ಸ್ವತಂತ್ರ ಸಿದ್ಧಲಿಂಗೇಶ್ವರರ ವಚನ ನಿರ್ವಚನ: ಅರಿಯದವರು ಲಿಂಗವ ಹಿಡಿದಡೇನು?

ಬಸವ ಮೀಡಿಯಾ
ಬಸವ ಮೀಡಿಯಾ

ಗುಳೇದಗುಡ್ಡ :

ಮಲ್ಲಿಕಾರ್ಜುನ ಮಹಾಗುಂಡಪ್ಪ ಅರುಟಿಗಿ ಅವರ ಮನೆಯಲ್ಲಿ ಶನಿವಾರ ಬಸವ ಕೇಂದ್ರದ ವತಿಯಿಂದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ ನಡೆಯಿತು.

ಚಿಂತನೆಗಾಗಿ ಸ್ವತಂತ್ರ ಸಿದ್ಧಲಿಂಗೇಶ್ವರರ ವಚನವನ್ನು ಆಯ್ದುಕೊಳ್ಳಲಾಗಿತ್ತು …

ಕುರುಡ ಕನ್ನಡಿಯ ಹಿಡಿದಡೇನು?

ತನ್ನ ಮುಖವ ತಾ ಕಾಣಲರಿಯದಂತೆ

ಜ್ಞಾನವಿಲ್ಲದವನ ಕೈಯಲ್ಲಿ ಲಿಂಗವಿದ್ದಡೇನು?

ಆ ಲಿಂಗದಲ್ಲಿ ತನ್ನ ನಿಜವ ತಾ ಕಾಣಲರಿಯ

ನಿಜಗುರು ಸ್ವತಂತ್ರಶಿದ್ಧಲಿಂಗೇಶ್ವರನ   

ಅರಿಯದವರು ಲಿಂಗವ ಹಿಡಿದಡೇನು?

ವಚನ ಚಿಂತನೆಯ ಪ್ರಾರಂಭದಲ್ಲಿ ಪ್ರೊ. ಶ್ರೀಕಾಂತ ಗಡೆದ ಅವರು ವಚನಕಾರರನ್ನು ಪರಿಚಯಿಸುತ್ತ “ಬಸವೋತ್ತರ ಯುಗದ ವಚನಕಾರರಲ್ಲಿ ಸ್ವತಂತ್ರ ಸಿದ್ಧಲಿಂಗೇಶ್ವರರು ಪ್ರಖ್ಯಾತರಾದವರು. ತೋಂಟದ ಶ್ರೀ ಸಿದ್ಧಲಿಂಗೇಶ್ವರರ ಶಿಷ್ಯರಾದ ಅವರು 16ನೇ ಶತಮಾನದ ಉತ್ತರಾರ್ಧದಲ್ಲಿ ಇದ್ದರು.

ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ ಎಂಬ ಅಂಕಿತದಲ್ಲಿ 435 ವಚನಗಳನ್ನು ರಚಿಸಿದ್ದಾರೆ. ಜ್ಞಾನವಿಲ್ಲದ ಮನುಷ್ಯ ಕುರುಡನಿದ್ದಂತೆ; ಆತನಿಗೆ ಕನ್ನಡಿಯು ಉಪಯೋಗಕ್ಕೆ ಬಾರದು. ಹಾಗೆಯೇ ಕೈಯಲ್ಲಿರುವ ಲಿಂಗದ ಅರಿವೇ ಇಲ್ಲದಿದ್ದರೆ ಆ ಲಿಂಗದಿಂದ ಆಗುವ ಲಾಭವಾದರೂ ಏನು? ಹೀಗಾಗಿ ತನ್ನ ಅರುಹಿನ ಕುರುಹಾದ ಲಿಂಗವನ್ನು ಮನದ ಕನ್ನಡಿಯನ್ನಾಗಿಸಿಕೊಳ್ಳಲುˌ ಅದರ ನಿಜಾರ್ಥವನ್ನು ಅರಿತು ಬಾಳಬೇಕು ” ಎಂದು ಹೇಳಿದರು.

ಮಹಾಲಿಂಗಪ್ಪ ಕರನಂದಿ ಅವರು “ಪ್ರತಿಯೊಬ್ಬರು ಲಿಂಗದ ಅನುಸಂಧಾನದ ಜೊತೆಗೆ ಕಾಯಕ ಮಾಡಬೇಕು. ಕಾಯಕದಿಂದ ಬಂದ ಗಳಿಕೆಯಿಂದ ದಾಸೋಹ ಮಾಡಬೇಕು. ಇದೇ ನಿಜವಾದ ಲಿಂಗಪೂಜೆಯಾಗುತ್ತದೆ” ಎಂದರು.

ಡಾ. ಗಿರೀಶ ನೀಲಕಂಠಮಠ ಅವರು ವಚನವನ್ನು  ನಿರ್ವಚನ ಗೈಯುತ್ತಾ, “ಅರ್ಥವಿಲ್ಲದ ಆಚರಣೆ ವ್ಯರ್ಥವಾದದ್ದು. ಅರಿವಿನ ಲಾಭವಿಲ್ಲದಿದ್ದರೆ ಕೇವಲ ಲಿಂಗಪೂಜೆಯಿಂದೇನು ಉಪಯೋಗ? ವಸ್ತುವಿನ ಮೌಲ್ಯ ತಿಳಿದವನಿಗೆ ಅದರ ನೆಲೆಬೆಲೆ ಗೊತ್ತಾಗುವಂತೆˌ ಲಿಂಗವು ತನ್ನ ಸ್ವರೂಪವೇ ಆಗಿದೆ. ಆದರೂ ಅದರ ಮಹತ್ವ ಆತನಿಗೆ ಗೊತ್ತಿರದಿದ್ದರೆ ಕುರುಡನೇ ಸರಿ. ಹೀಗಾಗಿ ಪ್ರತಿ ವ್ಯಕ್ತಿಗೂ ಜ್ಞಾನದ ಹಸಿವಿರಬೇಕು. ತನ್ನ ಜ್ಞಾನದ ಬೆಳಕಿನಲ್ಲಿ ಲಿಂಗವನ್ನು ತಿಳಿಯುತ್ತ ಹೋಗಬೇಕು.

ಲಿಂಗತತ್ವವನ್ನು ತಿಳಿಯುತ್ತ ಹೋದಂತೆ ತನುಭಾವವನ್ನು ನೀಗಿಕೊಂಡುˌ ತನ್ನ ಸ್ವರೂಪ ಜ್ಞಾನವನ್ನು ಅರಿಯುತ್ತಾ ಹೋಗುತ್ತಾನೆ. ಉಳ್ಳಾಗಡ್ಡಿ ಒಳಗೆ ಒಂದು (ಗಣಲು ) ಇರುತ್ತದೆ. ಮೇಲಿನ ಒಣ ಪದರುಗಳನ್ನು (ರವದಿ) ಸುಲಿಯುತ್ತಾ ಹೋದಂತೆ,ˌ ಒಳಗಿನ ಗಣಲು (ಗಟ್ಟಿ ಭಾಗ) ಸಿಗುತ್ತದೆ. ಹಾಗೆಯೇ ಅಂಗನು ಜ್ಞಾನದ ಸಂಪರ್ಕದಿಂದ ಲಿಂಗಾಂಗಿಯಾಗುತ್ತಾನೆ. ಹಾಗಾಗದಿದ್ದರೆ ಜ್ಞಾನವಿಲ್ಲದ ವ್ಯಕ್ತಿ ಕುರುಡನಂತಾಗಿˌ ಲಿಂಗವಿದ್ದರೂ ಲಿಂಗಸಂಗಿಯಾಗದೆ ಅಂಗಸಂಗಿಯಾಗುತ್ತಾನೆ ” ಎಂದು ವಿವರವಾಗಿ ಹೇಳಿದರು.

ಪ್ರೊ. ಸಿದ್ದಲಿಂಗಪ್ಪ ಬರಗುಂಡಿ ಅವರು ಚಿಂತನದ ಸಮಾರೋಪವನ್ನು ಮಾಡುತ್ತಾ, “ಸ್ವತಂತ್ರ ಸಿದ್ಧಲಿಂಗೇಶ್ವರರ ಈ ವಚನವು ಲಿಂಗದ ಸ್ವರೂಪ ಹಾಗೂ ಅದರ ಮಹತ್ವವನ್ನು ಎತ್ತಿ ಹೇಳುತ್ತದೆ. ಸಾಮಾನ್ಯವಾಗಿ ತನ್ನ ಪ್ರತಿಬಿಂಬವನ್ನು ತೋರುವ ಕನ್ನಡಿಯು ಕುರುಡನಿಗೆ ಉಪಯೋಗವಾಗುವುದಿಲ್ಲ. ಕನ್ನಡಿಯನ್ನು ಉಪಯೋಗಿಸುವಾತ ಅದರಲ್ಲಿ ತನ್ನ ಬಿಂಬವನ್ನು ಹಾಕಬೇಕು. ಆ ಮೂಲಕ ತನ್ನ ರೂಪವನ್ನು ಕಾಣಬೇಕು. ಹಾಗೆ ಲಿಂಗವನ್ನು ಆಯತವನ್ನಾಗಿ ಮಾಡಿಕೊಂಡ ಮಾತ್ರಕ್ಕೆ ಲಿಂಗದೇಹಿಯಾಗಲಾರ. ಅದರ ಒಳಹೊರಗನ್ನು ಅರಿತುಕೊಂಡಿರಬೇಕು.

ಕೈಯೊಳಗಿನ ಇಷ್ಟಲಿಂಗವು ಕಲ್ಲಲ್ಲ. ಪೂಜೆಗೊಳ್ಳುವ ಹೊರಗಿನ ಯಾವುದೇ ವಸ್ತುವೂ ಅಲ್ಲ. ಅದು ತನ್ನದೇ ಕುರುಹು. ಇಲ್ಲಿಯವರೆಗೆ ಹೊರಗನ್ನೇ ನೋಡುತ್ತಿದ್ದ ಕಣ್ಣ,ˌ ಈಗ ತನ್ನ ಅಂತರಂಗದತ್ತ ಸಾಗಿ, ತನ್ನ ಸ್ವರೂಪಜ್ಞಾನ ಮಾಡಿಕೊಳ್ಳಬೇಕು.  ಹೀಗಾಗಿ ಈಗ ಶರಣನಾದವನು ತನ್ನ ಅಂತರಂಗದಲ್ಲಿನ ಮನಸ್ಸೆಂಬ ಕನ್ನಡಿಯನ್ನು ಉಪಯೋಗಿಸಬೇಕು. ಆಗ ಅಲ್ಲಿ ತಾನು ಕೇವಲ ಬಾಹ್ಯಸ್ವರೂಪದ ವ್ಯಕ್ತಿಯಲ್ಲ. ಪ್ರಾಣ – ಭಾವ ಲೋಕಕ್ಕೆ ಸಂಬಂಧಿಸಿದವನು. ಮಲತ್ರಯದ ದೋಷದ ಅರಿವಾಗಿ ಅದರಿಂದ ಹೊರಬರುವ ದಾರಿ ತಿಳಿಯುತ್ತದೆ. ಹೀಗಾಗಿ ಈ ಕೈಯೊಳಗಿನ ಲಿಂಗವು ಮಹಾಲಿಂಗವಾಗುವ ಮಹಾಮಾರ್ಗವಾಗುತ್ತದೆ. ಕನಿಷ್ಠ ಈ ತಿಳುವಳಿಕೆ ಇಲ್ಲದಿದ್ದರೆ ಇಷ್ಟಲಿಂಗಕ್ಕೂ ಸ್ಥಾವರ ಲಿಂಗಕ್ಕೂ ಇರುವ ಭೇದ ತಿಳಿಯದೆ, ಭ್ರಮೆಗೆ ಒಳಗಾಗುತ್ತಾನೆ. ಆತನ ಸಾಧನೆ ವ್ಯರ್ಥವಾಗುತ್ತದೆ. ಜೀವವಾಗಿರುವ ತನ್ನನ್ನು ಶಿವನನ್ನಾಗಿಸುವ ಲಿಂಗದ ಅರ್ಥ ತಿಳಿಯುವುದೇˌ ಅನುಸಂಧಾನ ಮಾಡುವುದೇ ಲಿಂಗ ನಡೆಯಾಗುತ್ತದೆ.” ಎಂದು ವಿವರಿಸಿದರು.

ಪ್ರಾರಂಭದಲ್ಲಿ ಶ್ರೀದೇವಿ ಶೇಖಾ ಅವರಿಂದ ವಚನ ಪ್ರಾರ್ಥನೆಯಾಯಿತು. ಕೊನೆಯಲ್ಲಿ ದಾನಮ್ಮ ಕುಂದರಗಿಯವರಿಂದ ವಚನ ಮಂಗಳವಾಯಿತು.  ಮುರುಗೇಶ್ ಶೇಖಾ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.

ಬಸವರಾಜ ಖಂಡಿ, ರಾಚಪ್ಪ  ಯಂಡಿಗೇರಿ, ಮಲಕಾಜಪ್ಪ ಅರುಟಗಿ, ಪಾಂಡಪ್ಪ ಕಳಸಾ,  ಪುತ್ರಪ್ಪ ಬೀಳಗಿ, ಚನ್ನಮಲ್ಲಪ್ಪ ಮಂಗಳೂರು, ಕೃಷ್ಣಪ್ಪ ಶಿರೂರ, ಕೃಷ್ಣಾಜಿ ಮಹೇಂದ್ರಕರ, ದಾಕ್ಷಾಯಿಣಿ ತೆಗ್ಗಿ, ದಾನಮ್ಮ ಕುಂದರಗಿ, ಸುರೇಖಾ ಗೆದ್ದಲಮರಿ ಮೊದಲಾದವರು ಉಪಸ್ಥಿತರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ

Leave a Reply

Your email address will not be published. Required fields are marked *