ಕಲಬುರಗಿ
ಬಸವಕಲ್ಯಾಣದಲ್ಲಿ ಬಸವ ಧರ್ಮಪೀಠ ಹಾಗೂ ರಾಷ್ಟ್ರೀಯ ಬಸವ ದಳ ಸಹಯೋಗದಲ್ಲಿ 25ನೇ ವರ್ಷದ ಕಲ್ಯಾಣ ಪರ್ವ ಅಕ್ಟೋಬರ್ 24, 25 ಹಾಗೂ 26ರಂದು ಬಸವಕಲ್ಯಾಣದ ಬಸವ ಮಹಾಮನೆ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ಬಸವದಳದ ಜಿಲ್ಲಾ ಅಧ್ಯಕ್ಷ ಆರ್.ಜಿ. ಶೆಟಗಾರ ತಿಳಿಸಿದರು.
12ನೇ ಶತಮಾನದಲ್ಲಿ ಬಸವಕಲ್ಯಾಣದಲ್ಲಿ ನಿರಂತರವಾಗಿ ದಾಸೋಹ ಮತ್ತು ಸಾಮಾಜಿಕ ಚಿಂತನೆ ಜರುಗುತ್ತಿತ್ತು. ಆದರೆ ಕಲ್ಯಾಣಕ್ರಾಂತಿ ಆದ ನಂತರ ಈ ಕಾರ್ಯಕ್ರಮ ನಿಂತು ಹೋಗಿತ್ತು. 21ನೇ ಶತಮಾನದಲ್ಲಿ ಬಸವಾದಿ ಶರಣರ ಚಿಂತನೆಗಳು ಪ್ರಖರವಾಗಿ ಪ್ರಚಾರಗೊಳ್ಳುವ ಉದ್ದೇಶದಿಂದ 2002ರಲ್ಲಿ ಲಿಂಗೈಕ್ಯ ಜಗದ್ಗುರು ಮಾತೆ ಮಹಾದೇವಿ ಅವರು ಕಲ್ಯಾಣ ಪರ್ವ ಕಾರ್ಯಕ್ರಮ ಪ್ರಾಂಭಿಸಿದರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

24 ವರ್ಷ ಯಶಸ್ವಿಯಾಗಿ ನಡೆಸಿ 25ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ, 25ನೇ ಕಲ್ಯಾಣಪರ್ವ ವಿಶೇಷವಾಗಿ ಆಯೋಜಿಸಲಾಗಿದ್ದು, 24ರಂದು ಕಲ್ಯಾಣ ರಂಜಿತ ಮಹೋತ್ಸವವನ್ನು ಉದ್ಘಾಟನೆಯನ್ನು ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕರು, ಸಾಹಿತಿಗಳಾದ ಹಂಸಲೇಖ ಉದ್ಘಾಟಿಸಲಿದ್ದು, ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಯು ಧ್ವಜಾರೋಹಣ ನೆರವೇರಿಸಲಿದ್ದಾರೆ. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮುಖ್ಯಅತಿಥಿಗಳಾಗಿ ಕೃಷಿ ವಿಜ್ಞಾನಿ ಪ್ರಗತಿಪರ ರೈತಮಹಿಳೆ ಡಾ. ಕವಿತಾ ಮಿಶ್ರಾ, ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ, ಸಿದ್ಧಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಎಂ.ಜಿ. ಮೂಳೆ ಭಾಗವಹಿಸಲಿದ್ದಾರೆ.
24ರಂದು ಮಧ್ಯಾಹ್ನ ರಾಷ್ಟ್ರೀಯ ಬಸವದಳ ಸಮಾವೇಶ, ಸಂಜೆ 6-30ಕ್ಕೆ 4 ಮಹಿಳಾಗೋಷ್ಠಿ ಜರುಗಲಿದೆ ಎಂದು ಅವರು ತಿಳಿಸಿದರು.
25ರಂದು ಜರುಗಲಿರುವ ಸಮಾಜ ಚಿಂತನಾಗೋಷ್ಠಿಯನ್ನು ಬೃಹತ್ ಕೈಗಾರಿಕಾ ಸಚಿವ ಡಾ. ಎಂ.ಬಿ. ಪಾಟೀಲ ಉದ್ಘಾಟನೆ ಮಾಡಲಿದ್ದಾರೆ. ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಧ್ವಜಾರೋಹಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ, ಸಚಿವರಾದ ಸಂತೋಷ ಲಾಡ್, ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಡಾ. ಎಚ್.ಕೆ. ಪಾಟೀಲ ಸೇರಿದಂತೆ ಇನ್ನೂ ಅನೇಕ ರಾಜಕೀಯ ಧುರೀಣರು ಭಾಗವಹಿಸಲಿದ್ದಾರೆ.

26ರಂದು ಬಸವಕಲ್ಯಾಣದ ಕೋಟೆಯಿಂದ ಬಸವ ಮಹಾಮನೆಯವರೆಗೆ ವಿಶೇಷ ಬೆಳ್ಳಿ ರಥದಲ್ಲಿ ಮೆರವಣಿಗೆ ಜರುವುದು ಎಂದು ತಿಳಿಸಿದರು.
ಶಾಂತಪ್ಪ ಪಾಟೀಲ, ಅಶೋಕ ಘೂಳಿ, ಪ್ರದೀಪ ದಾಭಶೆಟ್ಟಿ, ಶಿವಕುಮಾರ ಬಿದರಿ, ಸಿದ್ದಣ್ಣ ತಾರವಖೇಡ, ನಾಗೇಂದ್ರಪ್ಪ ಮಾಡ್ಯಾಳ ಮತ್ತಿತರರಿದ್ದರು.
