ಔರಾದ:
12ನೇ ಶತಮಾನದ ಬಸವಾದಿ ಶರಣರು ಸಮಸಮಾಜ ನಿರ್ಮಾಣಕ್ಕಾಗಿ ನೀಡಿದ ವಚನ ಸಾಹಿತ್ಯವು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿದೆ. ಈ ಅಮೂಲ್ಯ ವಚನ ಸಾಹಿತ್ಯವನ್ನು ಕೇವಲ ಪುಸ್ತಕಗಳಿಗೆ ಸೀಮಿತಗೊಳಿಸದೆ, ಪ್ರತಿಯೊಬ್ಬರ ಮನೆ ಮನಗಳಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ಬೆಂಗಳೂರು ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ಕರೆ ನೀಡಿದರು.

ಔರಾದ ತಾಲೂಕಿನ ಮುಸ್ತಾಪುರ ಗ್ರಾಮದ ‘ಬಸವ ಮಹಾಮನೆ’ಯ ಆವರಣದಲ್ಲಿ ಚಿನ್ಮಯಜ್ಞಾನಿ ಚನ್ನಬಸವೇಶ್ವರ ಜಯಂತಿ ಹಾಗೂ ಅನುಭವ ಮಂಟಪದ ಧೂಪದ ಗೊಗ್ಗವ್ವೆ ಸ್ಮರಣೋತ್ಸವ ಮತ್ತು ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿಯವರ ಜನ್ಮದಿನ ಕಾರ್ಯಕ್ರಮವು ಅತ್ಯಂತ ಭಕ್ತಿ ಮತ್ತು ಸಡಗರದಿಂದ ಜರುಗಿತು. ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಮುಸ್ತಾಪುರದ ಈ ಬಸವ ಮಹಾಮನೆ ಸ್ಥಳದಲ್ಲಿ ಗುರು ಬಸವಣ್ಣನವರ ಭವ್ಯ ಪುತ್ಥಳಿ ಸೇರಿದಂತೆ ಎಲ್ಲಾ ಶರಣರ ಮೂರ್ತಿಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದರು.

ಷಟಸ್ಥಲ ಧ್ವಜಾರೋಹಣ ನೆರವೇರಿಸಿದ ಯಾದಗಿರಿಯ ವೈದ್ಯಾಧಿಕಾರಿ ಡಾ. ಮಹೇಶ ಬಿರಾದಾರ ಮಾತನಾಡಿ, ಬಸವ ತತ್ವವು ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ. ಈ ಭಾಗದಲ್ಲಿ ಬಸವ ತತ್ವ ಎಲ್ಲೆಡೆ ಪಸರಿಸುವಂತಾಗಬೇಕು ಹಾಗೂ ಯುವ ಪೀಳಿಗೆಗೆ ಶರಣರ ವಿಚಾರಧಾರೆಗಳನ್ನು ತಲುಪಿಸಲು ಇಲ್ಲಿ ಒಂದು ಸುಸಜ್ಜಿತ ವಚನ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಯುವ ಮುಖಂಡರಾದ ರತಿಕಾಂತ ಮೇತ್ರೆ ಜೋಜನಾ ಮಾತನಾಡಿ, ಮುಸ್ತಾಪುರದ ಬಸವ ಮಹಾಮನೆಯು ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಗಿ ಉತ್ತರೋತ್ತರವಾಗಿ ಬೆಳೆಯಲಿ. ಇಲ್ಲಿ ಪ್ರತಿದಿನ ಬಸವಾದಿ ಶರಣರ ಅನುಭಾವ ಸಾಹಿತ್ಯದ ಕುರಿತು ಚಿಂತನೆಯಾಗಲಿ. ಬೀದರ ಔರಾದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಈ ಸ್ಥಳವು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿಯಲಿ. ಇಲ್ಲಿ ಪ್ರತಿ ವಾರ ಪ್ರಾರ್ಥನೆ, ಪ್ರತಿತಿಂಗಳು ಮಾಸಿಕ ಶರಣ ಸಂಗಮ ಕಾರ್ಯಕ್ರಮಗಳು ನಡೆದು, ನಾಡಿನೆಲ್ಲೆಡೆ ಹರಡುವಂತಾಗಲಿ ಎಂದು ಹಾರೈಸಿದರು.

ಶ್ರೀಗಳ ಜನ್ಮದಿನಾಚರಣೆ ಹಾಗೂ ಸನ್ಮಾನ:
ಇದೇ ಸಂದರ್ಭದಲ್ಲಿ ಪೂಜ್ಯ ಡಾ. ಚನ್ನಬಸವಾನಂದ ಸ್ವಾಮೀಜಿ ಅವರ ಜನ್ಮದಿನವನ್ನು ಭಕ್ತರು ಅತ್ಯಂತ ಸಂಭ್ರಮದಿಂದ ಆಚರಿಸಿದರು. ನೆರೆದಿದ್ದ ಭಕ್ತಾದಿಗಳು ಹಾಗೂ ಗಣ್ಯರು ಶ್ರೀಗಳಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಭಕ್ತಿಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ವೇದಿಕೆಯ ಮೇಲೆ ಪೂಜ್ಯ ಮಾತೆ ಸತ್ಯಾದೇವಿ ಅವರು ಸಮ್ಮುಖ ವಹಿಸಿ ಮಾತನಾಡಿದರು. ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ, ಪ್ರಮುಖರಾದ ಶಿವಕುಮಾರ ಘಾಟೆ, ನ್ಯಾಯವಾದಿ ಅಶೋಕ ಮಾನೂರೆ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ಗಣಪತಿ ಬಿರಾದಾರ, ರವಿಕಾಂತ ಬಿರಾದಾರ, ಬಸವರಾಜ ಮಾಲಿ ಪಾಟೀಲ, ಶರಣಪ್ಪ ನಾಗಲಗಿದ್ದಿ, ಪ್ರಕಾಶ ದೇಶಮುಖ, ಧರ್ಮೇಂದ್ರ ಪೂಜಾರಿ, ಬಸವರಾಜ ಸಂಗಮದ, ಶಿವರಾಜ ಪಾಟೀಲ ಅತಿವಾಳ ಸೇರಿದಂತೆ ಮುಸ್ತಾಪುರ ಗ್ರಾಮದ ಪ್ರಮುಖರು, ಔರಾದ ತಾಲೂಕಿನ ರಾಷ್ಟ್ರೀಯ ಬಸವ ದಳದ ಶರಣ ಶರಣೆಯರು ಉಪಸ್ಥಿತರಿದ್ದರು.

ಮೊದಲಿಗೆ ಧೂಪದ ಗೊಗ್ಗವ್ವೆ, ಚನ್ನಬಸವೇಶ್ವರರು ಹಾಗೂ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು. ಉಮಾಕಾಂತ ಬೋರ್ಗಿ ನಿರೂಪಿಸಿದರು. ಬಸವಪ್ಪ ಕಾರಾಮುಂಗೆ ಸ್ವಾಗತಿಸಿದರು. ಗಣಪತಿ ದೇಶಮುಖ ವಂದಿಸಿದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU
