ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶಕ್ಕೆ ಸರ್ಕಾರ ಅನುಮತಿ ನಿರಾಕರಿಲು ಆಗ್ರಹ
ಗಂಗಾವತಿ :
ನವ್ಹೆಂಬರ್ 3 ರಂದು ಗಂಗಾವತಿಯಲ್ಲಿ ಆಯೋಜಿಸಿರುವ “ಬಸವಾದಿ ಶಿವಶರಣರ ಹಿಂದೂ ಸಮಾವೇಶ”ಕ್ಕೆ ಸರ್ಕಾರ ಅನುಮತಿ ನಿರಾಕರಿಸಬೇಕೆಂದು ಬಸವಪರ ಸಂಘಟನೆಗಳು ಗುರುವಾರ ಆಗ್ರಹಿಸಿದವು.
ಬಸ್ ನಿಲ್ದಾಣದ ಹತ್ತಿರವಿರುವ ಬಸವೇಶ್ವರ ಪ್ರತಿಮೆ ಎದುರು ಪ್ರತಿಭಟನೆ ಮಾಡಿ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಸಲ್ಲಿಸಿದ ಮನವಿ ಪತ್ರದಲ್ಲಿ, ಕಳೆದ ವರ್ಷ (2025) ಕರ್ನಾಟಕದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕಾದಂತಹ ಬೆಳವಣಿಗೆ ನಡೆಯಿತು. “ಬಸವ ಸಂಸ್ಕೃತಿ ಅಭಿಯಾನ”ದ ಹೆಸರಿನಲ್ಲಿ ಕರ್ನಾಟಕದ ಪ್ರತಿ ಊರಲ್ಲಿಯೂ ಬಸವತತ್ವದ ಪ್ರಸಾರ ಮಾಡಿ, ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುವ ಪ್ರಯತ್ನ ನಡೆದಿತ್ತು.

ಅಭಿಯಾನ ನಡೆದ ಯಾವುದೇ ಊರಲ್ಲಿ ಶಾಂತಿ ಭಂಗವಾಗದಂತೆ ಸ್ವಾಮೀಜಿಗಳು, ಬಸವ ಭಕ್ತರು, ಸಾರ್ವಜನಿಕರು, ವಿದ್ಯಾರ್ಥಿಗಳು ಸಹಕರಿಸಿದರು. ಕೊನೆಗೆ ಸಮಾರೋಪ ಸಮಾರಂಭವು ಬೆಂಗಳೂರು ಅರಮನೆ ಮೈದಾನದಲ್ಲಿ 300ಕ್ಕೂ ಹೆಚ್ಚಿನ ಎಲ್ಲಾ ಸಮಾಜದ ಸ್ವಾಮಿಗಳು ಭಾಗವಹಿಸಿದ ಸಭೆಗೆ ಅಂದಿನ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯನವರು ಭಾಗವಹಿಸಿ ಮೌಲಿಕವಾದ ಮಾತುಗಳನ್ನಾಡಿದ್ದರು.
ಸುಮಾರು ಐದು ಲಕ್ಷ ಬಸವ ಭಕ್ತರು, ಅಭಿಮಾನಿಗಳು ಭಾಗವಹಿಸಿದರು ಶಾಂತಿಯಿಂದ ನಡೆದ ಸಮಾರಂಭ ಅದಾಗಿತ್ತು.

ಈ ಸಮಾರಂಭ ನಡೆದ ಕೆಲ ತಿಂಗಳಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯಲ್ಲಿಯ ವಿರಕ್ತ ಮಠಾದೀಶ್ವರರ ಪೀಠಾಧಿಕಾರದಲ್ಲಿ ಭಾಗವಹಿಸಿದ ಕನ್ನೇರಿ ಮಠದ ಅಧ್ಯಕ್ಷ ಕಾಡಸಿದ್ದೇಶ್ವರ ಮಠದ ಸ್ವಾಮಿಗಳು ಭಾಷಣದಲ್ಲಿ ಮಾತನಾಡುತ್ತಾ, ಬೆಂಗಳೂರಿನಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನ “ಅದೊಂದು ನಾಟಕ ಕಂಪನಿ ಎಂದು ಹೀಯಾಳಿಸಿದ್ದಲ್ಲದೆ, ಎಲ್ಲಾ ಸ್ವಾಮಿಗಳಿಗೂ ಆ ಸೂ …ಮಕ್ಕಳಿಗೆ ಹೇಳಿದ್ರೆ ನಾನೇ ಹೇಳಬೇಕು, ಅವರಿಗೆ ಮೆಟ್ಟು ಮೆಟ್ಟಲೇ ಹೊಡಿಬೇಕು” ಎಂದು ಹೇಳಿದ್ದು ಕರ್ನಾಟಕದಾದ್ಯಂತ ವಿಡಿಯೋ ವೈರಲ್ ಆಗಿದ್ದಲ್ಲದೇ, ಸ್ವಾಮಿಗಳ ಈ ಮಾತನ್ನು ಎಲ್ಲರೂ ಖಂಡಿಸಿದ್ದು, ಬೆಂಗಳೂರು ಬಸವ ಸಂಸ್ಕೃತಿ ಅಭಿಯಾನದಲ್ಲಿ ಕೇಳದೆ ಇರುವ ವಿಷಯಗಳನ್ನು ಹೇಳಿ ಅಲ್ಲಿಯೂ ಜನರ ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ.
ತದನಂತರ ಧಾರವಾಡ ಮತ್ತು ವಿಜಯಪುರಕ್ಕೆ ಬೇರೆ ಯಾವುದೋ ಕಾರ್ಯಕ್ರಮಕ್ಕೆ ಬರಲಿದ್ದಂತಹ ಕನ್ನೇರಿ ಸ್ವಾಮಿಗಳು ಅಲ್ಲಿಯೂ ಅಶಾಂತಿಯುಂಟು ಮಾಡುತ್ತಾರೆಂದು ಶಾಂತಿ ಬಯಸಿದ ಅಲ್ಲಿಯ ಕೆಲವರು ಶ್ರೀಗಳ ಪ್ರವೇಶ ನಿಷೇಧಿಸುವಂತೆ ಒತ್ತಾಯಿಸಿ, ಆಯಾ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು. ಪರಿಸ್ಥಿತಿಯ ಸೂಕ್ಷ್ಮತೆಯನ್ನು ಗ್ರಹಿಸಿದ ಜಿಲ್ಲಾಧಿಕಾರಿಗಳು ಧಾರವಾಡ ಮತ್ತು ವಿಜಯಪುರ ಪ್ರವೇಶವನ್ನು ನಿರ್ಬಂಧಿಸಿದರು.
ಈ ಆದೇಶವನ್ನು ಪ್ರಶ್ನಿಸಿ ಕಲಬುರ್ಗಿ ಹೈಕೋರ್ಟ್ ಪೀಠಕ್ಕೆ ಕನ್ನೇರಿ ಶ್ರೀಗಳು ಅಪೀಲು ಹೋದರು. ಪರಿಸ್ಥಿತಿಯನ್ನು ಸಮಗ್ರವಾಗಿ ಪರಾಮರ್ಶಿಸಿದ ಕಲಬುರ್ಗಿ ಹೈಕೋರ್ಟ್ ಪೀಠವು ಜಿಲ್ಲಾಧಿಕಾರಿಗಳ ಆದೇಶವನ್ನು ಎತ್ತಿ ಹಿಡಿಯಿತು. ಇದಕ್ಕೂ ಅಸಮಾಧಾನಗೊಂಡ ಕನ್ನೇರಿ ಸ್ವಾಮಿಗಳು ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದರು.
ಸುಪ್ರೀಂ ಕೋರ್ಟ್ ಕೂಡಾ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯಿತು. ಕನ್ನೇರಿ ಸ್ವಾಮಿಗಳಿಗೆ “ನೀನು ಒಳ್ಳೆಯ ಪ್ರಜೆಯಲ್ಲ, ಮಠದಲ್ಲಿ ಪೂಜೆ, ಪ್ರಾರ್ಥನೆ ಮಾಡಿಕೊಂಡಿರು” ಎಂದು ಛೀಮಾರಿ ಹಾಕಿತು.

ಇಷ್ಟಕ್ಕೂ ಸುಮ್ಮನಾಗದ ಈ ಕನ್ನೇರಿ ಸ್ವಾಮಿ, ಬಬಲೇಶ್ವರ, ಶಹಾಪುರ, ಕಲಬುರ್ಗಿಯಲ್ಲಿ ಸಮಾವೇಶದ ಮುಖಾಂತರ ಸಂಬಂಧಪಟ್ಟವರಿಗೆ ಅವಾಚ್ಯ ಪದ ಪ್ರಯೋಗದ ತನ್ನ ಹಳೇ ಚಾಳಿಯನ್ನು ಮುಂದುವರೆಸಿರುವನು.
ಅದರಲ್ಲಿಯೂ ಬಸವಕಲ್ಯಾಣದಲ್ಲಿ ನಡೆದ ಸಮಾವೇಶದಲ್ಲಿ ಅಲ್ಲಿಯ ತಹಶೀಲ್ದಾರರೇ ಈ ಘಟನೆಗೆ ಕೋರ್ಟ್ನಲ್ಲಿ ಪ್ರತಿವಾದಿಗಳಾಗಿ ವಾದ ಮಂಡಿಸಿದ್ದರೂ, ನ್ಯಾಯಾಲಯವು ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಕನ್ನೇರಿ ಸ್ವಾಮಿಗಳು ಭಾಗವಹಿಸಿದರೂ ಸಭೆಯನ್ನುದ್ದೇಶಿಸಿ ಮಾತನಾಡಬಾರದು ಎಂದು ಕೋರ್ಟ್ ಆದೇಶಿಸಿತ್ತು.
ಗದುಗಿನಲ್ಲಿ ನಡೆದ ಸಮಾವೇಶದಲ್ಲಿ ಮಹಿಳಾ ಹೋರಾಟಗಾರ್ತಿ ಮೀನಾಕ್ಷಿ ಬಾಳಿ ಎಂಬುವವರಿಗಂತೂ ತುಂಬಿದ ಸಭೆಯಲ್ಲಿ “ಮೀನಾಕ್ಷಿ ಬೋಳಿ” ಎಂದು ತನ್ನ ಹೊಲಸು ನಾಲಿಗೆಯ ಅನಾವರಣ ಮಾಡಿದ್ದಾನೆ.

ಇಡೀ ಭಾರತದಲ್ಲಿಯೇ “ಸಂತ”ನೆಂದು ಪ್ರಖ್ಯಾತರಾದ ವಿಜಯಪುರ ಪೂಜ್ಯ ಲಿಂಗೈಕ್ಯ ಸಿದ್ದೇಶ್ವರ ಸ್ವಾಮಿಗಳ ಶಿಷ್ಯನೆಂದು ಹೇಳಿಕೊಳ್ಳುವ ಈ ಕನ್ನೇರಿ ಸ್ವಾಮಿ ಅವರ ಪಾದ ಧೂಳಿಗೂ ಸಮವಲ್ಲ. ಏಕೆಂದರೆ, ಒಬ್ಬ ಮಗುವಿಗೂ ನೋವಾಗದಂತೆ ಇದ್ದು ಬಾಳಿ ಬೆಳಕಾದವರು ಸಿದ್ದೇಶ್ವರ ಶ್ರೀಗಳು.
ಮತ್ತೊಂದು ಕಡೆ ಈ ಕನ್ನೇರಿ ಶ್ರೀ ಮಾತನಾಡುತ್ತಾ “ಸಿದ್ದೇಶ್ವರ ಅಪ್ಪಗಳು ನನ್ನ ಕುರಿತು ನಿನ್ನ ನಾಲಿಗೆ ಬಹಳ ಹರಿತ ಇದೆ, ಅದಕ್ಕೆ ನೀನು ಕಡಿವಾಣ ಹಾಕಿ ಜನರಲ್ಲಿ ಭಕ್ತಿ ಬರುವಂತೆ ಮಾಡು” ಎಂದು ಹೇಳಿರುವರೆಂದು ಒಂದು ಸಂದರ್ಭದಲ್ಲಿ ತಾನೇ ಹೇಳಿರುವನು. ಅಂದರೆ ಸಿದ್ದೇಶ್ವರ ಪೂಜ್ಯರು ನಿನ್ನ ನಾಲಿಗೆ ಹರಿತ ಇದೆ ಎಂದರೆ, ನಿನ್ನ ನಾಲಿಗೆಗೆ ಸಂಸ್ಕಾರ ಇಲ್ಲವೆಂದು ಸಿದ್ದೇಶ್ವರ ಶ್ರೀಗಳೇ ಹೇಳಿದ್ದಾರೆ. ಅಂದರೆ ಸುಪ್ರೀಂ ಕೋರ್ಟ್ಗೂ, ಸಿದ್ದೇಶ್ವರ ಸ್ವಾಮಿಗಳಿಗೂ ಗೌರವ ಕೊಡದ ಕನ್ನೇರಿ ಶ್ರೀಗಳು ಗಂಗಾವತಿಗೂ ಆಗಮಿಸಿ ಇಲ್ಲಿಯೂ ಅಶಾಂತಿಯನ್ನು ಸೃಷ್ಟಿಸುವವರಿದ್ದಾರೆ.
ಹೈಕೋರ್ಟ್, ಸುಪ್ರೀಂಕೋರ್ಟ್ ಆದೇಶಗಳನ್ನು ಧಿಕ್ಕರಿಸಿದ ಇವರು ಸಂವಿಧಾನಕ್ಕೂ ಅಗೌರವ ತೋರಿದ್ದಲ್ಲದೆ “ನ್ಯಾಯಾಂಗ ನಿಂದನೆ ಮಾಡುತ್ತಾರೆ.”
ಒಂದು ಕಾಲದಲ್ಲಿ ಭಾವೈಕ್ಯತೆಗೆ ಹೆಸರಾಗಿದ್ದಂತಹ ಗಂಗಾವತಿಯು ಇಂದು “ಅತೀ ಸೂಕ್ಷ್ಮ ಪ್ರದೇಶ” ಎಂದು ಘೋಷಿಸಿ ಇಲ್ಲಿಯ ನಾಗರಿಕರು ತಲೆತಗ್ಗಿಸುವಂತಾಗಿದೆ.
ಹಿಂದೆ ಪಂಚಾಪೀಠಾಧಿಪತಿಗಳ ಕಾರ್ಯಕ್ರಮ, ಸಿದ್ದಗಂಗಾ ಪೂಜ್ಯರಾದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮಿಗಳ ಗುರುವಂದನಾ ಕಾರ್ಯಕ್ರಮ ಮತ್ತು ರಂಜಾನ್ ನಂತರ ಇಲ್ಲಿ ಹಿಂದೂ-ಮುಸಲ್ಮಾನರು ಕೂಡಿ ಆಚರಿಸುತ್ತಿದ್ದ ಈದ್ ಮಿಲಾದ್ ಕಾರ್ಯಕ್ರಮ, ಗದಗಿನ ಲಿಂಗೈಕ್ಯ ಪುಟ್ಟರಾಜ ಗವಾಯಿಗಳ ತುಲಾಭಾರದ ಕಾರ್ಯಕ್ರಮ ಮತ್ತು ಈ ಹಿಂದೆ ಕನ್ನಡದಲ್ಲಿ ಕುರಾನ್ ಪ್ರವಚನ ಮತ್ತು ಇತ್ತೀಚಿಗೆ ಮಹರ್ಷಿ ವಾಲ್ಮೀಕಿಯವರ ರಾಮಾಯಣದಲ್ಲಿಯ ಕಿಷ್ಕಿಂಧ ಕಾಂಡ ಪ್ರವಚನಗಳು ಅತ್ಯಂತ ವೈಭವೋಪೇತವಾಗಿ ನಡೆದು, ಗಂಗಾವತಿ ರಾಜ್ಯದಲ್ಲಿಯೇ ಭಾವೈಕ್ಯತೆಗೆ ಮಾದರಿ ನಗರವಾಗಿರುವುದು. ಇದಕ್ಕೆ ಇಲ್ಲಿಯ ಆರಾಧ್ಯ ದೈವ ಪೂಜ್ಯ ಶ್ರೀ ಚನ್ನಬಸವ ಶಿವಯೋಗಿಗಳು ಹರಸಿ ಹಾರೈಸಿದ ಪ್ರಭಾವವೂ ಇದ್ದೀತು.
ಇಂತಹ ಗಂಗಾವತಿಯಲ್ಲಿ ಸಾಮರಸ್ಯವನ್ನು ಕೆಡಿಸುವ ಈ ಕನ್ನೇರಿ ಸ್ವಾಮಿ ಬಂದು ಸ್ವಾಮಿಗಳಿಗೆ, ಬಸವ ಭಕ್ತರಿಗೆ, ಶಾಂತಿ ಬಯಸುವ ಪ್ರತಿಯೊಬ್ಬರಿಗೂ ಬಾಯಿಗೆ ಬಂದಂತೆ ಬೈಯಲೆಂದೇ ಆಗಮಿಸುತ್ತಿದ್ದಾನೆ.
ಕಾರಣ ತಾವುಗಳು ಇದೆಲ್ಲವನ್ನೂ ಗಮನಿಸಿ ಕೋಮು ಸೌಹಾರ್ದತೆಯ ಹಿನ್ನೆಲೆಯಲ್ಲಿ ಇಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಕೊಡಬಾರದಾಗಿ ನಾವುಗಳು ತಮ್ಮಲ್ಲಿ ಅತ್ಯಂತ ವಿನಮ್ರವಾಗಿ ಪ್ರಾರ್ಥಿಸಿಕೊಳ್ಳುತ್ತೇವೆ ಎಂದು ಮನವಿ ಪತ್ರದಲ್ಲಿ ಆಗ್ರಹಿಸಲಾಗಿದೆ.
ಕೆ. ಬಸವರಾಜ, ಎ.ಕೆ. ಮಹೇಶಕುಮಾರ, ದಿಲೀಪಕುಮಾರ ವಂದಾಲ, ಜಿ. ನಾಗರಾಜ, ಹನುಮಂತಪ್ಪ ಸರಿಗಮ, ನಿರುಪಾದಿ ಹೆಚ್., ಓ.ಎಂ. ಬಳ್ಳೊಳ್ಳಿ, ಚನ್ನಬಸಮ್ಮ ಕಂಪ್ಲಿ, ರತ್ನಮ್ಮ ಅರೆಗಾರ, ಶ್ರೀಮತಿ ಸಿ. ಮಹಾಲಕ್ಷ್ಮಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬಸವಪರ ಸಂಘಟನೆಗಳ ಒಕ್ಕೂಟ, ಬಸವಕೇಂದ್ರ, ರಾಷ್ಟ್ರೀಯ ಬಸವದಳ, ಶರಣ ಸಾಹಿತ್ಯ ಪರಿಷತ್ತು, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ಬಸವ ನೀಲಾಂಬಿಕಾ ಮಹಿಳಾ ಸಂಘ, ಕದಳಿ ಮಹಿಳಾ ವೇದಿಕೆ, ರಾಜ್ಯ ಗಣಾಚಾರ ದಳ, ರಾಷ್ಟ್ರೀಯ ವೀರ ಗಣಾಚಾರಿ ಸಂಘ, ಬೆಂಗಳೂರು, ಲಿಂಗಾಯತ ಮಹಾಸಭಾ, ಲಿಂಗಾಯತ ಹಡಪದ ಅಪ್ಪಣ್ಣ ಸಮಾಜ, ಜಿಲ್ಲಾ ಘಟಕ ಕೊಪ್ಪಳ ಮತ್ತು ತಾಲೂಕು ಘಟಕ ಗಂಗಾವತಿ ಈ ಎಲ್ಲಾ ಸಂಘಟನೆಗಳ ಪ್ರಮುಖರು, ಸದಸ್ಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
