧವಾರ ‘ನವ ವಚನ ಚಿಂತನ’ ಕಾರ್ಯಕ್ರಮ ನಡೆಯಿತು.
ಶರಣೆ ಮೋಳಿಗೆ ಮಹಾದೇವಿ ತಾಯಿಯ ಜೀವನ ಪರಿಚಯ ಮತ್ತು ಅವರ ವಚನ ವಿಶ್ಲೇಷಣೆಯನ್ನು ಶಿಕ್ಷಕಿ ಶಿಲ್ಪಾ ನಾರನಾಳ ಅವರು ತಮ್ಮ ಅನುಭಾವಿಕ ನೆಲೆಯಲ್ಲಿ ಮಾಡಿದರು.

12ನೇ ಶತಮಾನದ ಪ್ರಮುಖ ಶಿವಶರಣರಾದ ಮೋಳಿಗೆ ಮಾರಯ್ಯ ಮತ್ತು ಅವರ ಪತ್ನಿ ಮೋಳಿಗೆ ಮಹಾದೇವಿ ಅವರ ಜೀವನವನ್ನು ಪರಿಚಯಿಸುತ್ತ, ಕಾಶ್ಮೀರದಲ್ಲಿ ರಾಜರಾಗಿದ್ದ ಮಹದೇವ್ ಭೂಪಾಲ ಮತ್ತು ಅವರ ಪತ್ನಿ ಗಂಗಾದೇವಿ ಅವರಾಗಿದ್ದರು. ಬಸವಣ್ಣನವರ ಕೀರ್ತಿ ಮತ್ತು ಕಲ್ಯಾಣದ ಶರಣರ ಅನುಭವ ಮಂಟಪದ ವಿಚಾರಗಳಿಂದ ಪ್ರಭಾವಿತರಾಗಿ ತಮ್ಮ ವಿಶಾಲವಾದ ರಾಜ ವೈಭವ, ಅರಸೊತ್ತಿಗೆಯನ್ನು ಸ್ವಯಂಪ್ರೇರಣೆಯಿಂದ ತ್ಯಜಿಸಿ ಕಲ್ಯಾಣಕ್ಕೆ ಬಂದು ಸೇರಿಕೊಳ್ಳುತ್ತಾರೆ.
ಕಲ್ಯಾಣದಲ್ಲಿ ಎಲ್ಲಾ ಶರಣರಂತೆ ಜೀವನ ನಡೆಸಿ ಕಟ್ಟಿಗೆ ಮಾರುವ ಕಾಯಕವನ್ನು ಅವರು ಕೈಗೊಂಡರು. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎನ್ನುವಂತೆ ಸತ್ಯ ಶುದ್ಧ ಕಟ್ಟಿಗೆ ಮಾರುವ ಕಾಯಕವನ್ನು ದಂಪತಿ ಮಾಡುತ್ತಿದ್ದರು.

ಅಪಾರ ಲಿಂಗನಿಷ್ಠೆ, ಕಾಯಕನಿಷ್ಠೆ ದಂಪತಿಗಳದಾಗಿತ್ತು. ಕಾಯಕದಿಂದ ಬಂದಿರತಕ್ಕಂತಹ ಹಣವನ್ನು ದಾಸೊಹ ಮಾಡುತಿದ್ದರು ಎಂದರು.
ಮೋಳಿಗೆ ಮಹಾದೇವಿ ಪ್ರಸಾದ ದಾಸೋಹಕ್ಕಾಗಿ ಅಂಬಲಿಯನ್ನು ಮಾಡುತ್ತಿದ್ದರು. ಸವಿಯಾದ ಅಂಬಲಿಯನ್ನು ಸವಿಯಲು ಸಾಕ್ಷಾತ್ ಬಸವಣ್ಣನವರು ಅವರ ಮನೆಗೆ ಬರುತ್ತಾರೆ. ಅವರ ಸತ್ಯಶುದ್ಧವಾದ ಕಾಯಕವನ್ನು ನೋಡಿ ಆಶ್ಚರ್ಯ ಚಕಿತರಾಗುತ್ತಾರೆ ಎಂಬ ಪ್ರಸಂಗ ಹೇಳಿದರು.
ಬಸವಣ್ಣನವರು ಅವರ ಮನೆಗೆ ಬಂದು ನಾಣ್ಯ ಇಡುವ ಪ್ರಸಂಗವನ್ನು ಸಹ ಉಲ್ಲೇಖ ಮಾಡಿದರು. ಮಹಾದೇವಿ ಅವರ ಸುಮಾರು 70 ವಚನಗಳು ಲಭ್ಯವಾಗಿವೆ. ಇವರ ಅಂಕಿತನಾಮ ‘ಎನ್ನಯ್ಯ ಪ್ರಿಯ ಇಮ್ಮಡಿ ನಿಷ್ಕಳಂಕ ಮಲ್ಲಿಕಾರ್ಜುನ’ ಎಂಬುದಾಗಿದೆ ಎಂದು ನಾರನಾಳ ತಿಳಿಸಿದರು.
ಅಕ್ಕನ ಬಳಗದ ತಾಯಂದಿರು ವಚನ ಪ್ರಾರ್ಥನೆಯನ್ನು ನಡೆಸಿದರು. ಸಂವಾದದೊಂದಿಗೆ ವಚನ ಚಿಂತನೆ ಮುಂದುವರೆಯಿತು.
ಕಾರ್ಯಕ್ರಮದಲ್ಲಿ ವಚನ ಗಾಯನವನ್ನು ಅಶ್ವಿನಿ ಮಿಟ್ಟಿಮನಿ ಮಾಡಿದರು. ನಿರೂಪಣೆಯನ್ನು ಭುವನೇಶ್ವರಿ ಸಕ್ರಿ ಮಾಡಿದರು. ಪ್ರಸಾದ ಸೇವೆಯು ನಿರ್ಮಲ ಕಾರಟಗಿ ಅವರದಾಗಿತ್ತು.

ಕೊನೆಯಲ್ಲಿ ಪೂಜ್ಯರು ಆಶೀರ್ವಚನ ನೀಡಿದರು. ಉಪನ್ಯಾಸಕರಿಗೆ ಸನ್ಮಾನ ನಡೆಯಿತು. ಬಸವಭಕ್ತರು ಉಪಸ್ಥಿತರಿದ್ದರು.
