ಬಸವತತ್ವ ವಿಕೃತಿಗೊಳಿಸುತ್ತಿರುವವರ ವಿರುದ್ಧ ವೈಚಾರಿಕ ಪ್ರವಾಹ ಸೃಷ್ಟಿಸಬೇಕು, ಶರಣ ಪಡೆ ಕಟ್ಟಬೇಕು
ಬೆಂಗಳೂರು
ಬಾಪುಗೌಡ ಮೇಟಿ ಅಲಿಯಾಸ್ ಕನ್ನೇರಿ ಸ್ವಾಮಿ ಎಂಬಾತನಿಗೆ ತರಬೇತಿ ಕೊಟ್ಟು, ಕರ್ನಾಟಕದ ವಿವಿಧ ಕಡೆ “ಬಸವಾದಿ ಶರಣರ ಹಿಂದುತ್ವ ಸಮಾವೇಶ” ನಡೆಸಲಾಗುತ್ತಿದೆ.
ಲಿಂಗಾಯತವನ್ನು, ಬಸವ ಪಥವನ್ನು, ಶರಣ ಚಳುವಳಿಯನ್ನು ಬುಡಮೇಲು ಮಾಡುವುದಕ್ಕಾಗಿ ಮನುವಾದಿಗಳು ಇದನ್ನು ಮಾಡಿಸುತ್ತಿದ್ದಾರೆ.
ಹಾಗಾಗಿ ಈ ಸಮಾವೇಶವನ್ನು, ಕನ್ನೇರಿ ಕಂತ್ರಿಸ್ವಾಮಿಯ ಎಲ್ಲಾ ಹೊಲಸು ಹೇಳಿಕೆಗಳನ್ನು ಅಮರ ಜ್ಞಾನಪೀಠವು ಖಂಡ ತುಂಡಾಗಿ ಖಂಡಿಸುತ್ತದೆ.
ಬುದ್ಧನ ನಂತರ, ಸಿದ್ದರ ನಂತರ ಬಸವಾದಿಗಳ ಬಂಡಾಯವು ಹಿಂದೂ ‘ಧರ್ಮ’ಕ್ಕೆ ಎರಗಿದ ಅತಿದೊಡ್ಡ ಬರಸಿಡಿಲಾಗಿದೆ.
ಇಂದಿಗೂ ಹಿಂದುತ್ವವಾದಿಗಳಿಗೆ ಇದು ಚಾರಿತ್ರಿಕವಾಗಿ ವೈಚಾರಿಕವಾಗಿ ಹಾಗೂ ಆಚರಣಾತ್ಮಕವಾಗಿ ಸಿಂಹ ಸ್ವಪ್ನವಾಗಿದೆ.
ಈ ಹಿನ್ನೆಲೆಯಲ್ಲಿ ಹಿಂದುತ್ವವಾದಿಗಳ ಸಾಂಸ್ಕೃತಿಕ ದಾಳಿಯನ್ನು ಲಿಂಗಾಯತರು ಎದುರಿಸಲು ನಮ್ಮ ಆರು ಸಲಹೆಗಳು ಇಲ್ಲಿವೆ.
1) ಅಂದು ಕೂಡಲಸಂಗಯ್ಯ ಮಾದರ ಚೆನ್ನಯ್ಯನೊಂದಿಗೆ ಕೂಡಿ ಉಂಡ ಕಾರಣ ವೇದ ಗಡಗಡ ನಡುಗಿ ಹೋಯಿತು. ಇಂದು ಲಿಂಗಾಯತರು ಹಾಗೂ ಲಿಂಗಾಯತ ಮಠಪತಿಗಳು, ಲಿಂಗಾಯತ ದಲಿತರೊಂದಿಗೆ ನಿತ್ಯ ಕೂಡಿ ಉಂಬುವ ಸಹಪಂಕ್ತಿ ಭೋಜನ ಚಳವಳಿ ಆರಂಭಿಸಬೇಕು.
2) ಲಿಂಗಾಯತದ ಮೂರು ಧಾರೆಗಳು ಒಗ್ಗೂಡಿ ಹರಿದು ವೈಚಾರಿಕ ಪ್ರವಾಹ ಸೃಷ್ಟಿಸಬೇಕು.
ಎಲ್ಲಾ ವೈದಿಕ ವಿರೋಧಿ ಶಿವಸಿದ್ಧ ಸಾಧು ಪಂಥಗಳ ಐಕ್ಯ ವೇದಿಕೆ ರಚಿಸಬೇಕು. ಇದಕ್ಕೆ ಬಸವಣ್ಣನವರೆ ಪ್ರಪಂಚದಲ್ಲಿ ಅತಿದೊಡ್ಡ ಹಾಗೂ ಅದ್ಭುತ ಮಾದರಿಯಾಗಿದ್ದಾರೆ.

3) ಅಂದು ಬಸವಣ್ಣ ಮಾಡಿದ ಒಂದೇ ಒಂದು ಅಂತರ್ಜಾತಿ ಮದುವೆಯು ಇಡೀ ಮನುವಾದಿ ಕುಲವಾದಕ್ಕೆ ಭಾರಿ ಮರ್ಮಘಾತಾವನ್ನು ಕೊಟ್ಟಿತು.
ಜಾತಿವಾದವು ಜನಿವಾರ ಹಾಕಿದವರ ಜೀವಾಳವಾಗಿದೆ. ಸಜಾತಿ ಮದುವೆಗಳು ಕುಲವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತವೆ. ವಿಜಾತಿ ಮದುವೆಗಳು ಕುಲ ವ್ಯವಸ್ಥೆಯನ್ನು ಕುಟ್ಟಿ ಪುಡಿ ಮಾಡುತ್ತವೆ.
ಜಾತಿ, ಅಸ್ಪೃಶ್ಯತೆ ರಕ್ತಗತವಾಗಿ ಬಂದುಬಿಟ್ಟಿದೆ. ರಕ್ತಸಂಬಂಧ ಮಾತ್ರ ಸಾಮಾಜಿಕ ಸಂಬಂಧದಲ್ಲಿ ಭಾರಿ ಬದಲಾವಣೆಯನ್ನು ತರಲಿದೆ.
ಹಾಗಾಗಿ, ಲಿಂಗಾಯತರು – ಲಿಂಗಾಯತ ಮಠಗಳು ಅಂತರ್ಜಾತಿ ವಿವಾಹಗಳಿಗೆ ಮೊದಲ ಆದ್ಯತೆ ನೀಡಬೇಕು. ಪ್ರತಿಯೊಂದು ಮಠದಲ್ಲಿ ಅಂತರ್ಜಾತಿ ಸಾಮೂಹಿಕ ವಿವಾಹಗಳಿಗೆ ಸಂಪೂರ್ಣ ಸಹಕಾರ ಹಾಗೂ ವ್ಯವಸ್ಥೆ ಇದೆ ಎಂದು ಪ್ರಕಟಿಸಬೇಕು.
ಜಾಗತಿಕ ಲಿಂಗಾಯತ ಮಹಾಸಭಾದ ಪ್ರಮುಖ ಹೊಣೆಗಾರಿಕೆ ಇದಾಗಬೇಕು. ಕನ್ನೇರಿ ಸ್ವಾಮಿ ಹೇಳುವುದಿರಲಿ, ಲಿಂಗಾಯತರೂ ಹಿಂದುಗಳೇ ಎಂದು ನಾವೇ ನಿರೂಪಿಸಿದಂತಾಗುತ್ತದೆ.
4) ಲಿಂಗಾಯತರು 21ನೇ ಶತಮಾನದ ಸತ್ಯಶುದ್ಧ ಕಾಯಕಗಳನ್ನು ಮಾತ್ರ ಸ್ವೀಕರಿಸಬೇಕು. ಅಶುದ್ಧ ಅಸತ್ಯವಾದ ಶೋಷಣೆ ಮೂಲದ ಕಾಯಕಗಳನ್ನು ಕೈಬಿಡಬೇಕು.
ಪ್ರತಿಯೊಬ್ಬ ಲಿಂಗಾಯತ ಮಠದ ಸ್ವಾಮೀಜಿಗಳು ಸ್ವಯಂ ಕಾಯಕ ಮಾಡಬೇಕು. ಸ್ವಯಂ ಕಾಯಕದಿಂದ ಅರ್ಜಿಸಿದ ಫಲಗಳು ಮಾತ್ರ ಪ್ರಸಾದವಾಗಲು ಸಾಧ್ಯ. ಈ ಶರಣ ಮಾದರಿಯನ್ನು ಮರುಸ್ಥಾಪಿಸಬೇಕು.
5) ಎಲ್ಲಾ ಲಿಂಗಾಯತ ಮಠಗಳ ಹಾಗೂ ಸಾಮಾಜಿಕ ಸಂಸ್ಥೆಗಳ ಜಮೀನುಗಳನ್ನು ಭೂಮಿ ಇಲ್ಲದ ಕೃಷಿಕರಾದ ದಲಿತರ, ಮಹಿಳೆಯರ, ಅತಿ ಹಿಂದುಳಿದ ವರ್ಗದವರ ಸಾಮೂಹಿಕ ಸಾಗುವಳಿಗೆ ಒಳಪಡಿಸಬೇಕು.
ಶರಣ ಸಹಕಾರ ಸಂಘಗಳನ್ನು ಕಟ್ಟಬೇಕು. ಆಸ್ತಿಯ ನಿರ್ವಹಣೆ ಹಾಗೂ ಶಿಕ್ಷಣ – ವ್ಯಾಪಾರ ಜಂಜಾಟದಿಂದ ಮಠಗಳು ಹೊರಗೆ ಬರಬೇಕು.
ಮಠಗಳನ್ನು ಲಿಂಗಾಯತ ತತ್ವ ಬಿತ್ತುವ ಶರಣ ಶಿಕ್ಷಣ ಸಂಸ್ಥೆಗಳಾಗಬೇಕು, ಬಸವಾದಿ ಶರಣರ ಅನುಯಾಯಿಗಳು ವಿದ್ಯಾರ್ಥಿಗಳಾಗಬೇಕು. ಕಲಿಯಿರಿ ಕಲಿಸಿರಿ ಎನ್ನುವ ಸಾಂಸ್ಕೃತಿಕ ಕೇಂದ್ರಗಳಾಗಿ ಮಠಗಳು ಬದಲಾಗಬೇಕು.
6) ಹಿಂದೂ ಕರ್ಮಠ ಜಾತಿವಾದ, ಅಸ್ಪೃಶ್ಯತೆ, ಮಹಿಳಾ ಶೋಷಣೆ, ತಾರತಮ್ಯ, ಹಿಂಸೆ, ಭಯೋತ್ಪಾದನೆ, ದಬ್ಬಾಳಕೆ, ಸಂಪತ್ತಿನ ಮೇಲೆ ಏಕಾಧಿಪತ್ಯಕ್ಕೆ ಸವಾಲು ಹಾಕುವ ಎಲ್ಲಾ ಚಳುವಳಿಯಲ್ಲೂ ಲಿಂಗಾಯತರು ಇರಬೇಕು.
ಈ ಮೂಲಕ ಲಿಂಗಾಯತವೇ ಹಿಂದುತ್ವ ಫ್ಯಾಷಿಸ್ಟರ ವಿರುದ್ಧ ಒಂದು ವಿಶಾಲ ಚಳುವಳಿಯಾಗಿ ಹರಿಯಬೇಕು.
ಒಟ್ಟಾರೆ ಶರಣರ ವಿಚಾರ, ಆಚಾರಗಳನ್ನು ಆಯುಧವನ್ನಾಗಿ ತಯಾರಿಸಿಕೊಂಡು,
ಬಸವತತ್ವ ವಿಕೃತೀಕರಣದ ವಿರುದ್ಧ ಸಮರ ಸಾರಬೇಕು. ಇದಕ್ಕಾಗಿ ದೊಡ್ಡ ಶರಣ ಸೈನ್ಯವನ್ನೇ ಕಟ್ಟಬೇಕು.
ಎಲ್ಲಾ ಶರಣ ಸಂಕುಲ ನಮ್ಮ ಪ್ರಸ್ತಾವನೆಗಳನ್ನು ಅನ್ಯಥ ಭಾವಿಸದೆ ಮನ್ನಿಸಬೇಕು.
ಹುತ್ತವ ಬಡೆದರೆ ಹಾವು ಸಾಯಬಲ್ಲುದೆ?

ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ
ಸತ್ಯ