ಗದಗ
“ಒಂದು ದೊಡ್ಡ ಶಕ್ತಿ ಲಿಂಗಾಯತರನ್ನೇ ಬಳಸಿಕೊಂಡು ಲಿಂಗಾಯತ ಧರ್ಮವನ್ನು ವಿರೋಧಿಸುತ್ತಿದೆ. ಲಿಂಗಾಯತ ಧರ್ಮ ಪ್ರಸಾರವಾಗಬಾರದು ಎನ್ನುವುದು ಇದರ ಹಿಂದಿನ ಉದ್ದೇಶ,” ಎಂದು ಇಳಕಲ್ನ ಚಿತ್ತರಗಿ ವಿಜಯ ಮಹಾಂತೇಶ ಮಠದ ಪೂಜ್ಯ ಗುರುಮಹಾಂತ ಸ್ವಾಮೀಜಿ ಗುರುವಾರ ಹೇಳಿದರು.
ನಗರದ ತೋಂಟದಾರ್ಯ ಮಠದಲ್ಲಿ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಎಂಟನೇ ಸ್ವಾಮೀಜಿ ಪುಣ್ಯಸ್ಮರಣೆಯಲ್ಲಿ ಮಾತನಾಡಿದರು.

“ನಮ್ಮವರೇ ನಮಗೆ ಎದುರಾಗುತ್ತಿರುವ ಸಂಕಷ್ಟದ ಕಾಲ ಬಂದಿದೆ. ಲಿಂಗಾಯತ ತತ್ವಗಳನ್ನು ಪ್ರಸಾರ ಮಾಡುವ ಮಠಗಳ, ವ್ಯಕ್ತಿಗಳ ತೇಜೋವಧೆ ಮಾಡಿ ಲಿಂಗಾಯತ ಜನರೇ ಅವರನ್ನು ನಂಬದಿರುವಂತೆ ಮಾಡಲಾಗುತ್ತಿದೆ.
ಲಿಂಗಾಯತ ಸಮಾಜದ ಮೇಲೆ ಲಿಂಗಾಯತ ಮಠಾಧೀಶರ ಪ್ರಭಾವ ಕುಗ್ಗಿಸಲು ಅವರ ಮಠಾಧೀಶರ ಚಾರಿತ್ರ್ಯವಧೆ, ವೈಯಕ್ತಿಕ ನಿಂದನೆ ಮಾಡಲಾಗುತ್ತಿದೆ.
ಇದನ್ನು ನೋಡಿ ಲಿಂಗಾಯತರು ಮಠಗಳಿಂದ ದೂರ ಸರಿಯಬಾರದು. ಸತ್ಯ, ಅಸತ್ಯತೆ ಅರಿಯಬೇಕು, ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು. ಲಿಂಗಾಯತರು ಪ್ರಜ್ಞಾವಂತರಾಗುವುದೇ ಇದಕ್ಕೆ ಪರಿಹಾರ.
ನೂರು ವರ್ಷದ ಹಿಂದೆ ಯಾವ ಲಿಂಗಾಯತನಿಗೂ ಸಹಿ ಮಾಡಲು ಬರ್ತಿದಿಲ್ಲ. ಲಿಂಗಾಯತ ಮಠಾಧೀಶರ ತ್ಯಾಗ, ಬಲಿದಾನದಿಂದ ಸಮುದಾಯ ಬೆಳೆದಿದೆ. ಇದನ್ನು ಮರೆಯಬಾರದು,” ಎಂದು ಗುರುಮಹಾಂತ ಸ್ವಾಮೀಜಿ ಹೇಳಿದರು.

ಇದೇ ಸಂದರ್ಭದಲ್ಲಿ ಬಸವತತ್ವ ಪ್ರಸಾರಕ್ಕೆ ಗಮನಾರ್ಹ ಸೇವೆ ಸಲ್ಲಿಸಿರುವ ಎಸ್. ಕೆ. ಕಾಂತಾ, ಡಾ. ಆನಂದ ಪಾಂಡುರಂಗಿ (ಮರಣೋತ್ತರ), ಆಯ್. ಆರ್. ಮಠಪತಿ, ಚಂದ್ರಶೇಖರ ಸೋಮಶೆಟ್ಟಿ, ಬಸವ ಮೀಡಿಯಾ ಅವರಿಗೆ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಬಸವ ಮೀಡಿಯಾ ಪ್ರೋತ್ಸಾಹಿಸಲು ಪ್ರಶಸ್ತಿ
“ಪೂಜ್ಯ ಸಿದ್ದಲಿಂಗ ಸ್ವಾಮೀಜಿ ಹಲವಾರು ಕ್ಷೇತ್ರಗಳಲ್ಲಿ ಕೊಡುಗೆ ಸಲ್ಲಿಸಿದರು, ಸಮಾಜ ಸೇವೆಗಾಗಿಯೇ ನಿರಂತರವಾಗಿ ಬದುಕಿದರು. ಅವರ ಸ್ಮರಣೆಯಲ್ಲಿ ವಿಶೇಷವಾಗಿ ಐದು ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ,” ಎಂದು ತೋಂಟದಾರ್ಯ ಮಠದ ಪೂಜ್ಯ ಡಾ. ಸಿದ್ದರಾಮ ಸ್ವಾಮೀಜಿ ಹೇಳಿದರು.
ಬಸವ ಮೀಡಿಯಾದ ಬಗ್ಗೆ ಮಾತನಾಡುತ್ತ, ” ಇದು ಬಸವಾದಿ ಶರಣರ ಆದರ್ಶಗಳನ್ನ, ಮೌಲ್ಯಗಳನ್ನ ನಿರಂತರವಾಗಿ ಪ್ರಸಾರ ಮಾಡುತ್ತಿರುವ ವಿಶಿಷ್ಟ ಸಂಸ್ಥೆ. ಎರಡು ವರ್ಷಗಳಲ್ಲಿ ಬಹಳ ಅದ್ಬುತವಾಗಿರುವ ಸಾಧನೆ ಮಾಡಿದೆ. ಬಸವ ಮೀಡಿಯಾದ ಸಾಧನೆ ಇದೇ ರೀತಿ ಮುಂದುವರೆಯಲಿ, ಬಸವಾದಿ ಶಿವಶರಣರ ಆಶಯಗಳನ್ನು ಹೀಗೆಯೇ ಪ್ರಸಾರ ಮಾಡಲಿ, ಉತ್ತರೋತ್ತರವಾಗಿ ಇನ್ನೂ ಹೆಚ್ಚಿನ ಕೆಲಸ ಮಾಡಲಿ ಎಂದು ಪ್ರೋತ್ಸಾಹದಾಯಕವಾಗಿ ಈ ವರ್ಷದ ಪ್ರಶಸ್ತಿಯನ್ನ ಪ್ರದಾನ ಮಾಡಲಾಗಿದೆ,” ಎಂದರು.

ಮಠಾಧಿಪತಿಗಳ ಜೊತೆ ಗಟ್ಟಿಯಾಗಿ ನಿಲ್ಲಬೇಕು
“ಲಿಂಗಾಯತ ಮಠಗಳ ಮೇಲೆ, ತತ್ವ ಪ್ರಸಾರಕರ ಮೇಲೆ ದಾಳಿ ನಡೆಯುತ್ತಿದ್ದರೂ ವಿಚಲಿತರಾಗಬಾರದು. ಮಠಾಧಿಪತಿಗಳ ಜೊತೆ ಭಕ್ತರು ಗಟ್ಟಿಯಾಗಿ ನಿಲ್ಲಬೇಕು.
ಯಾವುದೇ ವ್ಯಕ್ತಿ, ಧರ್ಮ ದೇವರುಗಳನ್ನು ಬೈಯ್ಯುವ ಅಗತ್ಯವಿಲ್ಲ. ಬಸವಣ್ಣನವರೇ ಇದಿರ ಹಳಿಯಲು ಬೇಡ ಎಂದು ಹೇಳಿದ್ದರು. ನಮ್ಮ ತತ್ವ, ಆದರ್ಶ, ಮೌಲ್ಯಗಳಿಗೆ ಬದ್ದವಾಗಿದ್ದುಕೊಂಡು ಅವುಗಳ ಪ್ರತಿಪಾದನೆ ಮಾಡೋಣ.
ಸಿದ್ದಲಿಂಗ ಸ್ವಾಮೀಜಿ ಹೇಳುತ್ತಿದ್ದ ಹಾಗೆ ಇನ್ನೊಬ್ಬರು ಹಾಕಿದ ಗೆರೆಯನ್ನು ಅಳಿಸಿ ಸಣ್ಣದು ಮಾಡುವುದು ಬೇಡ. ನಮ್ಮ ಗೆರೆ ದೊಡ್ಡದು ಮಾಡಿದರೆ ಸಾಕು,” ಎಂದು ಡಾ. ಸಿದ್ದರಾಮ ಸ್ವಾಮೀಜಿ ಹೇಳಿದರು.
ಪ್ರಾಣ ಕೊಟ್ಟೇವು, ತತ್ವ ಬಿಡೆವು
‘ಜನರು ಅಜ್ಞಾನದ ಅಂಧಕಾರದಲ್ಲೇ ಇರಬೇಕು ಎನ್ನುವುದು ಮಾನಸಿಕ ಭಯೋತ್ಪಾದನೆ. ಇದನ್ನು ಪ್ರಶ್ನಿಸುವವರನ್ನು ಮತೀಯವಾದಿಗಳು ವೈಯಕ್ತಿಕವಾಗಿ ಟೀಕಿಸುತ್ತಾರೆ,’ ಎಂದು ಮುಂಡರಗಿ-ಬೈಲೂರು ತೋಂಟದಾರ್ಯ ಶಾಖಾಮಠದ ನಿಜಗುಣಪ್ರಭು ಸ್ವಾಮೀಜಿ ಹೇಳಿದರು.
‘ಬುದ್ಧ ಬಸವಣ್ಣ ಅವರ ಕಾಲದಿಂದಲೂ ವೈಯಕ್ತಿಕ ಪ್ರಹಾರ ಪ್ರಹಾರ ನಡೆದಿದೆ. ಜನರನ್ನು ಮೌಡ್ಯದ ಕತ್ತಲಲ್ಲಿ ಇಡಲಾಗದು. ಬಸವಾದಿ ಪ್ರಮಥರ ಚಿಂತನೆಯನ್ನು ಅಳಿಸಲಾಗದು. ಒಂದು ಧರ್ಮವನ್ನು ವಿರೋಧಿಸುವ ಉದ್ದೇಶದಿಂದ ವೈಚಾರಿಕ ಚಿಂತನೆಯನ್ನೇ ನಾಶಪಡಿಸಲು ಆಗದು.

ವಚನ, ಸಂವಿಧಾನ ಆಧರಿಸಿ ನಾವು ಮಾತನಾಡಿದ್ದೇವೆಯೇ ಹೊರತು ಯಾರನ್ನೂ ವೈಯಕ್ತಿಕವಾಗಿ ಟೀಕಿಸಿಲ್ಲ. ಬಸವತತ್ವ ಒಪ್ಪುವವರನ್ನು ಒಪ್ಪುತ್ತೇವೆ. ಲಿಂಗಾಚಾರ, ಗಣಾಚಾರ, ಶಿವಾಚಾರವು, ಏನನ್ನು ಪ್ರತಿಪಾದಿಸುತ್ತದೆ ಎಂಬುದನ್ನು ಟೀಕಾಕಾರರು ಹೇಳಲಿ. ವೈಚಾರಿಕ ತಳಹದಿಯ ಚರ್ಚೆಗೆ ಸದಾ ಸ್ವಾಗತವಿದೆ.
ನಾವು ಆದಿ ಅನಾದಿ ಒಪ್ಪುವವರಲ್ಲ. ಶರಣರ ವಿಚಾರ ಒಪ್ಪುತ್ತೇವೆ. ಚಾತುರ್ವರ್ಣದ ಮನಸ್ಥಿತಿಯನ್ನು ಇಂದಿನ ಸಮಾಜ ಒಪ್ಪುವುದಿಲ್ಲ. ಧರ್ಮ ಪ್ರಸಾರ ಮಾಡುವವರು ಹೆದರಬಾರದು, ಪ್ರಾಣ ಕೊಟ್ಟೇವು ತತ್ವ ಬಿಡೆವು ಎಂಬ ಮನೋಭಾವ ಇರಬೇಕು’ ಎಂದರು.
ಆರ್ಥಿಕ ಮುಗ್ಗಟ್ಟಿನಲ್ಲಿ ಬಸವ ಮೀಡಿಯಾ
ಪ್ರಶಸ್ತಿ ಪ್ರದಾನ ಮಾಡಿದ ಜಾಗತಿಕ ಲಿಂಗಾಯತ ಮಹಾಸಭಾದ ಎಸ್ ಎಂ ಜಾಮದಾರ್ ಪೂಜ್ಯ ಸಿದ್ದಲಿಂಗ ಸ್ವಾಮೀಜಿಯವರ ಸ್ಮರಿಸಿಕೊಂಡು ಅವರ ಮಾರ್ಗದಲ್ಲಿಯೇ ಡಾ. ಸಿದ್ದರಾಮ ಸ್ವಾಮೀಜಿ ಸಾಗುತ್ತಿದ್ದಾರೆ. ನೆನ್ನೆಯೇ ತಮ್ಮ ಪೂರ್ವಾಶ್ರಮದ ತಂದೆಯನ್ನು ಕಳೆದುಕೊಂಡರೂ ಅವರು ಇಂದು ಈ ಕಾರ್ಯಕ್ರಮದಲ್ಲಿ ನಿರ್ಲಿಪ್ತರಾಗಿ ಭಾಗವಹಿಸುತ್ತಿದ್ದಾರೆ, ಎಂದರು.

ಪ್ರಶಸ್ತಿ ಪುರಸ್ಕೃತರ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟು ಅವರೊಂದಿಗಿನ ತಮ್ಮ ವೈಯಕ್ತಿಕ ಅನುಭವ ಹಂಚಿಕೊಂಡರು.
ನಿರಂತರವಾಗಿ ಬಸವತತ್ವ ಪ್ರಚಾರ ಮಾಡುತ್ತಿರುವ ಬಸವ ಮೀಡಿಯಾ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿದೆ, ಲಿಂಗಾಯತ ಸಮಾಜ ಅದರ ಜೊತೆ ಆರ್ಥಿಕವಾಗಿ, ತಾತ್ವಿಕವಾಗಿ ನಿಲ್ಲಬೇಕೆಂದು ಹೇಳಿದರು.
ಲಿಂಗಾಯತ ಧರ್ಮ, ಮಠಗಳ, ಶರಣ ತತ್ವ, ಬಸವಣ್ಣನವರ ಬಗ್ಗೆ ವಿರುದ್ಧ ಅವಹೇಳನಕಾರಿಯಾಗಿ ಅಪಪ್ರಚಾರ ಮಾಡುವ ಕಾರ್ಯಕ್ರಮಗಳು ಕೆಲವು ತಿಂಗಳುಗಳಿಂದ ನಡೆಯುತ್ತಿವೆ. ಕುಖ್ಯಾತ ಲಿಂಗಾಯತ ಸ್ವಾಮಿಗಳು ಮತ್ತು ರಾಜಕಾರಿಗಳು ಇದನ್ನು ಮಾಡುತ್ತಿದ್ದಾರೆ.
ಸ್ವಾಮಿಗಳ ಚಾರಿತ್ಯ್ರವಧೆ ಮಾಡುವ ಪ್ರಯತ್ನ ನಡೆಯುತ್ತಿದೆ, ಅವರ ವಿರುದ್ಧ ಇಲ್ಲಸಲ್ಲದ ಹೇಳಿಕೆ ಕೊಡುತ್ತಿದ್ದಾರೆ.
ಅವು ಯಾವುದಕ್ಕೂ ನಾವು ಹೆದರದೆ, ಇನ್ನಷ್ಟು ಧೈರ್ಯದಿಂದ, ಇನ್ನಷ್ಟು ಸಂಘಟನೆಯಿಂದ ಇಂತಹ ಪ್ರಯತ್ನಗಳನ್ನು ಎದುರಿಸಬೇಕಾಗಿದೆ ಎಂದು ಕರೆ ಕೊಟ್ಟರು.

ಬೈರನಟ್ಟಿ ಶಾಂತಲಿಂಗ ಸ್ವಾಮಿಗಳು, ಆಳಂದದ ಕೋರಣೇಶ್ವರ ಸ್ವಾಮಿಗಳು, ಸಂಡೂರಿನ ಪ್ರಭು ಮಹಾಂತ ಸ್ವಾಮಿಗಳು, ಆಲಮೇಲದ ಜಗದೇವ ಮಲ್ಲಿಬೊಮ್ಮಯ್ಯ ಸ್ವಾಮಿಗಳು, ಅರಸಿಕೇರಿಯ ಶಾಂತಲಿಂಗ ದೇಸಿಕೇಂದ್ರ ಸ್ವಾಮಿಗಳು, ಬಸವಕಲ್ಯಾಣದ ಶಿವಾನಂದ ಸ್ವಾಮಿಗಳು, ಬೇಲೂರಿನ ಮಹಾಂತ ಸ್ವಾಮಿಗಳು, ಬಸವಬೆಳವಿಯ ಶರಣಬಸವ ಸ್ವಾಮಿಗಳು, ರುದ್ನೂರಿನ ಮಲ್ಲಿಕಾರ್ಜುನ ಸ್ವಾಮಿಗಳು, ಬಾಚಿಗೊಂಡನಹಳ್ಳಿಯ ಶಿವಮಹಾಂತ ಸ್ವಾಮಿಗಳು ವೇದಿಕೆಯಲ್ಲಿ ಆಸೀನರಾಗಿದ್ದರು.

ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ವಿನಾಯಕ ಮಾನ್ವಿ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಉಮೇಶ ಪುರದ, ಲೇಖಕರಾದ ಪ್ರದೀಪಕುಮಾರ್ ಹೆಬ್ರಿ, ಪ್ರೊ. ಆರ್.ಎಸ್. ಲೆಕ್ಕದ, ಬಸವ ಮೀಡಿಯಾ ಟ್ರಸ್ಟ್ ಚೇರ್ಮನ್ ಟಿ.ಆರ್. ಚಂದ್ರಶೇಖರ, ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಸಂಸದ ಐ.ಜಿ. ಸನದಿ, ಮಾಜಿ ಶಾಸಕ ಕೆ. ಶರಣಪ್ಪ, ಜೆ.ಎಲ್.ಎಂ.ನ ಕೆ.ಎಸ್. ಚಟ್ಟಿ, ಶೇಖಣ್ಣ ಕವಳಿಕಾಯಿ, ಬಸವದಳದ ಪ್ರಕಾಶ ಅಸುಂಡಿ, ಆದಿತ್ಯ ಪಾಂಡುರಂಗಿ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭದ ಸ್ವಾಗತ ಮತ್ತು ಪ್ರಾಸ್ತಾವಿಕ ನುಡಿಗಳನ್ನು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಪ್ರೊ. ಎಸ್.ಎಸ್. ಪಟ್ಟಣಶೆಟ್ಟರ ಅವರು ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಸಮಾರಂಭವನ್ನು ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ನಾಲ್ಕು ಹೊಸ ಪುಸ್ತಕಗಳು ಲೋಕಾರ್ಪಣೆಯಾದವು. ಕಾರ್ಯಕ್ರಮಕ್ಕೆ ಮುಂಚೆ ನೂತನವಾಗಿ ನಿರ್ಮಾಣವಾಗಿರುವ ಸುವರ್ಣ ಸೌಧದ ಲೋಕಾರ್ಪಣೆಯಾಯಿತು.

ಧರ್ಮ ದಾರಿ ತೋರುವ ನಿಮಗೆ ಧನ್ಯವಾದಗಳು 💐💐👏🏻👏🏻