‘ಭೇದವಿಲ್ಲದೆ ಎಲ್ಲರೂ ಮಾಡಬಹುದಾದ ಯೋಗವೇ ಇಷ್ಟಲಿಂಗ ಶಿವಯೋಗ’

ಸಾಮೂಹಿಕ ಇಷ್ಟಲಿಂಗ ದೀಕ್ಷೆ, ಪ್ರಾತ್ಯಕ್ಷಿಕೆ ಅಭಿಯಾನ: 30 ಜನ ದೀಕ್ಷಾರ್ಥಿಗಳಿಗೆ ಇಷ್ಠಲಿಂಗ ದೀಕ್ಷೆ

ದಾವಣಗೆರೆ :

ಮಾನವನ ಬದುಕಿನ ಉನ್ನತಿಗೆ ಬೇಕಾದ ಎಲ್ಲಾ ಮೌಲ್ಯಗಳು, ತತ್ವಗಳು 12ನೇ ಶತಮಾನದ ಬಸವಾದಿ ಶಿವಶರಣರ ವಚನಗಳಲ್ಲಿ ಹೇರಳವಾಗಿ ಸಿಗುತ್ತವೆ, ಅವುಗಳನ್ನು ಸರಿಯಾದ ರೀತಿಯಲ್ಲಿ ಅಳವಡಿಸಿಕೊಂಡು ಮುನ್ನಡೆದರೆ ನರನೂ ಹರನಾಗುತ್ತಾನೆ, ಆದ್ದರಿಂದ ವಚನಸಾಹಿತ್ಯ ವಿಶ್ವದ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಬಸವತತ್ವ ಚಿಂತಕ, ಅನುಭಾವಿಗಳಾದ ಚಳ್ಳಕೆರೆಯ ಸದ್ಭಾವಗೋಷ್ಠಿಯ ಶರಣ ವಿ.ಎಲ್. ಸರ್ಪಭೂಷಣಯ್ಯ ಅವರು ಅಭಿಪ್ರಾಯಪಟ್ಟರು.

ನಗರದ ಶ್ರೀಗುರುಬಸವ ಮಂಟಪದಲ್ಲಿ ಶರಣೆ ಸಾವಿತ್ರಮ್ಮ ಕಲ್ಲಪ್ಪ ಪಬ್ಲಿಕ್ ಟ್ರಸ್ಟ್ ಹಾಗೂ ಬಸವಪರ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ “ಸಾಮೂಹಿಕ ಇಷ್ಟಲಿಂಗ ದೀಕ್ಷೆ ಹಾಗೂ ಪ್ರಾತ್ಯಕ್ಷಿಕೆ ಅಭಿಯಾನ – 6” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಶಿವಶರಣರ ವಚನಗಳು 12ನೇ ಶತಮಾನದಲ್ಲಿಯೇ ಇಡೀ ವಿಶ್ವದ ಎಲ್ಲಾ ಧರ್ಮೀಯರಿಗೂ, ಸಕಲಜೀವರಾಶಿಗಳಿಗೂ ಲೇಸನು ಬಯಸಲು ರಚಿತವಾಗಿರುವುದು ಶರಣರ ಜೀವಪರ ದೃಷ್ಠಿ, ಸಮಾನತೆ, ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗಿವೆ. ಹಾಗಾಗಿ ಅವರಿವರೆನ್ನದೆ ಎಲ್ಲರೂ ವಚನ ಸಾಹಿತ್ಯವನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.

ಇನ್ನು ವಿಶ್ವದಲ್ಲಿ ಹಲವು ಯೋಗಗಳಿದ್ದರೂ ಸಹ ಲಿಂಗಭೇದ, ಜಾತಿಭೇದ, ವರ್ಣಭೇದ, ವರ್ಗಭೇದವಿಲ್ಲದೆ ಬ್ರಹ್ಮಾಂಡದ ಆಕಾರ ಗೋಲಾಕಾರದಲ್ಲಿರುವ, ವಿಶ್ವಗುರು ಬಸವಣ್ಣನವರು ಕೊಟ್ಟ ಇಷ್ಟಲಿಂಗದಿಂದ ಅತ್ಯಂತ ಸರಳವಾಗಿ, ಸುಲಭವಾಗಿ, ದೈಹಿಕ, ಮಾನಸಿಕ ಶ್ರಮವಿಲ್ಲದೆ ಎಲ್ಲರೂ ಸಮಾನರಾಗಿ ತಾವಿರುವ ಸ್ಥಳದಲ್ಲಿಯೆ ಶಿವಯೋಗ ಮಾಡಬಹುದಾಗಿದ್ದು, ಇದು ಜಗತ್ತಿನ ಅತ್ಯಂತ ಶ್ರೇಷ್ಠ ಯೋಗವಾಗಿದೆ ಎಂದರು.

ಇಷ್ಟಲಿಂಗವು ಅರಿವಿನ ಕುರುಹು, ಆಚಾರದ ಪ್ರತೀಕ, ಅನುಭಾವದ ನಿಲುವಾಗಿದ್ದು, ಅಂಗದ ಮೇಲೆ ಲಿಂಗಧರಿಸಿ ಶಿವಯೋಗ ಮಾಡಿದರೆ ನರನು ಹರನಾಗುತ್ತಾನೆ, ಭವಿ ಭಕ್ತನಾಗುತ್ತಾನೆ, ಮಾನವ ಮಹಾದೇವನಾಗುತ್ತಾನೆ, ಅಂಗಗುಣವಳಿದು ದೇಹವು ಸರ್ವಾಂಗಲಿಂಗವಾಗಿ ಲಿಂಗೈಕ್ಯ ಸ್ಥಿತಿಯುಂಟಾಗುತ್ತದೆ.

ಆಗ ತಾನೇ ಅಂಗ, ತಾನೇ ಲಿಂಗವಾಗಿ ಜೀವಾತ್ಮ ಮತ್ತು ಪರಮಾತ್ಮ ಒಂದಾಗುವ ಅದ್ಬುತ ಪ್ರಕ್ರಿಯೆಯು ಕೇವಲ ಶಿವಯೊಗದಿಂದ ಮಾತ್ರ ಸಾಧ್ಯವಿದೆ, ಹಾಗಾಗಿ ಸರ್ವರೂ ಲಿಂಗಧಾರಿಗಳಾಗಿ ಶಿವಯೋಗ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ 30 ಜನ ದೀಕ್ಷಾರ್ಥಿಗಳಿಗೆ ಇಷ್ಠಲಿಂಗ ದೀಕ್ಷೆ ನೀಡಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವರನ್ನೂ ವಿ. ಯೋಗೇಶ ಸ್ವಾಗತಿಸಿದರು, ಜಿ.ಹೆಚ್. ರಾಜಶೇಖರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಮುಖ್ಯ ಅತಿಥಿಗಳಾಗಿ ಐಗೂರು ಹನುಮಂತಪ್ಪ, ಸುಜಾತ ಎಂ.ಹೆಚ್, ಕುಸುಮಾ ಲೋಕೇಶ್, ಎಸ್. ತ್ಯಾಗರಾಜ್ ಆಗಮಿಸಿದ್ದರು.

ಬಸವ ಕಲಾಲೋಕದ ಅರುಣ್ ಮತ್ತು ವಾಗೀಶ ವಚನ ಗಾಯನ ನೆರವೇರಿಸಿಕೊಟ್ಟರು. ಬಸವಮಂಟಪ ಬಳಗದ ಆಶಾ, ಮಮತ, ವೀಣಾ, ಅರುಣಾ, ರವೀಂದ್ರನಾಥ್, ಚಂದ್ರಶೇಖರ್, ಮಂಜುನಾಥ.ವಿ.ಟಿ, ಅಡಿವೆಪ್ಪ, ಸಂಗನಬಸವ ನೆಸ್ವಿ, ನಿಂಬಪ್ಪ ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/HhJYSZVofEgD6VIx5ufPBU

Share This Article
1 Comment
  • ಒಳ್ಳೆಯ ಕಾರ್ಯಕ್ರಮವಾಗಿದೆ ಒಳ್ಳೆಯ ವಿಚಾರ ಜೈ ಬಸವ ಶರಣು ಶರಣಾರ್ಥಿ ನಾನು

Leave a Reply

Your email address will not be published. Required fields are marked *