ಯಲಬುರ್ಗಾ :
ತಾಲೂಕಿನ ಮದ್ಲೂರು ಗ್ರಾಮದಲ್ಲಿ ಶರಣ ಅಮರೇಶ ಕುಡಗುಂಟಿ ಅವರ ನೂತನ ಮನೆಯ ಗುರುಪ್ರವೇಶ ರಾಷ್ಟ್ರೀಯ ಬಸವದಳದ ನೇತೃತ್ವದಲ್ಲಿ ಲಿಂಗಾಯತ ಧರ್ಮದ ಶರಣತತ್ವದಂತೆ ನಡೆಯಿತು.
ಮೌಢ್ಯಾಚರಣೆಗಳಂತಹ ಪೂಜಾ ಕೈಂಕರ್ಯಗಳನ್ನು ಹೊರತುಪಡಿಸಿ. ಗುರುಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ವಚನ ಪಠಣದೊಂದಿಗೆ, ಷಟಸ್ಥಲ ಧ್ವಜಾರೋಹಣ, ಗುರುಪೂಜೆ, ಸಾಮೂಹಿಕ ಇಷ್ಟಲಿಂಗ ಪೂಜೆ, ಮಾಡುವುದರ ಮೂಲಕ ನೂತನ ಮನೆಯ ಗುರುಪ್ರವೇಶ ಮಾಡಿ ದೈವೀಕರಿಸಲಾಯಿತು.
ನಂತರ ಪ್ರಾಸ್ತಾವಿಕ ಮಾತನಾಡಿದ ಬಸವರಾಜ ಹೂಗಾರ ಅವರು, ಇಂದು ವಿಶೇಷವಾಗಿ ಮದ್ಲೂರ ಗ್ರಾಮದಲ್ಲಿ ಯಾವುದೇ ರೀತಿಯ ದುಂದುವೆಚ್ಚವಿಲ್ಲದೆ, ಮೌಢ್ಯ ಆಚರಣೆಗಳನ್ನ ಮಾಡದೇ, ಶರಣರ ವಚನಗಳಂತೆ ಗೃಹದಲ್ಲಿ ಗುರುಪ್ರವೇಶ ಆಗಿರುವುದು ಗ್ರಾಮದಲ್ಲಿ ಇದೇ ಮೊದಲ ಕಾರ್ಯಕ್ರಮ ಎನ್ನಬಹುದು ಎಂದರು.

ತತ್ವನಿಷ್ಠರಾದ ಶರಣ ಅಮರೇಶಪ್ಪ ಅವರು ವಚನ ಸಾಹಿತ್ಯದಂದತೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅತ್ಯಂತ ಸಂತೋಷದೊಂದಿಗೆ ಶ್ಲಾಘನೀಯವಾದದ್ದು.
ಲಿಂಗಾಯತ ಧರ್ಮದವರಾದ ನಾವುಗಳು ನಮ್ಮ ಆಚರಣೆಗಳನ್ನು ಅಂತ್ರ, ಮಂತ್ರ, ತಂತ್ರದಿಂದ ಮಾಡಬಾರದು, ಅಂಗದ ಮೇಲೆ ಲಿಂಗ ಧರಿಸಿ, ಲಿಂಗಾಂಗ ಸಾಮರಸ್ಯದಿಂದ ಶಿವಯೋಗ ಮಾಡುವುದರ ಮೂಲಕ ನಮ್ಮ ಮನೆಯಲ್ಲಿ ಬರುವ ಧಾರ್ಮಿಕ ಕಾರ್ಯಗಳನ್ನು ಮಾಡಬೇಕು. ಅಂದಾಗ ಮಾತ್ರ ಮಾನಸಿಕ ನೆಮ್ಮದಿಯ ಭಕ್ತಿ ನೆಲೆಗೊಳ್ಳಲು ಸಾಧ್ಯವಿದೆ.
ನಮಗೆ ಏನೂ ತಿಳಿಯದಿದ್ದರೂ ಸಹಿತ ‘ಓಂ ನಮಃ ಶಿವಾಯ’ ‘ಓಂ ಬಸವಾಯ ನಮಃ’ ಎಂದು ಜಪಿಸಿದರೆ, ತಿಳಿಯದೇ ಮಾಡಿದ ಹಿಂದಿನ ಏಳು ಜನ್ಮದ ಕರ್ಮದ ಕಟ್ಟುಗಳು ಹರಿದು ಹೋಗುತ್ತವೆ.
ನಮ್ಮನ್ನು ಭವಬಂಧನದಲ್ಲಿ ಸಿಕ್ಕಿಸುವ ಕರ್ಮದ ಕಟ್ಟುಗಳು ನಾಶವಾಗುತ್ತವೆ. ತಿಳಿದಿಲ್ಲದಿದ್ದರೂ ಮಂತ್ರದ ಉಚ್ಚಾರದಿಂದ ಧ್ವನಿ ಕಂಪನಗಳು ಪಸರಿಸಿ ನಮ್ಮ ದೇಹದ ನರಗಳ ಮೇಲೆ ಪರಿಣಾಮವು ಸಾಧ್ಯವಾಗುತ್ತದೆ.

ಈ ಮಂತ್ರವನ್ನು ಹೇಳಲು ಯಾರಿಗೂ ಯಾವ ನಿರ್ಬಂಧವಿಲ್ಲ. ಈ ಮಂತ್ರವನ್ನು ನಿರಂತರವಾಗಿ ಹೇಳುವುದರಿಂದ ಅನೇಕ ದೈಹಿಕ ಆರೋಗ್ಯ ಸಮಸ್ಯೆಗಳ ನಿವಾರಣೆಯಾಗಿ ಆತ್ಮಶಾಂತಿ ಲಭಿಸುವುದರ ಜೊತೆಗೆ ಹೃದಯ ಹಾಗೂ ಮನಸ್ಸಿನಲ್ಲಿ ಸದಾ ಸಂತೋಷವು ನೆಲೆಸುತ್ತದೆ.
ಅದಕ್ಕಾಗಿ ಗುರು ಬಸವಣ್ಣನವರು ಕೊಟ್ಟಂತಹ ಇಷ್ಟಲಿಂಗ ಧರಿಸಿ, ದಿನಂಪ್ರತಿ ಕಾಯಕದ ಜೊತೆ ಗುರು ಬಸವ ಶಿವಯೋಗ ಮಾಡುತ್ತಾ ಬಂದರೆ, ಭವ ಬಂಧನದಿಂದ ದೂರಾಗಿ ಭಕ್ತಿ ಮಾರ್ಗ ಪಡೆಯಲು ಸಾಧ್ಯ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಟುಂಬದವರಾದ ಹನುಮಮ್ಮ ಹನುಮಂತಪ್ಪ, ನಂದಿಶ, ಆದಪ್ಪ, ಬಸವರಾಜ ಕುಡಗುಂಟಿ ಮತ್ತು ರೇವಣಪ್ಪ ಮತ್ತಿ, ನಾಗನಗೌಡ ಜಾಲಿಹಾಳ, ಗಿರಿಮಲ್ಲಪ್ಪ ಪರಂಗಿ, ಹನುಮೇಶ ಹೊಸಳ್ಳಿ, ನಿಜಲಿಂಗಪ್ಪ, ದೇವೇಂದ್ರಪ್ಪ ಆವಾರಿ, ಪಕೀರಪ್ಪ ಮಂತ್ರಿ, ಇತರರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
