ಬಸವಕಲ್ಯಾಣ :
ಬಸವಕಲ್ಯಾಣದಲ್ಲಿ ಹನ್ನೆರಡನೇ ಶತಮಾನದಲ್ಲಿ ಶರಣರು ನಡೆಸಿದ ಕ್ರಾಂತಿ ಇಡೀ ಜಗತ್ತಿನ ಸಾಮಾಜಿಕ, ಆರ್ಥಿಕ, ರಾಜಕೀಯ ವಲಯದಲ್ಲಿ ಬಹುದೊಡ್ಡ ಬದಲಾವಣೆಯ ಆಯಾಮ ತಂದುಕೊಟ್ಟ ಕ್ರಾಂತಿಯಾಗಿದೆ ಎಂದು ಬಸವಕಲ್ಯಾಣ ರೀಡರ್ಸ್ ಕ್ಲಬ್ ನ ಅಧ್ಯಕ್ಷ ಡಾ. ಶ್ರೀಕಾಂತ ಚೌಹಾಣ್ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಾನುವಾರ ಬಸವಕಲ್ಯಾಣ ರೀಡರ್ಸ್ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಆಶಯ ಮಾತುಗಳನ್ನು ಆಡಿದ ಅವರು, ಬಸವಾದಿ ಶರಣರ ವಚನಗಳು ಹಲವು ಸೈದ್ಧಾಂತಿಕ ವಿಚಾರಗಳನ್ನು ಒಳಗೊಂಡಿವೆ. ಅವು ಭಾಷಾಂತರವಾಗಿ ಎಲ್ಲೆಡೆ ತಲುಪಿದರೆ ವಚನ ವಿಚಾರ ವಿಸ್ತ್ರತವಾಗುತ್ತದೆ ಎಂದರು.
ಸಮಸಮಾಜದ ಪರಿಕಲ್ಪನೆ ಅನುಷ್ಠಾನಕ್ಕೆ ತಂದ ವಚನಗಳು ವ್ಯಕ್ತಿ ಸ್ವಾತಂತ್ರ್ಯಕ್ಕೆ, ಸಮಾನತೆಗೆ ಆದ್ಯತೆ ನೀಡಿವೆ. ವೈಜ್ಞಾನಿಕ, ವೈಚಾರಿಕ ಆಶಯಗಳು ಪ್ರತಿಪಾದಿಸಿವೆ. ವಚನಗಳ ಬಹುಶಿಸ್ತೀಯ ಓದು ಅಗತ್ಯ ಎಂದರು.
ಸಮಾರಂಭ ಉದ್ಘಾಟಿಸಿದ ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿ. ಬಿ. ಪರತಾಪೂರೆ ಅವರು ಮಾತನಾಡಿ,
ಕೃಷಿ ಮತ್ತು ಪರಿಸರವು ಸಾಹಿತ್ಯ ಕೃಷಿಯಲ್ಲಿ ಹೆಚ್ಚು ಬರಬೇಕು. ಪರಿಸರ ಅಧ್ಯಯನ ಓದಿನ ಭಾಗವಾಗಬೇಕು. ಪರಿಸರ ಪ್ರಜ್ಞೆ ಈ ಕಾಲದ ಅಗತ್ಯವಾಗಿದೆ. ನಾಶವಾಗುತ್ತಿರುವ ಮಣ್ಣಿನ ಸತ್ವ ಉಳಿಸುವ ಸವಾಲು ಹಿಂದೆಂದಿಗಿಂತ ಇಂದು ಹೆಚ್ಚಾಗಿದೆ.
ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ದುರಂತದ ಸಂಗತಿ. ಆದರೆ ಮಣ್ಣಿನ ಸಾವು ರೈತನ ರೈತನ ಸಾವಿಗಿಂತ ಮೊದಲೇ ಸಂಭವಿಸಿದೆ ಇಂಥ ಪ್ರಜ್ಞಾವಂತಿಕೆ ಓದಿನಿಂದ ಕಂಡುಕೊಳ್ಳಬೇಕಿದೆ ಎಂದರು.
ಬಸವಕಲ್ಯಾಣದ ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ಅಧ್ಯಕ್ಷ ಎಸ್. ಜಿ. ಹುಡೇದ ಮಾತನಾಡಿ, ವಚನ ಸಾಹಿತ್ಯ ಸೇರಿ ಯಾವುದೇ ಬಗೆಯ ಓದು ನಮಲ್ಲಿ ವೈಚಾರಿಕ ಚಿಂತನೆ ಬೆಳೆಸುತ್ತದೆ. ಕನ್ನಡದ ದೇಶಿ ಮತ್ತು ನೆಲ ಮೂಲದ ಚಿಂತನೆ ಹೊಂದಿರುವ ವಚನಗಳ ಅನುಸಂಧಾನ ಹೆಚ್ಚು ನಡೆಯಲಿ ಎಂದರು.
ಇಂದಿನ ವಿದ್ಯಾರ್ಥಿಗಳು ತಂತ್ರಜ್ಞಾನದ ಬಳಕೆ ಹೆಚ್ಚು ಆದಂತೆ ಈ ಕಾಲದ ವಿದ್ಯಾರ್ಥಿಗಳು ಓದಿನಿಂದ ವಿಮುಖವಾಗುತ್ತಿರುವುದು ದುರಂತ. ಹೆಚ್ಚು ಮೌಲಿಕ ಕೃತಿಗಳನ್ನು ಓದುವುದರಿಂದ ಮಾನವೀಯ ಮೌಲ್ಯಗಳು ಬೆಳೆಯುತ್ತವೆ ಎಂದರು.
ನಿವೃತ್ತ ಶಿಕ್ಷಕ ಭೀಮಾಶಂಕರ ಮಾಶಾಳಕರ ಅವರು ಮಾತನಾಡಿ, ಸಂಸ್ಕೃತಿ, ಪರಂಪರೆ ಉಳಿಸಿಕೊಂಡ ಪುಸ್ತಕಗಳು ತಲೆಮಾರಿನಿಂದ ತಲೆಮಾರಿಗೆ ಜ್ಞಾನ ಕಳುಹಿಸಲು ಸಹಕಾರಿ. ಜೀವನದಲ್ಲಿ ಓದುವುದು ಬಹಳ ಮಹತ್ವ ಪಡೆದಿದೆ ಎಂದರು.

ಶ್ರೀ ಬಸವೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಸಾಹಿತ್ಯ ಕೃತಿಗಳ ಗಂಭೀರವಾದ ಓದು ಬಿಡುಗಡೆಯ ದಾರಿಯಾಗಿದೆ. ನಮಗೆ ಹಲವು ನಂಬಿಕೆಗಳಿಂದ, ಅನೇಕ ಆವರಣಗಳಿಂದ ಬಿಡುಗಡೆಗೊಳಿಸಿ ಮುಕ್ತವಾದ, ಸ್ವತಂತ್ರವಾದ ನಿಲುವುಗಳು ಮೂಡಿಸುವ ಪ್ರಕ್ರಿಯೆ ಓದಿನಿಂದ ಸಾಧ್ಯ. ಲೋಕದ ಗ್ರಹಿಕೆಗೆ, ಸ್ವವಿಮರ್ಶೆಗೆ, ಅನುಭವದ ವಿಸ್ತಾರಕ್ಕೆ, ಅರಿವು ಹೆಚ್ಚಿಸಿಕೊಳ್ಳುವುದಕ್ಕೆ ಓದಿನ ಪ್ರಕ್ರಿಯೆ ಬೇಕು ಎಂದರು.
ಓದುವುದು ಎಂದರೆ ಅದೊಂದು ಅನುಭವದ ಪಯಣ. ಲೇಖಕನ ಮತ್ತು ಓದುಗನ ಇಬ್ಬರ ಅನುಭವವು ಭಾವಕೋಶದಲ್ಲಿ ಮೂಡಿ ಸಾಮಾಜಿಕ ಅನುಭವದ ಪಯಣವಾಗಿ ರೂಪುಗೊಳ್ಳುತ್ತದೆ.
ಪಠ್ಯದ ನಿಕಟ ಓದು ಹಲವು ತಿಳುವಳಿಕೆ ಮೂಡಿಸುತ್ತದೆ. ಓದುವುದೆಂದರೆ ಹಲವು ಸಿದ್ಧಾಂತಗಳ ಜೊತೆಗಿನ ಸಂವಾದಿಸುವುದು; ನಮ್ಮ ಆಲೋಚನೆಗಳಿಗೆ ಒಂದು ತಾತ್ವಿಕ ಚೌಕಟ್ಟಿಗೆ ತಂದು ನಿಲ್ಲಿಸುವುದು ಎಂದರ್ಥ ಎಂದರು.
ಪಠ್ಯದ ಬಹು ಆಯಾಮವನ್ನು ಗ್ರಹಿಸುತ್ತ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಹುತ್ವದ ನೆಲೆಗಳು ದಕ್ಕಿಸಿಕೊಳ್ಳುವುದು ಅನುಸಂಧಾನಗಳಿಂದ ಸಾಧ್ಯ. ಓದುವ ಬಗೆಗಳು ಒಂದು ಓದಿನ ವೈಧಾನಿಕತೆಯ ಪ್ರಕ್ರಿಯೆಗಳಾಗಿವೆ ಎಂದರು

ಡಾ. ಶಿವಾಜಿ ಮೇತ್ರೆ, ಡಾ. ಪ್ರವೀಣಕುಮಾರ ಕಮಠಾಣೆ, ಶರಣು ಗವಳಿ, ಉದ್ಧವರಾವ್ ಉಪಾಸೆ, ಭೀಮಾಶಂಕರ ಪೂಜಾರಿ, ಮಾರುತಿ ಕಾಳೆ, ಭೂಮಿಕಾ, ದತ್ತಾತ್ರೇಯ ಪವಾರ, ಸಚಿನ್ ಮೊದಲಾದವರು ಇದ್ದರು.
ಚಂದ್ರಕಾಂತ ಅಕ್ಕಣ್ಣಾ ನಿರೂಪಿಸಿದರು. ಬಸವರಾಜ ಶೇರಿ ಸ್ವಾಗತಿಸಿದರು. ಡಾ. ಚಿತ್ರಶೇಖರ ಚಿರಳ್ಳಿ ಶರಣು ಸಮರ್ಪಿಸಿದರು.
