ನವ ಶರಣೆಯರು ವಿಜಯೋತ್ಸವದಲ್ಲಿ ಮಹಾದೇವಿ ಅಕ್ಕನ ಕುರಿತು ಉಪನ್ಯಾಸ

ರಾಯಚೂರು :

ಬಸವ ಕೇಂದ್ರದಲ್ಲಿ ಈಚೆಗೆ ನಡೆದ ನವ ಶರಣೆಯರ ವಿಜಯೋತ್ಸವದ ಅಂಗವಾಗಿ ಶರಣೆ ಅಕ್ಕಮಹಾದೇವಿ ಕುರಿತು ಡಾ. ಸರ್ವಮಂಗಳ ಸಕ್ರಿ ಅವರು ಉಪನ್ಯಾಸ ನೀಡಿದರು.

ಅವರು ಮಾತನಾಡುತ್ತ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪರೂಪದ ಮಹಿಳಾ ವಚನಕಾರತಿ, ಕವಿಯತ್ರಿ ಮಹಾದೇವಿಯಕ್ಕ ಆಗಿದ್ದಾರೆ. ಪುರುಷ ಸಮಾಜ ವ್ಯವಸ್ಥೆಯಲ್ಲಿ ಸ್ತ್ರೀಗೆ ಸಮಾನತೆ ಇರದ ಕಾಲದಲ್ಲಿ ಸಾಮಾಜಿಕ ಮತ್ತು ರಾಜಪ್ರಭುತ್ವವನ್ನು ಧಿಕ್ಕರಿಸಿದವಳು.

ಅಕ್ಕನ ವ್ಯಕ್ತಿತ್ವವನ್ನು ನಾಲ್ಕು ಬಗೆಯಾಗಿ ವಿಂಗಡಿಸಿ ನೋಡುವ ಪ್ರಯತ್ನ ಕಂಡು ಬರುತ್ತದೆ. ಅಕ್ಕಮಹಾದೇವಿಯ ಜನನ, ಅಕ್ಕನ ಬಾಲ್ಯ, ಅಕ್ಕನ ಯೌವನ, ಮದುವೆ. ಅಕ್ಕನ ಕಲ್ಯಾಣದೆಡೆಗೆ ಪಯಣ ಅಕ್ಕನ ಕದಳಿ ವನ ಪ್ರವೇಶ  ಹೀಗೆ ಅಕ್ಕನದು ಏಕಾಂಗಿ ಹೋರಾಟ.

ಅರಮನೆ ತೊರೆದ ಅಕ್ಕನ ಆತ್ಮಶೋಧ ನಿರಂತರವಾಗಿ ನಡೆಯುತ್ತದೆ. ಭಾರತದ ಶ್ರೇಷ್ಠ ಆಧ್ಯಾತ್ಮದ  ವಲಯದಲ್ಲಿ ದಿಗಂಬರ ತತ್ವಕ್ಕೆ ಅದರದೇ ಆದ ವ್ಯಕ್ತಿತ್ವವಿದೆ. ದೇಹ ನಿರ್ವಾಹಣವಾಗದೆ ಭಾವ ನಿರ್ವಾಹಣವಾಗುವುದು. ಈ ಭಾವ ಶೂನ್ಯ ತತ್ವಕ್ಕೆ ಅನ್ವಯಿಸುತ್ತದೆ. ಸರ್ವಸಂಗ ಪರಿತ್ಯಾಗಿಯಾಗುವದು ಮಹಿಳಾ ಆಧ್ಯಾತ್ಮ ಲೋಕಕ್ಕೆ ತುಂಬಾ ಕಠಿಣವಾದದ್ದು. ಇದನ್ನು ಅಕ್ಕ ಆಯ್ಕೆ ಮಾಡಿಕೊಂಡಳು. ಸಮಾಜದ ಕುಹಕ, ನಿಂದನೆ, ಆಪಾದನೆಗಳು ಬಂದರೂ  ಕೃಷಗೊಳ್ಳದೆ ಇರುವುದು, ವೇದನೆಗಳು ಅಕ್ಕನ ವಚನಗಳಲ್ಲಿ ಅಡಗಿವೆ.

ಅಕ್ಕನ ಜನಪ್ರಿಯ ವಚನಗಳಲ್ಲಿ ಇದು ಒಂದು,

ತನು ಕರಗದವರಲ್ಲಿ  ಮಜ್ಜನವ

ಒಲ್ಲೆಯಯ್ಯ ನೀನು, ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು … 

ಅಕ್ಕ ಶಿವನಿಗೆ ಸಮರ್ಪಿಸಿಕೊಳ್ಳಬೇಕಾದರೆ ತಾನು ಮತ್ತು ಮನವನ್ನು ದಂಡಿಸಬೇಕು, ಭಕ್ತಿಯ ಕಂಪನದಲ್ಲಿ ದೇಹ ಬಾಗಬೇಕು. ಮನ ಶಿವನಿಗೆ ಶರಣಾಗಬೇಕು. ಕರಸ್ಥಲದ ಲಿಂಗಕ್ಕೆ ಜಳಕ ಮಾಡಿಸುವ ಉತ್ಸುಕತೆಯನ್ನು ಆಕೆ ವ್ಯಕ್ತಪಡಿಸುತ್ತಾಳೆ.

ಅಷ್ಟವಿದಾರ್ಚನೆ ಷೋಡಶೋಪಚಾರಗಳಿಂದ ಅರ್ಪಣೆ ಅಕ್ಕನದು.  ಆದರೆ ಶರಣರು ಈ ಸಾಂಪ್ರದಾಯಿಕ ಆಚರಣೆಗಳನ್ನು ನಿರಾಕರಿಸಿ ಮನದಾಳದ ಭಕ್ತಿ ಹೃದಯ ಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು … ಈ ಸಾಲುಗಳನ್ನು ಅವರು ವಿಶಿಷ್ಟವಾಗಿ ತರ್ಕಿಸಿದರು.

ಹೃದಯ ಕಮಲ ಶಿವನ ವಾಸ ಸ್ಥಾನ. ಒಂಬತ್ತು ದಳದ ಈ ಹೃದಯ ಶಿವ ಬೀಜಮಂತ್ರವನ್ನು ಸ್ಫುರಿಸುತ್ತದೆ.  ಭಾವಗೀತೆಯ ಲಕ್ಷಣ ಉಳ್ಳ ಈ ವಚನ ಗೇಯತೆ ಪ್ರಾಸ ಕಾವ್ಯಾಂಶ ಗಮನ ಸೆಳೆಯುತ್ತದೆ ಎಂದು ಸರ್ವಮಂಗಳಾ ಅವರು ವಿವರಿಸಿದರು.  

 ಕಾರ್ಯಕ್ರಮದಲ್ಲಿ ತಾಯಿ ಚಂದ್ರಕಲಾ ಅವರು ರಚಿಸಿದ ‘ಭಾವ ಕುಸುಮಾ’ ಎಂಬ ಕವನ ಸಂಕಲನವನ್ನು ಬಸವ ಕೇಂದ್ರದ ಅಧ್ಯಕ್ಷರಾದ ರಾಚನಗೌಡ ಅವರು ಬಿಡುಗಡೆಗೊಳಿಸಿದರು.

ಸಂಕಲನದ ಬಗ್ಗೆ ಶಿವಲೀಲಾ ಬಸನಗೌಡ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆ ಪ್ರಿಯಾಂಕ, ಸ್ವಾಗತ ಪಾರ್ವತಿ ಪಾಟೀಲ, ವಚನ ಪ್ರಾರ್ಥನೆ ಅಕ್ಕನ ಬಳಗದ ತಾಯಂದಿರಿಂದ, ಶಿವಯೋಗ ಪ್ರಾತ್ಯಕ್ಷಿಕೆ ಲಾಸ್ಯ ಪುಟಾಣಿ ಮಗುವಿನಿಂದ, ಶರಣು ಸಮರ್ಪಣೆ ವಿಜಯಲಕ್ಷ್ಮಿ   ವಡಗೇರಿ ಮತ್ತು ವಚನ ಸಂವಿಧಾನ ಬೋಧನೆಯನ್ನು ಮುಕ್ತಾ ನರಕಲದಿನ್ನಿ ನಡೆಸಿಕೊಟ್ಟರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *