ರಾಯಚೂರು :
ನಗರದ ಬಸವಕೇಂದ್ರದ ಅಕ್ಕನ ಬಳಗದವರಿಂದ ಬಳಗದ ಅಧ್ಯಕ್ಷೆ ಶರಣೆ ಜಗದೇವಿ ಚನ್ನಬಸವಣ್ಣ ಇವರ ನೇತೃತ್ವದಲ್ಲಿ ವೆಂಕಟೇಶ್ವರ ಕಾಲೊನಿಯ ನಿರ್ಮಲ ನಾಗನಗೌಡ ಕುಪ್ಪಿ ಇವರ ಮನೆಯಲ್ಲಿ ನವರಾತ್ರಿಯ ಆರನೇ ದಿನ ಶಿವಶರಣೆ ಬೋಂತಾದೇವಿ ಅವರ ಕುರಿತು ಅನುಭಾವ ಚಿಂತನೆ ನಡೆಯಿತು.
ಶರಣೆ ಬೋಂತಾದೇವಿ ಬಗ್ಗೆ ಅನ್ನಪೂರ್ಣ ಮೇಟಿ ಮಾತನಾಡಿ, ಶರಣೆಯ 5 ವಚನಗಳು ಸಿಕ್ಕಿದ್ದು ಆಕೆ ಕಾಶ್ಮೀರದ ರಾಜಮನೆತನದವರಾಗಿದ್ದು ರಾಜವೈಭವ ತೊರೆದು ಕಲ್ಯಾಣಕ್ಕೆ ಬಂದವರಾಗಿದ್ದಾರೆ.
ಅಲ್ಲದೆ ಅವರಲ್ಲಿ ಶಿವಭಕ್ತಿನಿಷ್ಠೆ ನೆಲೆಗೊಂಡು ವೈರಾಗ್ಯದ ಪಥದತ್ತ ಸಾಗಿ ಶರಣೆ ಅನಿಸಿಕೊಂಡರು. ಅವರ ವಚನದ ಅಂಕಿತನಾಮ ‘ಬಿಡಾಡಿ’ ಎಂಬುದಾಗಿದೆ ಎಂದು ತಿಳಿಸಿದರು.

ಹೆಣ್ಣೆಂದರೆ ಕೇವಲ ಹೆರುವ ಯಂತ್ರ ಅಥವಾ ಗರ್ಭಕೋಶ ಮಾತ್ರವಲ್ಲ ಅವಳೊಂದು ಜ್ಞಾನಕೋಶ ಎಂಬುದನ್ನು ಮನಗಂಡ ಶರಣರ ತಿಳುವಳಿಕೆಯ ಫಲವಾಗಿಯೇ 12 ನೇ ಶತಮಾನದಲ್ಲಿ ಶರಣೆಯರು ಎಲ್ಲಾ ಬಂಧನಗಳಿಂದ ಹೊರಬಂದು, ವೈಚಾರಿಕತೆಯ ಬೆಳಕನ್ನು ಅರಿವಿನ ಮಹಾಮನೆಯ ಮೂಲಕ ಬೆಳಗಿಸಿದರು ಎಂದು ಅಭಿಪ್ರಾಯಪಟ್ಟರು.
ಶಿವಯೋಗದ ಪ್ರಾತ್ಯಕ್ಷಿಕೆಯನ್ನು ಮುಕ್ತಾ ನರಕಲದಿನ್ನಿ ನಡೆಸಿಕೊಟ್ಟರು. ವಚನ ಪ್ರಾರ್ಥನೆ ಪ್ರಿಯಾಂಕ, ಸ್ವಾಗತವನ್ನು ನಿರ್ಮಲ ನಾಗನಗೌಡ, ನಿರೂಪಣೆ ಜಗದೇವಿ ಮಾಡಿದರೆ, ವಚನ ಸಂವಿಧಾನ ಪ್ರತಿಜ್ಞೆಯನ್ನು ವಿಜಯಲಕ್ಷ್ಮಿ ವಡಗೇರಿ ಬೋಧಿಸಿದರು. ಪಾರ್ವತಿ ಪಾಟೀಲ ವಂದಿಸಿದರು.
ಕಾರ್ಯಕ್ರಮದಲ್ಲಿ ಸುಮಂಗಲ ಹಿರೇಮಠ, ಅನ್ನಪೂರ್ಣಮ್ಮ ಹರವಿ, ಸೌಮ್ಯ ಪಾಟೀಲ ಸೇರಿದಂತೆ ಹಲವಾರು ಶರಣೆಯರು ಉಪಸ್ಥಿತರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece
