ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ

ಬೆಳಗಾವಿ :

ಕನ್ನಡ ಸಾಹಿತ್ಯ ಬೆಳವಣಿಗೆಗೆ, ಶ್ರೇಷ್ಠತೆಗೆ ವಚನ ಸಾಹಿತ್ಯದ ಕೊಡುಗೆ ಅಪಾರ ಎಂದು ಸಾಹಿತಿ ಬಿ. ಬಿ. ಮಠಪತಿ ಹೇಳಿದರು.

ರವಿವಾರ ನಗರದ ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ರಾಜ್ಯೋತ್ಸವದ ಉಪನ್ಯಾಸ ‘ಕನ್ನಡ ಸಾಹಿತ್ಯಕ್ಕೆ ವಚನ ಸಾಹಿತ್ಯದ ಕೊಡುಗೆ’ ವಿಷಯವಾಗಿ ಮಾತನಾಡಿದರು.

2000 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ತನ್ನದೇ ಆದ ಚರಿತ್ರೆ ಇದೆ. ಪಂಪ ಪೂರ್ವ ಯುಗದಲ್ಲಿ ಹಳೆಗನ್ನಡದ ಚಂಪೂ ಶೈಲಿಯಲ್ಲಿ ಬೆಳೆದ ಸಾಹಿತ್ಯ ಪಂಪನಿಂದ ಬೆಳೆಯುತ್ತಾ ಬಂದಿತು. ತದನಂತರ ರಾಜಾಶ್ರಯದಲ್ಲಿ ರನ್ನ ಪೊನ್ನ ಜನ್ನ ಅವರಂತಹ ಆದಿ ಕವಿಗಳು ಇದನ್ನು ಮುಂದುವರಿಸಿದರು.

ತದನಂತರ 12ನೇ ಶತಮಾನದಲ್ಲಿ ಬಸವ ಯುಗದ ಆರಂಭದೊಂದಿಗೆ ರಾಜಾಶ್ರಯದಲ್ಲಿ ಬೆಳೆಯುತ್ತಿದ್ದ ಕನ್ನಡ ಸಾಹಿತ್ಯ ಸ್ವಂತಿಕೆಯನ್ನು ಹುಟ್ಟು ಹಾಕಿಕೊಂಡು ಸರಳ ಶೈಲಿಯ ವಚನ ಸಾಹಿತ್ಯದ ಮೂಲಕ ಸಾಧಾರಣ ಜನರು ತಿಳಿಯುವಂತಹ ಸಾಹಿತ್ಯವಾಗಿ ಬೆಳೆದು ಸಾಹಿತ್ಯ ಕ್ಷೇತ್ರದ ಹೊಸ ಮನ್ವಂತರಕ್ಕೆ ನಾಂದಿಯಾಯಿತು.

ಆಗ ಬೆಳೆದು ಬಂದ ವಚನ ಸಾಹಿತ್ಯದಿಂದಲೇ ಕನ್ನಡದಲ್ಲಿ ರಗಳೆ, ತ್ರಿಪದಿ, ದಾಸ ಸಾಹಿತ್ಯದ ಹುಟ್ಟಿಗೆ ಕಾರಣವಾಯಿತು ಎನ್ನಬಹುದು. ಈ ರೀತಿಯಾಗಿ ಹಳಗನ್ನಡದಿಂದ ಹಂತ ಹಂತವಾಗಿ ಬೆಳೆದು ಬಂದ ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ ಶ್ರೇಯಸ್ಸು ವಚನ ಸಾಹಿತ್ಯ ಮತ್ತು ಶರಣರಿಗೆ ಸಲ್ಲುತ್ತದೆ ಎಂದು ಮಠಪತಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಈರಣ್ಣ ದೇಯನ್ನವರ ಮಾತನಾಡಿ, ಕನ್ನಡ ನಾಡು, ನುಡಿ ಉಳಿಸಿ ಬೆಳೆಸುವ ಕಾರ್ಯಕ್ರಮ ಸರ್ವ ಕನ್ನಡಿಗರಿಂದಲೂ ಆಗಬೇಕಿದೆ. ಮೊದಲು ನಾವು ಕನ್ನಡವನ್ನು ಒಪ್ಪಿಕೊಳ್ಳಬೇಕು, ಅಂದಾಗ ಕನ್ನಡ ತನ್ನ ಹಿರಿಮೆಯನ್ನು ಮೆರೆಯುವುದು ಎಂದರು.

ಇದೇ ಸಂದರ್ಭದಲ್ಲಿ ಕನ್ನಡ ನಾಡು ನುಡಿಯ ಸಲುವಾಗಿ ವಿಶೇಷ ಸೇವೆ ಸಲ್ಲಿಸಿದ ಮಹನೀಯರನ್ನು ನೆನೆಯಲಾಯಿತು. ಕಾರ್ಯಕ್ರಮದಲ್ಲಿ ನಾಡು ನುಡಿಯ ಶ್ರೀಮಂತಿಕೆ ಹೆಚ್ಚಿಸುವ ವಿವಿಧ ವಚನಗಳನ್ನು ಶರಣ ಶರಣೆಯರು ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಎಂ.ವೈ. ಮೆಣಸಿನಕಾಯಿ, ಶಶಿಭೂಷಣ ಪಾಟೀಲ, ಮಹಾದೇವ ಕೆಂಪಿಗೌಡರ, ಶಿವಾನಂದ ನಾಯಕ, ಶಿವಾನಂದ ತಲ್ಲೂರ, ವಿ.ಕೆ. ಪಾಟೀಲ, ಬಸವರಾಜ ಬಿಜ್ಜರಗಿ, ಶ್ರೀದೇವಿ ನರಗುಂದ, ಅಕ್ಕಮಹಾದೇವಿ ತೆಗ್ಗಿ, ಜಯಶ್ರೀ ಚವಲಗಿ, ಸುನಂದಾ ಕೆಂಪಿಗೌಡರ, ಜ್ಯೋತಿ ನಾಯಿಕ, ಎಫ್. ಬಿ. ಕರಿಕಟ್ಟಿ, ಲಕ್ಷ್ಮಣ ಕುಂಬಾರ, ಎಂ. ಬಿ. ಖಾಡೆ, ಗುರುಸಿದ್ದಪ್ಪ ರೇವಣ್ಣವರ, ಕೆಂಪಣ್ಣ ರಾಮಾಪುರಿ, ವಿಜಯ ಹುದಲಿಮಠ, ಶಿವಾನಂದ ಕುರಬೇಟ, ಸುವರ್ಣಾ ತಿಗಡಿ ಉಪಸ್ಥಿತರಿದ್ದರು. ಸಂಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
Leave a comment

Leave a Reply

Your email address will not be published. Required fields are marked *