ಶರಣರ ತ್ಯಾಗ, ಬಲಿದಾನ ಮರೆಯಲು ಸಾಧ್ಯವಿಲ್ಲ
ಭಾಲ್ಕಿ :
ಹಿರೇಮಠ ಸಂಸ್ಥಾನದಲ್ಲಿ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ನಿಮಿತ್ಯ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರ ಸಾನಿಧ್ಯದಲ್ಲಿ ವಚನ ಸಾಹಿತ್ಯ ಪಲ್ಲಕ್ಕಿ ಪೂಜೆ ಜರುಗಿತು.

ಈ ಸಂದರ್ಭದಲ್ಲಿ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡುತ್ತ, ಶರಣರ ತ್ಯಾಗ, ಬಲಿದಾನ ಮರೆಯಲಿಕ್ಕೆ ಸಾಧ್ಯವಿಲ್ಲ. ವಚನ ಸಾಹಿತ್ಯ ರಕ್ಷಣೆಗಾಗಿ ಶರಣರು ತಮ್ಮ ಪ್ರಾಣವನ್ನು ನೀಡಿದರು. ಕಲ್ಯಾಣದಿಂದ ಉಳವಿಯವರೆಗೆ ವಚನ ಕಟ್ಟುಗಳು ಹೊತ್ತುಕೊಂಡು ಸೈನಿಕರ ಜೊತೆ ಹೋರಾಡಿ ವಚನ ಸಾಹಿತ್ಯ ಉಳಿಸಿದರು.
ಅವರು ಅಂದು ಈ ರೀತಿಯ ಕಾರ್ಯ ಮಾಡಿರುವುದರಿಂದಲೇ ಇಂದು ವಚನ ಸಾಹಿತ್ಯ ನಮಗೆ ದೊರೆಕಿದೆ. ಅದಕ್ಕೆ ನಾವು ವಚನಗಳ ಅಧ್ಯಯನ ಮಾಡಬೇಕು. ವಚನಪ್ರಜ್ಞೆ ಬೆಳೆಸಿಕೊಳ್ಳಬೇಕು. ವಚನ ಮೌಲ್ಯಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಆಶೀರ್ವಚನ ನೀಡಿದರು.
ಪೂಜ್ಯ ಗುರುಬಸವ ಪಟ್ಟದ್ದೇವರು, ಮಹಾಲಿಂಗ ಮಹಾಸ್ವಾಮಿಗಳು, ಶಿವಬಸವ ಸ್ವಾಮಿಗಳು ಹಾಗೂ ಸಿದ್ಧಬಸವ ಸ್ವಾಮಿಗಳು ಸಮ್ಮುಖ ವಹಿಸಿದ್ದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ಸಚಿವರಾದ ಈಶ್ವರ ಖಂಡ್ರೆ ಅವರು ಪಲ್ಲಕಿ ಪೂಜೆ ನೆರವೇರಿಸಿ, ವಚನ ಪಠಣ ಮಾಡಿದರು. ವಿಶ್ವಗುರು ಬಸವಣ್ಣನವರ ಕಳಬೇಡ ಕೊಲಬೇಡ ವಚನ ಜನರಿಂದ ಹೇಳಿಸಿದರು.
ಪ್ರಕಾಶ ಖಂಡ್ರೆ ಎನಗಿಂತ ಕಿರಿಯರಿಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಎಂದು ವಚನ ಹೇಳಿಸಿದರು. ಸುಭಾಷ ಕಾರಾಮುಂಗೆ, ಕಿರಣ ಖಂಡ್ರೆ, ಬಸವರಾಜ ಮರೆ, ರಾಜಕುಮಾರ ಹೊಸದೊಡ್ಡೆ, ಸಂತೋಷ ಬಿ.ಜಿ.ಪಾಟೀಲ, ಮಲ್ಲಮ್ಮ ಆರ್. ಪಾಟೀಲ, ಸುನೀಲ ಹೊನ್ನಾಳೆ ಮುಂತಾದವರು ಉಪಸ್ಥಿತರಿದ್ದರು.
ಭವಾನಿ ಸಂತೋಷ, ಹರ್ಷಿತಾ, ವೈಷ್ಣವಿ, ಆರಾಧ್ಯ ಈ ವಿದ್ಯಾರ್ಥಿಗಳಿಂದ ವಚನ ಪಠಣ ನಡೆಯಿತು. ರಾಜು ಜುಬರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಕ ಠಮಕೆ ನಿರೂಪಿಸಿದರು.

