ವಚನ ದರ್ಶನ ಪುಸ್ತಕವನ್ನು ವಿರೋಧಿಸುತ್ತಿರುವ ಕಲಬುರಗಿಯ ಬಸವ ತತ್ವ ಉಳಿಸಿ ಹೋರಾಟ ಸಮಿತಿಯಿಂದ ಬಿಡುಗಡೆಯಾಗಿರುವ ಪ್ರೆಸ್ ನೋಟ್
ವೇದವೆಂಬುದು ಓದಿನ ಮಾತು
ಶಾಸ್ತ್ರವೆಂಬುದು ಸಂತೆಯ ಸುದ್ಧಿ ಪುರಾಣವೆಂಬುದು ಪುಂಡರ ಗೋಷ್ಠಿ
ತರ್ಕವೆಂಬುದು ತಗರ ಹೋರಟೆ
ಭಕ್ತಿ ಎಂಬುದು ತೋರುಂಭ ಲಾಭ ಗುಹೇಶ್ವರನೆಂಬುದು ಮೀಲಿದ ಘನವು
ವೈದಿಕರು ನಿರೂಪಿಸಿದ ಹುಸಿ ಆಧ್ಯಾತ್ಮವನ್ನು ಅನಾವರಣಗೊಳಿಸಿ ನಿಜವಾದ ಆಧ್ಯಾತ್ಮವನ್ನು ತೆರೆದು ತೋರಿಸಿದ್ದ ಬಸವಾದಿ ಶರಣರನ್ನು ಮತ್ತದೇ ವೇದ ಪ್ರಣೀತ ಶಬ್ದಾಡಂಬರಗಳಿಗೆ ಸೇರಿಸುವ ಪ್ರಯತ್ನವನ್ನು ಈಗ ಆರೆಸ್ಸೆಸ್ ಭರದಿಂದ ಮಾಡುತ್ತಿದೆ.
1925 ರಿಂದ ವಚನ ಸಿದ್ಧಾಂತದತ್ತ ಹೊರಳಿ ನೋಡದ ಸಂಸ್ಕೃತೋಪಜೀವಿಗಳಿಗೆ ಇದ್ದಕ್ಕಿದ್ದಂತೆ ಈಗ ವಚನಗಳ ಮೇಲೆ ಭಕ್ತಿ ಹುಟ್ಟಲು ಕಾರಣ ಅಂಗಾಯತರ ಮತಗಳನ್ನು ಸೆಳೆದು ಅವರ ವಿಶ್ವಮಾನ್ಯವಾಗುತ್ತಿರುವ ಸಿದ್ಧಾಂತಗಳನ್ನು ಮಣ್ಣು ಮುಕ್ಕಿಸುವ ಒಳ ಹುನ್ನಾರ ತಿಳಿಯದೇನಲ್ಲ. ಮುಳ್ಳನ್ನು
ಮುಳ್ಳಿನಿಂದಲೇ ತೆಗೆಯಬೇಕು ಎಂಬ ಅವರ ಸನಾತನ ಚಾಳಿ ಮುಂದುವರೆದಿದೆ. ಆದ್ದರಿಂದಲೆ ವೈದಿಕರು ಅಂಗಾಯತ ತತ್ವಗಳನ್ನು ನಾಶ ಮಾಡಲು ಅಂಗಾಯತರನ್ನೆ ಬಳಸಿಕೊಳ್ಳುತ್ತಿದ್ದಾರೆ. ಸಂಘಿ ಗ್ಯಾಂಗ್ನವರು ಧಾರ್ಮಿಕ ವಿಗ್ಧಂಧನಗಳ ವಿರುದ್ಧ ಸಾತ್ವಿಕ ಬಂಡೆದ್ದ ಶರಣರನ್ನು ವೈಭವೀಕರಸುತ್ತ ಅವರ ಮೂಲ ಆಶಯವಾಗಿದ್ದ ದಾಸೋಹ, ಕಾಯಕ ತತ್ವಗಳನ್ನು ಮರೆ ಮಾಚಿ ಕ್ರಮೇಣ ಭಾರತೀಯ ದಾರ್ಶನಿಕ ಪರಂಪರೆಯಿಂದ ಶರಣರನ್ನು ಶಾಶ್ವತವಾಗಿ ಇಲ್ಲದಂತೆ ಮಾಡುವ ದುಷ್ಟ ಕಾರ್ಯತಂತ್ರ ರೂಪಿಸಿಕೊಂಡಿದ್ದಾರೆ. ಅದರ ಮೊದಲ ಡೋಸ್ “ವಚನ ದರ್ಶನ” ಎಂಬ ಕಳಪೆ ಪುಸ್ತಕದ ಬಿಡುಗಡೆ ಕಾರ್ಯಕ್ರಮ.
20 ಲೇಖನಗಳನ್ನು ಒಳಗೊಂಡ ಕಿರು ಪುಸ್ತಕ. ರಾಜಾರಾಮ್ ಹೆಗೆಡೆಯವರಂಥ ಸನಾತನಿ ವ್ಯಸನಿಯೊಬ್ಬನ ಕುತಂತ್ರಿ ಲೇಖನದೊಂದಿಗೆ ಪ್ರಾರಂಭವಾಗುವ ಈ ಪುಸ್ತಕದಲ್ಲಿ ಶರಣರನ್ನು ಆದರ್ಶೀಕರಿಸಿದ ಹಾಗೂ ಮುಗ್ಧ ಭಾವದಲ್ಲಿ ಸೈರಿಸಿದ ಹಸಿ ಬಿಸಿ ಲೇಖನಗಳಿವೆ. ಈ ಲೇಖನಗಳಲ್ಲಿ ಕಲ್ಯಾಣ ಶರಣರ ತಾತ್ವಿಕ ಆಳ-ಅಗಲಗಳನ್ನು ಅರಿಯದೇ ಬರೆದವುಗಳು ಕೆಲವು ಇದ್ದರೆ: ಇನ್ನು ಕೆಲವು ಬಸವಾದಿಗಳ ಪ್ರಾಯೋಗಿಕ ಆಧ್ಯಾತ್ಮದ ಗಂಭೀರತೆಯನ್ನು ಮನಗಂಡು ಅವುಗಳನ್ನು ತಿರುಚಿ ಬರೆದ ಲೇಖನಗಳಿವೆ.
ಅಂಗಾಯತ ಧರ್ಮ ಎನ್ನುವುದು ನಖಶಿಖಾಂತ ವೈವಿಕ ಧರ್ಮ ವಿರೋಧಿಯಾಗಿದೆ. ಪ್ರಾಯೋಗಿಕ ಆಧ್ಯಾತ್ಮವನ್ನು ನಿಗೂಢೀಕರಿಸಿ ಜನಸಾಮಾನ್ಯರನ್ನು ಅದರಲ್ಲಿಯೂ ದುಡಿಯುವ ಜನರನ್ನು ಪಾಪಿಷ್ಠರೆಂದು ಜರೆದು ಕೀಳಿಕರಿಸಿದ್ದನ್ನು ತಿರಸ್ಕರಿಸಿದವರು ಬಸವಾದಿ ಶರಣರು. ಜನವಿರೋಧಿ ತತ್ವ ಸಿದ್ಧಾಂತಗಳ ಸ್ವಾರ್ಥ ಮತ್ತು ನೀಚತನವನ್ನು ಬಂಡೆದ್ದು ಬಯಲಿಗೆಳೆದ ಬಸವಣ್ಣನವರು ನವೀನ ಸರ್ವ ಸಮಾನತೆಯ ತತ್ವ ಪ್ರಣಾಲಿಯನ್ನು ಆವಿಷ್ಕರಿಸಿ ಸಕಲ ಜೀವಾತ್ಮರ ಒಳಿತಿಗಾಗಿ ಶ್ರಮಿಸಿದರು. “ಭಕ್ತಿ” ಎಂಬ ಶುದ್ಧಾಂತಕರಣದ ಪ್ರಜ್ಞಾವಂತ ನಡೆಯನ್ನು ಕರ್ಮಠರ ಹುಸಿ ಆಚರಣೆಗಳಿಂದ ಬಿಡುಗಡೆಗೊಳಿಸಿ ಚಾತುರ್ವರ್ಣ ವ್ಯವಸ್ಥೆಯನ್ನು ನಿರ್ನಾಮ ಮಾಡಲು ಅಸಂಖ್ಯಾತ ಶರಣರು ತಮ್ಮನ್ನೆ ಬಲಿ ಕೊಟ್ಟುಕೊಂಡರು. ಇಂಥದ್ದೊಂದು ನಡೆ ಜಗತ್ತಿನಲ್ಲಿಯೇ ಅಪರೂಪ ಮತ್ತು ಅವಿಸ್ಮರಣೀಯ.
ಶಿಕ್ಷಣವು ವಿಸ್ತಾರಗೊಂಡಿರುವ ಈ ಕಾಲಘಟ್ಟದಲ್ಲಿ ಅಂಗಾಯತ ವಚನ ಸಿದ್ಧಾಂತವು ಜಗತ್ತಿನೆಲ್ಲೆಡೆ ಪಸರಿಸಿ ಪುರಷ್ಕರಿಸಲ್ಪಡುತ್ತಿರುವುದು ವೈದಿಕರಿಗೆ ಕಸಿವಿಸಿಯನ್ನುಂಟು ಮಾಡುತ್ತಿದೆ. ಅಂಗಾಯತ ತತ್ವವು ಪ್ರಸಿದ್ಧಿಗೆ ಬಂದರೆ ತಮ್ಮ ವೈದಿಕ ತತ್ವಗಳು ಹೇಳ ಹೆಸರಿಲ್ಲದಂತೆ ನಾಶವಾಗುತ್ತವೆ ಎಂಬ ಭಯ ಅವರನ್ನು ಆವರಿಸಿಕೊಂಡಿದೆ. ಬಸವಾದಿ ಶರಣರ ತತ್ವ ಕಾರಣವಾಗಿ ಕರ್ನಾಟಕದಲ್ಲಿ ಅಂಗಾಯತರು ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಬೆಳೆಯುವುದನ್ನು ವೈದಿಕರು ಸಹಿಸರು. ಹೇಗಾದರೂ ಮಾಡಿ ಬಸವ ತತ್ವವನ್ನು ನುಂಗಿ ನೀರು ಕುಡಿಯಲು ಶರಣರ ಕಾಲದಿಂದಲೂ ವೈದಿಕರು ಶತ ಪ್ರಯತ್ನ ಮಾಡುತ್ತಲೇ ಬರುತ್ತಿದ್ದಾರೆ.
12 ನೇ ಶತಮಾನದಲ್ಲಿ ಬಸವಣ್ಣನವರನ್ನು ಗಡಿಪಾರು ಮಾಡಿಸಿ ಶರಣರನ್ನು ಕೊಲೆಗೈದ ವೈದಿಕರೆ ಇಂದು ಅಂಗಾಯತ ತತ್ವಗಳನ್ನು ತಿರುಚುವ ಕುತಂತ್ರ ಮಾಡುತ್ತಿದ್ದಾರೆ. ಮೂಲಭೂತವಾಗಿ ವೇದಾಗಮ ಕರ್ಮಕಾಂಡವನ್ನು ವಿರೋಧಿಸುವ ತತ್ವವನ್ನು ವೇದದ ಬಾಲಂಗೋಚಿ ಎಂದು ವ್ಯಾಖ್ಯಾನ ಮಾಡುವುದು. ಅಂಗಾಯತವೂ ವೈದಿಕ ದರ್ಶನದ ಶಾಖೆಯೆಂದು ಸುಳ್ಳುಗಳನ್ನು ಕಟ್ಟಿ ಬೆಳೆಸುವುದು.
ಅಚ್ಚ ಬಂಡಾಯದ ಉದ್ದೇಶದಿಂದಲೆ ಹುಟ್ಟಿಕೊಂಡ ವಚನಗಳನ್ನು ಬಂಡಾಯದ ಪ್ರಣಾಳಿಕೆಗಳಲ್ಲ ಎಂದು ದುಷ್ಟ ಉದ್ದೇಶದಿಂದ ಅಪವ್ಯಾಖ್ಯಾನಿಸಲಾಗುತ್ತಿದೆ. ಇಂಥ ಕುತಂತ್ರದ ಹಿಂದೆ ಇಂದು ಅಧಿಕಾರ ರಾಜಕಾರಣದ ಹುನ್ನಾರು ಇದೆ. ವಿಶೇಷವಾಗಿ ಆರೆಸ್ಸೆಸ್ ನವರ ಆಷಾಢಭೂತಿತನವಿದೆ.
“ವಚನ ದರ್ಶನ” ಎಂಬ ಪುಸ್ತಕವನ್ನು ಸಂಘ ಪರಿವಾರದ ವಕ್ತಾರರು ಅಯೋಧ್ಯೆ ಪ್ರಕಾಶನದ ಮೂಲಕ ಪ್ರಕಟಿಸಿದ್ದಾರೆ. ಮುಖಪುಟದಲ್ಲಿ ಬಸವಣ್ಣನವರ ಭಾವ ಚಿತ್ರವೆಂದು ಹೇಳುತ್ತ ಅಪ್ಪಟ ರಾಮನ ಬಿಂಬ ಬರುವಂತೆ ಮಾಡಿದ್ದಾರೆ. ಮುಖಪುಟದ ತುದಿಯಲ್ಲಿ ಬಿಲ್ಲು ಬಾಣದ ಸಂಕೇತವಿದೆ. ಸಕಲ ಜೀವಾತ್ಮರಿಗೆ ಲೇಸು ಬಯಸಿದ ಪರಮ ಅಹಿಂಸಾವಾದಿಗಳಾಗಿದ್ದ ಶರಣರನ್ನು ಹಿಂಸಾರಭಸಮತಿಗಳೆಂದು ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಶಿವಶರಣರ ಆತ್ಮ ಪ್ರತ್ಯಯಾತ್ಮಕ ಅನನ್ಯ ಭಕ್ತಿಯನ್ನು ಮಸಳಿಸಿ ದುರ್ಬಲ ಮನಸಿನ ಭಕ್ತಿ ಲೋಲುಪ್ತತೆಯನ್ನು ಆರೋಪಿಸಲಾಗುತ್ತಿದೆ.
ಮುಕ್ತ ಚರ್ಚೆ ಮಾಡಲು ಸಂಘಿಗಳು ಸಿದ್ಧರಿದ್ದರೆ ನಮ್ಮ ಪಂಥಾವ್ಹಾನವನ್ನು ಸ್ವೀಕರಿಸಿ ಬರಬೇಕು. ಸಂವಾದ ನಡೆಸಲು ಬರುವುದಾದರೆ ಸಮಯ, ಸ್ಥಳ ಗುರುತಿಸಿ ಹೇಳಲಿ. ವೇದಗಳು ವೈದಿಕರ ಗುತ್ತಿಗೆ ಇರಬಹುದು. ಆದರೆ ವಿಶ್ವತೋಮುಖವಾದ ವಚನಗಳು ಯಾರ ಗುತ್ತಿಗೆಯೂ ಅಲ್ಲ. ಇವತ್ತಿಗೂ ತಮ್ಮ ದೇವಸ್ಥಾನಗಳ ಗರ್ಭ ಗುಡಿಗಳಲ್ಲಿ ಶೂದ್ರರು ಮತ್ತು ಮಹಿಳೆಯರಿಗೆ ಪ್ರವೇಶ ನೀಡದ ಸಂಘಿಗಳಿಗೆ ದೇವಾಲಯಗಳನ್ನೇ ಧಿಕ್ಕರಿಸಿದ ವಚನಗಳ ಮೇಲೆ ಭಕ್ತಿ ಹುಟ್ಟೀತೆ? ಇದು ವಚನ ತತ್ವವನ್ನು ಮುಗಿಸುವ ಕಾರ್ಯಸೂಚಿಯ ಮೊದಲ ಹೆಜ್ಜೆ.
ಆದಿ ಪುರಾಣ ಅಸುರರಿಗೆ ಮಾರಿ,
ವೇದ ಪುರಾಣ ಹೋತಿಂಗೆ ಮಾರಿ
ರಾಮಪುರಾಣ ರಕ್ಕಸರಿಗೆ ಮಾರಿ
ಭಾರತ ಪುರಾಣ ಗೊತ್ರಕ್ಕೆ ಮಾರಿ
ಎಲ್ಲಾ ಪುರಾಣ ಕರ್ಮಕ್ಕೆ ಮೊದಲು
ನಿಮ್ಮ ಪುರಾಣಕ್ಕೆ ಪ್ರತಿಯಿಲ್ಲ ಕೂಡಲಸಂಗಮದೇವಾ” ಎಂದ ಬಸವಣ್ಣನವರನ್ನು ಅಯೋಧ್ಯಾ ಪ್ರಕಾಶನದವರು ಮಾರ್ಕೇಟಿಂಗ್ ಮಾಡಲು ಹೊರಟಿದ್ದರ ಹುನ್ನಾರ ಅರಿಯದಷ್ಟು ಬಸವವಾದಿಗಳು ಹೆಡ್ಡರಲ್ಲ.
ತೀರ ಬಾಲಿಶವಾದ ಮುನ್ನುಡಿಯೊಂದಿಗೆ ಪ್ರಾರಂಭದಲ್ಲಿ ವೈದಿಕ ಅಕೆಡೆಮಿಷಿಯನ್ ಒಬ್ಬರ ಲೇಖನವಿದೆ. ಅವರು ಪ್ರಾರಂಭದಲ್ಲಿಯೆ ‘ವಚನಗಳನ್ನು ಅರ್ಥೈಸುವ ಹೊಸ ಅಸಂಪ್ರದಾಯಿಕ ಜಾಡೊಂದು ಇತ್ತೀಚಿಗೆ ತೆರೆಯಿತು” ಎಂದು ಬರೆದಿದ್ದಾರೆ.
ಅಂದರೆ ಭಾರತದ ಜಡ ಸಂಪ್ರದಾಯ ಬಿಟ್ಟು ಯಾವುದೇ ಅನುಸಂಧಾನಗಳು ಆಗಬೇಕಿಲ್ಲ ಎಂಬುದು ಅವರ ಒಳ ಉದ್ದೇಶವಾಗಿದೆ. ವಚನ ತತ್ವ ಸಂಪ್ರದಾಯಶೀಲವಲ್ಲ ಎಂಬುದನ್ನು ವೈದಿಕ ಚಿಂತಕರು ಅರ್ಥ ಮಾಡಿಕೊಳ್ಳಬೇಕು. ಅಷ್ಟಕ್ಕೂ ಈವರೆಗೂ ಇಡೀ ವಚನ ಸಾಹಿತ್ಯವನ್ನು ಶೂದ್ರ ಸಾಹಿತ್ಯ ಅದನ್ನು ಭಾರತದ ಆಧ್ಯಾತ್ಮವಾದಿಗಳು ಸ್ಪರ್ಶಿಸಬೇಕಿಲ್ಲ ಎಂದವರು ಈಗೇಕೆ ವಚನಗಳ ಹಿಂದೆ ಬಿದ್ದಿದ್ದಾರೆ? ಉತ್ತರ ಸ್ಪಷ್ಟ. ಈಗ ಜಗತ್ತು ಬಸವಾದಿ ಶರಣ ಸಿದ್ಧಾಂತದತ್ತ ಮುಖ ಮಾಡಿದೆ.
ಆದ್ದರಿಂದ ವಚನ ಸಿದ್ಧಾಂತವೂ ಕೂಡ ವೈದಿಕರ ಮುಂದುವರೆದ ಭಾಗ ಮತ್ತು ಅದು ಶುದ್ಧ ಆಧ್ಯಾತ್ಮವಾದಿಯೇ ಹೊರತು ಸಾಮುದಾಯಿಕ ಉದ್ಧಾರದ ಯಾವ ಅಂಶಗಳು ಅಲ್ಲಿಲ್ಲ ಎಂದು ಸುಳ್ಳು ಬಿತ್ತರಿಸುವ ಮೂಲಕ ಅಂಗಾಯತ ಎನ್ನುವುದು ಧರ್ಮವೇ ಅಲ್ಲ. ಅದನ್ನು ಸ್ವತಂತ್ರ ಧರ್ಮಕ್ಕಾಗಿ ಒತ್ತಾಯಿಸುವವರು ಮೂಢರು. ಅಥವಾ ಅದೊಂದು ಅವೈದಿಕ ರಾಜಕಾರಣದ ಸ್ವಾರ್ಥ ಎಂಬ ಅಭಿಪ್ರಾಯವನ್ನು ಉತ್ಪಾದಿಸಲು ಹೊರಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಬಸವಣ್ಣನವರನ್ನು ಅವತಾರ ಪುರುಷನನ್ನಾಗಿ ಮಾಡಿ ಸನಾತನ ಧರ್ಮದ ವಕ್ತಾರನೆಂಬಂತೆ ಬಿಂಬಿಸುವ ಹುನ್ನಾರವಿದೆ. ಉಳಿದ ಶರಣರನ್ನು ಮರೆ ಮಾಡಿ ಇಡೀ ವಚನ ಸಾಹಿತ್ಯವನ್ನು ನಿರ್ನಾಮ ಮಾಡುವ ಮಿಷನ್ ಅವರದಾಗಿದೆ. ಆದರೆ ಇಂದು ಬಸವಪ್ರಣೀತ ಅಂಗಾಯತರು ಪೂರ್ಣ ಜಾಗೃತರಾಗಿದ್ದು ಅವರ ಈ ಹುನ್ನಾರವನ್ನು ಅನಾವರಣಗೊಳಿಸುವುದನ್ನು ಸವಾಲಾಗಿ ಸ್ವೀಕರಿಸಿದ್ದಾರೆ.
ಡಾ.ಮೀನಾಕ್ಷಿ ಬಾಳಿ, ಫ್ರೊ.ಆರ್. ಕೆ. ಹುಡುಗಿ, ಪ್ರಭುಲಿಂಗ ಮಹಾಗಾಂವಕರ. ರವೀಂದ್ರ ಶಾಬಾದಿ, ಆರ್.ಜೆ. ಶೆಟಗಾರ, ರವಿ ಸಜ್ಜನ. ಸುನೀಲ್ ಮಾನ್ಪಡೆ. ಲವಿತ್ರಾ ವಸ್ತ್ರದ ಮತ್ತೀತರರು.
ಬಸವ ತತ್ವ ಉಳಿಸಿ ಹೋರಾಟ ಸಮಿತಿ, ಜಾಗತಿಕ ಅಂಗಾಯತ ಮಹಾಸಭಾ, ಬಸವಪರ ಸಂಘಟನೆಗಳ ಒಕ್ಕೂಟ, ಕಲಬುರಗಿ