ಬಸವ ಸೇವಾರತ್ನ ಪ್ರಶಸ್ತಿ ಪ್ರದಾನ
ಮೈಸೂರು :
ಬಸವ ಭಾರತ ಪ್ರತಿಷ್ಠಾನ, ಮೈಸೂರು ಹಾಗೂ ಬಸವಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಬಸವ ಭಾರತ ಪತ್ರಿಕೆಯ ಸಂಪಾದಕ, ಮಾದಹಳ್ಳಿ ಗ್ರಾಮದ ಶಿವರುದ್ರಪ್ಪ ಅವರ ಮಹಾಮನೆಯಲ್ಲಿ ಕಲ್ಯಾಣ ಕ್ರಾಂತಿ ವಿಜಯೋತ್ಸವ, ಶರಣ ಗ್ರಂಥಾಲಯ ಉದ್ಘಾಟನೆ, ಬಸವ ಸೇವಾರತ್ನ ಪ್ರಶಸ್ತಿ ಪ್ರದಾನ ಹಾಗೂ ಫ. ಗು. ಹಳಕಟ್ಟಿಯವರ ಶಿವಾನುಭಾವ ಪತ್ರಿಕೆಯ ಶತಮಾನೋತ್ಸವದ ಚಿಂತನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಸೋಮಹಳ್ಳಿ ಮಠದ ನಿಯೋಜಿತ ಸ್ವಾಮೀಜಿಗಳಾದ ಬಸವಯೋಗಿಪ್ರಭು ಸ್ವಾಮೀಜಿಯವರು, ಹೊರಗಡೆಯ ಶತ್ರುಗಿಂತ ಒಳಗಡೆಯ ಶತ್ರುಗಳು ಬಹಳ ಅಪಾಯ ಎಂದು ಹೇಳಿದರು. ನಮ್ಮೊಳಗಿನ ಕೋಪ, ಅಹಂಕಾರ, ದುರಾಸೆ ಮತ್ತು ಅರಿಷಡ್ವರ್ಗಗಳನ್ನು ಗೆದ್ದು ಸಮಾಧಾನದ ಬದುಕನ್ನು ಬದುಕಿದವನೇ ಶರಣನಾಗಲು ಸಾಧ್ಯ ಎಂದು ಹೇಳಿದರು.

ಶರಣ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ವಿಧಾನ ಪರಿಷತ್ ಸದಸ್ಯರಾದ ಡಾ. ತಿಮ್ಮಯ್ಯ, ಅವರು ಬಸವಾದಿ ಶರಣರು ಕಟ್ಟಿದ ಧರ್ಮ ಸಮಾನತೆಯ ಧರ್ಮ. ಮಾದರ ಚೆನ್ನಯ್ಯ, ಹರಳಯ್ಯನಂತಹ ಮಹಾನುಭವರನ್ನು ಸೇರಿಸಿ ಕಟ್ಟಿದ ಧರ್ಮವಾಗಿದೆ. ನಮ್ಮ ತಂದೆ ತಾಯಿಗಳು ಕೂಡ ದೀಕ್ಷೆ ಪಡೆದು ಲಿಂಗಪೂಜೆ ಮಾಡಿಕೊಳ್ಳುತಿದ್ದರು ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದ ಜತ್ತಿ, ಬಸವಯೋಗ ಸಾಧನೆಯಿಂದ ಮಾನವನ ಅರಿವು ವಿಕಾಸವಾಗಿ ಶರಣನಾಗಬಹುದು. ಪ್ರತಿಯೊಬ್ಬರು ಇಷ್ಟಲಿಂಗ ಧರಿಸಬೇಕು ಎಂದು ಹೇಳಿದರು. ಸ್ವಚ್ಛ ಭಾರತ ನಿರ್ಮಾಣ ಮಾಡಬೇಕು ಎಂದರೆ ಬಸವಾದಿ ಶರಣರ ವಿಚಾರ ಚಿಂತನೆಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದರು. ಬಸವ ಭಾರತ ಪತ್ರಿಕೆ ಸಂಪಾದಕ ಶಿವರುದ್ರಪ್ಪ ಅವರ ಕಾರ್ಯವನ್ನು ಶ್ಲಾಘನೆ ಮಾಡಿದರು.
ಮೈಸೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ದೇಚಿ ದೇವರಾಜು ಚಿಕ್ಕಹಳ್ಳಿ ಮಾತನಾಡಿ, ಫ. ಗು. ಹಳಕಟ್ಟಿ ಅವರು ಮನೆ, ಮಠಗಳಲ್ಲಿದ್ದ ವಚನಗಳನ್ನು ಸಂಗ್ರಹಿಸಿ 1921 ರಲ್ಲಿ ಮಂಗಳೂರ್ ಬಾಶಲ್ ಮಿಷನ್ ಪ್ರೆಸ್ ಗೆ ಪ್ರಿಂಟ್ ಮಾಡಲು ಕಳುಹಿಸಿಕೊಡುತ್ತಾರೆ. ಬೈಬಲ್ಲನ್ನು ಮೀರಿಸುವ ವಿಚಾರ ವಚನ ಸಾಹಿತ್ಯದಲ್ಲಿ ಕಂಡುಬಂದ ಕಾರಣ ವಚನಗಳನ್ನು ಪ್ರಿಂಟ್ ಮಾಡದೇ ಅವರು ವಾಪಾಸ್ ಕಳುಹಿಸುತ್ತಾರೆ.
ನಂತರ ಫ. ಗು. ಹಳಕಟ್ಟಿ ತಮ್ಮ ಮನೆಯನ್ನು ಮಾರಿ ಹಿತಚಿಂತಕ ಪ್ರೆಸ್ ಆರಂಭಿಸಿ, 1926 ರಲ್ಲಿ ಶಿವನುಭಾವ ತ್ರೈಮಾಸಿಕ ಪತ್ರಿಕೆ ಆರಂಭಿಸಿ, ನಂತರ ದ್ವೈಮಾಸಿಕ, ನಂತರ ಮಾಸಿಕ ಪತ್ರಿಕೆ ತೆಗೆದು ಶರಣ ವಚನಗಳು ಶರಣ ಚರಿತ್ರೆ ಎಲ್ಲೆಡೆ ಪಸರಿಸಲು ಅಪಾರ ಶ್ರಮಪಟ್ಟು ಶಿವನುಭಾವ ಪತ್ರಿಕೆ ನಡೆದು ಬಂದ ಹಾದಿಯನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಹಲ್ಲರೆ ಶಿವಬುದ್ಧಿ ಶರಣ ಕ್ರಾಂತಿ ಬಗ್ಗೆ ಮಾತನಾಡಿದರು. ರಾಷ್ಟ್ರೀಯ ಬಸವದಳದ ರತ್ನಮ್ಮ ಜಯಣ್ಣ ಬಸವ ಧರ್ಮ ರಕ್ಷಣೆಗೆ ಶರಣೆಯರ ಪಾತ್ರದ ಬಗ್ಗೆ ಬಗ್ಗೆ ಹೇಳಿದರು.
ರತ್ನಮ್ಮ ಜಯಣ್ಣ ಅವರಿಗೆ ಕಲ್ಯಾಣ ಕ್ರಾಂತಿ ಜ್ಯೋತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂಜನಗೂಡು ಮಕ್ಕಳ ಮನೆ ಅನುರಾಗ ಟ್ರಸ್ಟ್ ನ ಅಧ್ಯಕ್ಷರಾದ ಸೋಮಶೇಖರ್ ಹಾಗೂ ಅಕ್ಕಮಹಾದೇವಿ ಮಹಿಳಾ ವಿದ್ಯಾರ್ಥಿ ನಿಲಯದ ಸಂಸ್ಥಾಪಕ ಚೆನ್ನಪ್ಪ ಅವರಿಗೆ ಬಸವ ಸೇವಾ ರತ್ನ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸದಾನಂದಮೂರ್ತಿ ಆರ್. ವಿ . ಎಸ್, ದೊಡ್ಡನಹುಂಡಿ ರಾಜಣ್ಣ, ಕೆ. ಎಸ್. ಪ್ರಕಾಶ ಅಧ್ಯಕ್ಷರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೈಸೂರು, ಬಸವ ಭಾರತ ಸಂಪಾದಕ ಶಿವರುದ್ರಪ್ಪ, ರೂಪ ಶಿವರುದ್ರಪ್ಪ ಉಪಸ್ಥಿತರಿದ್ದರು ಮತ್ತಿತರರು ಉಪಸ್ಥಿತರಿದ್ದರು.
