ಬಸವಗಿರಿಯಲ್ಲಿ ಮರಣವೇ ಮಹಾನವಮಿ ಮಹೋತ್ಸವ

ಸಮರ್ಪಿತರಿಗೆ ಮಾತ್ರ ಗುರುಕರುಣೆ ಸಾಧ್ಯ : ಪ್ರಭುದೇವ ಸ್ವಾಮೀಜಿ

ಬೀದರ :

ಸದ್ಗುರುವಿಗೆ ಸಮರ್ಪಿತರಿಗೆ ಮಾತ್ರ ಗುರುಕರಣೆ ಸಾಧ್ಯ ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಮಹಾಸ್ವಾಮೀಜಿ ಹೇಳಿದರು..

ಇಲ್ಲಿಯ ಬಸವಗಿರಿಯಲ್ಲಿ ಜರುಗಿದ ಮರಣವೇ ಮಹಾನವಮಿ ಮಹೋತ್ಸವದ 7ನೇ ದಿನ ನಡೆದ ಗುರು ಕರುಣೆ ಗೋಷ್ಠಿಯಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ದಿನೇ ದಿನೇ ಕರಗಿ ಹೋಗುತ್ತಿರುವ ಜೀವನವನ್ನು ಉದ್ದರಿಸಲು ಗುರು ಕರುಣೆ ಬೇಕು. ಭಕ್ತನ ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಬೆಳಕು ಬೆಳಗಿಸುವವನೇ ಗುರು.

ನಾನಾರು? ನಾನು ಎಲ್ಲಿಂದ ಬಂದೆ? ತೋರುವ ಜಗವಿದೇನು? ಹೋಗುವದೆಲ್ಲಿಗೆ? ಮುಂತಾದ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿ ಆತ್ಮ- ಪರಮಾತ್ಮರ ಸಮರಸ ದಾರಿ ತೋರುವವನು ಗುರು.

ಗುರು ಕರುಣೆಯ ಲಕ್ಷಣಗಳೆಂದರೆ ಜೀವನಿಗೆ ಆವರಿಸಿದ ಮಾಯೆ, ಮರವೇ, ಪ್ರಪಂಚ ಮತ್ತು ಕರ್ಮಪಾಶ ಹರಿವುದು. ಜಗತ್ತು ಕಂಡ ಶ್ರೇಷ್ಠ ಗುರು ಬಸವಣ್ಣ ತೋರಿದ ಮಾರ್ಗದಲ್ಲಿ ನಡೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕೆಂದು ಕರೆಯಿತ್ತರು.

ಅನುಭವ ಮಂಡಿಸಿದ ಉಪನ್ಯಾಸಕಿ ವಿದ್ಯಾವತಿ ಹಿರೇಮಠರು, ಲಿಂಗಾಯತ ಧರ್ಮದಲ್ಲಿ ತನ್ನದೇ ಆದ ಅಷ್ಟಾವರಣ, ಪಂಚಾಚಾರ ಮತ್ತು ಷಟಸ್ಥಲಗಳೆಂಬ ಸಿದ್ದಾಂತಗಳಿವೆ ಎಂದು ವಿವರಿಸಿದರು. ಅಧ್ಯಾತ್ಮದಲ್ಲಿ ಗುರುವಿನ ಸ್ಥಾನ ಮಹತ್ವದ್ದು. ಗುರು ಶಕ್ತಿ ವರ್ಣನಾತೀತ. ಗುರುವಿನ ಗುಣಗಾನಕ್ಕೆ ಪದಗಳಿಲ್ಲ. ಗುರು ಕರುಣೆ ಅನುಭವಿಸುವವರೇ ಅದರ ಮಹತ್ವ ಬಲ್ಲರು.

ಸದ್ಗುರು ವ್ಯಕ್ತಿಗಳ ಮತ್ತು ಸಮಾಜದ ಉದ್ಧಾರಕ್ಕೆ ಕರ್ಪೂರದಂತೆ ತನ್ನನ್ನು ತಾನೆ ಕರಗಿಸಿಕೊಳ್ಳುವನು. ಗಂಧದ ಕೊರಡಿನಂತೆ ಸವೆಯುವನು ಎಂದು ಹಲವು ಉದಾಹರಣೆ ಮತ್ತು ವಚನಗಳೊಂದಿಗೆ ಮಾರ್ಮಿಕವಾಗಿ ಬಣ್ಣಿಸಿದರು.

ನೀಲಮ್ಮನ ಬಳಗದ ಪುಷ್ಪ ಚಿಕುರ್ತೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಲ್ಲನ್ನು ಸಹ ಹೂವಾಗಿ ಅರಳಿಸುವ ಶಕ್ತಿ ಗುರುವಿನಲ್ಲಿದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಲಕ್ಷ್ಮಿ ಬಿರಾದಾರರವರು ಸಾಮೂಹಿಕವಾಗಿ ವಚನ ಪಠಣ ಮಾಡಿಸಿ ಕಾರ್ಯಕ್ರಮಕ್ಕೆ ಚಾಲನೆ ಇತ್ತರು. ಮುಖ್ಯ ಅತಿಥಿಗಳಾಗಿ ಚಂದ್ರಕಲಾ ಭಾಲ್ಕೆ, ಸುನಿತಾ ವಡ್ಡೆ ಭಾಗವಹಿಸಿದರು. ನಮ್ರತಾ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.

ಸಂಗೀತ ಸ್ವಾಮಿ, ರೇಖಾವತಿ ಬುಕ್ಕಾ, ಪಾರ್ವತಿ, ಶೋಭಾ ಸ್ವಾಮಿ, ಪೂಜಾ ಕೌಟಗೆ ಸಂಧ್ಯಾರಾಣಿ ಮುತ್ತಂಗೆ ಇದ್ದರು. ಗುರುಶ್ರೀ ವಚನ ಗಾಯನ ಗೈದು ಕಾರ್ಯಕ್ರಮ ನಿರೂಪಿಸಿದರು. ಜಗದೇವಿ ಹುಮನಾಬಾದೆ ಸ್ವಾಗತಿಸಿದರು.

ಕದಳಿ ಶ್ರೀ ಮತ್ತು ಬಸವಶ್ರೀಯವರ ವಚನ ನೃತ್ಯಗಳು ಗಮನ ಸೆಳೆದವು. ನೀಲಮ್ಮನ ಬಳಗ ಪ್ರತಾಪ್ ನಗರದ ಶರಣೆಯರ ವಚನ ಭಜನೆ ನಡೆಯಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *