ಲಿಂಗಾಯತ, ಅಹಿಂದ ಸಮುದಾಯಗಳ ಸಂಶೋಧನೆಗೆ 5 ವಾರ್ಷಿಕ ಧರ್ಮ ಅನುದಾನ ನೀಡಲು ಮನವಿ
ಚಿತ್ರದುರ್ಗ
ಲಿಂಗಾಯತ ಧರ್ಮ, ಇತಿಹಾಸ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಯುವ ಸಂಶೋಧಕರಿಗೆ ಅನುಧಾನ ನೀಡಲು ಶ್ರೀ ಜಗದ್ಗುರು ಮುರುಘರಾಜೇಂದ್ರ ಬ್ರಹನ್ಮಠದ ಆಡಳಿತ ಮಂಡಳಿಗೆ ಹಿರಿಯ ವಿದ್ವಾಂಸರು ಮನವಿ ಮಾಡಿದ್ದಾರೆ.
ಡಾ. ಎಂ ಎಂ. ಕಲಬುರಗಿ ನಂತರ ಲಿಂಗಾಯತ ಧರ್ಮ, ಇತಿಹಾಸದ ಸಂಶೋಧನೆಯ ಸ್ಥಿತಿಗತಿಯನ್ನು ಚರ್ಚಿಸಲು ಒಂದು ದಿನದ ವಿಚಾರ ಸಂಕಿರಣವನ್ನು ಅಕ್ಟೋಬರ್ 18 ಬಸವ ಮೀಡಿಯಾ ಆಯೋಜಿಸಿತ್ತು.
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಶ್ರೀಮಠದ ಆವರಣದಲ್ಲಿ ನಡೆದ ನಾಲ್ಕು ಗೋಷ್ಠಿಗಳಲ್ಲಿ ನಾಡಿನ ಹಿರಿಯ ವಿದ್ವಾಂಸರು, ಯುವ ಸಂಶೋಧಕರು ಭಾಗವಹಿಸಿದ್ದರು.

ಚರ್ಚೆಯಲ್ಲಿ ಸರಕಾರದ ನಿರ್ಲಕ್ಷ್ಯದಿಂದ ಸಂಶೋಧನೆಗೆ ಕ್ಷೀಣಿಸುತ್ತಿರುವ ಸಾಂಸ್ಥಿಕ ಬೆಂಬಲದ ಬಗ್ಗೆ ಕಳವಳ ವ್ಯಕ್ತವಾಯಿತು. ಜೊತೆಗೆ ಲಿಂಗಾಯತದ ಇತಿಹಾಸದ ಅಧ್ಯಯನಕ್ಕೆ ಶಾಸನ, ಹಸ್ತಪ್ರತಿಗಳ ವ್ಯಾಪ್ತಿಯನ್ನು ಮೀರಿ ಮೌಖಿಕ ಇತಿಹಾಸಗಳಂತಹ ಉಪೇಕ್ಷಿತ ವಿಧಾನಗಳ ಬಳಕೆಯ ಅವಶ್ಯಕತೆಯ ಬಗ್ಗೆಯೂ ವ್ಯಾಪಕ ಚರ್ಚೆ ನಡೆಯಿತು.
ಗೋಷ್ಠಿಗಳ ನಂತರ ಹಿರಿಯ ವಿದ್ವಾಂಸರು, ಯುವ ಸಂಶೋಧಕರು ಕರ್ನಾಟಕದ ಧಾರ್ಮಿಕ, ಸಾಂಸ್ಕೃತಿಕ ಇತಿಹಾಸದ ಸಂಶೋಧನೆಯನ್ನು ಸಬಲಪಡಿಸಲು ಶ್ರೀಮಠದ ನೆರವು ಕೋರಿ ಮೂರು ನಿರ್ಣಯ ತೆಗೆದುಕೊಂಡರು.
- ಪ್ರತಿ ವರ್ಷ ಐದು ಯುವ ಸಂಶೋಧಕರಿಗೆ 50,000 ರೂಪಾಯಿಗಳ ವಾರ್ಷಿಕ ಹಣಕಾಸಿನ ಅನುದಾನವನ್ನು ಶ್ರೀಮಠದ ವತಿಯಿಂದ ನೀಡಬಹುದು.
ಐದು ಅನುದಾನಗಳಲ್ಲಿ ಮೂರು ಲಿಂಗಾಯತ ಧರ್ಮ, ಇತಿಹಾಸಗಳ ಸಂಶೋಧಕರಿಗೆ, ಎರಡು ಲಿಂಗಾಯತೇತರ ಮುಖ್ಯವಾಗಿ ಅಹಿಂದ ಸಮುದಾಯಗಳ ಧರ್ಮ, ಸಂಸ್ಕೃತಿ, ಇತಿಹಾಸ ಕ್ಷೇತ್ರಗಳ ಯುವ ಸಂಶೋಧಕರಿಗೆ ನೀಡಬಹುದು.
ಇದರಿಂದ ನಾಡಿನ ಇತಿಹಾಸದ ಸಮಗ್ರ ನೋಟ ಪಡೆಯಲು ಸಾಧ್ಯವಾಗುತ್ತದೆ. ಜೊತೆಗೆ ಎಲ್ಲಾ ಸಮುದಾಯಗಳನ್ನು ಒಳಗೊಳ್ಳುವ ಬಸವಾದಿ ಶರಣರ ಪ್ರಗತಿಪರ ಸಂದೇಶವನ್ನು ಸಮಾಜಕ್ಕೆ ತಲುಪಿಸಿದಂತಾಗುತ್ತದೆ.
- ಕರ್ನಾಟಕದ ಧಾರ್ಮಿಕ, ಸಾಂಸ್ಕೃತಿಕ ಇತಿಹಾಸದ ಅಧ್ಯಯನದ ಬಗ್ಗೆ ಶ್ರೀಮಠದ ಆವರಣದಲ್ಲಿ ವರ್ಷಕ್ಕೆ ಎರಡು ವಿಚಾರ ಸಂಕಿರಣ ಆಯೋಜಿಸಲು ನೆರವಾಗಬಹುದು.
ಇದರಿಂದ ಈ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಸಂಶೋಧಕರು ನಿರಂತರವಾಗಿ ವಿಚಾರ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಈ ಕ್ಷೇತ್ರದ ಸಂಶೋಧನೆಯ ಆದ್ಯತೆಗಳನ್ನು ರೂಪಿಸಲೂ ಸಹಾಯವಾಗುತ್ತದೆ.
- ಪ್ರತಿ ವರ್ಷ ಶರಣ ಸಂಸ್ಕೃತಿ ಉತ್ಸವದ ಸಮಯದಲ್ಲಿ ಲಿಂಗಾಯತ ಸಂಸ್ಕೃತಿ ಸಮ್ಮೇಳನ
ಏರ್ಪಡಿಸಬೇಕು. ಈ ಸಮ್ಮೇಳನಕ್ಕೆ ಪರಿಣಿತ ವಿದ್ವಾಂಸರನ್ನು ಅಧ್ಯಕ್ಷರನ್ನಾಗಿ ನಿಯೋಜಿಸಬೇಕು.
ಅಲ್ಲಿ ಮಂಡಿತವಾದ ಪ್ರಬಂಧಗಳು ಮುಂದಿನ ಶರಣಸಂಸ್ಕೃತಿ ಉತ್ಸವದಲ್ಲಿ ಕೃತಿ ರೂಪದಲ್ಲಿ ಬಿಡುಗಡೆಯಾಗಬೇಕು. ಇದರಿಂದ ಲಿಂಗಾಯತ ಧರ್ಮ ಮತ್ತು ಇತಿಹಾಸ ಕುರಿತಂತೆ ಜನಮಾನಸದಲ್ಲಿ ಒಂದು ಜಾಗೃತಿಯನ್ನು ಮತ್ತು ಒಂದು ಗಟ್ಟಿತನವನ್ನು ಸ್ಥಾಪಿಸಿದಂತಾಗುತ್ತದೆ.
- ಬಸವಣ್ಣನವರ ಆಯ್ದ ವಚನಗಳನ್ನು ಜನಗೀತೆಯಾಗಿ ಪರಿಗಣಿಸಲು ಸರಕಾರದ ಮೇಲೆ ಒತ್ತಡ ತರಲು ಶ್ರೀಮಠ ನೆರವಾಗಬೇಕು.
“ಶ್ರೀಮಠ ಭವ್ಯ ಐತಿಹಾಸಿಕ ಹಿನ್ನಲೆಯುಳ್ಳ, ಬಸವ ಬದ್ಧತೆಯ ಸಂಸ್ಥೆಯಾಗಿದೆ. ತಾವುಗಳು ಈ ನೆರವು ನೀಡಿದಲ್ಲಿ ಕರ್ನಾಟಕದ ಧಾರ್ಮಿಕ ಇತಿಹಾಸದ ಹೊಸ ಮೇಲೆ ಬೆಳಕು ಚೆಲ್ಲಲು ಸಾಧ್ಯ. ಎಂ ಎಂ ಕಲಬುರ್ಗಿ ಅವರ ನಂತರ ಈ ಕ್ಷೇತ್ರದ ಸಂಶೋಧನೆಯನ್ನು ವ್ಯವಸ್ಥಿತವಾಗಿ ಮುಂದುವರೆಸಲು ಸಾಧ್ಯವಾಗುತ್ತದೆ,” ಎಂದು 60ಕ್ಕೂ ಹೆಚ್ಚು ವಿದ್ವಾಂಸರು ಆಡಳಿತ ಮಂಡಳಿಗೆ ಮನವಿ ಮಾಡಿದರು.
ಬಸವ ಮೀಡಿಯಾದ ಟ್ರಸ್ಟೀ ಎಚ್ ಎಂ ಸೋಮಶೇಖರಪ್ಪ ಮಂಡಿಸಿದ ನಿರ್ಣಯಗಳಿಗೆ ಸಭೆಯಲ್ಲಿ ಒಕ್ಕೊರಲ ಅನುಮೋದನೆ ದೊರೆಯಿತು.
ಕಾರ್ಯಕ್ರಮದ ನಂತರ ಬಸವ ಮೀಡಿಯಾದ ಛೇರ್ಮನ್ ಟಿ ಆರ್ ಚಂದ್ರಶೇಖರ್ ಮತ್ತು ಸೋಮಶೇಖರಪ್ಪ ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಪೂಜ್ಯ ಡಾ. ಬಸವ ಕುಮಾರ ಸ್ವಾಮೀಜಿ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.
ಆಡಳಿತ ಮಂಡಳಿ ಸಭೆಯಲ್ಲಿ ಮನವಿಯನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಸ್ವಾಮೀಜಿ ತಿಳಿಸಿದರು.

ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ
ಶ್ರೀ ಮಠದಿಂದ ಈ ಸಂಶೋಧನೆ ಕಾರ್ಯ ನಡೆಯಲು ಮಠದ ಹಿತೖಷಿಗಳು ಸಹಾಯಹಸ್ತವನ್ನು ಮಾಡಬೇಕು. ಇದು ಹಿರಿಯಮಠದ ಕೆಲಸ ವಾಗಬೇಕು.