ಮೈಸೂರು ದಸರಾದಲ್ಲಿ ಮನಸೆಳೆದ ಬಸವತತ್ವದ ಸ್ತಬ್ಧಚಿತ್ರ

ಬಸವ ಮೀಡಿಯಾ
ಬಸವ ಮೀಡಿಯಾ

ಮೈಸೂರು

ಮೈಸೂರು ದಸರಾ ಜಂಬೂ ಸವಾರಿಯಯಲ್ಲಿ ಕೆಎಲ್ಇ ಸಂಸ್ಥೆಯ ಬಸವತತ್ವದ ಮೇಲೆ ಕೆಎಲ್ಇ ಸಂಸ್ಥೆ ನಿರ್ಮಿಸಿದ್ದ ಸ್ತಬ್ಧಚಿತ್ರ ಮುಖ್ಯ ಆಕರ್ಷಣೆಯಾಯಿತು.

‘ಬಸವತತ್ವಗಳಿಂದ ಸಬಲ ಸಮಾಜದತ್ತ’ ಶೀರ್ಷಿಕೆಯೊಂದಿಗೆ ಪ್ರದರ್ಶನಗೊಂಡ ಬಸವಾದಿಶರಣರು ಪ್ರತಿಪಾದಿಸಿದ ಸಾಮಾಜಿಕ ಪರಿವರ್ತನೆಯ ಮಹಾನ್ ಚಿಂತನೆಯಿಂದ ಆರಂಭಗೊಂಡು, ಶಿಕ್ಷಣ, ಜ್ಞಾನ ಮತ್ತು ಸೇವೆಯ ಮೂಲಕ ಆಧುನಿಕ ಸಮಾಜದ ಸಬಲೀಕರಣದವರೆಗೆ ಸಾಗಿರುವ ಚಳುವಳಿಯ ನಿರಂತರ ಪಯಣವನ್ನು ಪ್ರತಿಬಿಂಬಿಸುತ್ತದೆ.

12ನೇ ಶತಮಾನ ವಿಚಾರಕ್ರಾಂತಿಯ ಜೀವಂತ ಪ್ರತಿರೂಪವಾಗಿ ಸ್ತಬ್ಧಚಿತ್ರದಲ್ಲಿ ವಿಶ್ವಗುರು ಬಸವಣ್ಣನವರು, ಅಲ್ಲಮಪ್ರಭು, ಅಕ್ಕಮಹಾದೇವಿ ಹಾಗೂ ಇತರ ಶರಣರನ್ನು ಪ್ರತಿಬಿಂಬಿಸಲಾಗಿದೆ.

ಸ್ತಬ್ಧಚಿತ್ರದ ದ್ವಿತೀಯ ಭಾಗವು ‘ಜ್ಞಾನದ ಸೇತುವೆ’ಯನ್ನು – ವಿಚಾರ ಕ್ರಾಂತಿಯಿಂದ ಶಿಕ್ಷಣ ಕ್ರಾಂತಿಯತ್ತ ಸಾಗಿದ ಪರಿವರ್ತನೆ – ಸಂಕೇತಿಸುತ್ತದೆ.

ಇದು 12ನೇ ಶತಮಾನದ ಸಾಮಾಜಿಕ ಜಾಗೃತಿಯನ್ನು 19ನೇ ಶತಮಾನದ ಉತ್ತರಾರ್ಧ ಮತ್ತು 20ನೇ ಶತಮಾನದ ಆರಂಭದ ಶಿಕ್ಷಣ ಜಾಗೃತಿಯೊಂದಿಗೆ ಬೆಸೆಯುತ್ತದೆ.

ಅಥಣಿ ಶಿವಯೋಗಿಗಳವರಾದಿಯಾಗಿ ಅನೇಕ ಪರಮಪೂಜ್ಯರು ಶಿಕ್ಷಣದ ಮಹತ್ವವನ್ನು ಸಮಾಜದಲ್ಲಿ ಬಿತ್ತಿ, ಮುಂದಿನ ಪೀಳಿಗೆಗಳಿಗೆ ಪ್ರೇರಣೆಯಾದರು.

ಈ ಚಿಂತನಾ ಪರಂಪರೆಯನ್ನು ಮುಂದುವರಿಸಿ ಶಿಕ್ಷಣ ಮತ್ತು ಸಾಮಾಜಿಕ ಅಭಿವೃದ್ಧಿಯ ಹೊಸ ಯುಗಕ್ಕೆ ದಾರಿದೀಪವಾದ ಗಣ್ಯ ಲಿಂಗಾಯತ ಮಹನೀಯರಲ್ಲಿ ಸಿರಸಂಗಿ ಲಿಂಗರಾಜ ದೇಸಾಯಿಯವರು, ರಾಜಾ ಲಖಮನಗೌಡರು, ರಾವ್ ಬಹದ್ದೂರ್ ಅರಟಾಳ ರುದ್ರಗೌಡರು, ಗಿಲಗಿಂಜಿ ಗುರುಸಿದ್ದಪ್ಪನವರು, ಡೆಪ್ಯೂಟಿ ಚನ್ನಬಸಪ್ಪನವರು, ರಾವ್ ಬಹದ್ದೂರ್ ವಿ. ಜಿ. ನಾಯಕ-ಚಚಡಿಯವರು, ರಾವ್ ಬಹದ್ದೂರ್ ವೈಜಪ್ಪ ಅನಿಗೋಳರವರು, ರಾವ್ ಬಹದ್ದೂರ್ ಫಕೀರಪ್ಪ ಹಳಕಟ್ಟಿಯವರು, ಸಿದ್ಧಪ್ಪ ಕಂಬಳಿಯವರು, ಬಿ. ವಿ. ಭೂಮರಡ್ಡಿಯವರು ಹಾಗೂ ಗುಬ್ಬಿ ತೋಟದಪ್ಪನವರು ಪ್ರಮುಖರು.

ಇವರೊಂದಿಗೆ, ‘ಸಪ್ತರ್ಷಿಗಳು’ ಎಂದು ಗೌರವದಿಂದ ಸ್ಮರಿಸಲ್ಪಡುವ ಪ್ರೊ. ಎಂ. ಆರ್. ಸಾಖರೆ, ಪ್ರೊ. ಎಸ್. ಎಸ್. ಬಸವನಾಳ, ಬಿ. ಬಿ. ಮಾಮದಾಪುರ, ಎಚ್. ಎಫ್. ಕಟ್ಟಿಮನಿ, ಬಿ. ಎಸ್. ಹಂಚಿನಾಳ, ಪಿ. ಆರ್. ಚಿಕ್ಕೋಡಿ ಹಾಗೂ ವಿ. ವಿ. ಪಾಟೀಲ ಅವರ ಅಮೂಲ್ಯ ಕೊಡುಗೆಯನ್ನೂ ಇಲ್ಲಿ ಪ್ರತಿನಿಧಿಸಲಾಗಿದೆ.

ಸಮಾಜದ ಉನ್ನತಿ ಮತ್ತು ಶಿಕ್ಷಣದ ಮೂಲಕ ಸಬಲೀಕರಣ ಎಂಬ ಮಹೋನ್ನತ ಧ್ಯೇಯಕ್ಕಾಗಿ ಇವರೆಲ್ಲರೂ ತಮ್ಮ ಬದುಕನ್ನು ಸಮರ್ಪಿಸಿದರು.

ಈ ಚಿಂತನಾ ಮತ್ತು ಶಿಕ್ಷಣ ಪರಂಪರೆ 1916ರಲ್ಲಿ ಬೆಳಗಾವಿಯಲ್ಲಿ ಕೆ.ಎಲ್.ಇ. ಸಂಸ್ಥೆಯ ಸ್ಥಾಪನೆಯೊಂದಿಗೆ ಹೊಸ ಆಯಾಮವನ್ನು ಪಡೆದುಕೊಂಡಿತು. ಶಿಕ್ಷಣವನ್ನು ಸಾಮಾಜಿಕ ಪರಿವರ್ತನೆ ಮತ್ತು ಸಬಲೀಕರಣದ ಸಾಧನವನ್ನಾಗಿ ರೂಪಿಸಿದ ಈ ಪಯಣವು ಕಾಲಕ್ರಮೇಣ ಶಾಲಾ ಶಿಕ್ಷಣದಿಂದ ಉನ್ನತ ಮತ್ತು ವೃತ್ತಿಪರ ಶಿಕ್ಷಣ, ತಾಂತ್ರಿಕ ಶಿಕ್ಷಣ, ಆರೋಗ್ಯ ಸೇವೆ, ಸಂಶೋಧನೆ ಹಾಗೂ ಸಮುದಾಯಾಭಿವೃದ್ಧಿಯ ವಿವಿಧ ಕ್ಷೇತ್ರಗಳಿಗೆ ವಿಸ್ತರಿಸಿತು.

ಈ ಸ್ತಬ್ಧಚಿತ್ರವು ಕೇವಲ ಭೂತಕಾಲದ ಇತಿಹಾಸದ ಚಿತ್ರಣ ಮಾತ್ರವಾಗಿರದೆ, ಬಸವಣ್ಣ ಮತ್ತು ಶರಣರ ಸಮಾನತೆ ಹಾಗೂ ಮಾನವ ಘನತೆಯ ಚಿಂತನೆಯಿಂದ ಆರಂಭಗೊಂಡು, ಜ್ಞಾನದ ಮೂಲಕ ಸಮಾಜದ ಸಬಲೀಕರಣದವರೆಗೆ ಸಾಗಿದ ನಿರಂತರ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ.

ಸಮಾನತೆಯಿಂದ ಸಾಮಾಜಿಕ ಜಾಗೃತಿಗೆ, ಸಾಮಾಜಿಕ ಜಾಗೃತಿಯಿಂದ ಜ್ಞಾನಾನ್ವೇಷಣೆಗೆ, ಜ್ಞಾನದಿಂದ ಸಬಲೀಕರಣದತ್ತ ಸಾಗುವ ಪಯಣವೇ ಸಬಲ ಸಮಾಜ ನಿರ್ಮಾಣದ ದಾರಿ. ಈ ನಿರಂತರ ಪರಿವರ್ತನೆಯ ಆಶಯವನ್ನೇ ಸ್ತಬ್ಧಚಿತ್ರದ ಶೀರ್ಷಿಕೆ ಅರ್ಥಪೂರ್ಣವಾಗಿ ಪ್ರತಿಧ್ವನಿಸುತ್ತದೆ, ಎಂದು ಕೆಎಲ್ಇ ತಿಳಿಸಿದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
1 Comment
  • ಅತ್ಯಂತ ಯೋಗ್ಯವಾದ ಸಂದೇಶವನ್ನು ನೀಡುವ ಸ್ತಬ್ಧಚಿತ್ರ .

Leave a Reply

Your email address will not be published. Required fields are marked *