ಶರಣ ವಿಜಯೋತ್ಸವ, ಹುತಾತ್ಮ ದಿನಾಚರಣೆಯ ಮಂಗಲ ಸಮಾರಂಭ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ :

ಪ್ರತಿಯೊಬ್ಬರು ನಿತ್ಯ ಇಷ್ಟಲಿಂಗಪೂಜೆಯೋಗ, ವಚನ ಪಠಣ, ಶರಣರ ಚರಿತ್ರೆ ಅಧ್ಯಯನ ಮಾಡಬೇಕು ಎಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.

ಅವರು ಅಂತರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಮತ್ತು ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ೧೧ ದಿನಗಳವರೆಗೆ ನಡೆದ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಮಂಗಲ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

ವಚನ ಪಠಣವು ಮನಸ್ಸಿಗೆ ಶಾಂತಿ, ಆತ್ಮವಿಶ್ವಾಸ, ಸಕರಾತ್ಮಕ ಚಿಂತನೆಯನ್ನು ನೀಡುತ್ತದೆ. ವಚನಗಳನ್ನು ನಮ್ಮ ನಡೆ ನುಡಿಯಲ್ಲಿ ಪ್ರತಿಫಲಿಸಿದಾಗ ಮಾತ್ರ ಶರಣರ ಆಶಯ ಸಾಕಾರವಾಗುತ್ತದೆ.

ವಚನಗಳ ಸಂದೇಶಗಳನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ಅನುಸರಿಸಿದರೆ ಉತ್ತಮ ವ್ಯಕ್ತಿ, ಉತ್ತಮ ಕುಟುಂಬ ಮತ್ತು ಉತ್ತಮ ಸಮಾಜ ನಿರ್ಮಿಸಬಹುದು ಎಂದು ಅಕ್ಕ ನುಡಿದರು.

ನೇತೃತ್ವ ವಹಿಸಿದ ಪೂಜ್ಯ ಸತ್ಯಕ್ಕತಾಯಿ ಮಾತನಾಡಿ, ಶರಣರ ಸಂಗವು ಮನುಷ್ಯನ ಜ್ಞಾನ, ವಿವೇಕ, ವಿನಯ ಮತ್ತು ಮಾನವೀಯತೆಯನ್ನು ನೀಡುತ್ತದೆ. ಈ ತತ್ವ ಗಟ್ಟಿಯಾಗಿ ಬೆಳೆಯಬೇಕಾದರೆ ಭಕ್ತಿ, ಶೃದ್ಧೆ, ಶರಣರ ಸಂಸ್ಕೃತಿಯನ್ನು ನಮ್ಮ ಮಕ್ಕಳಲ್ಲಿ ಮೂಡಿಸಬೇಕು. ಸತ್ಯ ಶರಣರ ಸುಳುಹು ತೋರುತ್ತಿದ್ದೆಯ್ಯಾ ಎಂಬ ಅಕ್ಕನ ವಚನದಂತೆ ಇಂದು ಬಸವಕಲ್ಯಾಣದ ಸುತ್ತ ಶರಣರ ಚೇತನಗಳು ಕಂಡುಬರುತ್ತಿವೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದ ಅಧ್ಯಕ್ಷ ಶ್ರೀಶೈಲ ಹುಡೇದ ಮಾತನಾಡಿ, ಗುರು, ಲಿಂಗ, ಜಂಗಮಕ್ಕೆ ಆಧಾರ ಭಕ್ತ, ಹರ ಮುನಿದರೂ ಗುರು ಕಾಯುವನು. ಭಕ್ತನ ಅಂಗಳವೇ ವಾರಣಾಸಿ, ಭಕ್ತನ ಸ್ಥಾನ ಎಲ್ಲಕ್ಕಿಂತ ಶ್ರೇಷ್ಠ. ಶರಣ ಸಂಸ್ಸೃತಿಯಲ್ಲಿ ಭಕ್ತಿ ಎಂದರೆ ಕೇವಲ ಪೂಜೆ, ತಪಸ್ಸು ಅಥವಾ ಆಚರಣೆಗಳಲ್ಲ ಮನಸ್ಸಿನ ಶುದ್ಧತೆ,ಕಾಯಕದ ಪ್ರಾಮಾಣಿಕತೆ ಮತ್ತು ದಾಸೋಹದ ಮನೋಭಾವವೇ ಆಗಿದೆ ಎಂದರು.

ಲಕ್ಷ್ಮೀಬಾಯಿ ಪಾಟೀಲ ಮಾತನಾಡಿದರು. ಪೂಜ್ಯ ಶ್ರೀಶೈಲಸ್ವಾಮಿ, ಗಣಪತಿ ಕಾಸ್ತೆ, ಶಾಮರಾವಸಿಂಗ್, ನಾಗಪ್ಪ ನಿಣ್ಣೆ, ಜಯಶ್ರೀ ಪಾಟೀಲ, ಸುಲೋಚನಾ ಗುದಗೆ, ಸಂಗೀತಾ ಪಟ್ನೆ, ಮಲ್ಲಿಕಾರ್ಜುನ ದಯಾಡೆ, ಸುಧೀರ ವಾಡೇಕರ ಉಪಸ್ಥಿತರಿದ್ದರು.

ವಚನ ಪಠಣ:
ಇದಕ್ಕೂ ಮೊದಲು ಅಕ್ಕನ ಬಳಗ ಬಸವಕಲ್ಯಾಣ ವತಿಯಿಂದ ವಚನ ಸಂಗೀತದೊಂದಿಗೆ ೧೦೮ ಸಾಮೂಹಿಕ ವಚನಗಳ ಪಠಣ ನಡೆಯಿತು. ರಂಜನಾ ಭೂಶೆಟ್ಟಿ ಮತ್ತು ಅವಿನಾಶ ಬೋಸಗಾ ಇವರ ವಚನ ಸಂಗೀತ ಜರುಗಿತು. ನಾಗಮ್ಮ ಕೌಡಾಳೆ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bum3N1nvJ1T3EV8phOUece

Share This Article
Leave a comment

Leave a Reply

Your email address will not be published. Required fields are marked *