ಕಲ್ಯಾಣ ಕ್ರಾಂತಿ ವಿಜಯೋತ್ಸವದಲ್ಲಿ ಶರಣರ ಬಲಿದಾನದ ಸ್ಮರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಭಾಲ್ಕಿ :

ಪಟ್ಟಣದ ಶ್ರೀ ಚನ್ನಬಸವಾಶ್ರಮದಲ್ಲಿ ವಿಜಯ ದಶಮಿ ನಿಮಿತ್ಯ ಮರಣವೇ ಮಹಾನವಮಿ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ನೆರವೇರಿತು. ಶ್ರೀಮಠದಿಂದ ಚನ್ನಬಸವಾಶ್ರಮದವರೆಗೆ ವಚನ ಸಾಹಿತ್ಯ ಪಲ್ಲಕಿಯ ಮೆರವಣಿಗೆ ಜರುಗಿತು.

ಚನ್ನಬಸವಾಶ್ರಮದಲ್ಲಿ ಏರ್ಪಡಿಸಿದ ಸಮಾರಂಭದ ಸನ್ನಿಧಾನ ವಹಿಸಿ, ವಿಜಯದಶಮಿ ಅನೇಕ ಅರ್ಥಗಳಲ್ಲಿ ಭಾರತೀಯರು ಆಚರಿಸುತ್ತಾರೆ. ಶರಣರು ವಚನ ಸಾಹಿತ್ಯ ರಕ್ಷಣೆಗಾಗಿ ತ್ಯಾಗ, ಬಲಿದಾನ ಮಾಡಿರುವುದರಿಂದ ಕಲ್ಯಾಣ ಕ್ರಾಂತಿ ವಿಜಯೋತ್ಸವ ಎಂದು ಆಚರಿಸುತ್ತೇವೆ, ಎಂದು ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಹೇಳಿದರು.

ನಾವು ಹೊರಗಿನ ಶತ್ರುಗಳ ಮೇಲೆ ವಿಜಯ ಸಾಧಿಸುವ ಜೊತೆಗೆ ನಮ್ಮ ಅಂತರಂಗದಲ್ಲಿರುವ ಶತ್ರುಗಳ ಮೇಲೆ ವಿಜಯ ಸಾಧಿಸುವುದು ನಿಜವಾದ ವಿಜಯದಶಮಿ ಆಚರಣೆ ಆಗುತ್ತದೆ.

ಎಲ್ಲರ ಜೊತೆ ಪ್ರೀತಿ ಪ್ರೇಮದಿಂದ ಬಾಳಲು ಕಲಿಸುವುದು ಹಬ್ಬಗಳ ಉದ್ದೇಶವಾಗಿದೆ. ಅದನ್ನು ಅರ್ಥಮಾಡಿಕೊಂಡು ಬಾಳಬೇಕು ಎಂದು ಆಶೀರ್ವಚನ ನೀಡಿದರು.

ಪೂಜ್ಯ ಗುರುಬಸವ ಪಟ್ಟದ್ದೇವರು ಸಮ್ಮುಖ ವಹಿಸಿ, ಮನುಷ್ಯನ ಜೀವನದಲ್ಲಿ ಎಲ್ಲಕ್ಕಿಂತ ದೊಡ್ಡದ್ದು ಎಂದರೆ ಪ್ರೀತಿ. ಎಲ್ಲಿ ಪ್ರೀತಿ ಇರುತ್ತದೆಯೋ ಅಲ್ಲಿ ಅಧಿಕಾರ, ಸಂಪತ್ತು, ಕೀರ್ತಿ ಎಲ್ಲವೂ ಬರುತ್ತದೆ ಎಂದರು.

ಪೂಜ್ಯ ಮಹಾಲಿಂಗ ಸ್ವಾಮಿಗಳು, ಸಿದ್ಧಬಸವ ಸ್ವಾಮಿಗಳು, ಶಿವಬಸವ ಸ್ವಾಮಿಗಳು ಉಪಸ್ಥಿತರಿದ್ದರು.

ಸಚಿವರಾದ ಈಶ್ವರ ಖಂಡ್ರೆ ಅವರು ಬನ್ನಿ ಪೂಜೆ ನೆರವೇರಿಸಿ 12ನೇ ಶತಮಾನದಲ್ಲಿ ‘ಶರಣು ಶರಣಾರ್ಥಿ’ ಎಂಬ ಪದ ಬಹುದೊಡ್ಡ ಬದಲಾವಣೆ ತಂದಿತು.

ಹರಳಯ್ಯ, ಮಧುವರಸರ ಅವರ ಮಕ್ಕಳ ಮದುವೆಯಾದ ನಂತರ ಪುರೋಹಿತಶಾಹಿ ಅದನ್ನು ಸಹಿಸದೆ ಅವರಿಗೆ ಎಳೆಹೂಟೆ ಶಿಕ್ಷೆ ನೀಡುತ್ತದೆ.

ಕಲ್ಯಾಣದಲ್ಲಿ ಬಹುದೊಡ್ಡ ಹತ್ಯಾಕಾಂಡ ನಡೆದಾಗ, ಶರಣರು ಅದು ತಮ್ಮ ತತ್ವಕ್ಕಾಗಿ ನಡೆದ ತ್ಯಾಗ, ಬಲಿದಾನ ಎಂದು ಭಾವಿಸಿ, ಮರಣವೇ ಮಹಾನವಮಿ, ಕಲ್ಯಾಣ ಕ್ರಾಂತಿ ವಿಜಯೋತ್ಸವ ಆಚರಿಸಲು ಶುರು ಮಾಡಿದರು ಎಂದು ನುಡಿದರು.

ಪ್ರಕಾಶ ಖಂಡ್ರೆ ಅಧ್ಯಕ್ಷತೆ ವಹಿಸಿದ್ದರು. ಭಾಲ್ಕಿಯ ಅನೇಕ ಗಣ್ಯರು ಉಪಸ್ಥಿತರಿದ್ದರು. ನವಲಿಂಗ ಪಾಟೀಲ ನಿರೂಪಿಸಿದರು. ದೀಪಕ ಠಮಕೆ ಶರಣು ಸಮರ್ಪಣೆ ಮಾಡಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *