ಮೈಸೂರು ದಸರಾದಲ್ಲಿ ಮನಸೆಳೆದ ಬಸವತತ್ವದ ಸ್ತಬ್ಧಚಿತ್ರ

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು

ಮೈಸೂರು ದಸರಾ ಜಂಬೂ ಸವಾರಿಯಯಲ್ಲಿ ಕೆಎಲ್ಇ ಸಂಸ್ಥೆಯ ಬಸವತತ್ವದ ಮೇಲೆ ಕೆಎಲ್ಇ ಸಂಸ್ಥೆ ನಿರ್ಮಿಸಿದ್ದ ಸ್ತಬ್ಧಚಿತ್ರ ಮುಖ್ಯ ಆಕರ್ಷಣೆಯಾಯಿತು.

‘ಬಸವತತ್ವಗಳಿಂದ ಸಬಲ ಸಮಾಜದತ್ತ’ ಶೀರ್ಷಿಕೆಯೊಂದಿಗೆ ಪ್ರದರ್ಶನಗೊಂಡ ಬಸವಾದಿಶರಣರು ಪ್ರತಿಪಾದಿಸಿದ ಸಾಮಾಜಿಕ ಪರಿವರ್ತನೆಯ ಮಹಾನ್ ಚಿಂತನೆಯಿಂದ ಆರಂಭಗೊಂಡು, ಶಿಕ್ಷಣ, ಜ್ಞಾನ ಮತ್ತು ಸೇವೆಯ ಮೂಲಕ ಆಧುನಿಕ ಸಮಾಜದ ಸಬಲೀಕರಣದವರೆಗೆ ಸಾಗಿರುವ ಚಳುವಳಿಯ ನಿರಂತರ ಪಯಣವನ್ನು ಪ್ರತಿಬಿಂಬಿಸುತ್ತದೆ.

12ನೇ ಶತಮಾನ ವಿಚಾರಕ್ರಾಂತಿಯ ಜೀವಂತ ಪ್ರತಿರೂಪವಾಗಿ ಸ್ತಬ್ಧಚಿತ್ರದಲ್ಲಿ ವಿಶ್ವಗುರು ಬಸವಣ್ಣನವರು, ಅಲ್ಲಮಪ್ರಭು, ಅಕ್ಕಮಹಾದೇವಿ ಹಾಗೂ ಇತರ ಶರಣರನ್ನು ಪ್ರತಿಬಿಂಬಿಸಲಾಗಿದೆ.

ಸ್ತಬ್ಧಚಿತ್ರದ ದ್ವಿತೀಯ ಭಾಗವು ‘ಜ್ಞಾನದ ಸೇತುವೆ’ಯನ್ನು – ವಿಚಾರ ಕ್ರಾಂತಿಯಿಂದ ಶಿಕ್ಷಣ ಕ್ರಾಂತಿಯತ್ತ ಸಾಗಿದ ಪರಿವರ್ತನೆ – ಸಂಕೇತಿಸುತ್ತದೆ.

ಇದು 12ನೇ ಶತಮಾನದ ಸಾಮಾಜಿಕ ಜಾಗೃತಿಯನ್ನು 19ನೇ ಶತಮಾನದ ಉತ್ತರಾರ್ಧ ಮತ್ತು 20ನೇ ಶತಮಾನದ ಆರಂಭದ ಶಿಕ್ಷಣ ಜಾಗೃತಿಯೊಂದಿಗೆ ಬೆಸೆಯುತ್ತದೆ.

ಅಥಣಿ ಶಿವಯೋಗಿಗಳವರಾದಿಯಾಗಿ ಅನೇಕ ಪರಮಪೂಜ್ಯರು ಶಿಕ್ಷಣದ ಮಹತ್ವವನ್ನು ಸಮಾಜದಲ್ಲಿ ಬಿತ್ತಿ, ಮುಂದಿನ ಪೀಳಿಗೆಗಳಿಗೆ ಪ್ರೇರಣೆಯಾದರು.

ಈ ಚಿಂತನಾ ಪರಂಪರೆಯನ್ನು ಮುಂದುವರಿಸಿ ಶಿಕ್ಷಣ ಮತ್ತು ಸಾಮಾಜಿಕ ಅಭಿವೃದ್ಧಿಯ ಹೊಸ ಯುಗಕ್ಕೆ ದಾರಿದೀಪವಾದ ಗಣ್ಯ ಲಿಂಗಾಯತ ಮಹನೀಯರಲ್ಲಿ ಸಿರಸಂಗಿ ಲಿಂಗರಾಜ ದೇಸಾಯಿಯವರು, ರಾಜಾ ಲಖಮನಗೌಡರು, ರಾವ್ ಬಹದ್ದೂರ್ ಅರಟಾಳ ರುದ್ರಗೌಡರು, ಗಿಲಗಿಂಜಿ ಗುರುಸಿದ್ದಪ್ಪನವರು, ಡೆಪ್ಯೂಟಿ ಚನ್ನಬಸಪ್ಪನವರು, ರಾವ್ ಬಹದ್ದೂರ್ ವಿ. ಜಿ. ನಾಯಕ-ಚಚಡಿಯವರು, ರಾವ್ ಬಹದ್ದೂರ್ ವೈಜಪ್ಪ ಅನಿಗೋಳರವರು, ರಾವ್ ಬಹದ್ದೂರ್ ಫಕೀರಪ್ಪ ಹಳಕಟ್ಟಿಯವರು, ಸಿದ್ಧಪ್ಪ ಕಂಬಳಿಯವರು, ಬಿ. ವಿ. ಭೂಮರಡ್ಡಿಯವರು ಹಾಗೂ ಗುಬ್ಬಿ ತೋಟದಪ್ಪನವರು ಪ್ರಮುಖರು.

ಇವರೊಂದಿಗೆ, ‘ಸಪ್ತರ್ಷಿಗಳು’ ಎಂದು ಗೌರವದಿಂದ ಸ್ಮರಿಸಲ್ಪಡುವ ಪ್ರೊ. ಎಂ. ಆರ್. ಸಾಖರೆ, ಪ್ರೊ. ಎಸ್. ಎಸ್. ಬಸವನಾಳ, ಬಿ. ಬಿ. ಮಾಮದಾಪುರ, ಎಚ್. ಎಫ್. ಕಟ್ಟಿಮನಿ, ಬಿ. ಎಸ್. ಹಂಚಿನಾಳ, ಪಿ. ಆರ್. ಚಿಕ್ಕೋಡಿ ಹಾಗೂ ವಿ. ವಿ. ಪಾಟೀಲ ಅವರ ಅಮೂಲ್ಯ ಕೊಡುಗೆಯನ್ನೂ ಇಲ್ಲಿ ಪ್ರತಿನಿಧಿಸಲಾಗಿದೆ.

ಸಮಾಜದ ಉನ್ನತಿ ಮತ್ತು ಶಿಕ್ಷಣದ ಮೂಲಕ ಸಬಲೀಕರಣ ಎಂಬ ಮಹೋನ್ನತ ಧ್ಯೇಯಕ್ಕಾಗಿ ಇವರೆಲ್ಲರೂ ತಮ್ಮ ಬದುಕನ್ನು ಸಮರ್ಪಿಸಿದರು.

ಈ ಚಿಂತನಾ ಮತ್ತು ಶಿಕ್ಷಣ ಪರಂಪರೆ 1916ರಲ್ಲಿ ಬೆಳಗಾವಿಯಲ್ಲಿ ಕೆ.ಎಲ್.ಇ. ಸಂಸ್ಥೆಯ ಸ್ಥಾಪನೆಯೊಂದಿಗೆ ಹೊಸ ಆಯಾಮವನ್ನು ಪಡೆದುಕೊಂಡಿತು. ಶಿಕ್ಷಣವನ್ನು ಸಾಮಾಜಿಕ ಪರಿವರ್ತನೆ ಮತ್ತು ಸಬಲೀಕರಣದ ಸಾಧನವನ್ನಾಗಿ ರೂಪಿಸಿದ ಈ ಪಯಣವು ಕಾಲಕ್ರಮೇಣ ಶಾಲಾ ಶಿಕ್ಷಣದಿಂದ ಉನ್ನತ ಮತ್ತು ವೃತ್ತಿಪರ ಶಿಕ್ಷಣ, ತಾಂತ್ರಿಕ ಶಿಕ್ಷಣ, ಆರೋಗ್ಯ ಸೇವೆ, ಸಂಶೋಧನೆ ಹಾಗೂ ಸಮುದಾಯಾಭಿವೃದ್ಧಿಯ ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿತು.

ಈ ಸ್ತಬ್ಧಚಿತ್ರವು ಕೇವಲ ಭೂತಕಾಲದ ಇತಿಹಾಸದ ಚಿತ್ರಣ ಮಾತ್ರವಾಗಿರದೆ, ಬಸವಣ್ಣ ಮತ್ತು ಶರಣರ ಸಮಾನತೆ ಹಾಗೂ ಮಾನವ ಘನತೆಯ ಚಿಂತನೆಯಿಂದ ಆರಂಭಗೊಂಡು, ಜ್ಞಾನದ ಮೂಲಕ ಸಮಾಜದ ಸಬಲೀಕರಣದವರೆಗೆ ಸಾಗಿದ ನಿರಂತರ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.

ಸಮಾನತೆಯಿಂದ ಸಾಮಾಜಿಕ ಜಾಗೃತಿಗೆ, ಸಾಮಾಜಿಕ ಜಾಗೃತಿಯಿಂದ ಜ್ಞಾನಾನ್ವೇಷಣೆಗೆ, ಜ್ಞಾನದಿಂದ ಸಬಲೀಕರಣದತ್ತ ಸಾಗುವ ಪಯಣವೇ ಸಬಲ ಸಮಾಜ ನಿರ್ಮಾಣದ ದಾರಿ. ಈ ನಿರಂತರ ಪರಿವರ್ತನೆಯ ಆಶಯವನ್ನೇ ಸ್ತಬ್ಧಚಿತ್ರದ ಶೀರ್ಷಿಕೆ ಅರ್ಥಪೂರ್ಣವಾಗಿ ಪ್ರತಿಧ್ವನಿಸುತ್ತದೆ, ಎಂದು ಕೆಎಲ್ಇ ತಿಳಿಸಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
5 Comments
  • ಅತ್ಯಂತ ಯೋಗ್ಯವಾದ ಸಂದೇಶವನ್ನು ನೀಡುವ ಸ್ತಬ್ಧಚಿತ್ರ .

  • KLE ಸಂಸ್ಥೆ ವಚನಗಳ ಗಾಯನ ಏರ್ಪಡಿಸಿ ಗಮನ ಸೆಳೆದಿತ್ತು, ಇದೀಗ ದಸರಾ ಉತ್ಸವದಲ್ಲಿ ಬಸವ ತತ್ವದಿಂದ ಸಬಲ ಸಮಾಜದತ್ತ ರೂಪಕದ ಮೂಲಕ KLE ಸಂಸ್ಥೆ ಗಮನ ಸೆಳೆದಿದೆ, ಇದೆ ರೀತಿ ಬಸವ ತತ್ವ ಪ್ರಚಾರಕ್ಕೆ ಹೆಚ್ಚಿನ ಮಹತ್ವ ಕೊಡಲಿ, ಜ್ಞಾನದ ಜೊತೆ ಜೊತೆಗೆ ವಚನಗಳ ಶರಣರ ತತ್ವ ಪ್ರಚಾರಕ್ಕೂ ಮಹತ್ವ ಕೊಡುತ್ತಿರಲಿ.

  • ಒಳ್ಳೆಯ ಸಂದೇಶ ರವಾನಿಸಿದ್ದಿರಿ ಜೈ ಬಸವ ಶರಣು ಶರಣಾರ್ಥಿ

  • ANUBHAVA SANGAMA ALLAMA PRABHU PEETHA, KANTAVARA KARKALA UDUPI
    October 25, 2026 at 9:48 pm
    !!GURA BASAVALINGA SHARANA!!
    [A.SA.SHA.]
    🌹🌹🌹🌹🌹🌹🌹🌹🌹🌹🌹🌹🌹
    The people of Lingavants of LINGA Religion must realise about groupism and highest ego while performing their activities. Every meetings what they are conducting are all their fallowevers and assembling with dramatic devotees in their functions. The organisers must see and conduct such function with their counter partners then only they realise about where they are failed in their mission.. One more thing is that the Lingavants are not migrating from their own place for the purpose of spreading the phylosophy of VACHANA doctrine of LINGA DHARMA of 12th century founded by Appa SanganaBasavanna and his highness contemporary LingaSharanas. Sharanarthy.
    From
    Sharana Jaganathappa Pansale Janwada
    Peethadhipati
    AllamaPrabhu Anubhava Peetha
    At Post Kovalum Kerala
    Western Coastal of Bharat nation
    😀😀😀

  • ಬಸವತತ್ವದ ಮೇಲೆ ಕೆಎಲ್ಇ ಸಂಸ್ಥೆ ನಿರ್ಮಿಸಿದ್ದ ಸ್ತಬ್ಧಚಿತ್ರ ಮುಖ್ಯ ಆಕರ್ಷಣೆಯಾಗಿದ್ದು ಅತ್ಯಂತ ಆನಂದದ ಸಂಗತಿ. ಬಸವತತ್ವ ಮತ್ತು ಬಸವತತ್ವಕ್ಕಾಗಿ ಮತ್ತು ವಚನಸಾಹಿತ್ಯ ಉಳಿವಿಗಾಗಿ ತಮ್ಮ ಜೀವನವನ್ನೇ ಸವೆಸಿ ಹೋದ ಮಹಾಪುರುಷರನ್ನು ಜನತೆಗೆ ಪರಿಚಯಿಸಿದ ಕಾರ್ಯ ಅತ್ಯಂತ ಶ್ಲಾಘನೀಯ.

    ಕೆ.ಎಲ್.ಇ.ಸಂಸ್ಥೆ ಈಗ ಎಂದೂ ಸವೆಯಲಾರದ ಸುಭದ್ರ ಸಂಸ್ಥೆಯಾಗಿದೆ. ಹೀಗಾಗಿ 5 ನೇ ತರಗತಿಯಿಂದ ಪದವಿಗಳವರೆಗೆ(ವೃತ್ತಿಪರ ಕೋರ್ಸ್ ಹೊರತುಪಡಿಸಿ)  ಕನಿಷ್ಠ 200 ಲಿಂಗಾಯತ ಎಲ್ಲ ಒಳಪಂಗಡಗಳ ಕಡುಬಡವರ ಮಕ್ಕಳಿಗೆ ಊಟ, ವಸತಿ, ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲೆಂದು ಭಿನ್ನವಿಸುತ್ತೇವೆ.
    ಆಲದ ಮರದಂತೆ ಬೆಳೆದಿರುವ ಕೆ.ಎಲ್.ಇ.ಸಂಸ್ಥೆಗೆ ಇದೇನು ದೊಡ್ಡ ಹೊರೆಯಲ್ಲ. ಉದಾರ ಮನಸ್ಸು ಮಾಡಿ ಈ ಕಾರ್ಯ ಕೈಗೊಳ್ಳಲೆಂದು ಆಶಿಸುತ್ತೇವೆ.

    ಇದೇ ರೀತಿ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘ, ವಿಜಯಪುರದ ಬಿ.ಎಲ್.ಡಿ.ಇ ಸಂಘ, ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘ, ಚಿತ್ರದುರ್ಗದ ಮುರುಘಾಮಠದ ವಿದ್ಯಾಸಂಸ್ಥೆ ಇತ್ಯಾದಿ ಬಲವಾದ ಸಂಸ್ಥೆಗಳು ಇಂತಹ ಕಾರ್ಯ ಶೀಘ್ರ ಪ್ರಾರಂಭಿಸಲೆಂದು ಹಾರೈಸುತ್ತೇವೆ.

    ಡಾ ಸಂಗಮೇಶ ಕಲಹಾಳ
    ಅಧ್ಯಕ್ಷರು, ವಿಶ್ವ ಪರಮೋಚ್ಚ ಪ್ರಜ್ಞಾ ಪ್ರತಿಷ್ಠಾನ, ಕೊಪ್ಪಳ

Leave a Reply

Your email address will not be published. Required fields are marked *